– ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರರಂಗಕ್ಕೆ ಮತ್ತೊಂದು ಆಘಾತ ಎದುರಾಗಿದೆ. 2019ರಲ್ಲಿ ಬಿಡುಗಡೆಯಾದ ‘ಘೋಸ್ಟ್’ ಸಿನಿಮಾದ ಮೂಲಕ ಗಮನ ಸೆಳೆದಿದ್ದ ನಟಿ ಅನನ್ಯಾ ರಾಜ್ ತಮ್ಮ 35ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ. ಕಳೆದ ಒಂದು ವರ್ಷದಿಂದ ದೈಹಿಕ ಹಾಗೂ ಮಾನಸಿಕ ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದ ಅವರು ಜುಲೈ 15ರಂದು ನಿದ್ರೆಯಲ್ಲೇ ಕೊನೆಯುಸಿರೆಳೆದಿದ್ದಾರೆ.
ಅನನ್ಯಾ ರಾಜ್ ನಿಧನದ ವಿಚಾರವನ್ನು ಅವರ ಕುಟುಂಬ ಇದೀಗ ಸಾಮಾಜಿಕ ಜಾಲತಾಣದ ಮೂಲಕ ಬಹಿರಂಗಪಡಿಸಿದೆ. ನಟಿಯ ಸಾವಿನ ಬಗ್ಗೆ ಸಾರ್ವಜನಿಕವಾಗಿ ಮಾಹಿತಿ ಹಂಚಿಕೊಳ್ಳಲು ಕುಟುಂಬಸ್ಥರು ಸುಮಾರು ಒಂದು ತಿಂಗಳ ಕಾಲಾವಕಾಶ ತೆಗೆದುಕೊಂಡಿದ್ದಾರೆ. ಈ ದುಃಖದ ಸಮಯದಲ್ಲಿ ತಮ್ಮ ಕುಟುಂಬದ ಖಾಸಗಿತನವನ್ನು ಗೌರವಿಸುವಂತೆ ಅಭಿಮಾನಿಗಳು ಹಾಗೂ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
ಕುಟುಂಬದ ಹೇಳಿಕೆಯ ಪ್ರಕಾರ, ಅನನ್ಯಾ ಕಳೆದ ಒಂದು ವರ್ಷದಿಂದ ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿದ್ದರು. ದೈಹಿಕ ಹಾಗೂ ಮಾನಸಿಕವಾಗಿ ಹಲವು ಸವಾಲುಗಳನ್ನು ಎದುರಿಸಿದ್ದರೂ ಅವರು ಧೈರ್ಯದಿಂದ ಜೀವನವನ್ನು ಮುನ್ನಡೆಸಿದ್ದರು. ಸದಾ ಉತ್ಸಾಹದಿಂದ ಬದುಕುತ್ತಿದ್ದ ಅವರು ಗಟ್ಟಿಮನಸ್ಸಿನ ವ್ಯಕ್ತಿಯಾಗಿದ್ದರು ಎಂದು ಕುಟುಂಬಸ್ಥರು ಸ್ಮರಿಸಿದ್ದಾರೆ.
ಮುಂಬೈನಲ್ಲಿ ನೆಲೆಸಿದ್ದ ಅನನ್ಯಾ ರಾಜ್ ಹಿಂದಿ ಸೇರಿದಂತೆ ದಕ್ಷಿಣ ಭಾರತದ ಹಲವು ಸಿನಿಮಾಗಳಲ್ಲಿ ಅಭಿನಯಿಸಿದ್ದರು. 2016ರಲ್ಲಿ ಬಿಡುಗಡೆಯಾದ ‘7 ಹವರ್ಸ್ ಟು ಗೋ’ ಮೂಲಕ ಬಾಲಿವುಡ್‌ಗೆ ಕಾಲಿಟ್ಟ ಅವರು, 2017ರ ‘ದಿ ಫೈನಲ್ ಎಕ್ಸಿಟ್’ ಚಿತ್ರದಲ್ಲೂ ಕಾಣಿಸಿಕೊಂಡಿದ್ದರು.
2019ರಲ್ಲಿ ಬಿಡುಗಡೆಯಾದ ‘ಘೋಸ್ಟ್’ ಹಾರರ್ ಸಿನಿಮಾದಲ್ಲಿ ಅಭಿನಯಿಸುವ ಮೂಲಕ ಅನನ್ಯಾ ಗಮನ ಸೆಳೆದಿದ್ದರು. ಬಳಿಕ ತೆಲುಗು ಚಿತ್ರರಂಗದಲ್ಲೂ ತಮ್ಮದೇ ಛಾಪು ಮೂಡಿಸಿದ್ದರು. 2022ರ ‘ತಗ್ಗೇದೆ ಲೆ’ ಸಿನಿಮಾದಲ್ಲಿ ಲಿಜಾ ಪಾತ್ರದಲ್ಲಿ ನಟಿಸಿದ್ದರು. ‘ಮದ್ರಾಸಿ ಗ್ಯಾಂಗ್’ ಚಿತ್ರದಲ್ಲಿ ಸರಿತಾ ಪಾತ್ರ ನಿರ್ವಹಿಸಿದ್ದರು.
ಸಿನಿಮಾಗಳ ಹೊರತಾಗಿಯೂ ಅನನ್ಯಾ ರಾಜ್ ಟಿ-ಸಿರೀಸ್ ಹಾಗೂ ಝೀ ಮ್ಯೂಸಿಕ್‌ಗಾಗಿ ನಿರ್ಮಿಸಲಾದ ಹಲವು ಆಲ್ಬಂ ಹಾಡುಗಳಲ್ಲೂ ಅಭಿನಯಿಸಿದ್ದರು.
35ನೇ ವಯಸ್ಸಿನಲ್ಲೇ ನಟಿಯ ಅಕಾಲಿಕ ನಿಧನದ ಸುದ್ದಿ ಅಭಿಮಾನಿಗಳು ಹಾಗೂ ಚಿತ್ರರಂಗದವರಲ್ಲಿ ಆಘಾತ ಮೂಡಿಸಿದೆ. ಕುಟುಂಬಸ್ಥರು ತಡವಾಗಿ ಈ ವಿಚಾರವನ್ನು ಬಹಿರಂಗಪಡಿಸಿರುವ ಹಿನ್ನೆಲೆಯಲ್ಲಿ ಅನನ್ಯಾ ನಿಧನದ ಸುದ್ದಿ ಇದೀಗ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಚರ್ಚೆಯಾಗುತ್ತಿದೆ.





