ಚಳಿಗಾಲದ ದಿನಗಳಲ್ಲಿ ಕೂದಲಿನ ಕಡೆ ನಿರ್ಲಕ್ಷ್ಯ ವಹಿಸುವುದರಿಂದ, ನಿಮ್ಮ ಕೂದಲಿಗೆ ಹಾನಿ ತಪ್ಪಿದ್ದಲ್ಲ. ಇದರಿಂದ ಶುಷ್ಕತೆ, ತಲೆಹೊಟ್ಟು, ಕೂದಲು ಉದುರುವಿಕೆ ಇತ್ಯಾದಿ ಸಮಸ್ಯೆಗಳು ತರೆದೋರಬಹುದು.
ಕೊರೆಯುವ ಚಳಿಯಲ್ಲಿ ಕೂದಲಿನ ಆರ್ದ್ರತೆ ತಂತಾನೇ ಕಡಿಮೆಯಾಗುತ್ತದೆ. ಇದರಿಂದ ಕೂದಲು ಶುಷ್ಕ ಆಗುತ್ತದೆ. ಇಷ್ಟು ಮಾತ್ರವಲ್ಲ, ಚಳಿಗಾಲದಲ್ಲಿ ಸುಂಯ್ ಎಂದು ಬೀಸುವ ಥಂಡಿಯಿಂದಾಗಿ ಕೂದಲು ಒರಟೊರಟಾಗಿ, ನಿರ್ಜೀವ ಆಗುತ್ತದೆ.
ಈ ಎಲ್ಲಾ ಸಮಸ್ಯೆಗಳನ್ನೂ ದೂರ ಓಡಿಸಲು ಇಂದಿನ ಮಾರುಕಟ್ಟೆಯಲ್ಲಿ ಹಲವಾರು ಉತ್ಪನ್ನಗಳು ಲಭ್ಯ. ಆದರೆ ಅತಿ ದುಬಾರಿಯಾದ ಇವಕ್ಕೆ ಮೊರೆಹೋಗುವ ಬದಲು, ನಿಮ್ಮ ಕೂದಲಿಗೆ ಮನೆಮದ್ದು ಮಾಡಿ ನೈಸರ್ಗಿಕ ಸೌಂದರ್ಯ ಕಾಪಾಡಿಕೊಳ್ಳಬಹುದು. ಬನ್ನಿ, ಇದನ್ನು ಮಾಡುವುದು ಹೇಗೆ ಎಂದು ಈ ಸಲಹೆಗಳಿಂದ ಅರಿಯೋಣ :
ಹಾಟ್ ಆಯಿಲ್ ಮಸಾಜ್
ಬಿಸಿ ಎಣ್ಣೆಯ ಮಸಾಜ್‌ನಿಂದ ಕೂದಲಿಗೆ ಹೇರಳ ಲಾಭವಿದೆ. ಶುಷ್ಕ ಕೂದಲು ಹಾಗೂ ನೆತ್ತಿಗೆ ಬಿಸಿ ಎಣ್ಣೆ ಒತ್ತಿ ಮಸಾಜ್‌ಮಾಡುವುದರಿಂದ ಅದರ ಪರಿಣಾಮ ಕೆಲವು ದಿನಗಳಲ್ಲೇ ಕಂಡುಬರುತ್ತದೆ. ಈ ಮಸಾಜ್‌ನಿಂದ ಕೂದಲಿಗೆ ಮೃದುತ್ವ ಹಾಗೂ ಪೋಷಣೆ ದೊರೆಯುತ್ತದೆ. ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಗೆ ತುಸು ಹಿಪ್ಪೆ ಎಣ್ಣೆ (ಆಲಿವ್ ಆಯಿಲ್) ಬೆರೆಸಿ ತುಸು ಬೆಚ್ಚಗೆ ಬಿಸಿ ಮಾಡಿ, ಇದನ್ನು ನೆತ್ತಿಗೆ ಒತ್ತಿ ಕೂದಲಿಗೆ ಹಚ್ಚಿದ್ದನ್ನು ಇಡೀ ರಾತ್ರಿ ಹಾಗೇ ಬಿಡಿ. ಇದು ಕೂದಲಿಗೆ ಸುರಕ್ಷಾ ಕವಚವಾಗಿ ಕೆಲಸ ಮಾಡುತ್ತದೆ.
