ಬೇಸಿಗೆಯಲ್ಲಿ ಬೆವರಿನಿಂದಾಗಿ ಮೇಕಪ್‌ ಹೆಚ್ಚು ಸಮಯ ಉಳಿಯುವುದಿಲ್ಲ. ಆದ್ದರಿಂದ ಈ ಕಾಲದಲ್ಲಿ ಮೇಕಪ್‌ ಮಾಡುವಾಗ ಕೆಲವು ವಿಷಯಗಳ ಬಗ್ಗೆ ಗಮನ ನೀಡುವುದು ಅಗತ್ಯವಾಗಿರುತ್ತದೆ.

ಸಿಟಿಎಂಪಿ : ಕಾಲಕ್ಕನುಗುಣವಾಗಿ ಮೇಕಪ್‌ ಮಾಡಲು ಅದರ ನಿಯಮಗಳನ್ನು ಅನುಸರಿಸುವುದು ಅವಶ್ಯಕ. ಅದಕ್ಕಾಗಿ ಸಿಟಿಎಂಪಿ ಅಂದರೆ ಕ್ಲೀನಿಂಗ್‌, ಟೋನಿಂಗ್‌, ಮಾಯಿಶ್ಚರೈಸಿಂಗ್‌ ಮತ್ತು ಪ್ರೊಟೆಕ್ಷನ್‌ನ ಸ್ಟೆಪ್‌ಗಳನ್ನು ಅನುಸರಿಸಿ. ಈ ಕಾಲದಲ್ಲಿ ಫೇಸ್‌ ಕ್ಲೀನಿಂಗ್‌ಗಾಗಿ ಡೀಪ್‌ ಪೇರ್‌ ಫೇಸ್‌ ವಾಶ್‌ನ್ನು ಬಳಸಬೇಕು. ಅದರಿಂದ ಸ್ಕಿನ್‌ ಡೀಪ್‌ ಕ್ಲೀನ್‌ ಸಾಧ್ಯವಾಗುತ್ತದೆ. ಸೆಕೆಂಡ್‌ ಸ್ಟೆಪ್‌ ಅಂದರೆ ಟೋನಿಂಗ್‌ನಿಂದ ರಂಧ್ರಗಳು ಮುಚ್ಚಲ್ಪಟ್ಟು, ಬೆವರು ಬರದಂತೆ ತಡೆಯುತ್ತದೆ. ಟೋನಿಂಗ್‌ಗೆ ಆಸ್ಟಿರಿಂಜೆಂಟ್‌ನ್ನು ಬಳಸುವುದು ಉತ್ತಮ. ಇದು ಮುಖಕ್ಕೆ ಕೂಲ್‌ ಮತ್ತು ರಿಫ್ರೆಶಿಂಗ್‌ನ ಅನುಭವ ನೀಡುತ್ತದೆ. ಚರ್ಮದಲ್ಲಿನ ಹೆಚ್ಚಿನ ತೈಲಾಂಶವನ್ನು ನಿವಾರಿಸುತ್ತದೆ. ಚರ್ಮ ರಂಧ್ರಗಳನ್ನು ಮಿನಿಮೈಸ್‌ ಮಾಡಲು ಮುಖಕ್ಕೆ ಕೋಲ್ಡ್ ಕಂಪ್ರೆಶನ್‌ನ್ನು ಕೊಡಬಹುದು. ಇದಕ್ಕಾಗಿ ಮಕಮಲ್ ಬಟ್ಟೆಯಲ್ಲಿ ಮಂಜುಗಡ್ಡೆಯ ತುಂಡೊಂದನ್ನು ಇಟ್ಟು ಮುಖಕ್ಕೆ ಮಸಾಜ್‌ ಮಾಡಿ. ಹೀಗೆ ಮಾಡುವುದರಿಂದಲೂ ಚರ್ಮ ರಂಧ್ರಗಳು ಮುಚ್ಚಿಕೊಳ್ಳುತ್ತವೆ.

