ನಿರ್ದೇಶಕ ಸೂರಿ ಚಿತ್ರ ಅಂದಮೇಲೆ ಏನಾದ್ರೂ ವಿಶೇಷ ಇರಲೇಬೇಕು. ದೊಡ್ಡ ದೊಡ್ಡ ಸ್ಟಾರ್ಸ್ ಜೊತೆ ಸಿನಿಮಾ ಮಾಡುವುದರ ಜೊತೆಗೆ ಹೊಸ ಪ್ರತಿಭೆ ಹುಡುಕಿ ಅವರನ್ನು ತಮ್ಮ ಸಿನಿಮಾ ಮೂಲಕ ಪರಿಚಯಿಸುವುದು ಇವರಿಗೆ ಅತ್ಯಂತ ಪ್ರಿಯವಾದ ಕೆಲಸ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ.
ಇತ್ತೀಚೆಗೆ ಬಂದು ಭಾರಿ ಸುದ್ದಿ ಮಾಡಿದಂಥ ಚಿತ್ರ `ಕೆಂಡಸಂಪಿಗೆ.' ತೆರೆ ಮೇಲೆ ಹೊಸ ಗ್ರಾಮರ್ ಬರೆದಂಥ ಚಿತ್ರವಿದು. ನಟಿಸಿದ ಎಲ್ಲರದೂ ಅದ್ಭುತವಾದ ಕಾಂಟ್ರಿಬ್ಯೂಶನ್ ಆಗಿತ್ತು. ಅದರಲ್ಲೂ ಹೊಸ ಪ್ರತಿಭೆ ಮಾನ್ವಿತಾ ಹರೀಶ್. ಇಪ್ಪತ್ತೆರಡು ವರ್ಷದ ಈ ಬೆಡಗಿ ತನ್ನ ಮೊದಲ ಚಿತ್ರದಲ್ಲೇ ಎಲ್ಲರೂ ಬೆರಗಾಗುವಂತೆ ಅಭಿನಯಿಸಿದ್ದಾಳೆ. ಸಿಂಗಪೂರ್‌ನಲ್ಲಿ ನಡೆದ ಸೈಮಾ ಪ್ರಶಸ್ತಿ ಸಮಾರಂಭದಲ್ಲಿ ಎಲ್ಲರ ಗಮನ ಸೆಳೆದ ಮಾನ್ವಿತಾಳಿಗೆ ಅತ್ಯುತ್ತಮ ಹೊಸ ಪ್ರತಿಭಾ ಪ್ರಶಸ್ತಿ ದೊರಕಿತು. ಸಂತೋಷವನ್ನು ಎಲ್ಲರೊಂದಿಗೆ ಹಂಚಿಕೊಂಡಿರುವ ಮಾನ್ವಿತಾ ಎಲ್ಲರಿಗೂ ಇಷ್ಟವಾಗುವಂಥ ಹುಡುಗಿ.
ಮಾನ್ವಿತಾ `ಕೆಂಡಸಂಪಿಗೆ' ಚಿತ್ರಕ್ಕೆ ಆಯ್ಕೆ ಆಗಿದ್ದೇ ಆಕಸ್ಮಿಕ. ಸ್ನೇಹಿತರೊಬ್ಬರು ಈಕೆಯ ಹೆಸರನ್ನು ಸೂರಿ ಬಳಿ ಹೇಳಿದ್ದರಂತೆ. ಮೇಕಪ್ ಇಲ್ಲದೆ ಇರುವ ಫೋಟೋವನ್ನು ಕಳಿಸಬೇಕಾಗಿ ಸೂರಿ ಕೇಳಿದ್ದರಂತೆ. ಸಿನಿಮಾ ಪರದೆ ಮೇಲೆ ಮೇಕಪ್ ಇಲ್ಲದೇನೆ ಸುಂದರವಾಗಿ ಕಾಣುವಂಥ ಹುಡುಗಿಯ ತಲಾಷೆಯಲ್ಲಿದ್ದ ಸೂರಿಗೆ, ಮಾನ್ವಿತಾಳೇ `ಕೆಂಡಸಂಪಿಗೆ' ಚಿತ್ರಕ್ಕೆ ಸೂಕ್ತವಾದ ಹುಡುಗಿ ಅಂತ ಅನಿಸಿತು.
