ವಯಸ್ಸು ಒಂದಿಷ್ಟು ಹೆಚ್ಚುತ್ತಿದ್ದಂತೆ ಗೃಹಿಣಿಯರು ಆಲೋಚಿಸುವುದು ಏನೆಂದರೆ, `ತಾವು ಇನ್ನೇತಕ್ಕೆ ಸುಂದರವಾಗಿ ಕಾಣಬೇಕಾಗಿದೆ, ತಮ್ಮನ್ನು ನೋಡುವವರು ಯಾರಿದ್ದಾರೆ?’ ಇದೀಗ ತಮ್ಮದು ಮಕ್ಕಳನ್ನು ಪೋಷಿಸುವ ವಯಸ್ಸು, ಅಲಂಕಾರವೇನಿದ್ದರೂ ಮನೆಯಿಂದ ಹೊರಗೆ ಹೋಗುವ ಉದ್ಯೋಗಸ್ಥ ಮಹಿಳೆಯರಿಗೆ.’ ಆದರೆ ಅವರ ಈ ಆಲೋಚನೆ ಸರಿಯಲ್ಲ. ಏಕೆಂದರೆ ಉಡುಗೆ ತೊಡುಗೆ ಅಲಂಕಾರಗಳಿಗೆ ವಯಸ್ಸಿನ ನಿರ್ಬಂಧವಿಲ್ಲ. ಮಹಿಳೆಯು ತನ್ನ ಎಲ್ಲ ವಯಸ್ಸಿನಲ್ಲಿಯೂ ಅಪ್‌ ಟು ಡೇಟ್‌ ಆಗಿದ್ದುಕೊಂಡು ಸೆಲೆಬ್ರಿಟೀಸ್‌ನಂತೆ ಬೆಡಗಿನಿಂದಿರುವುದು ಅವಳ ಇಚ್ಛೆಯ ಮೇಲೆ ಅವಲಂಬಿತವಾಗಿರುತ್ತದೆ. ಆದ್ದರಿಂದ ವಯಸ್ಸು ಹೆಚ್ಚುತ್ತಿದ್ದರೂ ಪರ್ಸನಾಲಿಟಿಯು ಮಂಕಾಗಬಾರದು.

ಹೇಮಾಮಾಲಿನಿ

ಮಾದರಿಯಾಗಿರುವ ಸೆಲೆಬ್ರಿಟೀಸ್‌ ಹೇಮಾಮಾಲಿನಿ ಇಂದು ಸುಮಾರು 69 ವರ್ಷದರಾಗಿದ್ದಾರೆ ಮತ್ತು ಅವರು ಇಂದೂ ಸಹ ಗ್ಲಾಮರಸ್‌ ನಟಿ ಎಂದು ಪರಿಗಣಿಸಲ್ಪಟ್ಟಿದ್ದಾರೆ. ಯುವ ಆರ್ಟಿಸ್ಟ್ ಗಳಿಗೆ ಅವರು ಮಾದರಿಯಾಗಿದ್ದಾರೆ. ಇಂದೂ ಸಹ ಹಲವರು ಅವರನ್ನು ಡ್ರೀಮ್ ಗರ್ಲ್ ಎಂದೇ ಭಾವಿಸುತ್ತಾರೆ. ಅವರು ಯಾವುದಾದರೂ ಫ್ಯಾಷನ್‌ ಶೋಗೆ ಹೋದಾಗ, ಅವರ ರಾಂಪ್‌ ಮೇಲಿನ ನಡಿಗೆಯನ್ನು ಅನೇಕರು ಕಣ್ಣರಳಿಸಿ ನೋಡುತ್ತಾರೆ. ಅವರ ಸಿನಿಮಾಗಳನ್ನು ಮೆಚ್ಚುವ ಅಸಂಖ್ಯಾತ ಫ್ಯಾನ್‌ಗಳು ಇಂದೂ ಇದ್ದಾರೆ.

