ಬಹುಭಾಷಾ ನಟಿ, ಕರ್ನಾಟಕ ಮೂಲದ ಪೂಜಾ ಹೆಗ್ಡೆ ಸಂದರ್ಶನವೊಂದರಲ್ಲಿ ಟ್ರೋಲರ್ಸ್ ವಿರುದ್ಧ ಕೆಂಡ ಕಾರಿದ್ದಾರೆ. ಸಿನಿಮಾ ರಂಗದಲ್ಲಿ ಈ ಟ್ರೋಲರ್ಸ್‌ಗೆ ನಾನು ಬಲಿಪಶು ಆಗಿದ್ದೇನೆ, ದುಡ್ಡು ಪಡೆದು ನನ್ನ ವಿರುದ್ಧ ಟ್ರೋಲ್ ಮಾಡಿ ನಮ್ಮ ಕೆರಿಯರ್‌ಗೆ ತೊಂದರೆ ಮಾಡಿದ್ದಾರೆ ಎಂದು ಪೂಜಾ ಹೆಗ್ಡೆ ಬೇಸರ ಹೊರಹಾಕಿದ್ದಾರೆ. ನಟ-ನಟಿಯನ್ನು ಗುರಿಯಾಗಿಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ನೆಗೆಟಿವ್ ಟ್ರೋಲ್ ಮಾಡುತ್ತಾರೆ. ಇದನ್ನೆಲ್ಲಾ ದುಡ್ಡು ಪಡೆದು ಮಾಡುತ್ತಾರೆ ಅನ್ನೋದು ತಿಳಿದು ನನಗೆ ಶಾಕ್ ಆಯ್ತು. ನಟ-ನಟಿಯರನ್ನು ಮುಗಿಸೋಕೆ ಪಿಆರ್ ಕೆಲಸಗಳು ನಡೆಯುತ್ತಿವೆ ಎಂದು ನಟಿ ಪೂಜಾ ಹೆಗ್ಡೆ ಸಿನಿಮಾ ರಂಗದ ಕರಾಳ ಮುಖವನ್ನು ಬಿಚ್ಚಿಟ್ಟಿದ್ದಾರೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಪೂಜಾ ಅವರನ್ನು ಸಾಮಾಜಿಕ ಮಾಧ್ಯಮದ ನೆಗೆಟಿವಿಟಿ ಹ್ಯಾಂಡಲ್ ಮಾಡುವ ಬಗ್ಗೆ ಮತ್ತು ಯಾರೊಬ್ಬರ ಪಿಆರ್ ಯಂತ್ರವು ತಮ್ಮ ವಿರುದ್ಧ ಕೆಲಸ ಮಾಡಿದೆ ಅಂತಾ ಎಂದಾದರೂ ಭಾವಿಸಿದ್ದಾರಾ ಅಂತಾ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಪೂಜಾ ಹೆಗ್ಡೆ, ಹಲವಾರು ಬಾರಿ ಟಾರ್ಗೆಟ್ ಟ್ರೋಲಿಂಗ್ ಅನ್ನು ಎದುರಿಸಿದ್ದೇನೆ. ಆರಂಭದಲ್ಲಿ ಅದರಿಂದ ಆಘಾತಕ್ಕೊಳಗಾಗಿದ್ದೆ ಎಂದು ಒಪ್ಪಿಕೊಂಡ್ರು.