ಬೇಸಿಗೆಯಲ್ಲಿ ಚರ್ಮಕ್ಕೆ ಆರ್ದ್ರತೆಯ ಅವಶ್ಯಕತೆ ಇರುತ್ತದೆ. ಅದಕ್ಕಾಗಿ ಮುಖಕ್ಕೆ ಜೆಲ್ ಬೇಸ್ಡ್ ಮಾಯಿಶ್ಚರೈಸರ್‌ನ್ನು ತಪ್ಪದೆ ಹಚ್ಚಬೇಕು. ಇದಲ್ಲದೆ, ಚರ್ಮವನ್ನು ಹೈಡ್ರೇಟ್‌ ಮಾಡಲು ಆ್ಯಲೋವೇರಾ ಜೆಲ್‌ನ್ನು ಸಹ ಹಚ್ಚಬಹುದು. ಇದು ಮುಖಕ್ಕೆ ಫೇರ್‌ನೆಸ್‌ ಮತ್ತು ಬ್ರೈಟ್‌ನೆಸ್‌ ಒದಗಿಸುತ್ತದೆ. ಜೊತೆಗೆ ಚರ್ಮದ ಮೇಲೆ ಸನ್‌ ಪ್ರೊಟೆಕ್ಷನ್‌ನಂತೆಯೂ ಕೆಲಸ ಮಾಡುತ್ತದೆ.

ಫ್ಲಾಲೆಸ್‌ ಟೆಕ್ಸ್ ಚರ್‌ : ನಿಮ್ಮ ಮೇಕಪ್‌ ಹೆಚ್ಚು ಸಮಯ ಉಳಿದಿರಬೇಕೆಂದರೆ ಪ್ರೈಮರ್‌ ಹಚ್ಚಲು ಮರೆಯಬೇಡಿ. ಪ್ರೈಮರ್‌ನಿಂದ ಮೇಕಪ್‌ ಹೆಚ್ಚು ಸಮಯ ಉಳಿಯುವುದಲ್ಲದೆ, ಮುಖದಿಂದ ಸುಕ್ಕುಗಳನ್ನೂ ನಿವಾರಿಸುತ್ತದೆ. ಮಾಯಿಶ್ಚರೈಸರ್‌ ಹಚ್ಚಿದ ನಂತರ ಮತ್ತು ಫೌಂಡೇಶನ್‌ ಹಚ್ಚುವ ಮೊದಲು ಪ್ರೈಮರ್‌ ಹಚ್ಚಬೇಕು ಎಂದು ಎಕ್ಸ್ ಪರ್ಟ್‌ಗಳು ಸಲಹೆ ನೀಡುತ್ತಾರೆ. ಮೇಕಪ್‌ ಮಾಡುವಾಗ ಮಹಿಳೆಯರು ಸಾಮಾನ್ಯವಾಗಿ ಮಾಡುನ ಒಂದು ತಪ್ಪೆಂದರೆ ಮೇಕಪ್‌ನ  ಪ್ರತಿಯೊಂದು ಸ್ಟೆಪ್‌ನಲ್ಲಿ ಒಣಗಲು ಬಿಡುವುದಿಲ್ಲ. ಆದ್ದರಿಂದ ನೀವು ಇಂತಹ ತಪ್ಪನ್ನು ಮಾಡಬೇಡಿ.

ಸ್ಕಿನ್‌ ಕಲರ್‌/ಸ್ಕಿನ್‌ ಟೋನ್‌ಗಾಗಿ ಫೌಂಡೇಶನ್‌ ಬಳಸುವಂತೆ, ಮುಖದ ಕಲೆ ಮತ್ತು ಡಾರ್ಕ್‌ ಸರ್ಕಲ್‌ನ್ನು ಮುಚ್ಚಲು ಕನ್ಸೀಲರನ್ನು ಬಳಸಲಾಗುತ್ತದೆ. ಕನ್ಸೀಲರನ್ನು ಬಳಸುವಾಗ ಒಂದು ಶೇಡ್‌ ಲೈಟ್‌ ಆಗಿರುವಂತಹುದನ್ನು ತೆಗೆದುಕೊಳ್ಳಿ.

ಮುಖದ ಕಲೆಗಳನ್ನು ಮುಚ್ಚಲು ಮೊದಲು ಫೌಂಡೇಶನ್‌ ಹಚ್ಚಿ. ನಂತರ ಕನ್ಸೀಲರ್‌ ಹಚ್ಚಿ. ಕಲೆಗಳು ಇನ್ನೂ ಕಾಣಿಸುತ್ತಿದ್ದರೆ ಮತ್ತಷ್ಟು ಕನ್ಸೀಲರ್‌ ಹಚ್ಚಿ. ನಂತರ ಪೌಡರ್‌ ಲೇಪಿಸಿ.