ಹೇಮಾಮಾಲಿನಿ ಕ್ಲಾಸಿಕ್‌ ಡ್ಯಾನ್ಸ್ ನಲ್ಲಿ ಪರಿಣಿತರಾಗಿದ್ದಾರೆ. ಈ ಕಲೆಯಿಂದ ಅವರು ತಮ್ಮ ಮೈಮಾಟವನ್ನು ಮೇಂಟೇನ್‌ ಮಾಡಿಕೊಳ್ಳಲು ಸಹಾಯವಾಗಿದೆ. ಅವರ ಏಜ್‌ಲೆಸ್‌ ಬ್ಯೂಟಿಯ ಮತ್ತೊಂದು ಗುಟ್ಟೆಂದರೆ, ಅವರು ಆದಷ್ಟು ಕಡಿಮೆ ಮೇಕಪ್‌ ಮಾಡಿಕೊಳ್ಳುತ್ತಾರೆ. ಜೊತೆಗೆ ಟ್ರೆಡಿಶನಲ್ ಬ್ಯೂಟಿ ಟಿಪ್ಸ್ ಬಳಕೆಯಲ್ಲಿ ವಿಶ್ವಾಸವಿರಿಸಿದ್ದಾರೆ. ಗ್ಲೋಯಿಂಗ್‌ ಸ್ಕಿನ್‌ಗಾಗಿ ಅವರು ತಮ್ಮ ಡಯೆಟ್‌ನಲ್ಲಿ ಹಣ್ಣು ತರಕಾರಿಗಳ ಸೇರ್ಪಡೆಗೆ ಹೆಚ್ಚು ಒತ್ತು ನೀಡುತ್ತಾರೆ. ಇವೆಲ್ಲ ಅಂಶಗಳು ಅವರನ್ನು ಎಲ್ಲ ವಯಸ್ಸಿನಲ್ಲಿಯೂ ಸುಂದರ ಮತ್ತು ಆರೋಗ್ಯಕರವಾಗಿ ಇರಿಸಿದೆ.

ಮಾಧುರಿ ದೀಕ್ಷಿತ್

50 ವರ್ಷದವರಾದರೂ ಮಾಧುರಿ ದೀಕ್ಷಿತ್‌ರ ಮುಖದಲ್ಲಿ ಫ್ರೆಶ್‌ ಲುಕ್‌ ಇದೆ. ಇದಕ್ಕೆ ಕಾರಣವೆಂದರೆ, ಅವರು ತಾರೆಯಾಗಿದ್ದರೂ, ಬೆಲೆಬಾಳುವ ಕಾಸ್ಮೆಟಿಕ್‌ ಪ್ರಾಡೆಕ್ಟ್ ಗೆ ಬದಲಾಗಿ ಮನೆ ಮದ್ದಿನಲ್ಲಿ ಹೆಚ್ಚು ವಿಶ್ವಾಸವಿರಿಸಿದ್ದಾರೆ. ಎಲ್ಲ ವಯಸ್ಸಿನವರಿಗೂ  ಮಾಧುರಿಯ ಸಂದೇಶವೇನೆಂದರೆ, ನಿಮ್ಮ ವಯಸ್ಸು ಹೆಚ್ಚುತ್ತಿದ್ದರೂ ನಿಮ್ಮನ್ನು ನೀವು ಮೇಂಟೇನ್‌ ಮಾಡಿಕೊಳ್ಳಿ. ಇದರಿಂದ ಇತರರು ನಿಮ್ಮನ್ನು ನೋಡುತ್ತಲೇ ಇದ್ದುಬಿಡುತ್ತಾರೆ. ಮಾಧುರಿಗೆ ಡ್ಯಾನ್ಸ್ ನಲ್ಲಿ ಆಸಕ್ತಿ ಇದೆ. ಇದನ್ನು ಅವರು ಎಕ್ಸರ್‌ಸೈಜ್‌ನಂತೆ ಪ್ರಯೋಗಿಸಿ ತಮ್ಮನ್ನು ಫಿಟ್‌ ಆಗಿ ಇರಿಸಿಕೊಂಡಿದ್ದಾರೆ. ತಮಗಾಗಿಯೇ ಬಾಡಿ ಮೇಂಟೇನ್‌ ಮಾಡುತ್ತಾರೆ.