ಇಂಥ ಒಬ್ಬ ಪ್ರತಿಭಾವಂತ ನಿರ್ದೇಶಕರ ಚಿತ್ರದಲ್ಲಿ ನಟಿಸುವುದೂ ಕೂಡ ಮಾನ್ವಿತಾಳಿಗೆ ಸವಾಲ್ ಆಗಿತ್ತು. ಸೂರಿ ನಿರ್ದೇಶನದ `ದುನಿಯಾ' ಚಿತ್ರ ಎಲ್ಲರಿಗೂ ಅಚ್ಚುಮೆಚ್ಚು. ಹಾಗೆಯೇ ಮಾನ್ವಿತಾ ಕೂಡ `ದುನಿಯಾ' ಚಿತ್ರದ ಫ್ಯಾನ್ ಆಗಿದ್ದಳು.`ಕೆಂಡಸಂಪಿಗೆ' ಪ್ರೇಕ್ಷಕರು ಮತ್ತು ವಿಮರ್ಶಕರಿಂದ ಪ್ರಶಂಸೆ ಪಡೆದಂಥ ಚಿತ್ರ. ಮಾನ್ವಿತಾ ಮೂಲತಃ ಮಂಗಳೂರಿನ ಹುಡುಗಿ. ರೇಡಿಯೋ ಜಾಕಿಯಾಗಿ ಕೆಲಸ ಮಾಡುತ್ತಿದ್ದಳು. ಮಾತಾಡುವುದು ಅವಳ ಕಲೆಯಾಗಿತ್ತು. ಸಿನಿಮಾವನ್ನು ತನ್ನದೇ ಆದ ದೃಷ್ಟಿಕೋನದಿಂದ ನೋಡುವ ಮಾನ್ವಿತಾ, ಕಾಲೇಜಿನಲ್ಲಿದ್ದಾಗಲೇ ಕಿರುಚಿತ್ರಗಳನ್ನು ಮಾಡುತ್ತಿದ್ದಳಂತೆ. ನಟಿಯಾಗುವುದರ ಜೊತೆಗೆ ನಿರ್ದೇಶನವನ್ನೂ ಭವಿಷ್ಯದಲ್ಲಿ ತಾನು ತೆಗೆದುಕೊಳ್ಳುವುದಾಗಿ ಹೇಳುತ್ತಾಳೆ.
ಸದ್ಯಕ್ಕೆ ತನ್ನ ವೃತ್ತಿ ಮತ್ತು ನಟನೆ ಬಗ್ಗೆ ಹೆಚ್ಚು ಆಸಕ್ತಿ ವಹಿಸುತ್ತಿದ್ದಾಳಂತೆ. ಇಂಥದ್ದೇ ಪಾತ್ರ ಅಂತ ಫಿಕ್ಸ್ ಆಗುವ ಬದಲು ಎಲ್ಲ ತರಹದ ಪಾತ್ರಗಳನ್ನು ನಿರ್ವಹಿಸಲು ಇಷ್ಟ ಎನ್ನುವ ಮಾನ್ವಿತಾ, ತಾನು ಮಾಡುವ ಪಾತ್ರಗಳಿಗೆ ನೂರಕ್ಕೆ ನೂರರಷ್ಟು ನ್ಯಾಯ ಸಲ್ಲಿಸಬೇಕೆಂದು ಪ್ರಯತ್ನಪಡುತ್ತಾಳಂತೆ.
ಪರಭಾಷೆಯಿಂದಲೂ ಅವಕಾಶಗಳು ಕೇಳಿಕೊಂಡು ಬರುತ್ತಿರುವಾಗ ಮಾನ್ವಿತಾ ಯಾವುದೇ ಆತುರಪಡದೇ ಪಾತ್ರದತ್ತ ಹೆಚ್ಚು ಗಮನ ಕೊಡುತ್ತಿದ್ದಾಳೆ.
ಹೊಸ ಕನ್ನಡ ಚಿತ್ರವೊಂದಕ್ಕೆ ಸಹಿ ಹಾಕಿರುವ ಮಾನ್ವಿತಾ ಸದ್ಯಕ್ಕೆ ಅದರ ಬಗ್ಗೆ ಹೆಚ್ಚು ಮಾಹಿತಿಯನ್ನು ಇನ್ನೂ ನೀಡಿಲ್ಲ. ಕಲೆಗೆ ಭಾಷೆ ಮುಖ್ಯವಲ್ಲ ಎಂದು ನಂಬಿರುವ ಮಾನ್ವಿತಾ, `ನಾವು ಎಲ್ಲ ಭಾಷೆಯ ಚಿತ್ರಗಳನ್ನು, ಪ್ರತಿಭೆಗಳನ್ನೂ ಪ್ರೀತಿಸಬೇಕು. ಹಾಗೆಯೇ ಅವರು ಕೂಡಾ ನಮ್ಮ ಚಿತ್ರಗಳನ್ನು ನೋಡಬೇಕು,' ಎಂದು ಆಸೆ ಪಡುತ್ತಾಳೆ.
ಇತ್ತೀಚೆಗೆ ಸಿಂಗಪೂರಿಗೆ ಪ್ರಶಸ್ತಿ ಪಡೆಯಲು ಹೋಗಿದ್ದಾಗ ಅಲ್ಲಿ ದೊಡ್ಡ ದೊಡ್ಡ ತಾರೆಯರು ಬಂದು ಮಾನ್ವಿತಾಳಿಗೆ ಶುಭ ಕೋರಿದಾಗ ತುಂಬಾ ಖುಷಿಯಾಯಿತಂತೆ.