- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಸುಗಮ ಸಂಗೀತಲೋಕದ ಹಿರಿಯ ಗಾಯನ ಕಲಾವಿದೆ ಅನುರಾಧಾ ಧಾರೇಶ್ವರ ಅವರು ನಿಧನರಾದರು ಎಂಬ ಸುದ್ದಿ ಬಂದಿದೆ. ಅವರಿಗೆ 87 ವರ್ಷ ವಯಸ್ಸಾಗಿತ್ತು.
ಅತಿ ಸಣ್ಣ ವಯಸ್ಸಿನಲ್ಲೇ ಸಂಗೀತವನ್ನೂ, ಸಂಗೀತದ ಒಳಹೊರಗನ್ನೂ ಅರಿತು, ಇತರರಿಗೆ ಸಂಗೀತ ಕಲಿಸುವ ಪ್ರೌಢಿಮೆ ಪಡೆದ ಮಹಾನ್ ಕಲಾವಿದೆ ಅನುರಾಧಾ ಧಾರೇಶ್ವರ್.
ಅನುರಾಧಾ ಬೆಳವಲದ ಮಡಿಲ ಅಚ್ಚ ಕನ್ನಡ ಪ್ರತಿಭೆ. ಅನುರಾಧಾ ಅವರು 1938ರ ನವೆಂಬರ್ 26ರಂದು ಹುಬ್ಬಳ್ಳಿಯಲ್ಲಿ ಜನಿಸಿದರು. ತಂದೆ ನಾಗೇಶ್‌ರಾವ್. ತಾಯಿ ಕೃಷ್ಣಾಭಾಯಿ. ಅನುರಾಧಾ ಅವರ ಹುಟ್ಟು ಹೆಸರು ಶಾಂತಾಮತಿ. ಸಂಪ್ರದಾಯದ ರೀತ್ಯ ಶಾಂತಾಮತಿ ಅವರು, ಮದುವೆಯ ನಂತರ ಅನುರಾಧಾ ಧಾರೇಶ್ವರರಾಗಿ ಆ ಹೆಸರಿನಿಂದಲೇ ಪ್ರಸಿದ್ಧಿ ಪಡೆದರು.
ಅನುರಾಧಾ ಚಿಕ್ಕವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಕಷ್ಟಗಳ ನಡುವೆ ಹೋರಾಟದ ಜೀವನ ನಡೆಸಿ ಅತ್ಯುತ್ತಮ ಗಾಯಕಿಯಾಗಿ ರೂಪುಗೊಂಡವರು. ಚಿಕ್ಕಂದಿನಿಂದಲೇ ಶಾಲಾ ಸಮಾರಂಭಗಳಲ್ಲಿ ಹಾಡುತ್ತಾ ಬಂದರು. ಧಾರವಾಡಕ್ಕೆ ಬಂದ ಮೇಲೆ ಖ್ಯಾತಗಾಯಕ, ಆಕಾಶವಾಣಿ ಕಲಾವಿದ ರಾಮಚಂದ್ರ ಜಂತ್ರಿಯವರಲ್ಲಿ ಶಿಷ್ಯವೃತ್ತಿ ಆರಂಭವಾಯಿತು. ಈಕೆಯ ಮಧುರ ಕಂಠ ಮತ್ತು ಗುಣಸ್ವಭಾವಗಳನ್ನು ಆತ್ಮೀಯವಾಗಿ ಕಂಡ ರಾಮಚಂದ್ರ ಜಂತ್ರಿ ದಂಪತಿಗಳು ಇವರ ಬಗ್ಗೆ ವಿಶೇಷ ಕಾಳಜಿ ವಹಿಸಿ ತಾವು ಕಲಿತ ಸಂಗೀತವೆಲ್ಲವನ್ನು ಧಾರೆ ಎರೆದರು. ಅನುರಾಧಾ ಅವರಿಗೆ ಶಾಸ್ತ್ರೀಯ ಸಂಗೀತದ ಮಜಲುಗಳು ಪರಿಚಯವಾಗುತ್ತಿದ್ದಂತೆ ಭಾವಗೀತೆಗಳನ್ನೂ ಹೇಳಿಕೊಡುತ್ತಾ ಬಂದರು.
ಹೀಗೆ ಶ್ರೇಷ್ಠ ಕವಿಗಳ ಕವಿತೆಗಳು ಅನುರಾಧಾ ಅವರಿಗೆ ಕರಗತವಾಯಿತು. ಅನುರಾಧಾ ವೇದಿಕೆಗಳಲ್ಲಿ ಹಾಡುತ್ತಿದ್ದ ಭಾವಗೀತೆ ಹಾಗೂ ನಾಡಗೀತೆಗಳನ್ನು ಕೇಳಿದವರು, ಆಕೆಯನ್ನು ಅಪಾರವಾಗಿ ಅಭಿಮಾನಿಸುತ್ತಿದ್ದರು. ಇವರ ಏರುದನಿ ಮತ್ತು ಧ್ವನಿ ಮಾಧುರ್ಯತೆಗೆ ಮಾರು ಹೋಗದವರೇ ಇರಲಿಲ್ಲ. ಈ ಪುಟ್ಟ ಬಾಲಕಿ ಗಾಯನದ ಜೊತೆಗೆ ಓದಿನಲ್ಲೂ ಮುಂದುವರಿದು 10ನೇ ತರಗತಿಯನ್ನು ಮುಗಿಸಿದರು.
ತಮ್ಮ ತಾಯಿ ತಮ್ಮನ್ನು ಓದಿಸಲು, ಬೆಳಸಲು ಪಡುತ್ತಿದ್ದ ಕಷ್ಟವನ್ನು ಕಂಡಿದ್ದ ಅನುರಾಧಾ, ತಾವೂ ತಮ್ಮ ಸಂಸಾರಕ್ಕೆ ನೆರವಾಗಲು ನಿರ್ಧರಿಸಿ ಓದನ್ನು 10ನೇ ತರಗತಿಗೆ ಮೊಟುಕುಗೊಳಿಸಿದರು. ಇದೇ ಸಂದರ್ಭದಲ್ಲಿ ಇವರ ಸಂಸಾರವನ್ನು ಹತ್ತಿರದಿಂದ ನೋಡಿದ್ದ ಬಾಸೆಲ್ ಮಿಶನ್ ಗರ್ಲ್ಸ್ ಸ್ಕೂಲ್‌ನ ಹೆಡ್‌ಮಾಸ್ತರ್ ಅಮ್ಮಣ್ಣನವರು ಈಕೆಯ ಗಾಯನ ಪ್ರತಿಭೆಯನ್ನು ಗುರುತಿಸಿ ತಮ್ಮ ಶಾಲೆಯಲ್ಲಿ ಸಂಗೀತ ಶಿಕ್ಷಕಿಯಾಗಿ ಕೆಲಸ ಮಾಡಲು ಅವಕಾಶ ಒದಗಿಸಿಕೊಟ್ಟರು. ಈ ಕಾರ್ಯವನ್ನು ಭಕ್ತಿ, ಶ್ರದ್ಧೆಗಳಿಂದ ನಿರ್ವಹಿಸುತ್ತ ಶಾಲೆಯ ಮಕ್ಕಳಿಗೆ ಪ್ರಿಯರಾದರು. ಮುಂದೆ ಅವರು ಕರ್ನಾಟಕ ವಿಶ್ವವಿದ್ಯಾನಿಲಯದ ಸಂಗೀತ ಪದವಿ ಪಡೆದರು.
ಅನುರಾಧಾ 1966ರ ಸಮಯದಲ್ಲಿ ಧಾರವಾಡ ಆಕಾಶವಾಣಿಯಲ್ಲಿ ಕಾರ್ಯಕ್ರಮ ನಿರೂಪಕಿಯಾಗಿ ಕೆಲಸಕ್ಕೆ ಸೇರಿದರು. ತಿಂಗಳಗೀತೆ, ರಾಮೋತ್ಸವ ಗೀತೆಗಳು, ರೂಪಕ, ನವರಾತ್ರಿಯ ಗೀತೆಗಳು ಹೀಗೆ ಸಂಗೀತದ ವಿವಿಧ ಪ್ರಕಾರಗಳಲ್ಲಿ ತಮ್ಮ ಧ್ವನಿಯನ್ನು ಆಳಡಿಸಿಕೊಳ್ಳುವ ಶೈಲಿಯನ್ನು ರೂಢಿಸಿಕೊಂಡರು. ಇವರು ಹಾಡಿದ ’ಓ ನನ್ನ ದೇಶಭಾಂದವರೇ' ಎಂಬ ನಾಡಗೀತೆಯಂತೂ ಧಾರವಾಡದ ಮನೆ ಮನೆಗಳಲ್ಲೂ ಜನ ಜನಿತವಾಗಿತ್ತು. ಸುಶ್ರಾವ್ಯವಾಗಿ ಹಾಡುತ್ತಿದ್ದ ಅನುರಾಧಾ ಅವರ ಖ್ಯಾತಿ ದೇಶದೆಲ್ಲೆಡೆ ಹಬ್ಬಿತ್ತು.





