ಜೀ಼ ಕನ್ನಡ ವಾಹಿನಿ ಮತ್ತೊಮ್ಮೆ ತನ್ನ ಪ್ರೇಕ್ಷಕರಿಗೆ ಅದ್ಬುತ ಅನುಭವ ನೀಡಲು ಸಜ್ಜಾಗಿದ್ದು, ಇದೇ ಭಾನುವಾರ (ಮಾರ್ಚ್ 16) ಮಧ್ಯಾಹ್ನ 3 ಗಂಟೆಗೆ ಪ್ರಭಾಸ್ ಅಭಿನಯದ ‘ಕಲ್ಕಿ 2898 AD’ ಸಿನಿಮಾವನ್ನು ಹೊತ್ತುತರುತ್ತಿದೆ.
ಕಲ್ಕಿ 2898 AD’ ಕತೆ ಎಷ್ಟು ರೋಮಾಂಚನಕಾರಿಯಾಗಿದೆಯೋ ದೃಶ್ಯಗಳೂ ಅಷ್ಟೇ ಅತ್ಯದ್ಭುತವಾಗಿದೆ. ಮಹಾಭಾರತದ ಪಾತ್ರಗಳು, ಅವುಗಳನ್ನು ತೋರಿಸಿರುವ ರೀತಿ, ಆ ಪಾತ್ರಗಳನ್ನು ಕಲಿಯುಗದ ಕಾಲ್ಪನಿಕ ಲೋಕದಲ್ಲಿ ಇರಿಸಿ ಕತೆಯೊಂದಿಗೆ ಹೊಂದಿಸಿರುವ ರೀತಿ ಊಹೆಗೇ ನಿಲುಕದ್ದು. ಈ ಸಿನೆಮಾದಲ್ಲಿ ಅಶ್ವತ್ಥಾಮ ಹಾಗೂ ಕರ್ಣನ ಸ್ನೇಹವನ್ನು ಬಹಳ ಸುಂದರವಾಗಿ ತೋರಿಸಿದ್ದು, ಗೆಳೆತನ ಎಂದರೆ ಹೀಗಿರಬೇಕು ಅಂತ ವೀಕ್ಷಕರಿಗೆ ಅನ್ನಿಸೋದರಲ್ಲಿ ಎರಡು ಮಾತಿಲ್ಲ. ಕಲಿಯುಗ ಅಂತ್ಯವಾಗುತ್ತಾ? ಅಂತ್ಯವಾದರೆ ಮುಂದೆ ಹೇಗೆ? ಇದು ಜಸ್ಟ್ ಸ್ಯಾಂಪಲ್ ಅಷ್ಟೇ, ಇನ್ನೂ ಇದೇ ತರಹದ ಮೈನವಿರೇಳಿಸುವ ಅನೇಕ ಅಂಶಗಳು ಈ ಚಿತ್ರದ ಹೈಲೈಟ್.
ಭೈರವನ ಪಾತ್ರದಲ್ಲಿ ನಟಿಸಿರುವ ಪ್ರಭಾಸ್ ತನ್ನ ನಟನೆಯಿಂದ ವೀಕ್ಷಕರ ಮನಗೆದ್ದಿದ್ದಾರೆ. ಇನ್ನು ಮೇರು ನಟ ಅಮಿತಾಬ್ ಬಚ್ಚನ್ ಪಾತ್ರ ಬಹಳ ಮಹತ್ವದ್ದಾಗಿದ್ದು, ಅವರ ನಟನೆ ವೀಕ್ಷಕರ ಮನದಲ್ಲಿ ಅಚ್ಚಳಿಯದಂತೆ ಉಳಿಯಲಿದೆ. ದೀಪಿಕಾ ಪಡುಕೋಣೆಯ ಮನಮೋಹಕ ನಟನೆ ಈ ಸಿನೆಮಾದ ಮತ್ತೊಂದು ಪ್ಲಸ್ ಪಾಯಿಂಟ್ ಆಗಿದ್ದು, ಒಟ್ಟಾರೆ ದಿಗ್ಗಜರನ್ನು ಕೂಡಿರುವ ಈ ಸಿನೆಮಾ ವೀಕ್ಷಕರ ಮನ ಗೆಲ್ಲುವುದಂತೂ ಗ್ಯಾರಂಟಿ.
