ಬೇಸಿಗೆಯಲ್ಲಿ ಸೂರ್ಯನ ಹಾನಿಕಾರಕ ಕಿರಣಗಳಿಂದ ಕೈಗಳನ್ನು ರಕ್ಷಿಸಿಕೊಳ್ಳಲು ಅದರ ಮೇಲೆ ದಿನವಿಡೀ ಮಧ್ಯೆ ಮಧ್ಯೆ ಮಾಯಿಶ್ಚರೈಸರ್ ಬಳಸುತ್ತಿರಬೇಕು.
ಬಾಹುಗಳು ಹಾಗೂ ದೇಹದ ಇತರ ತೆರೆದ ಭಾಗಗಳ ಮೇಲೆ ಬಿಸಿಲಿನ ತೀವ್ರ ಝಳ ಬಾಧಿಸದಿರಲು, ಅದರ ಮೇಲೆ ಸದಾ SPF 30 + ಸನ್‌ಸ್ಕ್ರೀನ್ ಹಚ್ಚಬೇಕು. ಸಂಜೆ ಹೊತ್ತು ಲಘುವಾಗಿ ಮಾಯಿಶ್ಚರೈಸರ್ ಹಚ್ಚಿರಿ.
ಸಾಧಾರಣವಾಗಿ ಲಭ್ಯವಿರುವ ಮಿಂಟ್ ಬೇಸ್ಡ್ ಮಾಯಿಶ್ಚರೈಸರ್‌ನ್ನು ರಾತ್ರಿ ಹೊತ್ತು ಧಾರಾಳ ಬಳಸಬೇಕು. ಇದರಿಂದ ಚರ್ಮಕ್ಕೆ ಶೀತಲತೆ ದೊರಕುತ್ತದೆ ಹಾಗೂ ಬಿಸಿಲಿನ ಝಳ ತಗ್ಗುತ್ತದೆ. ಇಡೀ ದಿನ ಚರ್ಮ ತಾಜಾ ಆಗಿರುತ್ತದೆ.
ಬೇಸಿಗೆಯ ದಿನಗಳಲ್ಲಿ ಮೊಣಕೈ ಆರೈಕೆಯೂ ಅಷ್ಟೇ ಮುಖ್ಯ. ಮಹಿಳೆಯರು ಇದನ್ನು ನಿರ್ಲಕ್ಷಿಸುವುದೇ ಹೆಚ್ಚು. ಈ ಕಾರಣದಿಂದಾಗಿಯೇ ದೇಹದ ಇತರ ಭಾಗಗಳಿಗೆ ಹೋಲಿಸಿದಾಗ, ಮೊಣಕೈ ಹೆಚ್ಚು ಕಪ್ಪಾಗಿ ಕಾಣಿಸುತ್ತದೆ. ಅದರ ಡೆಡ್ ಸ್ಕಿನ್ ತೊಲಗಿಸಲು, ವಾರಕ್ಕೆರಡು ಸಲ ತಪ್ಪದೆ ಮೊಣಕೈ ಶುಚಿಗೊಳಿಸಬೇಕು. ಇದಕ್ಕಾಗಿ ರಸ ಹಿಂಡಿದ ನಿಂಬೆ ಸಿಪ್ಪೆಯ ಬಿಳಿ ಭಾಗದಿಂದ ಅದನ್ನು ಚೆನ್ನಾಗಿ ಉಜ್ಜಿರಿ. ನಂತರ ನೀರಲ್ಲಿ ತೊಳೆದು, ಒರೆಸಿ ಕೊಬ್ಬರಿ ಎಣ್ಣೆ ಹಚ್ಚಿ ಮಸಾಜ್ ಮಾಡಿ.
ಇದೇ ತರಹ ಬೇಸಿಗೆಯಲ್ಲಿ ಕಾಲುಗಳಲ್ಲಿ ಸೋರಿಯಾಸಿಸ್, ಬ್ಲಿಸ್ಟರ್ಸ್, ಕಾಲು ಬೆರಳುಗಳ ಸಂಧಿನ ಸೋಂಕು, ದುರ್ವಾಸನೆ ಹೊಮ್ಮುವಿಕೆ ಇತ್ಯಾದಿ ಆಗಬಹುದು. ಇವುಗಳಿಂದ ತಪ್ಪಿಸಲು ನಿಯಮಿತವಾಗಿ ಪಾದಗಳನ್ನು ಬಿಸಿ ನೀರಲ್ಲಿ ತೊಳೆಯಿರಿ. ಬಿಸಿಲಲ್ಲಿ ಹೊರಡುವ ಮೊದಲು ದೇಹದ ಇತರ ಭಾಗಕ್ಕೆ ಹಚ್ಚಿದಂತೆ ಪಾದಗಳಿಗೂ ಸನ್‌ಸ್ಕ್ರೀನ್ ಹಚ್ಚಬೇಕು. ಫುಟ್ ಪೌಡರ್ ಬಳಸುವುದು ಸೂಕ್ತ. ಪಾದದ ಹೆಚ್ಚುವರಿ ಬೆವರನ್ನು ಈ ಪೌಡರ್ ಬೇಗ ಹೀರುತ್ತದೆ. ಇದರ ಸುವಾಸನೆ ಇಡೀ ದಿನ ಪಾದಗಳನ್ನು ತಾಜಾ ಆಗಿಡುತ್ತದೆ. ವಾರದಲ್ಲಿ 1 ಸಲ ಅಗತ್ಯ ಫುಟ್ ಮಸಾಜ್ ಮಾಡಿ. ಉಗುರಿಗೆ ಕೊಳೆ ಅಂಟದಿರಲು ಆಗಾಗ ಅವನ್ನು ಕತ್ತರಿಸಿ.
ಮಂಡಿಯ ಆಸುಪಾಸನ್ನು ಪ್ಯೂಮಿಕ್ ಸ್ಟೋನ್‌ನಿಂದ ಉಜ್ಜಿ ಶುಚಿಗೊಳಿಸಿ, ಆಗ ಡೆಡ್ ಸ್ಕಿನ್, ಧೂಳಿನಿಂದ ಮುಕ್ತಿ ಸಿಗುತ್ತದೆ. ಪ್ರತಿದಿನ ಬಿಸಿಲಿನಲ್ಲಿ ತಿರುಗಾಡುವುದರಿಂದ ಮಂಡಿ ಸಹ ಕಪ್ಪಾಗುತ್ತದೆ. ಹೀಗಾಗಿ ನಿಂಬೆ ಸಿಪ್ಪೆಯ ಬಿಳಿ ಭಾಗದಿಂದ ಚೆನ್ನಾಗಿ ತಿಕ್ಕಬೇಕು. ಅದು ಸಹಜವಾಗಿ ಮಂಡಿಗಳನ್ನು ತಿಳಿಯಾಗಿಸುತ್ತದೆ.
- ಕೆ. ಅಲಂಕೃತಾ