- ರಾಘವೇಂದ್ರ ಅಡಿಗ ಎಚ್ಚೆನ್
ಕನ್ನಡ ಚಿತ್ರರಂಗದ ಖ್ಯಾತ ನಟಿ ರಚಿತಾ ರಾಮ್ ವಿರುದ್ಧ ಫಿಲ್ಮ್ ಚೇಂಬರ್‌ನಲ್ಲಿ ಮತ್ತೊಂದು ದೂರು ದಾಖಲಾಗಿದೆ. ಈ ಬಾರಿ ಹಿರಿಯ ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್, ರಚಿತಾ ರಾಮ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ‘ಉಪ್ಪಿ-ರುಪ್ಪಿ’ ಚಿತ್ರಕ್ಕಾಗಿ ಒಪ್ಪಂದ ಮಾಡಿಕೊಂಡು, ಅಡ್ವಾನ್ಸ್‌ನಲ್ಲಿ 13 ಲಕ್ಷ ರೂಪಾಯಿ ಪಡೆದಿದ್ದ ರಚಿತಾ, ಚಿತ್ರೀಕರಣಕ್ಕೆ ಸಹಕರಿಸದೆ, ಸಿನಿಮಾವನ್ನೇ ಅರ್ಧಕ್ಕೆ ನಿಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ ನಿರ್ಮಾಪಕಿಗೆ ಸುಮಾರು 1.5 ಕೋಟಿ ರೂಪಾಯಿಗಳ ಆರ್ಥಿಕ ನಷ್ಟವಾಗಿದೆ ಎಂದು ದೂರಲಾಗಿದೆ.
ಎಂಟು ವರ್ಷಗಳ ಹಿಂದೆ, ನಟ ಉಪೇಂದ್ರ ಜೊತೆಗೆ ರಚಿತಾ ರಾಮ್ ‘ಉಪ್ಪಿ-ರುಪ್ಪಿ’ ಚಿತ್ರದಲ್ಲಿ ನಟಿಸಲು ಒಪ್ಪಿಕೊಂಡಿದ್ದರು. ವಿಜಯಲಕ್ಷ್ಮಿ ಅರಸ್ ನಿರ್ಮಾಣ ಮತ್ತು ಕೆ. ಮಾದೇಶ್ ನಿರ್ದೇಶನದ ಈ ಚಿತ್ರಕ್ಕೆ ರಚಿತಾ 23 ಲಕ್ಷ ರೂಪಾಯಿ ಸಂಭಾವನೆಗೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಮೇರೆಗೆ, 13 ಲಕ್ಷ ರೂಪಾಯಿಗಳನ್ನು ಮುಂಗಡವಾಗಿ ಪಡೆದಿದ್ದ ರಚಿತಾ, ಚಿತ್ರೀಕರಣಕ್ಕೆ ಸರಿಯಾಗಿ ಸಹಕರಿಸಲಿಲ್ಲ ಎಂದು ಆರೋಪಿಸಲಾಗಿದೆ. 2017ರಲ್ಲಿ ಬ್ಯಾಂಕಾಕ್‌ನಲ್ಲಿ ಚಿತ್ರೀಕರಣ ಯೋಜಿಸಲಾಗಿತ್ತು. ರಚಿತಾ ಬರುವುದಾಗಿ ಒಪ್ಪಿಕೊಂಡಿದ್ದರಿಂದ, ಚಿತ್ರತಂಡ ಅವರಿಗಾಗಿ ಟಿಕೆಟ್‌ಗಳನ್ನು ಬುಕ್ ಮಾಡಿ, ಸೂಟ್ ರೂಂಗಳನ್ನು ರಿಸರ್ವ್ ಮಾಡಿತ್ತು. ಆದರೆ, ರಚಿತಾ 15 ದಿನಗಳ ಕಾಲ “ಈಗ ಬರ್ತೀನಿ, ಆಗ ಬರ್ತೀನಿ” ಎಂದು ಆಟವಾಡಿಸಿದ್ದಾರೆ ಎಂದು ವಿಜಯಲಕ್ಷ್ಮಿ ಆರೋಪಿಸಿದ್ದಾರೆ.
