ಹೊಸ ವರ್ಷ ಬಂದಿದೆ, ಮತ್ತೊಂದು ಮಧುಚಂದ್ರಕ್ಕೆ ಏಕೆ ಪ್ಲಾನ್ ಮಾಡಬಾರದು? ಅದಕ್ಕಾಗಿ ಬುಕ್ ಮಾಡ್ತಿದ್ದೀರಾ? ಇಲ್ಲಿವೆ ನಿಮಗೆ ಅಗತ್ಯವಾದ ಕೆಲವು ಸಲಹೆಗಳು…..!
ಈ ಹೊಸ ವರ್ಷದಲ್ಲಿ ನೀವು ದಂಪತಿ ಮತ್ತೊಂದು ಮಧುಚಂದ್ರಕ್ಕೆ ಏಕೆ ಪ್ಲಾನ್ ಮಾಡಬಾರದು? ಇದಕ್ಕಾಗಿ ಯಾವ ಟೂರ್ ಪ್ಯಾಕೇಜ್ ಕೊಳ್ಳುವುದೆಂದು ಕನ್ ಫ್ಯೂಸ್ ಆಗಿದ್ದೀರಾ? ಇದಕ್ಕಾಗಿ ನೀವು ಹೊಸ ವರ್ಷದ ಈ ಚುಮು ಚುಮು ಚಳಿಯ ಆಹ್ಲಾದಕರ ವಾತಾವರಣದಲ್ಲಿ ದಂಪತಿಗಳಿಬ್ಬರೇ ಬೇರೆಲ್ಲ ಜಂಜಾಟ ಮರೆತು ಹೊರಡುವುದೇ ಸರಿ. ಸಂಸಾರದ ಜವಾಬ್ದಾರಿ ಜೀವಮಾನವಿಡೀ ಇದ್ದೇ ಇದೆ. ಈ ಹೊಸ ವರ್ಷದ ರೊಮ್ಯಾಂಟಿಕ್ ವಾತಾವರಣದಲ್ಲಿ ಅದನ್ನು ಬದಿಗಿಟ್ಟು ಹೊರಡಿರಿ. ಇದಕ್ಕಾಗಿ ನೀವು ಈ ಕೆಳಗಿನ ಸಲಹೆ ಅನುಸರಿಸುವುದು ಉತ್ತಮ.
ಮಧುಚಂದ್ರದ ಪ್ರವಾಸ
ಮದುವೆ ನಂತರ ಮಧುಚಂದ್ರಕ್ಕೆ ಪ್ಲಾನ್ ಮಾಡಿ ಹೊರಡುವುದು ಪ್ರತಿಯೊಬ್ಬ ದಂಪತಿಗೂ ಅಪರಿಮಿತ ಆನಂದ ತರುತ್ತದೆ. ಇದರಿಂದ ಸಂಗಾತಿಗಳಿಬ್ಬರೂ ಪರಸ್ಪರರಿಗೆ ವಿಶೇಷ ಖಾಸಗಿ ಸಮಯ ನೀಡಲು ಸಾಧ್ಯ. ಇದು ಕೇವಲ ನವದಂಪತಿಗೆ ಮಾತ್ರ ಮೀಸಾಲಾಗದೆ, ಯಾವ ವಯಸ್ಸಿನ ದಂಪತಿಗಳೇ ಆಗಲಿ, ಹೊಸ ವರ್ಷ ಬಂದಾಗೆಲ್ಲ ಹೀಗೆ ಮತ್ತೊಂದು ಮಧುಚಂದ್ರಕ್ಕೆ ಹೊರಡುವುದು, ತಗ್ಗುತ್ತಿರುವ ಅವರಿಬ್ಬರ ನಡುವಿನ ರೊಮಾನ್ಸ್ ನ್ನು ಹೆಚ್ಚಿಸುವುದು ಮಾತ್ರವಲ್ಲದೆ, ಈ ಯಾಂತ್ರಿಕ ಬದುಕಿನ, ಸಾಂಸಾರಿಕ ಚಿಂತೆಗಳಿಂದ ಕೆಲವು ದಿನಗಳಾದರೂ ಮೈಮನಗಳಿಗೆ ಮುಕ್ತಿ ನೀಡುತ್ತದೆ. ಇದಕ್ಕಾಗಿ ನಿಮಗೆ ಇಷ್ಟವಾಗುವಂಥ ಜಾಗಗಳ ಹನೀಮೂನ್ ಪ್ಯಾಕೇಜ್ ಆರಿಸಿ.
