ವಿಭಾ*
ರತ್ನ ಶ್ರೀಧರ್ ನಿರ್ಮಾಣದ, ನೀನಾಸಂ ಕಿಟ್ಟಿ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶಿಸಿರುವ ಹಾಗೂ ಪೂರ್ಣಚಂದ್ರ ತೇಜಸ್ವಿ ಸಂಗೀತ ಸಂಯೋಜಿಸಿರುವ "ಹಿಕೋರಾ" ಚಿತ್ರದ ಹಾಡುಗಳ ಬಿಡುಗಡೆ ಸಮಾರಂಭ ಇತ್ತೀಚೆಗೆ ಅದ್ದೂರಿಯಾಗಿ ನೆರವೇರಿತು. ಕರ್ನಾಟಕ ಚಲನಚಿತ್ರ ಪ್ರದರ್ಶಕರ ಸಂಘದ ಅಧ್ಯಕ್ಷ ಕೆ.ವಿ.ಚಂದ್ರಶೇಖರ್, ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ಅಧ್ಯಕ್ಷ ಉಮೇಶ್ ಬಣಕಾರ್, ಕರ್ನಾಟಕ ಚಲನಚಿತ್ರ ನಿರ್ದೇಶಕರ ಸಂಘದ ಅಧ್ಯಕ್ಷ ಎನ್ ಆರ್ ಕೆ ವಿಶ್ವನಾಥ್, ಗೀತರಚನೆಕಾರ ಡಾ||ವಿ.ನಾಗೇಂದ್ರಪ್ರಸಾದ್, ನಿರ್ಮಾಪಕರಾದ ನರಸಿಂಹ, ನಾಗೇಶ್ ಕುಮಾರ್, ನಿರ್ದೇಶಕ ಟೆ.ಶಿ.ವೆಂಕಟೇಶ್, ಗೋಪಾಲ್ ಹಾಗೂ ನಟ ದೀಪಕ್ ಸೇರಿದಂತೆ ಅನೇಕ ಗಣ್ಯರು "ಹಿಕೋರಾ" ಹಾಡುಗಳನ್ನು ಲೋಕಾರ್ಪಣೆ ಮಾಡಿ, ಚಿತ್ರಕ್ಕೆ ತಮ್ಮ ಪ್ರೋತ್ಸಾಹಭರಿತ ಮಾತುಗಳ ಮೂಲಕ ಯಶಸ್ಸನ್ನು ಕೋರಿದರು. ನಂತರ ಚಿತ್ರತಂಡದ ಸದಸ್ಯರು ಮಾತನಾಡಿದರು.
ನಾನು ನೀನಾಸಂನ ವಿದ್ಯಾರ್ಥಿ. ಅಲ್ಲೇ ನಟನೆ ಕಲಿತದ್ದು. ನಿರ್ಮಾಪಕಿ ರತ್ನ ಅವರು ಹಾಗೂ ಅವರ ಪತಿ ಶ್ರೀಧರ್ ನೀನಾಸಂನಲ್ಲೇ ಮೆಸ್ ನಡೆಸುತ್ತಿದ್ದರು. ಅವರ ಕೈತುತ್ತು ತಿಂದು ಬೆಳೆದವನು ನಾನು. ರತ್ನ ಶ್ರೀಧರ್ ಅವರು ಕರೋನಕ್ಕೂ ಸ್ವಲ್ಪ ದಿನಗಳ ಮುಂಚೆ ಈ ಚಿತ್ರ ನಿರ್ಮಾಣಕ್ಕೆ ಮುಂದಾಗುತ್ತಾರೆ. ನಂತರ ಕೊರೋನ ಸೇರಿದಂತೆ ಸಾಕಷ್ಟು ಸಮಸ್ಯೆ ಎದುರಾಗುತ್ತದೆ. ಆ ಎಲ್ಲಾ ಸಮಸ್ಯೆ ಎದುರಿಸಿದ ನಿರ್ಮಾಪಕರು ಈಗ ಚಿತ್ರವನ್ನು ಬಿಡುಗಡೆ ಮಾಡುವ ಹಂತಕ್ಕೆ ತಂದಿದ್ದಾರೆ. ಸದ್ಯದಲ್ಲೇ ಚಿತ್ರ ಬಿಡುಗಡೆಯಾಗಲಿದೆ. ಅದಕ್ಕೆ ಪೂರ್ವಭಾವಿಯಾಗಿ ಇಂದು ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡಿರುವ ಹಾಡುಗಳು ಅನಾವರಣವಾಗಿದೆ. ಬಿಡುಗಡೆ ಮಾಡಿಕೊಟ್ಟ ಗಣ್ಯರಿಗೆ ಧನ್ಯವಾದ. ಇನ್ನೂ ಕರೋನ ಎಂದರೆ ವೈರಸ್ ಎಂದು ಎಲ್ಲರಿಗೂ ಗೊತ್ತು. ಅದನ್ನು ಹೋಗಲಾಡಿಸಲು ಅನೇಕ ಆಂಟಿ ವೈರಸ್ ಕಂಡು ಹಿಡಿಯಲಾಯಿತು. "ಹಿಕೋರಾ" ಕೂಡ ಒಂದು ಆಂಟಿ ವೈರಸ್. ಹಾಗಾದರೆ ವೈರಸ್ ಯಾವುದು? ಇದನ್ನು ತಿಳಿಯಲು ನೀವು ನಮ್ಮ ಸಿನಿಮಾ ನೋಡಬೇಕು ಎಂದರು ನಿರ್ದೇಶಕ ಹಾಗೂ ನಟ ನೀನಾಸಂ ಕಿಟ್ಟಿ.
ನಮ್ಮ ಚಿತ್ರದ ಮುಹೂರ್ತಕ್ಕೆ ದರ್ಶನ್ ಅವರು ಬಂದು ಚಾಲನೆ ನೀಡಿದ್ದರು. ನೀನಾಸಂ ನ ವಿದ್ಯಾರ್ಥಿ ಸರ್ದಾರ್ ಸತ್ಯ ಅವರು ಸಹ ಒಂದು ರೂಪಾಯಿ ಪಡೆಯದೆ ಈ ಚಿತ್ರದಲ್ಲಿ ನಟಿಸಿದ್ದಾರೆ. ನೀನಾಸಂ ಕಿಟ್ಟಿ ಒಳ್ಳೆಯ ಕಥೆ ಮಾಡಿಕೊಂಡು ನಿರ್ದೇಶನ ಮಾಡಿದ್ದಾರೆ. ಜೊತೆಗೆ ಪ್ರಮುಖಪಾತ್ರದಲ್ಲೂ ನಟಿಸಿದ್ದಾರೆ. ಚಿತ್ರತಂಡ ಹಾಗೂ ನನ್ನ ಕುಟುಂಬದವರ ಸಹಕಾರದಿಂದ ಚಿತ್ರ ಉತ್ತಮವಾಗಿ ಮೂಡಿಬಂದಿದೆ. ಸದ್ಯದಲ್ಲೇ ತೆರೆಗೆ ಬರಲಿದೆ. ಟೆ.ಶಿ.ವೆಂಕಟೇಶ್ ಹಾಗೂ ಸ್ನೇಹಿತರು ಈ ಚಿತ್ರವನ್ನು ವಿತರಣೆ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದು ನಿರ್ಮಾಪಕಿ ರತ್ನ ಶ್ರೀಧರ್ ತಿಳಿಸಿದರು.
ಚಿತ್ರದಲ್ಲಿ ಐದು ವಿವಿಧ ಶೈಲಿಯ ಹಾಡುಗಳಿದೆ. ಇಂದು ಮೂರು ಹಾಡುಗಳನ್ನು ಬಿಡುಗಡೆ ಮಾಡಿದ್ದೇವೆ. ಅನೇಕ ಹೆಸರಾಂತ ಗಾಯಕ - ಗಾಯಕಿಯರು ಹಾಡುಗಳನ್ನು ಹಾಡಿದ್ದಾರೆ. ನಮ್ಮ ಹಾಡಿಯೋ ಆಡಿಯೋ ಸಂಸ್ಥೆ ಮೂಲಕ ಹಾಡುಗಳು ಬಿಡುಗಡೆಯಾಗಿದೆ ಎಂದರು ಸಂಗೀತ ನಿರ್ದೇಶಕ ಪೂರ್ಣಚಂದ್ರ ತೇಜಸ್ವಿ.