ಇಮ್ರಾನ್ ಜೊತೆ ಪರದೆಯಲ್ಲಿ ರೊಮಾನ್ಸ್ ಹಂಚಿಕೊಂಡ ಜೆನಿಲಿಯಾ, ಈಗ ಅವನ ಸೋದರ ಮಾವ ಆಮೀರ್ ಜೊತೆ ರೀಲ್ ನಲ್ಲಿ ಸರಸವಾಡಲಿದ್ದಾಳೆ! ಸುದ್ದಿಗಾರರ ಪ್ರಕಾರ, ಆಮೀರ್ ನ ಮುಂದಿನ `ಸಿತಾರೆ ಝಮೀನ್ ಪರ್' ಚಿತ್ರದಲ್ಲಿ ಈಕೆ ಅವನಿಗೆ ನಾಯಕಿ ಆಗಲಿದ್ದಾಳೆ. ರಿತೇಶ್ ಜೊತೆ ಮದುವೆ ಆದನಂತರ ಈಕೆ ಕೇವಲ ಮರಾಠಿ ಚಿತ್ರಗಳಿಗಷ್ಟೇ ಸೀಮಿತಳಾದಳು. ಈ ಚಿತ್ರದಿಂದ ಈಕೆ ಬಾಲಿವುಡ್ ನಲ್ಲಿ ಮತ್ತೆ 2ನೇ ಇನಿಂಗ್ಸ್ ಆರಂಭಿಸುವ ಹಾಗಿದೆ. ಆಮೀರ್ ನ ಸ್ಥಿತಿಯೂ ಇದೀಗ ಚಿತ್ರದ ಟೈಟಲ್ ತರಹವೇ ಅಧೋಗತಿಗೆ ಇಳಿದಿದೆ. `ದಬಂಗ್' ಚಿತ್ರದ ನಂತರ ಈತನ ಚಿತ್ರಗಳೆಲ್ಲ ಫ್ಲಾಪ್ ಆದದ್ದೇ ಹೆಚ್ಚು. ಈ ಚಿತ್ರದಿಂದಲಾದರೂ ಇಬ್ಬರೂ ಏಳಿಗೆ ಕಾಣುತ್ತಾರಾ....? ಕಾಲವೇ ಹೇಳಬೇಕು.

`ದೋನೋ' ತರಹವೇ ಇವರಿಬ್ಬರೂ ಫ್ಲಾಪ್!
ಪೂನಂ ಧಿಲ್ಲಾನ್ ಮಗಳು ಹಾಗೂ ಸನ್ನಿ ಡಿಯೋಲ್ ನ ಮಗ ಇಬ್ಬರೂ ಕಲೆತು ನಟಿಸಿದ `ದೋನೋ' ಚಿತ್ರವನ್ನು ವೀಕ್ಷಕರು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ. ಈ ಸ್ಟಾರ್ ಕಿಡ್ಸ್ ನ್ನು ಲಾಂಚ್ ಮಾಡುವ ಸಡಗರದಲ್ಲಿ ರಾಜಶ್ರೀ ಪ್ರೊಡಕ್ಷನ್ಸ್ ಎಲ್ಲರಿಂದ ಛೀ ಥೂ ಅನ್ನಿಸಿಕೊಳ್ಳಬೇಕಾಯಿತು. ಈ ಸಂಸ್ಥೆ `ಮದುವೆ' ಕುರಿತಾದ ತನ್ನ ವ್ಯಾಮೋಹ ಬಿಡುತ್ತಿಲ್ಲ. ಮದುವೆ ವಿಷಯ ಬಿಟ್ಟರೆ ಇವರಿಗೆ ಸಿನಿಮಾ ಮಾಡಲು ಬೇರೇನೂ ಸಿಗುತ್ತಿಲ್ಲವೇ? ಈ ಚಿತ್ರದಲ್ಲೂ ನಾಯಕನಾಯಕಿ ಒಂದು ಡೆಸ್ಚಿನೇಶನ್ ವೆಡ್ಡಿಂಗ್ ನಲ್ಲಿ ಭೇಟಿಯಾಗುತ್ತಾರೆ, ಕಥೆ ಹಾಗೇ ಎಳೆದೊಯ್ಯುತ್ತದೆ, ತೆಳುತ್ತದೆ ಅಂದ್ರೂ ಸರಿ. ರಾಜವೀರ್ ಹಾಗೂ ಪಾಲೋಮಾ ತಂತಮ್ಮ ಪಾತ್ರಗಳಿಗೆ ಒಂದಿಷ್ಟೂ ನ್ಯಾಯ ಸಲ್ಲಿಸಿಲ್ಲ ಎಂದಾಯಿತು.