ಇದರಲ್ಲಿ ನಿಮಗೆ ಪಿಕಪ್ ನಿಂದ ಹಿಡಿದು ಡ್ರಾಪಿಂಗ್ ವರೆಗೂ ಡೆಸ್ಟಿನೇಶನ್ ತಲುಪಿಸುವುದು, ಅಲ್ಲೆಲ್ಲ ಸುತ್ತಾಡಿಸುವುದು, ನಿಮಗೆ ಬೇಕಾದ ಜಾಗ ಎಕ್ಸ್ ಪ್ಲೋರ್ ಮಾಡಿಸುವುದು, ತಂಗಲು ಸ್ಥಳ, ಊಟತಿಂಡಿ, ಕಾಫಿಟೀ, ಎಲ್ಲವೂ ಒಳಗೊಂಡಿರುತ್ತವೆ. ಇದರಿಂದಾಗಿ ನಿಮಗೆ ಯಾವುದೇ ವಿಷಯದ ಕುರಿತು ಟೆನ್ಶನ್ ತೆಗೆದುಕೊಳ್ಳಬೇಕಿಲ್ಲ. ಸಂಗಾತಿಯ ಜೊತೆ ಮಜವಾಗಿ ನೀವು ರೊಮ್ಯಾಂಟಿಕ್ ಹನೀಮೂನ್ ಎಂಜಾಯ್ ಮಾಡಬಹುದು.
ಇದರ ಬದಲು ನೀವೇ ಗಾಡಿಯಲ್ಲಿ ಟೂರ್ ಹೊರಟರೆ, ಎಲ್ಲದರ ಜವಾಬ್ದಾರಿ ನಿಮ್ಮ ತಲೆಗೇ ಬರುತ್ತದೆ. ಇದಕ್ಕಾಗಿ ನೀವು ಬಹಳ ಕಷ್ಟಪಡಬೇಕು, ಜಾಗಗಳ ವಿವರ ಹುಡುಕುತ್ತಾ, ಊಟತಿಂಡಿಗೆ ಪರದಾಡುತ್ತಾ ಅಂಡಲೆಯಬೇಕು. ಸಂಗಾತಿಗೆ ಬೇಸರವಾಗದೆ ಇರಲಿ ಎಂದು ದುಬಾರಿ ಹೋಟೆಲ್ ರೂಂ, ಎಲ್ಲವನ್ನೂ ದುಬಾರಿ ಆಗಿಯೇ ಪಡೆಯಬೇಕಾದೀತು. ಇದರಿಂದ ಕಾಸೂ ಹಾಳು, ತಲೆಯೂ ಬೋಳು ಎಂದಾದೀತು.
ಹೀಗಾಗಿ ಇಂಥ ಸಂದರ್ಭಕ್ಕಾಗಿ ಬೆಸ್ಟ್ ಅಂದ್ರೆ ಟೂರ್ ಪ್ಯಾಕೇಜ್ ಬುಕ್ ಮಾಡುವುದು. ಮುಖ್ಯವಾಗಿ ಗಮನಿಸತಕ್ಕ ಅಂಶವೆಂದರೆ, ಈ ಪ್ಯಾಕೇಜ್ ನ್ನು ನೀವು ನಂಬಲರ್ಹ ಸೈಟ್ ನಿಂದಲೇ ಪಡೆದಿದ್ದೀರಿ ಎಂಬುದು. ಇದಕ್ಕಾಗಿ ಪ್ರೀ ಪೇಮೆಂಟ್ ಮಾಡಬೇಕಾದ ರಿಸ್ಕ್ ಇದ್ದೇ ಇರುತ್ತದೆ.