ಜೂಹಿ ಚಾವ್ಲಾ

ಮನಮೋಹಕ ಮುಗುಳ್ನಗೆಗೆ ಹೆಸರಾಗಿರುವ ಜೂಹಿ ಚಾವ್ಲಾ 50 ವರ್ಷ ವಯಸ್ಸಿನಲ್ಲಿಯೂ ತಮ್ಮನ್ನು ತಾವು‌ ಮೇಂಟೇನ್‌ ಮಾಡಿಕೊಂಡಿದ್ದಾರೆ. ಅವರು ಹೇಳುವುದೇನೆಂದರೆ, ನಾವು ಮನೆಯಲ್ಲಿದ್ದರೂ ಸಹ  ಮೇಂಟೇನ್‌ ಆಗಿರಬೇಕು. ಇದರಿಂದ ನಮ್ಮ ಕಾನ್ಛಿಡೆನ್ಸ್ ಹೆಚ್ಚುತ್ತದೆ. ಅವರು ತಮ್ಮ ಚರ್ಮವನ್ನು ಫ್ರೆಶ್‌ ಆಗಿರಿಸಿಕೊಳ್ಳಲು ಆದಷ್ಟು ಹೆಚ್ಚು ನೀರು ಕುಡಿಯುತ್ತಾರೆ ಮತ್ತು ರಾತ್ರಿ ಮೇಕಪ್‌ ತೆಗೆದ ನಂತರವೇ ಮಲಗುತ್ತಾರೆ. ನೀವು ಕಾಯಿಲೆಗಳನ್ನು ದೂರವಿರಿಸಬೇಕಾದರೆ ಬೆಳಗಿನ ನಿದ್ರೆಯನ್ನು ಬಿಟ್ಟು ತಂಗಾಳಿಯಲ್ಲಿ ತಿರುಗಾಡಿ, ಆಗ ನೀವು ಸದಾ ಯೌವನದಿಂದ ಕಂಗೊಳಿಸುವಿರಿ ಎಂದು ಜೂಹಿ ಸಲಹೆ ನೀಡುತ್ತಾರೆ.

ಮುಖದ ಬಗ್ಗೆ ಮುತುವರ್ಜಿ ವಹಿಸಿ

ಮೇಕಪ್‌ ತಜ್ಞೆಯ ಪ್ರಕಾರ, ಮುಖವೇ ಆಕರ್ಷಕ ಕೇಂದ್ರಬಿಂದು. ಆದ್ದರಿಂದ ಫೇಶಿಯಲ್ ಸ್ಕಿನ್‌ ಕೇರ್‌ ಅತ್ಯಂತ ಅವಶ್ಯಕ. ನೀವು ಆಗಾಗ ಒಳ್ಳೆಯ ಔಟ್‌ಫಿಟ್ಸ್ ಗಾಗಿ ಶಾಪಿಂಗ್‌ ಮಾಡುವಂತೆ, ಆಗಾಗ ಮುಖಕ್ಕೆ ಬ್ಯೂಟಿ ಟ್ರೀಟ್‌ಮೆಂಟ್‌ ನೀಡಿ, ಮುಖವನ್ನು ಕಾಂತಿಯುತವಾಗಿರಿಸಿರಿ. ನಾನು ಮನೆಯಲ್ಲಿಯೇ ಇರುವವಳು, ನನಗೆ ಅದರ ಅಗತ್ಯವಿಲ್ಲ ಎಂದು ಭಾವಿಸಬೇಡಿ. ಅದು ತಪ್ಪು. ಏಕೆಂದರೆ ನೀವು ಮನೆಯಲ್ಲಿಯೇ ಇರುವಿರಾದರೆ ಕಿಚನ್‌ನ ಹೊಗೆ ಮತ್ತು ಬೆವರು ನಿಮ್ಮ ಚರ್ಮದ ಮೇಲೆ ಪ್ರಭಾವ ಬೀರುತ್ತವೆ.

