ಕನ್ನಡ ಚಿತ್ರರಂಗದ ಖ್ಯಾತ ನಟಿ ಜಯಮಾಲಾ ಪುತ್ರಿ, ನಟಿ ಸೌಂದರ್ಯ ಜಯಮಾಲಾ ಮದುವೆ ಅದ್ಧೂರಿಯಾಗಿ ನೆರವೇರುತ್ತಿದೆ. ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್ನ ಗಾಯತ್ರಿ ವಿಹಾರದಲ್ಲಿ ಶುಕ್ರವಾರ ಮತ್ತು ಶನಿವಾರ ನಡೆಯಲಿದ್ದು, ಜಯಮಾಲಾ ಮಗಳ ಮದುವೆಗೆ ಗಣ್ಯಾತಿಗಣ್ಯರು ಆಗಮಿಸುತ್ತಿದ್ದಾರೆ. ಮದುವೆಗೂ ಮುನ್ನ ಹೋಟೆಲ್ ಲಲಿತ್ ಅಶೋಕ್ನಲ್ಲಿ ನಡೆದ ಹಳದಿ ಶಾಸ್ತ್ರವೂ ಕೂಡ ಭರ್ಜರಿಯಾಗಿ ಪೂರ್ಣಗೊಂಡಿತು. ಸೌಂದರ್ಯ ಹಳದಿ ಶಾಸ್ತ್ರಕ್ಕೆ ಸ್ಯಾಂಡಲ್ವುಡ್ ಹಿರಿಯ ನಟಿಯರು ಭಾಗಿಯಾಗಿದ್ದು ವಿಶೇಷವಾಗಿತ್ತು.
ಸ್ಯಾಂಡಲ್ವುಡ್ನಲ್ಲಿ ಎರಡು ವರ್ಷಗಳ ಕಾಲ ಅಭಿನಯಿಸಿ ಚಿತ್ರರಂಗದಿಂದಲೇ ದೂರ ಉಳಿದಿದ್ದ ಜಯಮಾಲಾ ಪುತ್ರಿ ಸೌಂದರ್ಯ ಜಯಮಾಲಾ ಅವರು ರುಷಬ್ ಕೆ ಜೊತೆ ವಿವಾಹ ಆಗುತ್ತಿದ್ದಾರೆ. ಈ ರುಷಬ್ ಎಲ್ಲಿಯವರು..? ಏನು ಕೆಲಸ ಮಾಡಿಕೊಂಡಿದ್ದಾರೆ ಅನ್ನೋದು ಇನ್ನೂ ಯಾರಿಗೂ ಗೊತ್ತಿಲ್ಲ. ಅದೆಲ್ಲವನ್ನೂ ಹುಡುಕೋ ಗೋಜಿಗೆ ಯಾರೂ ಹೋಗಿಲ್ಲ.‘
ಸದ್ಯ ಜಯಮಾಲಾ ಖುಷಿಯಲ್ಲಿರೋದನ್ನ ನೋಡಿ ಖುಷಿ ಪಡ್ತಿರೋ ಸ್ಯಾಂಡಲ್ವುಡ್ ನಟಿಯರು ಸಂಭ್ರಮಾಚಾರಣೆ ಮಾಡುತ್ತಿದ್ದಾರೆ. ಸೌಂದರ್ಯರ ಹಳದಿ ಶಾಸ್ತ್ರದಲ್ಲಿ ನಟಿ ಶ್ರುತಿ, ಮಾಳವಿಕಾ ಅವಿನಾಶ್, ಸುಧಾರಾಣಿ, ಉಮಾಶ್ರೀ, ಪ್ರಮೀಳಾ ಜೋಷಾಯ್, ಗಿರಿಜಾ ಲೋಕೇಶ್, ಹರ್ಷಿಕಾ ಪೂಣಚ್ಛ, ಅನು ಪ್ರಭಾಕರ್, ಪ್ರಿಯಾಂಕಾ ಉಪೇಂದ್ರ, ಭಾರತಿ ವಿಷ್ಣುವರ್ಧನ್, ಹೇಮಾ ಚೌಧರಿ, ಸುಧಾ ನರಸಿಂಹರಾಜು ಮುಂತಾದ ಹಿರಿಯ ನಟಿಯರು ಭಾಗವಹಿಸಿದ್ದರು.