ಮೊಟ್ಟೆಯ ಬಿಳಿ ಭಾಗದಿಂದ ಹೊಳೆಯುವ ಕೂದಲು
ಶುಷ್ಕ, ಒರಟಾದ ಕೂದಲನ್ನು ನೀಟಾಗಿ ಬಾಚುವುದು ಎಂದರೆ ನಿಜಕ್ಕೂ ಕಷ್ಟದ ಕೆಲಸ. ಕೂದಲಿನ ಸಿಕ್ಕು ಬಿಡಿಸಲು ಹೋದರೆ ನೋವಾಗುವುದಂತೂ ಖಚಿತ, ಜೊತೆಗೆ ಕೂದಲು ತುಂಡರಿಸ ತೊಡಗುತ್ತದೆ. ಈ ಸಮಸ್ಯೆಯನ್ನು ನಿವಾರಿಸಲು ಉತ್ತಮ ಉಪಾಯ ಮೊಟ್ಟೆಯ ಬಿಳಿ ಭಾಗ. ಕೂದಲಿನ ಆರ್ದ್ರತೆ ಉಳಿಸಿಕೊಳ್ಳಲು, ಅದಕ್ಕೆ ಹೆಚ್ಚಿನ ಪೋಷಣೆ ನೀಡಲು ಕೂದಲಿಗೆ ಮೊಟ್ಟೆಯ ಬಿಳಿ ಭಾಗವನ್ನು ಪ್ಯಾಕ್ ಮಾಡಿ ಹಚ್ಚಿಕೊಳ್ಳಿ. ಇದನ್ನು ಹಚ್ಚಿದ 30 ನಿಮಿಷಗಳ ನಂತರ ಮೈಲ್ಡ್ ಹರ್ಬಲ್ ಶ್ಯಾಂಪೂ ಬಳಸಿ ಕೂದಲನ್ನು ಚೆನ್ನಾಗಿ ತೊಳೆಯಿರಿ. ಹೀಗೆ ತಿಂಗಳಿಗೆ 2 ಸಲ ಮಾಡಿ ನೋಡಿ.
ಕೂದಲಿನ ವಾಲ್ಯೂಂ ಹೆಚ್ಚಿಸಲು ಕುಂಬಳಕಾಯಿ
ಕುಂಬಳದ ಪೇಸ್ಟ್ ಹಾಗೂ ಜೇನುತುಪ್ಪದ ಮಿಶ್ರಣ ಬಲು ಲಾಭಕಾರಿ. ಕುಂಬಳದಲ್ಲಿ ವಿಟಮಿನ್ ಈ ಇರುತ್ತದೆ. ಜೊತೆಗೆ ಬೀಟಾ ಕೆರಾಟಿನ್, ಝಿಂಕ್, ಪೊಟ್ಯಾಶಿಯಂ ಪ್ರಮಾಣ ಅಧಿಕವಾಗಿರುತ್ತದೆ. ಕುಂಬಳದ ಪೇಸ್ಟ್ ಗೆ 2 ಚಮಚ ಜೇನುತುಪ್ಪ ಬೆರೆಸಿ ಕೂದಲಿಗೆ ಪ್ಯಾಕ್ ತಯಾರಿಸಬಹುದು. ಈ ಪ್ಯಾಕ್ ಕೂದಲಿಗೆ ಹೆಚ್ಚಿನ ವಾಲ್ಯೂಂ ನೀಡುತ್ತದೆ, ಇದರಿಂದ ತೆಳು ಕೂದಲು ಸಹ ತುಂಬಿಕೊಂಡಂತೆ ಕಾಣುತ್ತದೆ.
ಬಾಳೆ ಹಿಪ್ಪೆ ಮಿಶ್ರಣದ ಜಾದೂ
ಬಾಳೆಹಣ್ಣು ದೇಹಕ್ಕಷ್ಟೆ ಪೋಷಣೆ ನೀಡುವುದಲ್ಲ, ಜೊತೆಗಿದು ಕೂದಲಿಗೆ ಪರಿಣಾಮಕಾರಿಯೂ ಹೌದು. ಹಿಪ್ಪೆ ಎಣ್ಣೆಯಲ್ಲಿ ಕಿವುಚಿದ ಮಾಗಿದ ಬಾಳೆಹಣ್ಣಿನ ಮಿಶ್ರಣ ತಲೆಗೂದಲಿಗೆ ಜಾದೂ ಪರಿಣಾಮ ತೋರಿಸುತ್ತದೆ. ಈ ಪ್ಯಾಕ್ ತಯಾರಿಸಿಕೊಳ್ಳಲು ಚೆನ್ನಾಗಿ ಮಾಗಿದ ಬಾಳೆಹಣ್ಣನ್ನು ಕಿವುಚಿ, ಅದಕ್ಕೆ ಹಿಪ್ಪೆ ಎಣ್ಣೆ ಬೆರೆಸಿ. ಪ್ಯಾಕ್‌ನಿಂದ ಎಣ್ಣೆ ತೊಟ್ಟಿಕ್ಕುವಂತೆ ಇರಬಾರದು. ಇದನ್ನು ಕೂದಲಿಗೆ ಹಚ್ಚಿಕೊಂಡು 30 ನಿಮಿಷ ಹಾಗೇ ಬಿಡಿ. ನಂತರ ಶ್ಯಾಂಪೂ ಹಾಕಿ ಕೂದಲು ತೊಳೆಯಿರಿ.