ಮೊಸರು ಹಾಲಿನ ಮತ್ತೊಂದು ಸೊಗಸಾದ ರೂಪ. ಉತ್ತರ ದಕ್ಷಿಣ ಎಂಬ ಭೇದಭಾವವಿಲ್ಲದೆ ನಮ್ಮ ದೇಶದಲ್ಲಿ ಎಲ್ಲೆಲ್ಲೂ ಇದರ ಸೇವನೆ ಕಂಡುಬರುತ್ತದೆ, ಆದರೆ ಸೇವನೆಯ ವಿಧಾನ ಮಾತ್ರ ವಿಭಿನ್ನ. ಅಂದರೆ ಕೆಲವೆಡೆ ಗಟ್ಟಿ ಮೊಸರು ಅನ್ನಕ್ಕೆ ಕಲಸಿಕೊಳ್ಳಲು, ಸಕ್ಕರೆ ಬೆರೆತ ಲಸ್ಸಿ, ಬೇರೆಡೆ ರಾಯ್ತಾ, ಮಜ್ಜಿಗೆ ಹುಳಿ, ಪಳಿದ್ಯ.... ಹೀಗೆ ನಾನಾ ವಿಧ. ಮಹಾರಾಷ್ಟ್ರದ ಶ್ರೀಖಂಡವನ್ನು ಯಾರು ತಾನೇ ಮರೆಯಲು ಸಾಧ್ಯ? ಮೊಸರಿನ ವಿಶಿಷ್ಟ ಗುಣವೆಂದರೆ ಅದು ಆರೋಗ್ಯ ಸುಧಾರಿಸಿ, ರುಚಿ ಹೆಚ್ಚಿಸಿ, ಸೌಂದರ್ಯ ಸಂವರ್ಧನೆಗೂ ಬಳಕೆಯಾಗುತ್ತದೆ.
ಆರೋಗ್ಯ ಪೌಷ್ಟಿಕತೆಯ ದೃಷ್ಟಿಯಿಂದ ಮೊಸರು ಹಾಲಿಗಿಂತ ಏನೇನೂ ಕಡಿಮೆ ಅಲ್ಲ. ಇದು ಕ್ಯಾಲ್ಶಿಯಂ ಅಂಶಗಳಿಂದ ಸಮೃದ್ಧ. ಇದರಲ್ಲಿ ಶುಗರ್, ಪ್ರೋಟೀನ್, ಫ್ಯಾಟ್ಸ್ ಸಾಧಾರಣ ಮಟ್ಟದಲ್ಲಿ ಬೆರೆತಿರುತ್ತದೆ. ಆದ್ದರಿಂದಲೇ ಮೊಸರನ್ನು ಪ್ರೀಡೈಜೆಸ್ಟೆಡ್ ಫುಡ್ಅಂತಲೂ ಹೇಳುತ್ತಾರೆ, ಇದು ಶಿಶುಗಳಿಗೂ ಬಹಳ ಲಾಭಕಾರಿ. ಯಾರು ಹಾಲಿನಲ್ಲಿರುವ ಲ್ಯಾಕ್ಟೋಸ್ ಅಂಶವನ್ನು ನೇರವಾಗಿ ಜೀರ್ಣಿಸಿಕೊಳ್ಳಲಾರರೋ, ಅಂಥವರು ಮೊಸರನ್ನು ಧಾರಾಳವಾಗಿ ಬಳಸಬಹುದು. ಮೊಸರಿನಲ್ಲಿರುವ ಫಾಸ್ಛರಸ್ ಮತ್ತು ವಿಟಮಿನ್ `ಡಿ' ಜೊತೆ, ಕ್ಯಾಲ್ಶಿಯಂನ್ನು ಆ್ಯಸಿಡ್ ರೂಪದಲ್ಲಿ ವಿಲೀನಗೊಳಿಸಿಕೊಳ್ಳುವ ಗುಣ ಇರುವುದರಿಂದ, ಬೆಳೆಯುವ ಮಕ್ಕಳಿಗೆ ಮೊಸರು ಒಂದು ಪರಿಪೂರ್ಣ ಆಹಾರ ಎನಿಸುತ್ತದೆ. ಹೀಗಾಗಿ ಮೊಸರಿನ ಸೇವನೆ ಮೂಳೆಗಳು ಸದೃಢವಾಗಿ ಬೆಳೆಯಲು ಪೂರಕ.
