- ರಾಘವೇಂದ್ರ ಅಡಿಗ ಎಚ್ಚೆನ್.
ಸನ್ ಉದಯ ಇತ್ತೀಚಗಷ್ಟೇ ಮೂಗುತಿ ಮಲ್ಲಿ, ಮಹಾಲಕ್ಷ್ಮೀ ಮದುವೆಯಂತಹ ವಿನೂತನ ಧಾರಾವಾಹಿಯನ್ನು ನೀಡಿ ನೋಡುಗರಿಂದ ಸೈ ಎನಿಸಿಕೊಂಡಿದೆ. ಈಗ ʻಭಾಗ್ಯವಂತರುʼ ಎಂಬ ಮತ್ತೊಂದು ಧಾರಾವಾಹಿ ಇದೇ ಜುಲೈ 6 ಸೋಮವಾರದಿಂದ ಶನಿವಾರದವರಗೆ ರಾತ್ರಿ 7.30ಕ್ಕೆ ಪ್ರಸಾರಗೊಳ್ಳು ಸಜ್ಜಾಗಿದೆ.
ಈ ಕಥೆಯ ಕೇಂದ್ರಬಿಂದುವಾಗಿರುವ ಜನನಿ, ಅಪ್ಪನ ಮುದ್ದಿನ ಮಗಳು. ತನ್ನ ತಂದೆ ಶ್ಯಾಮಸುಂದರ್ ಅವರ ಕನಸನ್ನು ನನಸಾಗಿಸಲು ಶಿಕ್ಷಣವನ್ನೇ ಜೀವನದ ಧ್ಯೇಯವನ್ನಾಗಿ ಮಾಡಿಕೊಂಡಿರುವ ಜನನಿ, ಭವಿಷ್ಯದಲ್ಲಿ ಮ್ಯಾನೇಜಿಂಗ್ ಡೈರೆಕ್ಟರ್ ಆಗುವ ಕನಸು ಕಾಣುತ್ತಾಳೆ. ತಂದೆಯ ಆಶಯದಂತೆ ವಿದ್ಯಾಭ್ಯಾಸಕ್ಕೆ ಸಂಪೂರ್ಣ ಒತ್ತು ನೀಡಿದ ಜನನಿಯನ್ನು, ಉತ್ತಮ ಭವಿಷ್ಯಕ್ಕಾಗಿ ಮಂಡ್ಯದ ಶ್ರೀಮಂತ ಕುಟುಂಬದ ಶಕ್ತಿ ನಾಯಕ್ ಅವರೊಂದಿಗೆ ವಿವಾಹ ಮಾಡಲಾಗುತ್ತದೆ. ಶಕ್ತಿ, ಸಾಕಷ್ಟು ಸಂಪತ್ತನ್ನು ಗಳಿಸಿರುವ ಗುಣಶೇಖರ್ ನಾಯಕ್ ಅವರ ಕೊನೆಯ ಸಹೋದರ. ಗುಣಶೇಖರನ ಮನೆಯಲ್ಲಿ ಈಗಾಗಲೇ ಮೂರು ಡಬಲ್ ಡಿಗ್ರಿ ಸೊಸೆಯಂದಿರಿದ್ದು ಅಚ್ಚುಕಟ್ಟಾಗಿ ನಿಭಾಯಿಸಿಕೊಂಡು ಹೋಗುತ್ತಿರುತ್ತಾರೆ. ಇವರ ಜೊತೆಗೆ ನಾಲ್ಕನೇ ವಿದ್ಯಾವಂತ ಸೊಸೆಯಾಗಿ ಈ ಮನೆಗೆ ಕಾಲಿಡುತ್ತಾಳೆ ಜನನಿ. ಆದರೆ ಗಂಡನ ಮನೆ ಮತ್ತು ತಾನು ಮಾಡುವ ಕೆಲಸವನ್ನು ಸರಿಯಾಗಿ ಮುನ್ನಡೆಸುವುದು ಜನನಿಗೆ ಒಂದು ಸವಾಲ್. ಈ ಸವಾಲಿನಲ್ಲಿ ಜನನಿ ಯಾವ ರೀತಿ ಯಶಸ್ವಿಯಾಗುತ್ತಾಳೆ? ಎಂಬುದು ಈ ಧಾರಾವಾಹಿಯ ಕಥಾ ಹಂದರ.
ನಾಯಕಿ ಪಾತ್ರದಲ್ಲಿ ತನ್ವಿ ರಾವ್ ಮತ್ತು ನಾಯಕನಾಗಿ ವಿಕಾಸ್ ಅಭಿನಯಿಸುತ್ತಿದ್ದಾರೆ. ಹೆಸರಾಂತ ಕಲಾವಿದರಾದ ಸುಚೇಂದ್ರ ಪ್ರಸಾದ, ಆರ್.ಕೆ.ಚಂದನ್ ಮತ್ತು ಶೋಭರಾಜ್ ಮುಖ್ಯಪಾತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆ ತಾರಾಗಣದಲ್ಲಿ ಸುರೇಶ್ ರೈ, ಶಾಲನಿ, ಸಮೀಕ್ಷಾ, ಧನ್ಯಾ, ವರ್ಷಾ, ಶ್ರೀವಾಯು, ಶೋಭರಾಜ್, ಮಧುಸಾಗರ, ಲಕ್ಷ್ಮೀ ಹೆಗ್ಡೆ, ರಿಷಾ, ವಿಠಲ್ ಕಾಮತ್, ಪ್ರಕೃತಿ ಪಾಟೀಲ್ ಮತ್ತು ಜಯಲಕ್ಷ್ಮೀ ಪಟೇಲ್ ಅಭಿನಯಿಸುತ್ತಿದ್ದಾರೆ. ಎ.ಎಸ್.ಎಮ್ ಪ್ರೊಡಕ್ಷನ್ಸ್ ಅಡಿಯಲ್ಲಿ ನಿರ್ಮಾಣವಾಗುತ್ತಿರುವ ಭಾಗ್ಯವಂತರು ಧಾರಾವಾಹಿಗೆ ಸಂಪೃಥ್ವಿ ನಿರ್ದೇಶನ ಮಾಡುತ್ತಿದ್ದಾರೆ. ರಮಣ ಬಂಗಾರು ನಿರ್ಮಾಪಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥೆ, ಚಿತ್ರಕಥೆ ಶುಭ್ರ ಪುತ್ರಕಳ, ಸಂಭಾಷಣೆ ಸುಮಾ ಶಿಂಗ್ನಳ್ಳಿ ಮತ್ತು ಛಾಯಾಗ್ರಾಹಕರಾಗಿ ಗೌತಮ್ ಕೃಷ್ಣನ್ ಜವಾಬ್ದಾರಿ ವಹಿಸಿಕೊಂಡಿದ್ದಾರೆ.
ʻಭಾಗ್ಯವಂತರುʼ ಪ್ರತಿಯೊಂದು ಕುಟುಂಬಕ್ಕೆ ಹತ್ತಿರವಾದ ಕಥೆ. ತಂದೆ ಮತ್ತು ಮಗಳ ಅನ್ಯೋನ್ಯ ಬಾಂಧವ್ಯವನ್ನು ತಿಳಿಸುವದರ ಜೊತೆಗೆ ಸಮಾಜದಲ್ಲಿ ವಿವಾಹಿತ ಮಹಿಳೆಯರ ಕನಸುಗಳ ಮಹತ್ವವನ್ನು ಪ್ರೇಕ್ಷಕರಿಗೆ ಹೊಸ ರೂಪದಲ್ಲಿ ನೀಡುವುದು ಸನ್ ಉದಯದ ಆಶಯ. ಈ ಮಹತ್ವದ ಧಾರಾವಾಹಿಯು ಇದೇ ಸೋಮವಾರದಿಂದ ರಾತ್ರಿ 7.30 ಕ್ಕೆ ಸನ್ ಉದಯದಲ್ಲಿ ಪ್ರಸಾರವಾಗಲಿದೆ.