ಈ ಅವಧಿಯಲ್ಲಿ ಚಿತ್ರತಂಡ, ರಚಿತಾ ರಾಮ್‌ಗಾಗಿ ಕಾಯುತ್ತಾ, ದಿನವೂ ಟಿಕೆಟ್‌ಗಳನ್ನು ಬುಕ್ ಮಾಡಿ, ರೂಂಗಳನ್ನು ರಿಸರ್ವ್ ಮಾಡಿಕೊಂಡಿತ್ತು. ಆದರೆ, ರಚಿತಾ ಬಾರದ ಕಾರಣ, ಚಿತ್ರತಂಡ ಕೊನೆಗೆ ಉಪೇಂದ್ರ ಅವರ ಭಾಗವನ್ನು ಮಾತ್ರ ಚಿತ್ರೀಕರಣ ಮಾಡಿ ವಾಪಸ್ ಆಗಿತ್ತು. ಮೈಸೂರಿನಲ್ಲಿ ನಡೆದ ಚಿತ್ರೀಕರಣದಲ್ಲಿ ಕೇವಲ ಒಂದೇ ಒಂದು ದಿನ ರಚಿತಾ ಭಾಗವಹಿಸಿದ್ದರು. ಇದರಿಂದಾಗಿ, ಸಿನಿಮಾ ಕೇವಲ 35% ಪೂರ್ಣಗೊಂಡು, ಅರ್ಧಕ್ಕೆ ನಿಂತುಹೋಗಿತ್ತು. ಈ ಎಲ್ಲ ಗೊಂದಲಗಳಿಂದಾಗಿ, ನಿರ್ಮಾಪಕಿ ವಿಜಯಲಕ್ಷ್ಮಿ ಅರಸ್‌ಗೆ ಒಂದೂವರೆ ಕೋಟಿ ರೂಪಾಯಿಗಳಷ್ಟು ಆರ್ಥಿಕ ನಷ್ಟವಾಗಿದೆ ಎಂದು ದೂರಲಾಗಿದೆ.
ಈ ಘಟನೆಯ ನಂತರ, ರಚಿತಾ ರಾಮ್ ಸಂಪರ್ಕಕ್ಕೆ ಸಿಗದೆ, ನಿರ್ಮಾಪಕಿಯನ್ನು ಸತಾಯಿಸುತ್ತಿದ್ದಾರೆ ಎಂದು ಆರೋಪಿಸಲಾಗಿದೆ. ಕೊನೆಗೆ, ತಾಳ್ಮೆ ಕಳೆದುಕೊಂಡ ವಿಜಯಲಕ್ಷ್ಮಿ, ಫಿಲ್ಮ್ ಚೇಂಬರ್‌ನಲ್ಲಿ ದೂರು ದಾಖಲಿಸಿದ್ದಾರೆ. ಈ ದೂರು ಎರಡು ತಿಂಗಳ ಹಿಂದೆ ದಾಖಲಾಗಿತ್ತು.
ಇದಕ್ಕೂ ಮೊದಲು, ‘ಸಂಜು ವೆಡ್ಸ್ ಗೀತಾ 2’ ಚಿತ್ರದ ಸಂದರ್ಭದಲ್ಲಿ ಕೂಡ ರಚಿತಾ ರಾಮ್ ವಿರುದ್ಧ ನಿರ್ದೇಶಕ ನಾಗಶೇಖರ್ ಮತ್ತು ನಟ ಶ್ರೀನಗರ ಕಿಟ್ಟಿ ಫಿಲ್ಮ್ ಚೇಂಬರ್‌ಗೆ ದೂರು ನೀಡಿದ್ದರು. ಈ ದೂರಿನಲ್ಲಿ, ರಚಿತಾ ರಾಮ್ ತಮ್ಮ ಜವಾಬ್ದಾರಿಗಳನ್ನು ಸರಿಯಾಗಿ ನಿಭಾಯಿಸದೆ, ಚಿತ್ರತಂಡಕ್ಕೆ ತೊಂದರೆ ಉಂಟುಮಾಡಿದ್ದಾರೆ ಎಂದು ಆರೋಪಿಸಲಾಗಿತ್ತು. ನಾಗಶೇಖರ್, “ರಮ್ಯಾ, ತಮನ್ನಾ ಸೇರಿದಂತೆ ಹಲವು ನಟಿಯರ ಜೊತೆ ಕೆಲಸ ಮಾಡಿದ್ದೇನೆ, ಆದರೆ ಯಾವ ನಟಿಯೂ ಇಂತಹ ಸಮಸ್ಯೆ ಉಂಟುಮಾಡಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು