ಬೆಂಗಳೂರು : ಕರುನಾಡಿನ ಸ್ಟಾರ್ ನಿರೂಪಕಿ ಅನುಶ್ರೀ ಸಪ್ತಪದಿಗೆ ಕೊನೆಗೂ ಶುಭ ಮುಹೂರ್ತ ಕೂಡಿ ಬಂದಿದೆ. ಯೆಸ್.. ಇತ್ತೀಚಿನ ವರ್ಷಗಳಲ್ಲಿ ಅತಿ ಹೆಚ್ಚು ಚರ್ಚೆಯಾದ ವಿಷಯಗಳಲ್ಲಿ ಅನುಶ್ರೀ ಮದುವೆ ಕೂಡ ಒಂದು. ಅದರಲ್ಲೂ ಕೊರೋನಾ ಬಳಿಕ ಅನುಶ್ರೀ ಮದ್ವೆ ಸಾಕಷ್ಟು ಮಂದಿ ಜೊತೆ ತಳಕು ಹಾಕಿಕೊಳ್ತಿತ್ತು. ಅದಕ್ಕೆ ಕಾರಣ ಆಕೆ ಮೋಸ್ಟ್ ಎಲಿಜಿಬಲ್ ವಧು ಅನ್ನೋದು.
ಆಗಸ್ಟ್ 26ರಿಂದ 28ರ ತನಕ ಮೂರು ದಿನಗಳ ತನಕ ನಡೆಯಲಿದೆ ಅನುಶ್ರೀ-ರೋಷನ್ ಕಲ್ಯಾಣ. 26ರಿಂದಲೇ ಮೆಹಂದಿ, ಸಂಗೀತ್ ಪಾರ್ಟಿಗಳು ನಡೆಯಲಿದ್ದು, 28ರ ಬೆಳಗ್ಗೆ 10.56ಕ್ಕೆ ಮಾಂಗಲ್ಯ ಧಾರಣೆ ಆಗಲಿದೆ.
ಅನುಶ್ರೀ- ರೋಷನ್ ವಿವಾಹ ಬೆಂಗಳೂರಿನ ಹೊರವಲಯದಲ್ಲಿರೋ ಡೆಸ್ಟಿನೇಷನ್ ವೆಡ್ಡಿಂಗ್ ಸೆಂಟರ್ ಸಂಭ್ರಮ ಬೈ ಸ್ವಾನ್ಲೈನ್ಸ್ ಸ್ಟುಡಿಯೋಸ್ನಲ್ಲಿ ನಡೆಯಲಿದೆ. ಕಗ್ಗಲಿಪುರದ ಬಳಿ ಇರೋ ತಿಟ್ಟಹಳ್ಳಿಯಲ್ಲಿ ಈ ಸ್ಟುಡಿಯೋ ಇರೋ ರೆಸಾರ್ಟ್ ಇದೆ.
ಕನ್ನಡ ಬಹುತೇಕ ಎಲ್ಲಾ ಸ್ಟಾರ್ ನಟರು, ಸ್ಟಾರ್ ಡೈರೆಕ್ಟರ್ಗಳ ಜೊತೆ ಉತ್ತಮ ಒಡನಾಟ, ಬಾಂಧವ್ಯ ಹೊಂದಿರೋ ಅನುಶ್ರೀ, ರಾಜಕಾರಣಿಗಳಿಗೂ ಚಿರಪರಿಚಿತರು. ಸರ್ಕಾರದ ಸಾಕಷ್ಟು ಕಾರ್ಯಕ್ರಮಗಳನ್ನ ನಿರೂಪಣೆ ಮಾಡಿರೋ ಅನುಗೆ ರಾಜಕಾರಣಿಗಳ ಒಡನಾಟ ಕೂಡ ಇದೆ. ಹೀಗಾಗಿ ಇಡೀ ಚಿತ್ರರಂಗ, ರಾಜಕೀಯ ಗಣ್ಯರು ಅನುಶ್ರೀ-ರೋಷನ್ ಕಲ್ಯಾಣಕ್ಕೆ ಆಗಮಿಸಲಿದ್ದಾರೆ. ಕಿರುತೆರೆ ವಾಹಿನಿಗಳ ಕಲಾವಿದರು, ತಂತ್ರಜ್ಞರು, ಬ್ಯುಸಿನೆಸ್ ಹೆಡ್ಗಳು ಕೂಡ ಈ ಕಲ್ಯಾಣಕ್ಕೆ ಸಾಕ್ಷಿ ಆಗಲಿದ್ದಾರೆ.
38 ವರ್ಷದ ಅನುಶ್ರೀಯನ್ನ ಆ್ಯಂಕರ್ ಅನುಶ್ರೀಯಾಗಷ್ಟೇ ನಾವು ನೋಡಿದ್ದೀವಿ. ಆಕೆಯ ಕರಿಯರ್ ಶುರುವಾಗಿದ್ದು ಕೂಡ ವಾಹಿನಿಯೊಂದರ ನಿರೂಪಕಿಯಾಗಿಯೇನೇ. ಆದ್ರೆ ಈಕೆ ಹೀರೋಯಿನ್ ಆಗಿ, ಡಬ್ಬಿಂಗ್ ಆರ್ಟಿಸ್ಟ್ ಆಗಿಯೂ ಛಾಪು ಮೂಡಿಸಿದ್ದಾರೆ. ಹೌದು.. ಸುರತ್ಕಲ್ ಮೂಲದ ಅನುಶ್ರೀ ಮಂಗಳೂರು ಯೂನಿವರ್ಸಿಟಿಯಲ್ಲಿ ವ್ಯಾಸಂಗ ಮಾಡಿ, ಬೆಂಗಳೂರಿನಲ್ಲಿ ಬದುಕು ಕಟ್ಟಿಕೊಳ್ಳಲು ಬರ್ತಾರೆ.
ಮಂಗಳೂರಿನಲ್ಲೇ ಲೋಕಲ್ ಟಿವಿ ವಾಹಿನಿಯೊಂದರಲ್ಲಿ ಟೆಲಿ ಫೋನಿನ್ ಕಾರ್ಯಕ್ರಮದ ನಿರೂಪಕಿ ಆಗಿದ್ದ ಈಕೆಗೆ, ಬೆಂಗಳೂರಿನ ಮೈನ್ಸ್ಟ್ರೀಮ್ ಆ್ಯಂಕರ್ ಆಗೋದು ಕಷ್ಟವಾಗಲಿಲ್ಲ. 2006ರಿಂದ ನಿರೂಪಕಿ, ನಟಿಯಾಗಿ ಸಕ್ರಿಯರಾಗಿರೋ ಅನುಶ್ರೀ, ತಮ್ಮ ಟ್ಯಾಲೆಂಟ್ನಿಂದಲೇ ಕನ್ನಡಿಗರ ಹೃದಯ ಗೆದ್ದ ಚೆಲುವೆ ಅನಿಸಿಕೊಂಡಿದ್ದಾರೆ. ಬೆಂಕಿಪಟ್ನ, ರಿಂಗ್ ಮಾಸ್ಟರ್ ಹಾಗೂ ಉಪ್ಪು ಹುಳಿ ಖಾರ ಸಿನಿಮಾಗಳಲ್ಲಿ ತಮ್ಮ ನಟನಾ ಗಮ್ಮತ್ತು ಕೂಡ ತೋರಿದ್ದಾರೆ.