‘ನಿಜವಾಗಿಯೂ ಕೆಟ್ಟದಾದ ಒಂದು ವಿಷಯವೆಂದರೆ ಪಿಆರ್. ಮೀಮ್ ಪುಟಗಳಿಂದ ನಾನು ನಿರಂತರವಾಗಿ ಟ್ರೋಲ್ ಆಗುತ್ತಿದ್ದ ಸಮಯವಿತ್ತು. ಅವರು ನಿರಂತರವಾಗಿ ನನ್ನ ಬಗ್ಗೆ ಏಕೆ ನಕಾರಾತ್ಮಕವಾಗಿ ಮಾತನಾಡುತ್ತಿದ್ದಾರೆ ಎಂದು ನಾನು ಯೋಚಿಸುತ್ತಿದ್ದೆ. ಜನರು ಇತರ ಜನರ ಕಾಲೆಳೆದು ಕೆಳಗೆ ಹಾಕಲು ಬಹಳಷ್ಟು ಹಣವನ್ನು ಖರ್ಚು ಮಾಡುತ್ತಿದ್ದಾರೆ. ಟ್ರೋಲಿಂಗ್ ತನ್ನ ಮತ್ತು ತನ್ನ ಕುಟುಂಬದ ಮೇಲೆ ತೀವ್ರ ಪರಿಣಾಮ ಬೀರಿದೆ. ನಾನು ಚೆನ್ನಾಗಿಲ್ಲದಿದ್ದರೆ ಬೇರೆಯವರು ನನ್ನನ್ನು ಕೆಡವಲು ಹಣವನ್ನು ಖರ್ಚು ಮಾಡುತ್ತಿರಲಿಲ್ಲ’ ಅಂತಾ ಟ್ರೋಲರ್ಸ್ ವಿರುದ್ಧ ಬಹಿರಂಗವಾಗಿಯೇ ಸಿಟ್ಟು ಹೊರಹಾಕಿದ್ದಾರೆ.
ಅವರು ನಿಮ್ಮನ್ನು ಟ್ರೋಲ್ ಮಾಡಲು ನಮಗೆ ಇಷ್ಟು ಪಾವತಿಸುತ್ತಿದ್ದಾರೆ. ನೀವು ಅದನ್ನು ನಿಲ್ಲಿಸಲು ಅಥವಾ ಅವರನ್ನು ಮತ್ತೆ ಟ್ರೋಲ್ ಮಾಡಲು ಬಯಸಿದರೆ ಇಷ್ಟು ಮೊತ್ತ ಕೊಡಬೇಕು ಎಂದಿದ್ದರು. ನನಗೆ ಇದನ್ನು ಕೇಳಿ ವಿಚಿತ್ರ ಎನಿಸಿತ್ತು. ಜನರು ಅಂತಹ ವಿಷಯಗಳನ್ನು ನಂಬುತ್ತಾರೆ. ಆದರೆ ನನ್ನನ್ನು ಏಕೆ ಟ್ರೋಲ್ ಮಾಡಲಾಗುತ್ತಿದೆ ಅಥವಾ ಅದರ ಹಿಂದಿನ ಕಾರಣವೇನೆಂದು ತಿಳಿದಿಲ್ಲ. ಕೆಲವೊಮ್ಮೆ, ನಾನು ಶಾಕಿಂಗ್ ಕಾಮೆಂಟ್ ಅನ್ನು ನೋಡುತ್ತೇನೆ, ಪ್ರೊಫೈಲ್‌ಗೆ ಹೋಗಿ ಅಲ್ಲಿ ನೋಡಿದರೆ ಯಾವುದೇ ಡಿಪಿ, ಪೋಸ್ಟ್ ಇರುವುದಿಲ್ಲ ಅಂತಾ ಸಿಟ್ಟು ಹೊರಹಾಕಿದ್ದಾರೆ.
ಶಾಹಿದ್ ಕಪೂರ್ ಜೊತೆ ‘ದೇವಾ’ ಚಿತ್ರದಲ್ಲಿ ಕೊನೆಯ ಬಾರಿಗೆ ಬಿಗ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡ ನಟಿ ಪೂಜಾ ಹೆಗ್ಡೆ, ಸಾಮಾಜಿಕ ಮಾಧ್ಯಮದ ಕರಾಳ ಮುಖದ ಬಗ್ಗೆ ಶಾಕಿಂಗ್ ಸತ್ಯಗಳನ್ನು ಈ ರೀತಿ ಬಹಿರಂಗಪಡಿಸಿದ್ರು. ಸದ್ಯ ಪೂಜಾ ಹೆಗ್ಡೆ, ನಟ ವರುಣ್ ಧವನ್ ಅವರೊಂದಿಗೆ ‘ಹೈ ಜವಾನಿ ತೋ ಇಷ್ಕ್ ಹೋನಾ ಹೈ’ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.