- ರಾಘವೇಂದ್ರ ಅಡಿಗ ಎಚ್ಚೆನ್.
ಬಾಲಿವುಡ್‌ನ ಸ್ಟಾರ್ ನಟ ರಣವೀರ್ ಸಿಂಗ್ ಅಭಿನಯದ ಹಾಗೂ ಆದಿತ್ಯ ಧರ್ ನಿರ್ದೇಶನದ ‘ಧುರಂಧರ್ 2: ದ ರಿವೆಂಜ್’ ಸಿನಿಮಾ ಈಗ ಗಂಭೀರ ಕಾನೂನು ವಿವಾದದ ನೆರಳಿಗೆ ಸಿಲುಕುವ ಸಾಧ್ಯತೆ ಎದುರಿಸುತ್ತಿದೆ.
ನಿರ್ದೇಶಕ ಸಂತೋಷ್ ಕುಮಾರ್ ಆರ್.ಎಸ್. ಅವರು ಈ ಚಿತ್ರದ ಕಥೆ ತನ್ನದೇ ಮೂಲ ಸ್ಕ್ರಿಪ್ಟ್ ಆಧಾರಿತವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಈ ಸಂಬಂಧ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರತಂಡದ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸ್ಪಷ್ಟಪಡಿಸಿದ್ದಾರೆ.
“‘ಧುರಂಧರ್ 2’ ಸಿನಿಮಾ ಎಲ್ಲೆಡೆ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. ಆದರೆ ನಾನು ಸಿನಿಮಾ ನೋಡಿದ ಬಳಿಕವೇ ಅದು ನನ್ನ ಕಥೆ ಎಂಬುದು ನನಗೆ ಗೊತ್ತಾಯಿತು. ನಾನು 2023ರಲ್ಲಿ ಬಹಳ ಪರಿಶ್ರಮಪಟ್ಟು ಈ ಕಥೆ ಬರೆದಿದ್ದೆ,” ಎಂದು ಸಂತೋಷ್ ಕುಮಾರ್ ತಿಳಿಸಿದ್ದಾರೆ.
ಅವರು ಮುಂದುವರೆದು, ದೊಡ್ಡ ಮಟ್ಟದಲ್ಲಿ ಸಿನಿಮಾ ನಿರ್ಮಿಸಲು ಹಲವು ಪ್ರಮುಖ ನಿರ್ಮಾಣ ಸಂಸ್ಥೆಗಳ ಸಂಪರ್ಕಕ್ಕೆ ಹೋಗಿದ್ದಾಗಿ ಹೇಳಿದ್ದಾರೆ. ಸೋನಿ ಪಿಕ್ಚರ್ಸ್, ಜೀ ಸ್ಟುಡಿಯೋಸ್, ಟಿ-ಸಿರೀಸ್ ಮತ್ತು ಧರ್ಮಾ ಪ್ರೊಡಕ್ಷನ್ಸ್ ಸೇರಿದಂತೆ ಹಲವು ಸಂಸ್ಥೆಗಳಿಗೆ ಈ ಕಥೆ ವಿವರಿಸಿದ್ದಾಗಿ ತಿಳಿಸಿದ್ದಾರೆ.
ಅಷ್ಟೇ ಅಲ್ಲದೆ, ಈ ಕಥೆಗೆ ನಟ ಆದಿತ್ಯ ರಾಯ್ ಕಪೂರ್ ಅವರನ್ನು ನಾಯಕನಾಗಿ ಪರಿಗಣಿಸಿದ್ದಾಗಿ ಅವರು ಹೇಳಿದ್ದಾರೆ.
ತಮ್ಮ ಆರೋಪಕ್ಕೆ ಬೆಂಬಲವಾಗಿ ಸಾಕ್ಷ್ಯಾಧಾರಗಳೂ ತಮ್ಮ ಬಳಿ ಇವೆ ಎಂದು ಅವರು ತಿಳಿಸಿದ್ದಾರೆ. “ನವೆಂಬರ್ 2023ರಲ್ಲಿ ನಾನು ಈ ಕಥೆಯನ್ನು ಸ್ಕ್ರೀನ್ ರೈಟರ್ಸ್ ಅಸೋಸಿಯೇಷನ್‌ನಲ್ಲಿ ನೋಂದಾಯಿಸಿದ್ದೇನೆ. ಇದಕ್ಕೆ ಸಂಬಂಧಿಸಿದ ಇಮೇಲ್ ದಾಖಲೆಗಳು ಹಾಗೂ ಇತರ ಪುರಾವೆಗಳು ನನ್ನ ಬಳಿ ಇವೆ,” ಎಂದು ಅವರು ಹೇಳಿದ್ದಾರೆ.
ಇನ್ನೂ ಗಂಭೀರವಾಗಿ ಆರೋಪ ಮಾಡಿರುವ ಅವರು, “ನಾನು ಮನರಂಜನೆಗಾಗಿ ಬರೆದ ಕಥೆಯನ್ನು ಅವರು ರಾಜಕೀಯ ಪ್ರಚಾರದ ಸಾಧನವಾಗಿ ಬಳಸಿದ್ದಾರೆ. ಇದು ನನಗೆ ತುಂಬಾ ನೋವುಂಟು ಮಾಡಿದೆ. ನನ್ನ ಕಥೆಯನ್ನು ದುರ್ಬಳಕೆ ಮಾಡಲಾಗಿದೆ,” ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಪ್ರಕರಣ ಈಗ ಕಾನೂನು ಹಾದಿ ಹಿಡಿಯುವ ಸಾಧ್ಯತೆ ಇದ್ದು, ಚಿತ್ರತಂಡದಿಂದ ಅಧಿಕೃತ ಪ್ರತಿಕ್ರಿಯೆಗಾಗಿ ಎಲ್ಲರೂ ಕಾಯುತ್ತಿದ್ದಾರೆ.





