ಕೆಜಿಎಫ್ ಸಿನಿಮಾದ ಬಳಿಕ ಆ ಚಿತ್ರದ ಎಲ್ಲಾ ಕಲಾವಿದರು, ತಂತ್ರಜ್ಞರು ಸಿಕ್ಕಾಪಟ್ಟೆ ಬ್ಯುಸಿ ಆಗ್ತಾರೆ ಅಂತ ಎಲ್ರೂ ಅಂದ್ಕೊಂಡಿದ್ರು. ಹಾಗೆನೇ ಬಹುತೇಕ ಎಲ್ಲರೂ ಹತ್ತಾರು ಸಿನಿಮಾಗಳಲ್ಲಿ ಬ್ಯುಸಿ ಆಗಿಬಿಟ್ಟರು. ಆದ್ರೆ ಆ ಚಿತ್ರದ ನಾಯಕನಟಿ ಶ್ರೀನಿಧಿ ಶೆಟ್ಟಿ ಮಾತ್ರ ನಿಂತ ನೀರಾಗಿಬಿಟ್ಟರು. ಅರ್ಥಾತ್ ಎಲ್ಲೂ ಕಾಣಿಸಿಕೊಳ್ಳದೇ.. ಕೇವಲ ಕೋಬ್ರಾ ಸಿನಿಮಾ ಬಿಟ್ಟರೆ ಮತ್ಯಾವ ಸಿನಿಮಾದಲ್ಲೂ ಕಾಣಿಸಿಕೊಳ್ಳಲೇ ಇಲ್ಲ.
2017ರಲ್ಲಿ ಕೆಜಿಎಫ್ ಮೊದಲ ಭಾಗದ ಶೂಟಿಂಗ್ ಶುರುವಾಯಿತು. ನಿರ್ದೇಶಕ ಪ್ರಶಾಂತ್ ನೀಲ್, ಮಾಡೆಲಿಂಗ್ ಜಗತ್ತಿನಿಂದ ಒಂದು ಫ್ರೆಶ್ ಫೇಸ್ ನ ರಾಕಿಂಗ್ ಸ್ಟಾರ್ ಯಶ್ ಗೆ ಹುಡುಕುತ್ತಿದ್ದಾಗ ಸಿಕ್ಕ ಮಂಗಳೂರ ಬಂಗಡೆ ಈ ಶ್ರೀನಿಧಿ ಶೆಟ್ಟಿ. ಸೌಂದರ್ಯ ನಿಧಿಯಾಗಿರೋ ಈ ಶ್ರೀನಿಧಿ, ಹೈಟು, ವೆಯ್ಟು ಎಲ್ಲವೂ ಪರ್ಫೆಕ್ಟ್ ಆಗಿ ಸೂಟ್ ಆದ್ರು. ಇನ್ನು ಗ್ಲಾಮರ್ ಜೊತೆಗೆ ಆ ರೀನಾ ದೇಸಾಯಿ ಪಾತ್ರಕ್ಕೆ ಬೇಕಾಗೋ ಖದರ್ ಕೂಡ ಈಕೆಯಲ್ಲಿತ್ತು. ಹಾಗಾಗಿಯೇ ಕೆಜಿಎಫ್ ಸಿನಿಮಾಗಳಿಗೊಂದು ಹೊಸ ಕಳೆ ತಂದುಕೊಟ್ಟರು ಶ್ರೀನಿಧಿ ಶೆಟ್ಟಿ.