ಆದ್ದರಿಂದ ನಿಮ್ಮ ಸ್ಕಿನ್‌ ಸದಾ ಆರೋಗ್ಯದಿಂದಿರಲು ಸ್ಕಿನ್‌ ಟ್ರೀಟ್‌ಮೆಂಟ್‌ ಅಗತ್ಯ. ತಿಂಗಳಿಗೊಮ್ಮೆ ಬ್ಯೂಟಿ ಪಾರ್ಲರ್‌ಗೆ ಹೋಗಿ. ಚರ್ಮದ ಕಾಂತಿಗಾಗಿ ಕಿತ್ತಳೆ ರಸಕ್ಕೆ ಕಡಲೆಹಿಟ್ಟು ಸೇರಿಸಿ ವಾರಕ್ಕೆರಡು ಬಾರಿ ಮುಖಕ್ಕೆ ಹಚ್ಚಿ.

ಡಯೆಟ್‌ ಬಗ್ಗೆ ವಿಶೇಷ ಗಮನವಿರಲಿ

ಡಯೆಟಿಶೀಯನ್‌ ಡಾ. ಪವನ್‌ ಹೇಳುವುದೇನೆಂದರೆ, ಮದುವೆಗೆ ಮೊದಲು ಎಲ್ಲ ಹುಡುಗಿಯರು ಹೆಲ್ತ್ ಕಾನ್ಶಿಯಸ್‌ ಆಗಿರುತ್ತಾರೆ. ತಮ್ಮನ್ನು ತಾವು ಚೆನ್ನಾಗಿ ಮೇಂಟೇನ್‌ ಮಾಡಿಕೊಳ್ಳುತ್ತಾರೆ. ಆದರೆ ನಂತರ ಅವರು ತಮ್ಮ ಬಗ್ಗೆ ಕೇರ್‌ಲೆಸ್‌ ಆಗಿಬಿಡುತ್ತಾರೆ. ವಾಸ್ತವವಾಗಿ ಪ್ರತಿ 5 ವರ್ಷಗಳಿಗೊಮ್ಮೆ ಹಾರ್ಮೋನ್‌ ಬದಲಾವಣೆ ಆಗುತ್ತಿರುತ್ತದೆ. ಯುವತಿಯು ಪತ್ನಿಯಾಗಿ, ಪತ್ನಿಯು ತಾಯಿಯಾಗುತ್ತಾಳೆ. ಆದರೆ ಅವಳು ತನ್ನ ಲೈಫ್‌ಸ್ಟೈಲ್‌ ಬದಲಿಸುವುದಿಲ್ಲ. ಒಂದೇ ಫ್ರೇಂನಲ್ಲಿ ಇದ್ದುಬಿಡುತ್ತಾಳೆ.

ಪ್ರಾರಂಭದಲ್ಲಿ ಪತಿಯ ಸಂತೋಷಕ್ಕಾಗಿ ಅವನ ಮೆಚ್ಚಿನ ತಿನಿಸುಗಳನ್ನು ತಯಾರಿಸುತ್ತಾಳೆ. ನಂತರ ಮಕ್ಕಳ ಇಷ್ಟಕ್ಕೆ ತಕ್ಕಂತೆ ಅಡುಗೆ ಮಾಡುತ್ತಾಳೆ. ಆ ತಿನಿಸುಗಳು ಅವಳಿಗೆ ಇಷ್ಟವಾಗದೆ ಹೋಗಬಹುದು. ಹೀಗಾಗಿ ಅವಳು ಸರಿಯಾಗಿ ತಿನ್ನದೆ ದಿನ ಕಳೆಯುವ ಸಾಧ್ಯತೆ ಇರುತ್ತದೆ. ಈ ನಿರ್ಲಕ್ಷತೆಯು ಕ್ರಮೇಣ ಅವಳನ್ನು ಕಾಯಿಲೆಗಳಿಗೆ ಗುರಿ ಮಾಡಬಹುದು. ಆದ್ದರಿಂದ ಕಾಲಕಾಲಕ್ಕೆ ಊಟ ತಿಂಡಿ ಮಾಡುವುದು ಅಗತ್ಯ. ನೀವು ಫಿಟ್‌ ಆಗಿರಲು ದಿನಕ್ಕೆ ಕನಿಷ್ಠ 10-12 ಲೋಟ ನೀರು ಕುಡಿಯಿರಿ. ಪ್ರೆಗ್ನೆನ್ಸಿಯಲ್ಲಿ ಹಾಲಿನ ಜೊತೆಗೆ ಹೆಚ್ಚು ಹಣ್ಣು ತರಕಾರಿಗಳನ್ನು ಸೇವಿಸಿ.

