ಜಾಗೀರ್ದಾರ್*

ಪವರ್‌ ಸ್ಟಾರ್‌ ಪವನ್ ಕಲ್ಯಾಣ್ ನಟನೆಯ ಬಹುನಿರೀಕ್ಷಿತ ಸಿನಿಮಾ ‘ಹರಿ ಹರ ವೀರ ಮಲ್ಲು’ ಜುಲೈ 24 ರಂದು ಬಿಡುಗಡೆಯಾಗಲು ಸಜ್ಜಾಗಿದೆ, ನಿರ್ದೇಶಕಿ ಜ್ಯೋತಿ ಕೃಷ್ಣ ಅವರು ‘ಹರಿ ಹರ ವೀರ ಮಲ್ಲು’ ಚಿತ್ರದಲ್ಲಿ ಪವನ್ ಕಲ್ಯಾಣ್ ಅವರ ಪಾತ್ರವನ್ನು ವಿನ್ಯಾಸಗೊಳಿಸಲು ದಂತಕಥೆ ನಟರಾದ ಎನ್‌ಟಿಆರ್ ಮತ್ತು ಎಂಜಿಆರ್ ಅವರಿಂದ ಸ್ಫೂರ್ತಿ ಪಡೆದಿದ್ದೇನೆ ಎಂದು ಹೇಳಿದ್ದಾರೆ. ಎನ್‌ಟಿಆರ್ ಮತ್ತು ಎಂಜಿಆರ್‌ರಂತಹ ಐಕಾನಿಕ್ ವ್ಯಕ್ತಿಗಳಂತೆಯೇ ಪವನ್ ಅವರ ಅದ್ಭುತ ಗುಣಗಳನ್ನು ಗಮನಿಸಿದ ನಂತರ ಪವನ್ ಪಾತ್ರವನ್ನು ಬರೆಯಲು ಪ್ರೇರೇಪಿಸಲ್ಪಟ್ಟಿದೆ ಎಂದು ತಿಳಿಸಿದ್ದಾರೆ.

ಜ್ಯೋತಿ ಕೃಷ್ಣ ಪ್ರಕಾರ, ʼಧರ್ಮಪರ, ಬಲಶಾಲಿ, ಜನರ ಮನುಷ್ಯ ಎಂಬ ಪವನ್‌ ಕಲ್ಯಾಣ್‌ ಅವರ ಇಮೇಜ್‌ ಅನ್ನು ಗಮನದಲ್ಲಿಟ್ಟುಕೊಂಡು ‘ಹರಿಹರ ವೀರಮಲ್ಲು’ ಚಿತ್ರದಲ್ಲಿ ಅವರ ಪಾತ್ರವನ್ನು ಎಚ್ಚರಿಕೆಯಿಂದ ರೂಪಿಸಲಾಗಿದೆ. ಮುಖ್ಯಮಂತ್ರಿ ಆದ ನಂತರವೂ ಎಂಜಿಆರ್‌ ಸಂದೇಶಪೂರ್ಣ, ಪ್ರಾಮಾಣಿಕ ಸಿನಿಮಾಗಳನ್ನು ಮಾಡುತ್ತಾ ನಟನಾ ಜೀವನವನ್ನು ಮುಂದುವರಿಸಿದರು. ಈ ಅಂಶ ನನಗೆ ಸ್ಫೂರ್ತಿ ನೀಡಿತು. ಅದಕ್ಕಾಗಿಯೇ ‘ಹರಿಹರ ವೀರಮಲ್ಲು’ ಚಿತ್ರದಲ್ಲಿ ‘ಮಾತು ಕೇಳಿ’ ಎಂಬ ಶಕ್ತಿಯುತ, ಚಿಂತನಶೀಲ ಹಾಡನ್ನು ಸಂಯೋಜಿಸಿದ್ದೇವೆ. ಈ ಹಾಡಿನ ಸಾರ ಪವನ್‌ ಅವರ ಭಾವನೆಗಳನ್ನು ಪ್ರತಿಬಿಂಬಿಸುತ್ತದೆ ಮತ್ತು ಜೀವನದಲ್ಲಿ ಸಕಾರಾತ್ಮಕತೆ, ಧರ್ಮವನ್ನು ಅಳವಡಿಸಿಕೊಳ್ಳುವುದನ್ನು ತಿಳಿಸುತ್ತದೆ. ಈ ಹಾಡು ಪ್ರೇಕ್ಷಕರ ಮೇಲೆ ಉತ್ತಮ ಪ್ರಭಾವ ಬೀರಿದೆ’ ಎಂದು ಹೇಳಿದರು.