ಚೀಕ್ಸ್ ಹೈಲೈಟ್‌ ಮಾಡಲು ಮತ್ತು ಮುಖಕ್ಕೆ ಗ್ಲೋ ಉಂಟು ಮಾಡಲು ಪೀಚ್‌ ಶೇಡ್‌ನ ಬ್ಲಶ್‌ಆನ್‌ ಹಚ್ಚಿ. ಚಿಸಲ್ಡ್ ಲುಕ್‌ಗಾಗಿ ಬ್ಲಶ್‌ಆನ್‌ ಬದಲು ಟ್ರಾನ್ಸಿಂಗ್‌ ಮಾಡಬಹುದು.

ಕೂಲ್‌ ರಿಫ್ರೆಶಿಂಗ್‌ ಐಸ್‌ : ಸುಂದರ ಕಣ್ಣುಗಳು ಮುಖದ ಸೌಂದರ್ಯವನ್ನು ಹೆಚ್ಚಿಸುತ್ತವೆ. ಕಣ್ಣುಗಳ ಮೇಕಪ್‌ ಹೆಚ್ಚು ಸಮಯ ಉಳಿದಿರಲು ಐ ಪ್ರೈಮರ್‌ ಬಳಸಿ. ಇದರಿಂದ ಮೇಕಪ್‌ ಎದ್ದು ಕಾಣುತ್ತದೆ ಮತ್ತು ಬೆವರನ್ನೂ ತಡೆಯುತ್ತದೆ. ಕಣ್ಣುಗಳ ಮೇಕಪ್‌ ಮಾಡುವಾಗ ಹೊರಗಿನ ಭಾಗವನ್ನು ಡಾರ್ಕ್‌ ಮತ್ತು ಒಳಗಿನ ಭಾಗವನ್ನು ಬ್ರೈಟ್‌ ಆಗಿ ಮಾಡಿ.

ಈ ಸಲದ ಬೇಸಿಗೆಯಲ್ಲಿ ಮೇಕಪ್‌ ಮೂಲಕ ಕೂಲ್‌ ಆಗಿರಲು ಪರ್ಪಲ್ ಫ್ಯಾಮಿಲಿ ಶೇಡ್‌ಗಳಾದ ಲ್ಯಾವೆಂಡರ್‌ ಲೈಲಾಕ್‌ಗಳನ್ನು ಬಳಸಿ. ಈ ಬಣ್ಣಗಳು ಐಶ್ಯಾಡೋ ಮಾತ್ರವಲ್ಲದೆ, ಐ ಲೈನರ್‌ ಮತ್ತು ಕಾಜಲ್ ರೂಪದಲ್ಲಿಯೂ ನಿಮ್ಮ ಕಣ್ಣಿನ ಸೌಂದರ್ಯವನ್ನು ಹೆಚ್ಚಿಸುತ್ತವೆ. ಇಂದಿನ ದಿನಗಳಲ್ಲಿ ಐ ಲಿಡ್‌ ಮೇಲೆ ಕಲರ್ಡ್‌ ಲೈನರ್‌ಗಳಾದ ಎಮರಾಲ್ಡ್ ಗ್ರೀನ್‌, ಇಂಡಿಗೋ, ಬ್ಲೂ, ವೈಟ್‌, ಕಾಪರ್‌ ಮುಂತಾದವು ಮತ್ತು ವಾಟರ್‌ಲೈನ್‌ ಮೇಲೆ ಜೆಟ್‌ ಬ್ಲಾಕ್‌ ಕಾಜಲ್ ಹಿಟ್‌ ಆಗಿವೆ.

