ಮುತ್ತು ರತ್ನ ವಜ್ವ ವೈಢೂರ್ಯಗಳನ್ನು ರಸ್ತೆ ರಸ್ತೆಗಳಲ್ಲಿ ಬಳ್ಳ ಬಳ್ಳಗಳಲ್ಲಿ ಮಾರಾಟ ಮಾಡುತ್ತಿದ್ದಂತಹ ಸುವರ್ಣ ಭಾರತವನ್ನು ಕೇವಲ 200-300 ವರ್ಷಗಳಲ್ಲೇ ಬ್ರಿಟೀಷರು ಕೊಳ್ಳೆ ಹೊಡೆದು ಆರ್ಥಿಕವಾಗಿ ದೀವಾಳಿತನಕ್ಕೆ ತಳ್ಳಿಹೋದದ್ದು ಈಗ ಇತಿಹಾಸ. ಅವರು ಕೇವಲ ಸಂಪತ್ತನ್ನು ಕೊಳ್ಳೆ ಹೊಡೆದುಕೊಂಡು ಹೋಗಿದ್ದರೆ ಮತ್ತೆ ಮರಳಿ ಸಂಪಾದಿಸಬಹುದಾಗಿತ್ತು. ಆದರೆ ಅವರು ಈ ದೇಶದ ಶಿಕ್ಷಣ, ಕಲೆ, ಸಂಸ್ಕಾರ, ಸಂಪ್ರದಾಯ ಆಚಾರ ವಿಚಾರ, ಭಾಷೆಗಳು, ಉಡುಗೆ, ತೊಡುಗೆ, ಕ್ರೀಡೆಗಳ ಹೀಗೆ ಎಲ್ಲದ್ದರ ಮೇಲೂ ಅವ್ಯಾಹತವಾಗಿ ಧಾಳಿ ನಡೆಸಿದ ಪರಿಣಾಮ ಇಂದು ನಮ್ಮ ದೇಶ ಬೌದ್ಧಿಕವಾಗಿ ದೀವಾಳಿತನಕ್ಕೆ ಹೋಗಿರುವುದನ್ನು ಮತ್ತೆ ಸರಿದಾರಿಗೆ ತರಲು ಅದೆಷ್ಟು ಶತಮಾನಗಳು ಬೇಕಾಗುವುದೋ ಯಾರಿಗೆ ಗೊತ್ತು? ಬ್ರಿಟೀಷರು ಕಲಿಸಿ, ಉಳಿಸಿ ಹೋದ ಆಟಗಳಾದ ಕ್ರಿಕೆಟ್, ಫುಟ್ಬಾಲ್, ಬಾಸ್ಕೆಟ್ ಬಾಲ್, ಗಾಲ್ಫ್ ಮುಂತಾದವುಗಳ ಮುಂದೆ ನಮ್ಮ ಅಪ್ಪಟ ದೇಸೀ ಕ್ರೀಡೆಗಳಾದ, ಕುಸ್ತಿ, ಕಬ್ಬಡ್ಡಿ, ಕೊಕ್ಕೋ ಅಟ್ಯಾಪಾಟ್ಯಾ, ಹಾಕಿ ಮುಂತಾದ ಆಟಗಳು ನಲುಗಿ ಹೋಗಿರುವುದು ನಿಜಕ್ಕೂ ದೌರ್ಭಾಗ್ಯದ ಸಂಗತಿ. ಅಂತಹ ದೇಸೀ ಆಟವಾದ ಕೊಕ್ಕೋ ಕುರಿತಾದ ಭಾವನಾತ್ಮಕವಾದ ಅಂಶವನ್ನೇ ಅತ್ಯಂತ ಮನೋಜ್ಞವಾಗಿ ಗುರು ಶಿಷ್ಯರು ಸಿನಿಮಾದಲ್ಲಿ ತೋರಿಸಿದ್ದಾರೆ.
ಕನ್ನಡದಲ್ಲಿ ಕ್ರೀಡೆಗೆ ಸಂಬದ್ಧ ಪಟ್ಟ ಸಿನಿಮಾಗಳು ಬಂದಿರುವುದು ಅತ್ಯಂತ ಕಡಿಮೆಯೇ. ತಾಯಿಗೆ ತಕ್ಕ ಮಗ ಸಿನಿಮಾದಲ್ಲಿ ಬಾಕ್ಸಿಂಗ್, ಕರ್ನಾ ಸಿನಿಮಾದಲ್ಲಿ ಫುಟ್ಬಾಲ್, ಅಶ್ವಮೇಧ, ಸಿಕ್ಸರ್, ಬೆಂಗಳೂರು 560023 ಮುಂತಾದ ಸಿನಿಮಾಗಳಲ್ಲಿ ಕ್ರಿಕೆಟ್ ಆಟವಿದ್ದರೆ, 2009ರಲ್ಲಿ ಕಬಡ್ಡಿ ಎಂಬ ಸಿನಿಮಾವನ್ನು ನರೇಂದ್ರ ಬಾಬು ನಿರ್ದೇಶಿಸಿದ್ದರು. ಕೆಲ ವರ್ಷಗಳ ಹಿಂದೆ ಕುಸ್ತಿ ಪೈಲ್ವಾನ್ ಆಗಿ ಸುದೀಪ್ ಕೂಡ ನಟಿಸಿ ಗಮನ ಸೆಳೆದಿದ್ದರು. ಈಗ 2022ರಲ್ಲಿ ನಿರ್ದೇಶಕ ಜಡೇಶ್ ಕಲ್ಪನೆಯನ್ನು ನಿರ್ಮಾಕಕರಾದ ತರುಣ್ ಸುಧೀರ್ ಮತ್ತು ಶರಣ್ ಕ್ರಿಕೆಟ್, ಫುಟ್‌ಬಾಲ್ ಆಟಗಳ ಮುಂದೆ ಸೊರಗಿ ಹೋಗಿ ಭಾಗಶಃ ಕಣ್ಮರೆಯೇ ಆಗಿ ಹೋಗುತ್ತಿರುವ ಅಪ್ಪಟ ದೇಸೀ ಆಟವಾದ ಕೊಕ್ಕೊ ಆಟವನ್ನು ಮುಂದಿಟ್ಟುಕೊಂಡು, ಮುಗ್ಧ ಹಳ್ಳಿಯ ಜನರು ಜಮೀನ್ದಾರನ ಪಾಳೇಗಾರಿಕೆಯನ್ನು ಹೇಗೆ ಮುರಿಯುತ್ತಾರೆ ಎಂಬುದರ ಕುರಿತಾದ ಸಿನಿಮಾವನ್ನು ಕನ್ನಡಿಗರಿಗೆ ಉಣಬಡಿಸಿದ್ದಾರೆ.
