- ರಾಘವೇಂದ್ರ ಅಡಿಗ ಎಚ್ಚೆನ್.
71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳು ಶುಕ್ರವಾರ ಪ್ರಕಟಗೊಂಡಿದ್ದು, ಕನ್ನಡ ಚಿತ್ರರಂಗದ ‘ಕಂದೀಲು’ ಚಿತ್ರವು ಅತ್ಯುತ್ತಮ ಕನ್ನಡ ಫೀಚರ್ ಫಿಲ್ಮ್ ಪ್ರಶಸ್ತಿಗೆ ಭಾಜನವಾಗಿದೆ. ಯಶೋಧ ಪ್ರಕಾಶ್‌ರವರ ನಿರ್ದೇಶನದಲ್ಲಿ, ಪ್ರಕಾಶ್‌ರವರ ನಿರ್ಮಾಣದಲ್ಲಿ ಮೂಡಿಬಂದಿರುವ ಈ ಚಿತ್ರವು ಸಾಮಾಜಿಕ ಕಳಕಳಿಯನ್ನು ರಾಷ್ಟ್ರೀಯ ಮಟ್ಟದಲ್ಲಿ ಪ್ರದರ್ಶಿಸಿದೆ. ‘ಭರವಸೆಯ ಕಿರಣ’ ಎಂಬ ಅಡಿಬರಹದೊಂದಿಗೆ ಬಿಡುಗಡೆಯಾದ ಈ ಚಿತ್ರವು, ಸಮಾಜದ ಕಠೋರ ಸತ್ಯಗಳನ್ನು ಸೂಕ್ಷ್ಮವಾಗಿ ಚಿತ್ರಿಸುವ ಮೂಲಕ ಎಲ್ಲರ ಮನಗೆದ್ದಿದೆ.
‘ಕಂದೀಲು’ ಚಿತ್ರವು ನಾಗೇಶ್ ಎನ್‌ರವರ ‘ಅನಾಮಿಕ & ಇತರ ಕಥೆಗಳು’ ಕಥಾ ಸಂಕಲನದಿಂದ ಆಯ್ದ ‘ಹೆಣ’ ಎಂಬ ಕಥೆಯನ್ನು ಆಧರಿಸಿದೆ. ಈ ಕಥೆಯು ಸಮಾಜದಲ್ಲಿ ಬೆತ್ತಲೆಯಾಗಿರುವ ಸತ್ಯಗಳನ್ನು ಬಿಚ್ಚಿಡುತ್ತದೆ. ಗ್ರಾಮೀಣ ಸೊಗಡಿನಲ್ಲಿ, ‘ತಿಥಿ’ ಚಿತ್ರದಂತೆ ಸ್ವಾಭಾವಿಕವಾಗಿ ಈ ಸಿನಿಮಾವನ್ನು ಚಿತ್ರಿಸಲಾಗಿದೆ. ಯಶೋಧ ಪ್ರಕಾಶ್‌ರವರ ನಿರ್ದೇಶನವು ಈ ಚಿತ್ರದ ಯಶಸ್ಸಿಗೆ ಕಾರಣರಾಗಿದ್ದಾರೆ. ಅವರ ಈ ಕಥೆಯನ್ನು ಸರಳವಾಗಿ ತೆರೆಗೆ ತರುವ ಕೌಶಲ್ಯವು ರಾಷ್ಟ್ರೀಯ ಪ್ರಶಸ್ತಿಯ ಆಯ್ಕೆಗೆ ಕಾರಣವಾಗಿದೆ. ಗ್ರಾಮೀಣ ಜನರ ಜೀವನ, ಸಂಘರ್ಷ, ಮತ್ತು ಭಾವನೆಗಳನ್ನು ಅತ್ಯಂತ ಸಹಜವಾಗಿ ಚಿತ್ರಿಸಲಾಗಿದೆ.
ಯಶೋದ ಪ್ರಕಾಶ್ ಕೊಡಗು ಜಿಲ್ಲೆಯ ಏಕೈಕ ಮಹಿಳಾ ಚಿತ್ರನಿರ್ದೇಶಕಿಯಾಗಿದ್ದು, ಕನ್ನಡ ಚಿತ್ರರಂಗದಲ್ಲಿ ತಮ್ಮ ವಿಶಿಷ್ಟ ಕೊಡುಗೆಯಿಂದ ಗಮನ ಸೆಳೆದಿದ್ದಾರೆ. ಹಲವು ಚಿತ್ರಗಳ ನಿರ್ಮಾಣ ಮತ್ತು ನಿರ್ದೇಶನದ ಮೂಲಕ ತಮ್ಮ ಛಾಪು ಮೂಡಿಸಿರುವ ಅವರು, ‘ಕಂದೀಲು’ ಮೂಲಕ ಮತ್ತೊಂದು ಮೈಲಿಗಲ್ಲು ಸಾಧಿಸಿದ್ದಾರೆ.
‘ಕಂದೀಲು’ ಚಿತ್ರವು ಕೇವಲ ಕಥೆಯ ಮೂಲಕವೇ ಅಲ್ಲ, ತಾಂತ್ರಿಕವಾಗಿಯೂ ಶ್ರೇಷ್ಠವಾಗಿದೆ. ಛಾಯಾಗ್ರಹಣ, ಸಂಗೀತ, ಸಂಕಲನ, ಮತ್ತು ಪಾತ್ರದ ಚಿತ್ರಣದಲ್ಲಿ ಚಿತ್ರವು ಉನ್ನತ ಮಟ್ಟದ ಗುಣಮಟ್ಟವನ್ನು ಕಾಪಾಡಿಕೊಂಡಿದೆ. ಗ್ರಾಮೀಣ ಜೀವನದ ಸೊಗಡನ್ನು ತೆರೆಯ ಮೇಲೆ ತರುವಲ್ಲಿ ಚಿತ್ರತಂಡದ ಶ್ರಮ ಕಾಣುತ್ತದೆ. 71ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿಗಳಲ್ಲಿ ಕನ್ನಡಕ್ಕೆ ಈ ಗೌರವ ದೊರೆತಿರುವುದು, ಸ್ಯಾಂಡಲ್‌ವುಡ್‌ಗೆ ಹೊಸ ಉತ್ಸಾಹವನ್ನು ತಂದಿದೆ. ‘ಕಂದೀಲು’ ಚಿತ್ರದ ಈ ಸಾಧನೆ ಕನ್ನಡ ಚಿತ್ರೋದ್ಯಮಕ್ಕೆ ಹೆಮ್ಮೆಯ ಕ್ಷಣವನ್ನು ತಂದಿದೆ.