ನಿಮಗೆ ಐ ಶ್ಯಾಡೋ ಹಚ್ಚಲು ಇಷ್ಟವಿಲ್ಲದಿದ್ದರೆ ಅಪ್ಪರ್‌ ಲಿಡ್‌ ಮೇಲೆ ಕ್ಯಾಟ್‌ ಐಸ್‌ ಅಥವಾ ರಿವರ್ಸ್‌ ವಿಂಗ್ಸ್ ಐ ಲೈನರ್‌ ಹಚ್ಚಿ. ರೆಪ್ಪೆಗಳಿಗೆ ಲಾಂಗ್‌ ಲ್ಯಾಶ್‌ ಮಸ್ಕರಾ ಹಚ್ಚುವುದರ ಮೂಲಕ ಬೋಲ್ಡ್ ಲುಕ್‌ ಕೊಡಬಹುದು. ಈ ಕಾಲದಲ್ಲಿ ವಾಟರ್‌ ಪ್ರೂಫ್‌ ಪ್ರಾಡಕ್ಟ್ ಗಳನ್ನೇ ಬಳಸಬೇಕೆಂಬುದನ್ನು ಗಮನದಲ್ಲಿಡಿ.

ಪೆನ್ಸಿಲ್ ಐ ಲೈನರ್‌ ಬದಲು ಕೇಕ್‌ ಐ ಲೈನರ್‌ ಬಳಸಿ. ಇದೊಂದು ಒಳ್ಳೆಯ ಉತ್ಪನ್ನ. ಪೆನ್ಸಿಲ್‌ ಐ ಲೈನರ್‌ನಂತೆ ಇದು ಅಳಿಸಿ ಹೋಗದೆ ಹೆಚ್ಚು ಸಮಯ ಉಳಿದಿರುತ್ತದೆ. ಕೇಕ್‌ ಐ ಲೈನರ್‌ ಒಣಗಿದಂತಿರುತ್ತದೆ. ಆದ್ದರಿಂದ ಅದನ್ನು ಬಳಸುವಾಗ ಸ್ವಲ್ಪ ನೀರನ್ನು ಸೇರಿಸಬೇಕಾಗುತ್ತದೆ. ಅದನ್ನು ಹೆಚ್ಚು ಕಾಲ ಉಪಯೋಗಿಸಲು ಆಗುವಂತೆ ಮಾಡಲು ಅದಕ್ಕೆ ಪೌಡರ್‌ನ್ನು ಸೇರಿಸಬಹುದು.

ನಿಮ್ಮ ಬಳಿ ಐ ಲ್ಯಾಶ್‌ಕರ್ಲರ್‌, ವಾಲ್ಯೂಮೈಸಿಂಗ್‌ ಮಸ್ಕರಾ ಮತ್ತು ಒಂದು ಲೆಂದನಿಂಗ್‌ ಮಸ್ಕರಾ ಅವಶ್ಯವಾಗಿ ಇರಬೇಕು.

ಸ್ಟೈಲಿಶ್‌ ಹೇರ್‌ ಡೂ : ಬೇಸಿಗೆಯಲ್ಲಿ ಕೂದಲನ್ನು ಹರಡಿ ಬಿಡಬೇಡಿ. ಏಕೆಂದರೆ ಬೆವರಿನಿಂದಾಗಿ ಕೂದಲು ಅಂಟಂಟಾಗಿ ಬಿಡುತ್ತದೆ. ಆದ್ದರಿಂದ ಕೂದಲನ್ನು ಜಡೆ ಹೆಣೆಯಬಹುದು ಅಥವಾ ಬನ್‌ ಮಾದರಿಯಲ್ಲಿ ಬಿಗಿಯಬಹುದು ಅಥವಾ ಸ್ಟೈಲಿಶ್‌ ಪೋನಿಟೇಲ್ ಕಟ್ಟಬಹುದು. ಇದರಿಂದ ಕೂದಲು ಹರಡದೆ ಬಿಗಿಯಾಗಿರುತ್ತದೆ ಮತ್ತು ನೋಡಲು ಸ್ಟೈಲಿಶ್‌ ಆಗಿಯೂ ಕಾಣುತ್ತದೆ. ಇದಲ್ಲದೆ ನೀವು ಸಾಕ್‌ ಬನ್‌, ಹೈ ಬನ್‌ ಅಥವಾ ಸ್ಟೈಲಿಶ್‌ ಬ್ರೆಡ್ಸ್ ಸಹ ಮಾಡಬಹುದು.

– ಭಾರತಿ ಹೆಗಡೆ

Tags:
COMMENT