ಮೆಡಿಕಲ್ ಟ್ರೀಟ್‌ಮೆಂಟ್‌ನ ಹುಚ್ಚು ಬೇಡ

ಬಾಲಿವುಡ್‌ನಲ್ಲಿ ಸೌಂದರ್ಯಕ್ಕೆ ವಿಶೇಷ ಪ್ರಾಧಾನ್ಯತೆ ಇರುತ್ತದೆ. ಇದಕ್ಕಾಗಿ ತಾರೆಯರು ತಮ್ಮ ಅಂಗಾಂಗಗಳನ್ನು ಸುಂದರಗೊಳಿಸಲು ಪ್ಲಾಸ್ಟಿಕ್‌ ಸರ್ಜರಿ ಮಾಡಿಸಲೂ ಹಿಂದೆಗೆಯುವುದಿಲ್ಲ. ಆದರೆ ಪ್ಲಾಸ್ಟಿಕ್‌ ಸರ್ಜರಿಯಿಂದ ಅನೇಕ ಘಾತಕ ಪರಿಣಾಮಗಳು ಉಂಟಾಗಿರುವ ಉದಾಹರಣೆಗಳು ದೊರಕಿವೆ. ಇವರಲ್ಲಿ ಕೋಯ್ನಾ ಮಿಶ್ರಾ, ರಾಖಿ ಸಾವಂತ್‌, ಕಂಗನಾ ರಾವತ್, ಅನುಷ್ಕಾ ಶರ್ಮ, ಮಿನಿಯಾ ಲಾಂಬಾ ಮುಂತಾದವರು ಸೇರಿದ್ದು, ನಂತರದಲ್ಲಿ ತಮ್ಮ ತೀರ್ಮಾನಕ್ಕಾಗಿ ಪಶ್ಚಾತ್ತಾಪಪಟ್ಟಿರುತ್ತಾರೆ. ಏಕೆಂದರೆ ಸೌಂದರ್ಯ ವೃದ್ಧಿಗಾಗಿ ಮಾಡಿಸಿಕೊಂಡ ಸರ್ಜರಿಯು ಕ್ರಮೇಣ ಅವರ ರೂಪವನ್ನೇ ಅಂದಗೆಡಿಸಿದೆ. ಇಂದೂ ಸಹ ಜನರು ಕಂಗನಾಳ ಮುದ್ದು ಮುಖ ಚಹರೆಯನ್ನು ಮಿಸ್‌ ಮಾಡಿಕೊಂಡಿದ್ದಾರೆ. ರಾಖಿಯ ಪ್ಲಾಸ್ಟಿಕ್‌ ಫೇಸ್‌ ಬಗೆಗಿನ ಚರ್ಚೆ ಅನೇಕ ಕಾಲ ನಡೆದಿದೆ. ಈಶಾ ಡಿಯೋ‌ಳ ಲಿಪ್‌ ಸರ್ಜರಿಯ ಕುರಿತಾಗಿಯೂ ಮಾತು ಕೇಳಿ ಬರುತ್ತಿತ್ತು. ನಿಮ್ಮ ಗುರುತು ಮೂಡಿಸಿ

ನಿಮ್ಮ ವ್ಯಕ್ತಿತ್ವದ ಗುರುತು ಸ್ವತಃ ನಿಮ್ಮಿಂದ, ನಿಮ್ಮ ಪರ್ಸನಾಲಿಟಿಯಿಂದ. ನಿಮ್ಮ ಕಾರ್ಯ ಚಾತುರ್ಯದಿಂದ ಮೂಡಬೇಕೇ ವಿನಾ ನಿಮ್ಮ ಪಿತ ಅಥವಾ ಪತಿಯ ಹೆಸರಿನಿಂದಲ್ಲ. ನಿಮ್ಮ ವ್ಯಕ್ತಿತ್ವದ ಬಲದ ಮೇಲೆ, ನಿಮ್ಮ ಘನತೆಯು ಸಿದ್ಧಿಯ ಮೂಲಕ ಜನರು ನಿಮ್ಮನ್ನು ಗುರುತಿಸುವಂತಾಗಲಿ.

