ನಟಿ ಆಲಿಯಾ ಭಟ್ ಪ್ರತಿಷ್ಠಿತ ಕಾನ್ಸ್ ಚಿತ್ರೋತ್ಸವದ ಸಮಾರೋಪದಲ್ಲಿ ಭಾಗಿಯಾಗಿದ್ದು, ಕೆಲವು ಸಂದರ್ಶನಗಳನ್ನು ಸಹ ನೀಡಿದ್ದಾರೆ.
ನಟಿ ಆಲಿಯಾ ಭಟ್ ದಕ್ಷಿಣ ಭಾರತದ ಪ್ರತಿಭಾವಂತ ನಟರೊಬ್ಬರ ಬಗ್ಗೆ ಬಹಳ ಗೌರವದಿಂದ ಮಾತನಾಡಿರುವ ಆಲಿಯಾ ಭಟ್, ಅವರೊಟ್ಟಿಗೆ ಕೆಲಸ ಮಾಡಲು ಕಾತರಳಾಗಿದ್ದೇನೆ ಎಂದಿದ್ದಾರೆ.
ಈ ಬಾರಿಯ ಕಾನ್ಸ್ ಚಿತ್ರೋತ್ಸವದಲ್ಲಿ ಭಾರತದ ಹಲವಾರು ಮಂದಿ ನಟ-ನಟಿಯರು ಭಾಗಿಯಾಗಿದ್ದರು. ಸಂವಾದ ಕಾರ್ಯಕ್ರಮದಲ್ಲೂ ಭಾಗವಿಸಿದ್ದ ಅವರನ್ನು ಕೇಳಿದ ಹಲವಾರು ಪ್ರಶ್ನೆಗಳಿಗೆ ಆಲಿಯಾ ಭಟ್ ಉತ್ತರ ನೀಡಿದ್ದಾರೆ. ಈ ಸಂದರ್ಭದಲ್ಲ ದಕ್ಷಿಣ ಭಾರತದ ಒಬ್ಬ ಪ್ರತಿಭಾವಂತ ನಟನ ಬಗ್ಗೆಯೂ ಆಲಿಯಾ ಮಾತನಾಡಿದ್ದು ವಿಶೇಷ.
ಕಾನ್ಸ್ನಲ್ಲಿ ಬ್ರುಟ್ ಜೊತೆಗಿನ ಸಂದರ್ಶನದಲ್ಲಿ ಫಹಾದ್ ಫಾಸಿಲ್ ಬಗ್ಗೆ ಮಾತನಾಡಿರುವ ಆಲಿಯಾ ಭಟ್, ‘ನನಗೆ ಫಹಾದ್ ಫಾಸಿಲ್ ನಟನೆಯ ಬಹಳ ಇಷ್ಟವಾಗುತ್ತದೆ. ಅವರ ನಟನೆಯ ‘ಆವೇಶಂ’ ಸಿನಿಮಾ ನನ್ನ ಅಚ್ಚು ಮೆಚ್ಚಿನ ಸಿನಿಮಾಗಳಲ್ಲಿ ಒಂದು. ನಾನು ಫಹಾದ್ ಫಾಸಿಲ್ ಪ್ರತಿಭೆಯನ್ನು ಬಹಳ ಗೌರವಿಸುತ್ತೇನೆ. ಫಹಾದ್ ಫಾಸಿಲ್ ಒಬ್ಬ ಅದ್ಭುತ ಪರ್ಫಾರ್ಮರ್. ಅವರೊಂದಿಗೆ ಕೆಲಸ ಮಾಡುವುದು ನನ್ನ ಪಾಲಿಗೆ ಗೌರವದಾಯಕವಾದುದು, ಎಂದಾದರೂ ಅದಕ್ಕಾಗಿ ಎದುರು ನೋಡುತ್ತೇನೆ’ ಎಂದಿದ್ದಾರೆ.
ಫಹಾದ್ ಫಾಸಿಲ್ ಮಾತ್ರವೇ ಅಲ್ಲದೆ ಒಟ್ಟಾರೆ ಮಲಯಾಳಂ ಚಿತ್ರರಂಗದ ಬಗ್ಗೆ ಗೌರವದಿಂದ ಮಾತನಾಡಿದ ಆಲಿಯಾ ಭಟ್, ‘ಮಲಯಾಳಂ ಚಿತ್ರರಂಗ ಅದ್ಭುತವಾದ ಸಿನಿಮಾಗಳನ್ನು ನೀಡುತ್ತಿದೆ. ಆ ಚಿತ್ರರಂಗದ ಬಗ್ಗೆ ಬಹಳ ಗೌರವ ಇದೆ. ‘ಡಾರ್ಲಿಂಗ್ಸ್’ ಸಿನಿಮಾನದಲ್ಲಿ ನಾನು ಮಲಯಾಳಂ ನಟ ರೋಷನ್ ಮ್ಯಾಥ್ಯು ಜೊತೆ ನಟಿಸಿದ್ದೆ. ಅವರು ಅದ್ಭುತವಾದ ಪ್ರತಿಭೆ ಹೊಂದಿದ್ದಾರೆ. ಅವರು ಹಿಂದಿ ಪ್ರೇಕ್ಷಕರಿಗೂ ಮೆಚ್ಚಿನ ನಟ ಆಗಿದ್ದಾರೆ’ ಎಂದಿದ್ದಾರೆ.
ಮುಂದಿನ ದಿನಗಳಲ್ಲಿ ಪ್ರಾದೇಶಿಕ ಭಾಷೆಗಳ ಸಿನಿಮಾಗಳನ್ನು ಮಾಡುತ್ತೀರ ಎಂಬ ಪ್ರಶ್ನೆಗೆ, ‘ಪ್ರಾದೇಶಿಕ, ಬಾಲಿವುಡ್ ಎಂಬ ಬೇಧ ಏನು ಇಲ್ಲ ಎಂಬುದನ್ನು ಕೋವಿಡ್ ನಮಗೆ ಅರ್ಥ ಮಾಡಿಸಿದೆ. ನಾವೆಲ್ಲರೂ ಸಹ ಒಂದೇ ಕ್ಷೇತ್ರಕ್ಕೆ ಸೇರಿದವರು ಹಾಗಾಗಿ ನಮ್ಮಲ್ಲಿ ಭಿನ್ನತೆ ಇಲ್ಲ. ನಿಮ್ಮ ಕೆಲಸವನ್ನು ವಿಶ್ವದ ಯಾವುದೇ ಮೂಲೆಯ ಜನರಿಗಾದರೂ ನೀವು ತಲುಪಿಸಬಹುದು. ಹಾಗೆಯೇ ನಾವೂ ಸಹ ಯಾವುದೇ ಕಂಟೆಂಟ್ ಅನ್ನಾದರೂ ನೋಡಬಹುದು. ಇತ್ತೀಚೆಗಷ್ಟೆ ಆಸ್ಕರ್ ವಿಜೇತ ಅನಿಮೇಟೆಡ್ ಸಿನಿಮಾ ನೋಡುತ್ತಿದ್ದೆ. ಒಟಿಟಿ ಎಂಬ ವೇದಿಕೆ ಇರುವುದರಿಂದಲೇ ಯಾವುದೋ ಮೂಲೆಯಲ್ಲಿ ಮಾಡಲಾದ ಸಿನಿಮಾವನ್ನು ನೋಡಲು, ಅಲ್ಲಿಯ ಜನರನ್ನು ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿದೆ’ ಎನಿಸಿತು ಎಂದಿದ್ದಾರೆ ಆಲಿಯಾ.