`ಗುಠಲಿ' ಚಿತ್ರಕ್ಕೆ ನ್ಯಾಯ ಸಿಕ್ಕಿತೇ?
ಇತ್ತೀಚೆಗೆ ಬಿಡುಗಡೆಯಾದ ಸಂಜಯ್ ಮಿಶ್ರಾರ `ಗುಠಲಿ' ಚಿತ್ರ ವಿಮರ್ಶಕರಿಂದ 3 ಸ್ಟಾರ್ ಗಳ ಶಭಾಷ್ ಗಿರಿ ಪಡೆದರೂ, ವೀಕ್ಷರಂತೂ ಕ್ಯಾರೇ ಅನ್ನಲಿಲ್ಲ. ಈ ಚಿತ್ರದ ಕೆಲವು ತಲೆಬಾಲವಿಲ್ಲದ ದೃಶ್ಯಗಳನ್ನು ಬದಿಗಿರಿಸಿದರೂ, ಚಿತ್ರವಂತೂ ಘನ ಗಂಭೀರವಾಗಿದೆ. ದೇಶದಲ್ಲಿ ಜಾತಿ ಆಧಾರಿತ ಜನಗಣನೆ ಹೆಸರಲ್ಲಿ ರಾಜಕೀಯ ನಡೆಯುತ್ತಿದೆ, ಅದನ್ನೇ ವಿಷಯವಾಗಿಸಿಕೊಂಡ ಈ ಚಿತ್ರ, ಅದರಲ್ಲಿನ ಲೋಪದೋಷಗಳನ್ನು ಎತ್ತಿಹಿಡಿದಿದೆ. ಸಂಜಯ್ ಮಿಶ್ರಾ ಹಾಗೂ ಬಾಲಕಲಾವಿದರಾದ ಗೌರಾಂಶ್ ಶರ್ಮರ ನಟನೆ ಅದ್ಭುತ ಪ್ರಭಾವ ಬೀರಿದೆ. ಆದರೂ ಈ ಚಿತ್ರಕ್ಕೆ ಸಿಗಬೇಕಾದ ಅಸಲಿ ಗೌರವ, ಬೆಲೆ ಸಿಗುತ್ತಿಲ್ಲ. ಜನರಿಗೆ ಜಾತಿಗಣನೆಯ ರಾಜಕೀಯ ಬೇಕೇ ಹೊರತು, ಅದರ ಹಿಂದಿನ ಸಮಸ್ಯೆ ಸರಿಪಡಿಸುದಲ್ಲ.

ತಾರೆಯರಿಂದ ತಾಪಸಿಗೆ ಎದುರಾದ ಸಮಸ್ಯೆ
ತಾಪಸಿ ಇತ್ತೀಚೆಗೆ ಒಂದು ಇವೆಂಟ್ ನಲ್ಲಿ ಕೋಪದ ಕಿಡಿ ಕಾರುತ್ತಿದ್ದಳು. ಎಲ್ಲಿಯವರೆಗೂ ಕೆಲವು ತಾರೆಯರು ಬಾಲಿವುಡ್ ನ್ನು ತಮ್ಮಪ್ಪನ ಆಸ್ತಿ ಎಂದು ಚಂಡಿಹಿಡಿಯುವರೋ, ಅಲ್ಲಿಯವರೆಗೂ ಇದು ಉದ್ಧಾರವಾಗದು ಎಂದು ಗುಡುಗಿದ್ದಾಳೆ. ಈ ಸ್ಟಾರ್ ಪವರ್ ನ ಸ್ಟಾರ್ ವಾರ್ ನಿಂದ ಹೊಸ ವಿಷಯಗಳು, ಹೊಸ ಕಲಾವಿದರು ನೆಲ ಕಚ್ಚುತ್ತಿದ್ದಾರೆ! ಆ ಸ್ಟಾರ್ ಗಳ ಸಿನಿಮಾ ರಿಲೀಸ್ ನ ಮರ್ಜಿ ಅನುಸರಿಸಿಯೇ ಹೊಸಬರ ಚಿತ್ರಗಳು ಕ್ಯೂ ನಿಲ್ಲಬೇಕು. ಈಕೆ ಪ್ರಕಾರ, ಸ್ಟಾರ್ಸ್ ಮಾತ್ರವೇ ಇದಕ್ಕೆ ಕಾರಣವಲ್ಲ, ಪ್ರೇಕ್ಷಕರೂ ಅಷ್ಟೇ ಹೊಣೆಯಂತೆ. ಏಕೆಂದರೆ ಯಾವ ಚಿತ್ರದಲ್ಲಿ ಎಂಥ ಸ್ಟಾರ್ಸ್ ಇದ್ದಾರೋ ಎಂಬುದನ್ನು ನೋಡಿಯೇ ಆ ಚಿತ್ರ ನೋಡಬೇಕೋ ಬೇಡವೋ ಅಂತ ನಿರ್ಧರಿಸುತ್ತಾರೆ. ಇಷ್ಟು ಮಾತ್ರವಲ್ಲ, ಸ್ಟಾರ್ಸ್ ನ ಲಕ್ಷಾಂತರ ಫಾಲೋಯರ್ಸ್ ಜನಜಂಗುಳಿಯಲ್ಲಿ ತಾವು ಒಬ್ಬರು ಅಂತ ಹೆಮ್ಮೆಯಿಂದ ಬೀಗುತ್ತಾರೆ. ನೀನು ಹೇಳೋದೇನೋ ಸರಿ ಕಣಮ್ಮ, ಆದರೆ ಜನ ನಿನ್ನ ಮಾತು ಕೇಳಬೇಕಲ್ಲ.....?





