ಚುನಾವಣೆಯ ಮೇಲೆ ಚುನಾವಣೆಯನ್ನು ಸೋಲುತ್ತಲೇ, ಸೋಲಿನಲ್ಲೇ ಶತಕ ಬಾರಿಸಲು ಧಾಪುಗಾಲು ಹಾಕುತ್ತಿರುವ ಕಾಂಗ್ರೇಸ್ ಪಕ್ಷದ ಚಿರಯೌವನಿಗ ಮತ್ತು ಯುವ ನಾಯಕ ಹೋದ ಬಂದ ಕಡೆಯಲ್ಲೆಲ್ಲಾ ತಮ್ಮ ಸೋಲಿಗೆ ಓಟ್ ಚೋರಿಯೇ ಕಾರಣ ಎಂಬ ಗುಲ್ಲೆಬ್ಬಿಸಿ ಜನರ ಅನುಕಂಪ ಗಿಟ್ಟಿಸಲು ದೇಶಾದ್ಯಂತ ಸಭೆಯ ಮೇಲೆ ಸಭೆಯನ್ನು ನಡೆಸುತ್ತಿರುವಾಗ, ಕಳೆದ ಭಾನುವಾರವಷ್ಟೇ ಕಲರ್ಸ್ ಕನ್ನಡ ವಾಹಿನಿಯಲ್ಲಿ ಕಿಚ್ಚಾ ಸುದೀಪ್ ಸಾರಥ್ಯಲ್ಲಿ ನಡೆಯುತ್ತಿದ್ದ ಬಿಗ್ ಬಾಸ್ ಸ್ಪರ್ಧೆ ಮುಕ್ತಾಯವಾಗಿ ಅಂತಿಮವಾಗಿ ಬಡವರ ಮಕ್ಕಳು ಗೆಲ್ಲಬೇಕ್ರೀ!!

ಎನ್ನುವ ಇತ್ತೀಚಿನ ಮಾತಿನಂತೆ ತಮ್ಮ ಅರ್ಹತೆ ಮತ್ತು ಆಟದ ಮೂಲಕ ಹಾಸ್ಯ ಕಲಾವಿದ ಗಿಲ್ಲಿ ನಟ ಮೊದಲನೇ ಸ್ಥಾನ ಗಳಿಸಿದರೆ ಕರಾವಳಿಯ ಸುಂದರಿ ರಕ್ಷಿತಾ ಶೆಟ್ಟಿ ಎಂಬ ಪುಟ್ಟ ಹುಡುಗಿ ಎರಡನೇ ಸ್ಥಾನಗಳಿಸಿದ್ದನ್ನು ಬಹುತೇಕ ಕನ್ನಡಿಗರು ಸಂಭ್ರಮಿಸುತ್ತಿದ್ದರೆ, ಇನ್ನು ತಾನೇ ಗೆಲ್ಲುತ್ತೇನೆ ಎಂಬ ಭ್ರಮಾಲೋಕದಲ್ಲಿ ತೇಲಾಡುತ್ತಿದ್ದ, ಕುಣಿಯಲಾರದವಳು ನೆಲ ಡೊಂಕು ಎಂದಳಂತೆ ಎನ್ನುವ ಗಾದೆ ಮಾತಿನಂಟೆ ಮೂರನೇ ಸ್ಥಾನಕ್ಕಿಳಿದ ಸ್ವಘೋಷಿತ ಛಲಗಾರ್ತಿ, ರಾಜಮಾತೆ ಆಶ್ವಿನಿ ಗೌಡ ಮಾತ್ರಾ ತನ್ನ ಸೋಲಿಗೆ ಓಟ್ ಚೋರಿಯೇ ಕಾರಣ ಎಂಬ ಮಾತುಗಳನ್ನು ಸಂದರ್ಶನವೊಂದರಲ್ಲಿ ಆಡುವ ಮೂಲಕ ಬಿಗ್ ಬಾಸ್ ನಲ್ಲಿ ನೋಡಿದ್ದ ಆಕೆಯ ಜಗಳಗಾರ್ತಿ ವ್ಯಕ್ತಿತ್ವವೇ ನಿಜವಾದ ವ್ಯಕ್ತಿತ್ವ ಎಂದು ಹೊರಬಂದಮೇಲೂ ತೋರಿಸಿದ್ದಾರೆ.

ಹಿಂದಿನ 11 ಸೀಸನ್ ಗಳಿಗಿಂತಲೂ ಈ ಬಾರಿಸ ಸೀಸನ್ ಬಹಳ ಅದ್ದೂರಿಯಾಗಿತ್ತಲ್ಲದೇ, ಬಹಳ ಸದ್ದು ಮಾಡುವ ಮೂಲಕ ಟಿ.ಆರ್.ಪಿ ನಲ್ಲಿಯೂ ಟಾಪ್ ಆಗಿದ್ದಲ್ಲದೇ ಕಲರ್ಸ್ ಕನ್ನಡ ವಾಹಿನಿಯನ್ನು ಹಲವು ದಿನಗಳ ನಂತರ ನಂಬರ್ -1 ಸ್ಥಾನಕ್ಕೂ ಏರಿಸಿತ್ತು. ಈ ಹಿಂದಿನ 11 ಸೀಸನ್‌ಗಳಿಗೆ ಇಲ್ಲದ ಕ್ರೇಜ್ ಈ ಸೀಸನ್‌ಗೆ ಇತ್ತು ಎಂದು ಸ್ವತಃ ಸುದೀಪ್ ಹೇಳಿದ್ದಲ್ಲದೇ ಅದಕ್ಕೆ ತಕ್ಕಂತಯೇ ದಾಖಲೆ ಮಟ್ಟದಲ್ಲಿ ಜನ ವೋಟ್ ಮಾಡಿ ತಮ್ಮ ನೆಚ್ಚಿನ ಸ್ಪರ್ಧಿಗಳನ್ನು ಗೆಲ್ಲಿಸುವ ಪ್ರಯತ್ನ ಮಾಡಿದ್ದರು. ಹಿಂದಿನ ಸೀಸನ್ನಿನ ವಿಜೇತ ಅಭ್ಯರ್ಥಿ ಗಳಿಸಿದ್ದ ಓಟ್ ಗಿಂತಲೂ ಅದೆಷ್ಟೋ ಪಟ್ಟು ಹೆಚ್ಚಿನ ಓಟುಗಳನ್ನು ಈ ಬಾರಿಯ 6ನೇ ಅಭ್ಯರ್ಥಿ ಪಡೆದಿದ್ದರು ಎಂಬುದನ್ನೂ ಸಹಾ ಸುದೀಪ್ ತಿಳಿಸಿದ್ದಲ್ಲದೇ ಫಿನಾಲೆಯ ಒಂದು ದಿನ ಮುನ್ನ ಮೊದಲ ಸ್ಥಾನದಲ್ಲಿದ್ದ ಅಭ್ಯರ್ಥಿಗೆ 37 ಕೋಟಿ ಮತಗಳು ಬಂದಿದೆ ಎನ್ನುವ ಮೂಲಕ ಎಲ್ಲರೂ ಮೂಗಿನ ಮೇಲೆ ಬೆರಳಿಟ್ಟು ಅಚ್ಚರಿ ಪಡುವಂತೆ ಮಾಡಿದ್ದರು.

2026ರ ಜನವರಿ 18ರ ಭಾನುವಾರ ಸಂಜೆ ಯಶಸ್ವಿಯಾಗಿ ಮುಗಿದ ಬಿಗ್ ಬಾಸ್ ಕನ್ನಡ ಸೀಸನ್ 12ರಲ್ಲಿ ಹೊರ ಗಿಲ್ಲಿ ನಟನೇ ಜಯಶಾಲಿ ಆಗುತ್ತಾನೆ ಎಂದು ಈ ಬಾರಿಯ ಬಿಗ್ ಬಾಸ್ ಸೀಸನ್ ಆರಂಭದಿಂದಲೂ ಹೇಳುತ್ತಿದ್ದಂತೆಯೇ, ಮಂಡ್ಯ ಜಿಲ್ಲೆಯ ಮಳವಳ್ಳಿ ತಾಲ್ಲೂಕಿನ ಮಟದಪುರದ ಸಾಮಾನ್ಯ ಬಡ ಕೃಷಿ ಕುಟುಂಬದಲ್ಲಿ ಜನಿಸಿ ಉದ್ಯೋಗವನ್ನರಸಿಕೊಂಡು ಬೆಂಗಳೂರಿಗೆ ಬಂದು ತನ್ನ ಪ್ರತಿಭೆ ಮತ್ತು ಪರಿಶ್ರಮದಿಂದ ಹಂತ ಹಂತವಾಗಿ ಮೇಲೆ ಬಂದು ಮೂರ್ನಾಲ್ಕು ರಿಯಾಲಿಟಿ ಶೋ ಗಳಲ್ಲಿ ಭಾಗವಹಿಸಿ ತನ್ನ ಹಾಸ್ಯಗಾರಿಕೆಯಿಂದ ಜನಮಾನಸವನ್ನು ಗೆದ್ದಿದ್ದ ಗಿಲ್ಲಿ ನಟರಾಜ್ ಎಲ್ಲರ ಪ್ರೀತಿಯ ಗಿಲ್ಲಿ ನಟ ಮೊದಲ ಸ್ಥಾನ ಗಳಿಸಿದರೆ ಅಶ್ವಿನಿ ಗೌಡ ಕನಿಷ್ಠ ಪಕ್ಷ ಎರಡನೇ ಸ್ಥಾನವನ್ನಾದರೂ ಪಡೆಯಬಹುದೆಂಬ ನಿರೀಕ್ಷೆಯಿತ್ತು. ಆದರೆ ಮೊದಲನೇ ರನ್ನರ್ ಅಪ್ ಕೈತಪ್ಪಿ 2ನೇ ರನ್ನರ್‌ಅಪ್‌ಗೆ ಆಗುತ್ತಿದ್ದಂತೆಯೇ, ಬಿಗ್ ಬಾಸ್ ಮುಗಿದ ದಿನದಿಂದಲೂ ಅಶ್ವಿನಿ ಗೌಡ ಅದರ ಬಗ್ಗೆ ಒಂದಲ್ಲ ಒಂದು ರೀತಿ ಅಸಮಧಾನವನ್ನು ಹೊರ ಹಾಕುತ್ತಲೇ ಇದ್ದು ಪರೋಕ್ಷವಾಗಿ ಗಿಲ್ಲಿ ವಿರುದ್ಧವಂತೂ ವಿಷಕಾರುತ್ತಲೇ ಇದ್ದಾರೆ.