ನಟನಾಗಿ ಎನ್‌ಟಿಆರ್‌ ಅವರ ಅದ್ಭುತ ಅಭಿನಯ ಪೌರಾಣಿಕ, ಜಾನಪದ ಚಿತ್ರಗಳಿಂದ ಬಂದಿದೆ. ವಿಶೇಷವಾಗಿ ರಾಮ, ಕೃಷ್ಣ ಪಾತ್ರಗಳಲ್ಲಿ ಅವರು ಒಂದಾದ ರೀತಿ ಶಾಶ್ವತವಾಗಿ ಉಳಿದಿದೆ. ‘ಎನ್‌ಟಿಆರ್‌ ತಮ್ಮ ಶಕ್ತಿ, ಧರ್ಮವನ್ನು ಎತ್ತಿಹಿಡಿಯುವ ಸಾಮರ್ಥ್ಯವನ್ನು ಸೂಚಿಸುವ ಬಿಲ್ಲು-ಬಾಣ ಹಿಡಿದ ಶ್ರೀರಾಮನಾಗಿ ಅದ್ಭುತವಾಗಿ ಚಿತ್ರಿಸಲ್ಪಟ್ಟಿದ್ದಾರೆ. ಈ ಅಂಶದಿಂದ ಸ್ಫೂರ್ತಿ ಪಡೆದು ‘ಹರಿಹರ ವೀರಮಲ್ಲು’ ಚಿತ್ರದಲ್ಲಿ ಪವನ್‌ಗಾಗಿ ಬಿಲ್ಲು-ಬಾಣವನ್ನು ವಿನ್ಯಾಸಗೊಳಿಸಿದ್ದೇವೆ. ಪವನ್‌ ಕಲ್ಯಾಣ್‌ ಅವರ ಶಕ್ತಿಯನ್ನು ಸೂಚಿಸಲು, ನ್ಯಾಯಕ್ಕಾಗಿ ಹೋರಾಡಲು, ಧರ್ಮವನ್ನು ಎತ್ತಿಹಿಡಿಯಲು ಸಂಕೇತವಾಗಿ ಈ ಆಯುಧಗಳನ್ನು ವಿನ್ಯಾಸಗೊಳಿಸಿದ್ದೇವೆ. ತಾನು ಸ್ಕ್ರಿಪ್ಟ್ ಬರೆಯುವಾಗ ಜನರು ಪವನ್‌ ಕಲ್ಯಾಣ್‌ ಅವರನ್ನು ನಾಯಕನಾಗಿ ಅಲ್ಲ, ನಾಯಕನಾಗಿ ನೋಡುತ್ತಿದ್ದಾರೆ ಎಂದು ಅರಿತುಕೊಂಡೆ. ಕಥೆಯನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ಯುವಂತೆ ಪ್ರತಿ ದೃಶ್ಯವನ್ನು ವಿಶೇಷವಾಗಿ ಸೃಷ್ಟಿಸಬೇಕೆಂದುಕೊಂಡಿದ್ದೆ ಎಂದು ಜ್ಯೋತಿ ಕೃಷ್ಣ ಹೇಳಿದ್ದಾರೆ.

ಹರಿ ಹರ ವೀರ ಮಲ್ಲುವಾಗಿ ಪವನ್ ಕಲ್ಯಾಣ್ ಸಿನಿಮಾದಲ್ಲಿ ಅಬ್ಬರಿಸಿದ್ದಾರೆ. 17ನೇ ಶತಮಾನದಲ್ಲಿ ಮೊಘಲ್ ಸಾಮ್ರಾಜ್ಯದ ವಿರುದ್ಧ ಹೋರಾಡಿದ ನಾಯಕನಾಗಿ ಪವರ್ ಸ್ಟಾರ್ ಮಿಂಚಿದ್ದಾರೆ. 300 ವರ್ಷಗಳ ಹಿಂದಿನ ಕಾಲಘಟ್ಟ ಕಟ್ಟಿಕೊಡಲು ಚಿತ್ರತಂಡ ಬಹಳ ಶ್ರಮಿಸಿದೆ. ವೀರಮಲ್ಲು ಆಗಿ ಪವನ್ ಕಲ್ಯಾಣ್ ಲುಕ್, ಗೆಟಪ್ ಭರವಸೆ ಮೂಡಿಸಿದೆ. ಜ್ಯೋತಿ ಕೃಷ್ಣ ಮತ್ತು ಕ್ರಿಶ್ ಜಗರ್ಲಮುಡಿ ನಿರ್ದೇಶನದಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಚಿತ್ರ ಮೂಡಿಬಂದಿದೆ.

ಚಿತ್ರದಲ್ಲಿ ನಿಧಿ ಅಗರ್‌ವಾಲ್ ನಾಯಕಿಯಾಗಿ ಮಿಂಚಿದ್ದಾರೆ. ಇನ್ನುಳಿದಂತೆ ಬಾಬಿ ಡಿಯೋಲ್, ನರ್ಗೀಸ್ ಫಕ್ರಿ, ಆದಿತ್ಯಾ ಮೆನನ್, ಶುಭಲೇಖ ಸುಧಾಕರ್ ತಾರಾಗಣದಲ್ಲಿದ್ದಾರೆ. ರೋಚಕ ಯುದ್ಧದ ಸನ್ನಿವೇಶಗಳು ಚಿತ್ರದಲ್ಲಿದೆ. ಮೆಗಾ ಸೂರ್ಯ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ಎ. ದಯಾಕರ್ ರಾವ್ ಈ ಚಿತ್ರವನ್ನು ನಿರ್ಮಿಸಿದ್ದು, ಎ.ಎಂ. ರತ್ನಂ ಪ್ರಸ್ತುತಪಡಿಸುತ್ತಿದ್ದಾರೆ. ಆಸ್ಕರ್ ಪ್ರಶಸ್ತಿ ವಿಜೇತ ಎಂ.ಎಂ. ಕೀರವಾಣಿ ಸಂಗೀತ ನಿರ್ದೇಶನ, ಮನೋಜ್ ಪರಮಹಂಸ ಛಾಯಾಗ್ರಹಣ ಚಿತ್ರಕ್ಕಿದೆ. ಬಿಗ್ ಬಜೆಟ್ ತಯಾರಾಗಿರುವ ಹರಿ ಹರ ವೀರ ಮಲ್ಲು ಸಿನಿಮಾ ಜುಲೈ 24ರಂದು ಪ್ಯಾನ್ ಇಂಡಿಯಾ ಲೆವೆಲ್ ನಲ್ಲಿ ಬಿಡುಗಡೆಯಾಗಲಿದೆ.

 

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