ಜೀ಼ ಕನ್ನಡ ವಾಹಿನಿ ತನ್ನ ವಿಶಿಷ್ಟವಾದ ಕಾರ್ಯಕ್ರಮಗಳೊಂದಿಗೆ ವೀಕ್ಷಕರನ್ನು ಮನರಂಜಿಸುತ್ತಾ ಬಂದಿದ್ದು, ಆಕರ್ಷಕ ಧಾರಾವಾಹಿಗಳು, ರೋಚಕ ರಿಯಾಲಿಟಿ ಶೋಗಳು ಮತ್ತು ಬ್ಲಾಕ್‌ಬಸ್ಟರ್ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್‌ಗಳ ಮೂಲಕ ನಿರಂತರವಾಗಿ ಮೊದಲ ಸ್ಥಾನವನ್ನು ಕಾಯ್ದುಕೊಳ್ಳುವಲ್ಲಿ ಯಶಸ್ವಿಯಾಗಿದೆ.
ಜೀ ಕನ್ನಡ ಸಿನಿಮಾ ವರ್ಲ್ಡ್ ಟೆಲಿವಿಷನ್ ಪ್ರೀಮಿಯರ್ ಸಮಯದಲ್ಲಿ ನಿಮಗೆ ಮತ್ತಷ್ಟು ಮನರಂಜನೆ ನೀಡಲು ‘ಪ್ಲೇ ಅಲಾಂಗ್ ಕಾಂಟೆಸ್ಟ್‘ ಕೂಡಾ ತರಲಿದೆ. ಚಲನಚಿತ್ರ ಪ್ರಸಾರ ಆಗುವ ಸಮಯದಲ್ಲಿ ಸ್ಕ್ರೀನ್‌ನಲ್ಲಿ ಕಾಣುವ QR ಕೋಡ್ ಅನ್ನು ಸ್ಕ್ಯಾನ್ ಮಾಡಿ ಮೊಬೈಲ್ ಫೋನ್ ನಲ್ಲಿ ಲಾಗಿನ್ ಆಗಿ, ಟಿವಿಯಲ್ಲಿ ತೋರಿಸಲಾದ ಚಿತ್ರಕ್ಕೆ ಹೊಂದುವಂತೆ ಸರಿಯಾಗಿ ಜೋಡಿಸಿ ಹಾಗೂ ಗಿಫ್ಟ್ ಹ್ಯಾಂಪರ್ ಗೆಲ್ಲುವ ಅವಕಾಶವನ್ನೂ ಕಲ್ಪಿಸಿದೆ. ಈ ಕಾಂಟೆಸ್ಟ್ ಪೂರ್ತಿ ಚಲನಚಿತ್ರದ ಮುಗಿಯುವವರೆಗೂ ಇರಲಿದೆ.
ಅಂತ್ಯವೇ ಆದಿಯಾದರೆ? ಕಲಿಯುಗ ಅಂತ್ಯವಾದರೆ? ಇವೆಲ್ಲದಕ್ಕೂ ಉತ್ತರ ತಿಳಿದುಕೊಳ್ಳಲು ‘ಕಲ್ಕಿ 2898 AD’ ಇದೇ ಭಾನುವಾರ ಮಧ್ಯಾಹ್ನ 3 ಗಂಟೆಗೆ ಜೀ಼ ಕನ್ನಡ ವಾಹಿನಿಯನ್ನು ವೀಕ್ಷಿಸಬಹುದು.