ಈ ಸಿನಿಮಾ 90ರ ದಶಕದ ಕಾಲಘಟ್ಟದ ಸಿನಿಮಾ ಆಗಿದ್ದು ಅರಸೀಪುರ ಮತ್ತು ಬೆಟ್ಟದ ಪುರ ಎಂಬ ಎರಡು ಗ್ರಾಮಗಳ ನಡುವಿನ ಸಂಘರ್ಷವೇ ಈ ಸಿನಿಮಾ ಮೂಲಕಥೆಯಾಗಿದೆ. ಬೆಟ್ಟದಪುರ ಎಂಬ ಊರು ಅರಸೀಪುರದ ಊರ ಮುಖಂಡನ (ಅಪೂರ್ವ ಕಾಸರವಳ್ಳಿ) ತಾತಾನ ಆಸ್ತಿಯಾಗಿದ್ದು, ಉಳುವವನೇ ಹೊಲದೊಡೆಯ ಎಂಬ ಕಾನೂನು ಬಂದ ಬಳಿಕ ಆ ಇಡೀ ಊರಿನ ಜಮೀನು ಬೆಟ್ಟದಪುರದ ಜನರ ಪಾಲಾಗಿ , ಆ ಊರಿನಲ್ಲಿ ಮ್ಯಾಂಗನೀಸ್ ಅದಿರು ಹೇರಳವಾಗಿರುವುದನ್ನು ಕಂಡುಕೊಂಡ ಆತ, ಹೇಗಾದರು ಮಾಡಿ ಆ ಊರನ್ನು ತನ್ನ ಕೈವಶಮಾಡಿಕೊಂಡು ಗಣಿಗಾರಿಕೆ ನಡೆಸುವುದಕ್ಕಾಗಿ ಊರಿನ ಜನರನ್ನು ಹೆದರಿಸಿ ಬೆದರಿಸಿ ಓಡಿಸಲು ಮುಂದಾಗಿರುತ್ತಾನೆ. ಬೆಟ್ಟದ ಪುರದ ಸ್ವಾತಂತ್ರ್ಯ ಹೋರಾಟಗಾರರಾದ ಸುರೇಶ್ ಹೆಬ್ಳೀಕರ್ ಅವರ ಮುಂದಾಳತ್ವದಲ್ಲಿ ಆ ಊರಿನ ಜನ ಸ್ಥಳೀಯ ನ್ಯಾಯಾಲಯದಲ್ಲಿ ಇದರ ಕುರಿತು ಹೋರಾಟ ಮಾಡುತ್ತಿರುತ್ತಾರೆ.
ಇವೆಲ್ಲದರ ನಡುವೆ, ದ್ರೋಣಾಚಾರ್ಯ ಪ್ರಶಸ್ತಿ ವಿಜೇತ ಕ್ರೀಡಾ ಶಿಕ್ಷಕರಾದ ದತ್ತಣ್ಣ ಮತ್ತು ಅವರ ಉಡಾಳ ಶಿಷ್ಯನಾಗಿ ಚಿತ್ರದ ನಾಯಕ ಶರಣ್ ಮೈಸೂರಿನ ಸಣ್ಣದೊಂದು ಕೊಠಡಿಯಲ್ಲಿ ಜೀವಿಸುತ್ತಿರುತ್ತಾರೆ. ಒಂದಾನೊಂದು ಕಾಲದಲ್ಲಿ ಕೊಕ್ಕೋ ನ್ಯಾಷಿನಲ್ ಛಾಂಪಿಯನ್ ಆಗಿದ್ದ ನಾಯಕನಿಗೆ ತನ್ನ ಕೊಕ್ಕೋ ಆಟದ ಅರ್ಹತೆಯ ಮೇರೆಗೆ ಎಲ್ಲೂ ಯಾರು ಕೆಲಸವನ್ನು ಕೊಡಲು ಮುಂದಾಗದೇ ಹೋದಾಗ, ಭ್ರಮನಿರಸನಗೊಂಡು ಉಂಡಾಡಿ ಗುಂಡನಾಗಿ ಬೀದಿ ಬೀದಿ ಅಲೆಯುತ್ತಿದ್ದಾಗ, ತನ್ನಿಂದ ಆತನ ಭವಿಷ್ಯ ಹಾಳಾಯಿತೆಂದು ಭಾವಿಸಿದ ಆತನ ಗುರು ದತ್ತಣ್ಣ, ಆತನ ಜೀವನಕ್ಕೆ ದಾರಿ ಮಾಡಿಕೊಡಿಸುವ ಸಲುವಾಗಿ ಆತನಿಗೊಂದು ಕೆಲಸ ಕೊಡಿಸಲು ಬಹಳ ಕಷ್ಟ ಪಡುತ್ತಿರುತ್ತಾರೆ.





