- ರಾಘವೇಂದ್ರ ಅಡಿಗ ಎಚ್ಚೆನ್.
ಟೀಸರ್ ಬಿಡುಗಡೆಯಿಂದಲೇ ‘ಬಾಸ್’ (BOSS) ಸಿನಿಮಾ ಸಾರ್ವಜನಿಕರ ನಡುವೆ ಭಾರೀ ಚರ್ಚೆ ಹುಟ್ಟುಹಾಕಿದೆ. ಚಿತ್ರವು ರೇಣುಕಾಸ್ವಾಮಿ ಕೊಲೆ ಪ್ರಕರಣದ ಸಂದರ್ಭದೊಂದಿಗೆ ಸಮ್ಮಿಲಿತವಾಗಿದೆ ಎಂಬ ಅಭಿಪ್ರಾಯಗಳು ಕೆಲವು ವಲಯಗಳಲ್ಲಿ ಉದ್ರೇಕ ಸೃಷ್ಟಿಸಿರುವುದು ಗಮನಾರ್ಹ.
ನಟ ದರ್ಶನ್ ಅವರ ಜೀವನದ ಘಟನೆಗಳಿಗೆ ಸಾಮ್ಯತೆ ಹೊಂದಿದೆ ಎನ್ನುವ ಆರೋಪಗಳ ನಡುವೆ, ‘ಬಾಸ್’ ಚಿತ್ರವನ್ನು ಸೆನ್ಸಾರ್ ಮಂಡಳಿಯು ಪರಿಶೀಲಿಸಿದೆ. ನಿರ್ದೇಶಕ ವಿ. ಲವ ನಿರ್ದೇಶನದ ಈ ಚಿತ್ರದಲ್ಲಿ ತನುಷ್ ಶಿವಣ್ಣ ಮುಖ್ಯ ಪಾತ್ರದಲ್ಲಿ ಅಭಿನಯಿಸಿದ್ದಾರೆ.
ವಿವಾದಗಳು ಕೇವಲ ಸುದ್ದಿಗೆ ಸೀಮಿತವಾಗದೆ ಕಾನೂನು ಹಂತದ ಮಟ್ಟಕ್ಕೂ ಹತ್ತಿಕೊಂಡವು. ದರ್ಶನ್ ಪರ ವಕೀಲರು ಚಿತ್ರತಂಡಕ್ಕೆ ಮತ್ತು ಸೆನ್ಸಾರ್ ಮಂಡಳಿಗೆ ನೋಟಿಸ್ ನೀಡಿದ್ದರು. ಇದೇ ಸಾಲಿನಲ್ಲಿ, ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಹಾಗೂ ಸಹೋದರ ದಿನಕರ್ ತೂಗುದೀಪರವರಿಂದ ಸೆನ್ಸಾರ್ ಮಂಡಳಿಗೆ ಭೇಟಿ ನೀಡಿ, ಚಿತ್ರಕ್ಕೆ ಪ್ರಮಾಣಪತ್ರ ನೀಡದಂತೆ ಮನವಿ ಸಲ್ಲಿಸಲಾಗಿತ್ತು.
ಎಲ್ಲಾ ಸವಾಲುಗಳ ನಡುವೆಯೂ ಸೆನ್ಸಾರ್ ಮಂಡಳಿಯು ‘ಬಾಸ್’ ಚಿತ್ರಕ್ಕೆ ‘ಯು/ಎ’ ಪ್ರಮಾಣಪತ್ರ ನೀಡಿದೆ. ಕೆಲ ದೃಶ್ಯಗಳಿಗೆ ಮತ್ತು ಸಂಭಾಷಣೆಗಳಿಗೆ ಕತ್ತರಿ ಹಾಕಿರುವ ಮೂಲಕ, ಚಿತ್ರ ಪ್ರದರ್ಶನಕ್ಕೆ ಅನುಮತಿ ದೊರೆತಿದೆ.
ಚಿತ್ರತಂಡ ಈಗ ಪ್ರಚಾರ ಕಾರ್ಯದಲ್ಲಿ ಬ್ಯುಸಿಯಾಗಿದ್ದು, ಏಪ್ರಿಲ್‌ನಲ್ಲಿ ರಾಜ್ಯಾದ್ಯಂತ ಚಿತ್ರ ಬಿಡುಗಡೆಯಾಗುವ ನಿರೀಕ್ಷೆ ಇದೆ. ತನುಷ್ ಶಿವಣ್ಣ ಅಭಿನಯದ ಈ ಚಿತ್ರ ಬಾಕ್ಸ್‌ಆಫೀಸ್‌ನಲ್ಲಿ ಹೇಗೆ ಯಶಸ್ಸು ಸಾಧಿಸುತ್ತದೆ ಎಂದು ಕಾದು ನೋಡಬೇಕಾಗಿದೆ.