ಮೊಸರಿನಲ್ಲಿರುವ ಬ್ಯಾಕ್ಟೀರಿಯಾ ಆರೋಗ್ಯವರ್ಧಕ. ದೇಹದಲ್ಲಿನ ರಕ್ತ ಸಂಚಲನೆ ಸರಾಗಗೊಳ್ಳಲು, ಅದಕ್ಕೆ ಸೋಂಕು ತಗುಲದಂತೆ ಬಿಳಿಯ ರಕ್ತ ಕಣಗಳನ್ನು ಹೆಚ್ಚಿಸಿ, ರೋಗನಿರೋಧಕ ಶಕ್ತಿ ವರ್ಧಿಸಲು ಉತ್ತಮ ಬ್ಯಾಕ್ಟೀರಿಯಾ ಬಹಳ ನೆರವಾಗುತ್ತದೆ. ವಯೋವೃದ್ಧರಿಗೂ ಮೊಸರಿನ ಸೇವನೆ ಲಾಭಕರ. ಸುದೀರ್ಘ ಕಾಯಿಲೆಯಿಂದ ಬಳಲುತ್ತಿರುವವರು, ಆ್ಯಂಟಿಬಯೋಟಿಕ್ ಥೆರಪಿ ಪಡೆಯುವಾಗ ಮತ್ತು ನಂತರ ಸಹ ಮೊಸರಿನ ಸೇವನೆ ಮಾಡುವುದು ಬಲು ಒಳ್ಳೆಯದು.
ಒಂದು ಸಂಶೋಧನೆ ಪ್ರಕಾರ, ಪ್ರತಿ ದಿನ 250 ಮಿ.ಲೀ. ಮೊಸರು ಸೇವಿಸುವುದರಿಂದ, ಕ್ಯಾಂಡಿಡಾ ಇನ್ಫೆಕ್ಷನ್ನಿಂದ ಉಂಟಾಗುವ ಬಾಯಿಹುಣ್ಣನ್ನು ತಡೆಗಟ್ಟಬಹುದು. ಕಜ್ಜಿ, ತುರಿಕೆಯಿಂದ ಬಳಲುವವರು ಅಂಥ ಕಡೆ ಮೊಸರನ್ನು ದಿನಕ್ಕೆ 2-3 ಸಲ ಲೇಪಿಸುವುದರಿಂದ ಎಷ್ಟೋ ಉಪಶಮನ ದೊರಕುತ್ತದೆ.
ಇಷ್ಟು ಮಾತ್ರವಲ್ಲ, ರಕ್ತದಲ್ಲಿನ ಕೊಲೆಸ್ಟ್ರಾಲ್ ನಿಯಂತ್ರಿಸಲು ಹಾಗೂ ಹೊಟ್ಟೆ, ಕರುಳಿನ ಕಾಯಿಲೆಗಳನ್ನು ವಾಸಿ ಮಾಡುವಲ್ಲಿ ಕ್ಯಾನ್ಸರ್, ಹೃದ್ರೋಗಗಳನ್ನು ಒಂದು ಹಂತದವರೆಗೆ ತಡೆಗಟ್ಟುವಲ್ಲಿಯೂ ಮೊಸರು ಮುಂದು.
ರುಚಿ
ಅಡುಗೆ ಪದಾರ್ಥಗಳ ರುಚಿ ಹೆಚ್ಚಿಸಲು ಮೊಸರನ್ನು ಹಲವು ವಿಧದಲ್ಲಿ ಬಳಸಲಾಗುತ್ತದೆ. ಐಸ್ ಕ್ರೀಂ ತಯಾರಿಕೆಯಿಂದ ಹಿಡಿದು ಹಲವು ಬಗೆಯ ಮಿಠಾಯಿ, ದಾಲ್, ಮೊಸರುಬಜ್ಜಿ, ಮಜ್ಜಿಗೆಹುಳಿ, ಪಳಿದ್ಯ, ರಾಯ್ತಾ, ನಾನ್ವೆಜ್ ಇತ್ಯಾದಿಗಳಲ್ಲಿಯೂ ಮೊಸರನ್ನು ಬಳಸಲಾಗುತ್ತದೆ.
ಮುಖ್ಯವಾಗಿ ತಂದೂರಿ ಚಿಕನ್ ತಯಾರಿಸುವಾಗ ಗ್ರೇವಿಯನ್ನು ಗಾಢಗೊಳಿಸಲು ಮೊಸರು ಬಲು ಉಪಕಾರಿ. ಇದರಿಂದ ಹಸಿಮೆಣಸಿನ ಘಾಟು ಎಷ್ಟೋ ಕಡಿಮೆ ಆಗುತ್ತದೆ. ಹಣ್ಣುಗಳನ್ನು ಹೋಳಾಗಿಸಿ ಅದರ ಮೇಲೆ ಹುಳಿರಹಿತ ಗಟ್ಟಿ ಕೆನೆಮೊಸರು, ಸಕ್ಕರೆ ಉದುರಿಸಿ ಮಕ್ಕಳಿಗೆ ಸವಿಯಲು ಕೊಡಿ. ವಯಸ್ಸಾದವರಿಗೆ ಸಕ್ಕರೆ ಬದಲು ಜೇನುತುಪ್ಪ ಹಾಕಿ ಕೊಡಿ.