ಖುಷಿ ಖುಷಿಯಿಂದ ಡ್ಯಾನ್ಸ್ ಮಾಡುತ್ತಾ.. ಹಾಡು ಹಾಡುತ್ತಾ.. ಸೌಂದರ್ಯಗೆ ಅರಿಶಿಣ ಹಚ್ಚಿ.. ತಾವೂ ಕೂಡ ಹಳದಿ ಬಣ್ಣದ ಉಡುಗೆಯಲ್ಲಿ ಮಿರಮಿರ ಮಿಂಚುತ್ತಿದ್ದರು. ಈ ಹಳದಿ ಶಾಸ್ತ್ರವನ್ನು ಅದ್ದೂರಿಯಾಗಿ ಮಾಡಲಾಯ್ತು. ಎಲ್ಲೆಲ್ಲೂ ಹಳದಿ ಬಣ್ಣದ ಹೂಗಳಿಂದ ಸಿಂಗಾರಗೊಳಿಸಲಾಗಿತ್ತು.
ಎಲ್ಲರೂ ಒಟ್ಟಿಗೆ ಸೇರಿದ ಹಿರಿಯ ನಟಿಯರೆಲ್ಲರೂ ಡ್ಯಾನ್ಸ್ ಮಾಡಿರುವ ವಿಡಿಯೋಗಳು ಭಾರೀ ವೈರಲ್ ಆಗುತ್ತಿವೆ. ಇನ್ನು ಸೌಂದರ್ಯ ಜಯಮಾಲಾ ಅವರು ಎರಡು ವರ್ಷಗಳಲ್ಲಿ ನಾಲ್ಕು ಸಿನಿಮಾಗಳಲ್ಲಿ ನಟಿಸಿದ್ದರು. ಸೂಪರ್ ಸ್ಟಾರ್ ಉಪೇಂದ್ರ ಅಭಿನಯದ ಗಾಡ್ ಫಾದರ್ ಸಿನಿಮಾ ಮೂಲಕ ಬಣ್ಣದ ಲೋಕಕ್ಕೆ ಎಂಟ್ರಿಯಾಗಿದ್ದರು.
ಇದಾದ ಮೇಲೆ ಶ್ರೀನಗರ ಕಿಟ್ಟಿ ಜೊತೆ ಪಾರು ವೈಫ್ ಆಫ್ ದೇವದಾಸ್ ಸಿನಿಮಾದಲ್ಲಿ ನಟಿಸಿದ್ದಾರೆ. ಯಶೋ ಸಾಗರ್ ಅವರೊಂದಿಗೆ 'ಮಿಸ್ಟರ್ ಪ್ರೇಮಿಕುಡು' ಚಿತ್ರದ ಮೂಲಕ ಟಾಲಿವುಡ್‌ಗೂ ಪ್ರವೇಶಿಸಿದರು. ನಂತರ ದುನಿಯಾ ವಿಜಯ್ ಅವರಿಗೆ ಜೋಡಿಯಾಗಿ ಸಿಂಹಾದ್ರಿ ಸಿನಿಮಾದಲ್ಲೂ ಅಭಿನಯಿಸಿದ್ದರು. ಆದರೆ ಸದ್ಯ ಬಣ್ಣದ ಬದುಕಿನಿಂದ ಸೌಂದರ್ಯ ದೂರ ಉಳಿದಿದ್ದಾರೆ.
ಹೆಸರಿಗೆ ತಕ್ಕಂತೆ ಸೌಂದರ್ಯವತಿಯಾಗಿದ್ದ ಸೌಂದರ್ಯ ಜಯಮಾಲಾ ಚೊಚ್ಚಲ ಚಿತ್ರದಲ್ಲೇ ಎಲ್ಲರ ಗಮನ ಸೆಳೆದಿದ್ದರು. ಡ್ಯಾನ್ಸ್, ಅಭಿನಯ ಯಾವುದರಲ್ಲೂ ಕಮ್ಮಿ ಇಲ್ಲ ಅನ್ನೋದನ್ನ ನಿರೂಪಿಸಿದ್ದರು. ಆದ್ರೆ, ದಿಢೀರ್ನೇ ನಟನೆಯಿಂದ ದೂರ ಉಳಿದಿದ್ದ ಸೌಂದರ್ಯ ವಿದೇಶದಲ್ಲಿ ವಿದ್ಯಾಭ್ಯಾಸ ಮಾಡಿದ್ದರು. ಲಂಡನ್‌ನ ಪ್ರತಿಷ್ಠಿತ ವಿಶ್ವವಿದ್ಯಾಲಯದಲ್ಲಿ ಅವರು ಕೆಲ ವರ್ಷಗಳ ಕಾಲ ಓದಿದ್ದಾರೆ. ಸದ್ಯಕ್ಕೀಗ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿರುವ ಸೌಂದರ್ಯ ಮತ್ತೆ ಸಿನಿಮಾ ಮಾಡ್ತಾರಾ ಅನ್ನೋದು ಎಲ್ಲರ ಕುತೂಹಲವಾಗಿದೆ.