ಡ್ರೆಸ್ಸಿಂಗ್‌ ಸೆನ್ಸ್

ಫ್ಯಾಷನ್‌ ತಜ್ಞೆ ಮೀನಾಕ್ಷಿ ಶರ್ಮರ ಪ್ರಕಾರ, ಎಲ್ಲ ವಯಸ್ಸಿನಲ್ಲಿಯೂ ನಿಮ್ಮ ಡ್ರೆಸ್ಸಿಂಗ್‌ ಸೆನ್ಸ್ ವಿಶಿಷ್ಟವಾಗಿರಬೇಕು. ನೀವು ಮನೆಯಲ್ಲಿರಲಿ ಅಥವಾ ಹೊರಗಿರಲಿ, ಎಲ್ಲರೂ ನಿಮ್ಮ ಔಟ್‌ಫಿಟ್ಸ್ ನ್ನು ಹೊಗಳುವಂತಿರಬೇಕು.  ಬೆಲೆ ಬಾಳುವ ಡ್ರೆಸ್‌ನಿಂದಲೇ ನೀವು ಸುಂದರವಾಗಿ ಕಾಣುವಿರಿ ಎಂದೇನೂ ಅಲ್ಲ ಅಥವಾ ಬೇರೊಬ್ಬರು ಧರಿಸಿದ ಉಡುಪು ನಿಮಗೂ ಚೆನ್ನಾಗಿ ಕಾಣುತ್ತದೆ ಎಂದೂ ಸಹ ಅಲ್ಲ. ನೀವು ನಿಮ್ಮ ಫೀಚರ್ಸ್ ಗಮನಿಸಿಕೊಂಡು ಡ್ರೆಸ್‌ ಆರಿಸಿಕೊಳ್ಳಿ. ಅತಿ ಬಿಗಿಯಾದ ಅಥವಾ ಅತಿ ಸಡಿಲವಾದ ಔಟ್‌ಫಿಟ್ಸ್ ಧರಿಸಿ ನಿಮ್ಮ ಅಂದ ಕೆಡಿಸಿಕೊಳ್ಳಬೇಡಿ. ಫಿಟಿಂಗ್‌ ಪರ್ಫೆಕ್ಟ್ ಆಗಿರಲಿ. ಬ್ರೈಟ್‌ ಕಲರ್‌ ಡ್ರೆಸ್‌ ಆರಿಸಿ. ಅದರೊಂದಿಗೆ ಮ್ಯಾಚಿಂಗ್‌ ಆ್ಯಕ್ಸೆಸರೀಸ್‌ ಮತ್ತು ಫುಟ್‌ವೇರ್‌ ಧರಿಸಿ. ಕೇವಲ ಡ್ರೆಸ್‌ ಬಗ್ಗೆ ಅಲ್ಲದೆ, ನಿಮ್ಮ ಫೇಸ್‌ ಮತ್ತು ಲುಕ್ಸ್ ಬಗ್ಗೆಯೂ ಗಮನ ನೀಡಿ. ಆಗ ನಿಮ್ಮ ಕಾನ್ಛಿಡೆನ್ಸ್ ಹೆಚ್ಚುವುದೆಂದು ನಿಮಗೇ ತಿಳಿಯುವುದು.

ಈ ವಯಸ್ಸಿನಲ್ಲಿ ಡ್ರೆಸ್‌ ಸೆನ್ಸ್ ನ ಅಗತ್ಯವೇನು ಎಂಬ ಆಲೋಚನೆ ಎಂದೂ ನಿಮಗೆ ಬಾರದಿರಲಿ. ಒಳ್ಳೆಯ ಡ್ರೆಸ್‌ಸೆನ್ಸ್ ನಿಂದ ಇತರರೆದುರಿಗೆ ನೀವು ಪ್ರೆಸೆಂಟೆಬಲ್ ಆಗಿ ಶೋಭಿಸಬಲ್ಲಿರಿ.

– ಪಾರ್ವತಿ ಭಟ್‌

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