2017ರಿಂದ 2022ರ ವರೆಗೆ ಬರೋಬ್ಬರಿ ಐದು ವರ್ಷಗಳ ಕಾಲ ಕೆಜಿಎಫ್ ಚಾಪ್ಟರ್ 1 ಹಾಗೂ 2 ಸಿನಿಮಾಗಳಿಗಾಗಿ ತನು, ಮನವನ್ನು ಅರ್ಪಿಸಿದ್ರು ಶ್ರೀನಿಧಿ ಶೆಟ್ಟಿ. ಈಕೆಗೆ ವಿಶ್ವದಾದ್ಯಂತ ಎಲ್ಲಿಲ್ಲದ ನೇಮು, ಫೇಮ್ ಕೂಡ ಸಿಕ್ಕಿತು. ಆದ್ರೆ ಅದಾದ ಬಳಿಕ ಆಗಿದ್ದು ಮಾತ್ರ ದುರಂತವೇ ಸರಿ. 2022ರಲ್ಲೇ ತೆರೆಕಂಡ ಚಿಯಾನ್ ವಿಕ್ರಮ್ ನಟನೆಯ ಕೋಬ್ರಾ ಸಿನಿಮಾದಲ್ಲಿ ಶ್ರೀನಿಧಿ ಶೆಟ್ಟಿಯನ್ನ ನಾಯಕನಟಿ ಆಗಿಸಿತ್ತು ಟೀಂ. ಆದ್ರೆ ದುರಾದೃಷ್ಠವಶಾತ್ ಆ ಸಿನಿಮಾ ಫ್ಲಾಪ್ ಆಯ್ತು. ಅದಾದ ಬಳಿಕ ಶ್ರೀನಿಧಿ ಶೆಟ್ಟಿ ನಟನೆಗೇ ಗುಡ್ ಬೈ ಹೇಳಿ ಮೂರು ವರ್ಷ ತಮ್ಮ ಮನೆಯಲ್ಲೇ ಸೈಲೆಂಟ್ ಆಗಿ ಕೂತು ಬಿಟ್ಟಿದ್ರು.
ಮೂರು ವರ್ಷ ತನಗಾದ ಅವಮಾನ, ಅಪಮಾನ, ಹತಾಶೆ, ಅಸಮಾಧಾನ, ನೋವು ಹೀಗೆ ಎಲ್ಲವನ್ನೂ ಆ ಭೂತಾಯಿ ಸಕಲವನ್ನೂ ಸಹಿಸೋ ರೀತಿ ಸಹಿಸಿಕೊಂಡಿದ್ರು. ಆದ್ರೀಗ ಆ ಮೂರು ವರ್ಷದ ಕಾಯುವಿಕೆಗೆ ಬರೋಬ್ಬರಿ ಮೂರು ಬಿಗ್ ಸಿನಿಮಾಗಳು ಆಕೆಯನ್ನ ಅರಸಿ ಬಂದಿವೆ. ನ್ಯಾಚುರಲ್ ಸ್ಟಾರ್ ನಾನಿ ಜೊತೆ ಹಿಟ್-3, ಸಿದ್ದು ಜೊನ್ನಲಗಡ್ಡ ಜೊತೆ ತೆಲುಸು ಕದಾ ಸಿನಿಮಾವನ್ನ ಮಾಡ್ತಿದ್ದು, ಸುದೀಪ್ ನಟನೆಯ ಕಿಚ್ಚ 47 ಸಿನಿಮಾಗೂ ಈಕೆಯೇ ನಾಯಕನಟಿ ಅನ್ನೋದು ಅಧಿಕೃತವಾಗಿದೆ. ಅಲ್ಲಿಗೆ ದಿ ವೆಯ್ಟ್ ಈಸ್ ಓವರ್.. ಕೆಜಿಎಫ್ ಕ್ವೀನ್ ಈಸ್ ಬ್ಯಾಕ್ ಟು ರಾಕ್.
ಹಿಟ್-3 ಸಿನಿಮಾ ತೆಲುಗಿನ ಬ್ಲಾಕ್ ಬಸ್ಟರ್ ಹಿಟ್ಸ್ ಹಿಟ್ ಸೀರೀಸ್ ನ ಮೂರನೇ ಸಿನಿಮಾ. ಈ ಬಾರಿ ನಿರ್ಮಾಪಕ ನಾನಿ ಅವರೇ ಲೀಡ್ ನಲ್ಲಿ ಬಣ್ಣ ಹಚ್ಚಿದ್ದು, ನಾನಿಗೆ ಜೋಡಿಯಾಗಿ ಕನ್ನಡತಿ ಶ್ರೀನಿಧಿ ಅಭಿನಯಿಸೋ ಮೂಲಕ ಹಿಟ್ ನಿಂದ ಹಿಟ್ ಕೊಡೋಕೆ ಬರ್ತಿದ್ದಾರೆ. ಸಿನಿಮಾ ಇದೇ ಮೇ 1ಕ್ಕೆ ವಿಶ್ವದಾದ್ಯಂತ ತೆರೆಗೆ ಬರಲಿದ್ದು, ರೊಮ್ಯಾಂಟಿಕ್ ಮೆಲೋಡಿ ಡುಯೆಟ್ ಸಾಂಗ್ ಒಂದು ನೋಡುಗರ ಹಾಗೂ ಕೇಳುಗರ ಕಣ್ಮನ ತಣಿಸುತ್ತಿದೆ.