ನೋಡಿದ ಸ್ಥಳಕ್ಕೇ ಮರುಪ್ರವಾಸ
ನೀವು ಸಿಮ್ಲಾ, ಕುಲೂಮನಾಲಿ, ಡಾರ್ಜಿಲಿಂಗ್ ಇತ್ಯಾದಿ ಮದುವೆಗೆ ಮೊದಲೇ ನೋಡಿರಬಹುದು, ಇದೀಗ ಸಂಗಾತಿ ಜೊತೆಗೆ ಅಲ್ಲಿಗೆ ಹೋಗುವುದು ವೆರಿ ಸ್ಪೆಷಲ್ ಎನಿಸುತ್ತದೆ! ಇದಕ್ಕಾಗಿ ಆ ವಿವರಗಳನ್ನು ನೀವು ಮೊದಲೇ ಅರಿತಿರುವುದರಿಂದ, ಟೂರ್ ಪ್ಯಾಕೇಜ್ ಬದಲು `ಡು ಇಟ್ ಯುವರ್ ಸೆಲ್ಫ್’ ಎಂಬಂತೆ ನೀವೇ ಪ್ಲಾನ್ ಮಾಡಿ ಹೊರಟರೂ ಅಂಥ ಆತಂಕ ಇರುವುದಿಲ್ಲ, ಜಂಜಾಟ ಬೇಡ ಎಂದು ಟೂರ್ ಪ್ಯಾಕೇಜ್ ಆರಿಸಿಕೊಂಡರೆ ದೊಡ್ಡ ಟೆನ್ಶನ್ ಏನೂ ಇಲ್ಲ.
ಎಲ್ಲೆಲ್ಲಿ ಉಳಿದುಕೊಂಡರೆ ಸರಿ ಹೋಗುತ್ತದೆ, ಎಲ್ಲಿ ಹಾಯಾಗಿ ರಿಲ್ಯಾಕ್ಸ್ ಮಾಡಿಕೊಳ್ಳಬಹುದು. ಅದೂ ಪಾಕೆಟ್ ಫ್ರೆಂಡ್ಲಿಯಾಗಿ ಎಂಬುದನ್ನು ನೀವು ಮೊದಲೇ ಲೆಕ್ಕ ಹಾಕಿಕೊಳ್ಳಬಹುದು. ಇದರ ಜೊತೆಗೆ ಅಲ್ಲಿ ಚಾರಣದಂತಹ ಅಡ್ವೆಂಚರ್ ಚಟುವಟಿಕೆಗಳಿಗೆ ಅವಕಾಶವಿದೆಯೇ ಎಂದೂ ನೆನಪಿಡಿ. ಅಲ್ಲಿ ಓಡಾಟಕ್ಕಾಗಿ ಎಲ್ಲಿಂದ ಬುಕ್ಕಿಂಗ್ ಮಾಡಿದರೆ ಸರಿಹೋದೀತು ನೋಡಿಕೊಳ್ಳಿ.
ನಿಮಗೆ ಈ ಎಲ್ಲಾ ವಿಷಯಗಳ ಐಡಿಯಾ ಮೊದಲೇ ಗೊತ್ತಿರುವುದರಿಂದ, ನೀವೇ ಖುದ್ದಾಗಿ ನಿಮ್ಮ ಟೂರ್ ಪ್ಲಾನ್ ಮಾಡುವುದು ಒಳ್ಳೆಯದು. ಇದರಿಂದ ನಿಮ್ಮ ಬಜೆಟ್ ಪರ್ಫೆಕ್ಟ್ ಕಂಟ್ರೋಲ್ ನಲ್ಲಿ ಇರುತ್ತದೆ.
ದಿಢೀರ್ ಪ್ಲಾನ್ ಮಾಡಿದಾಗ
ನಿಮ್ಮಿಬ್ಬರಿಗೂ ಈ ಹೊಸ ವರ್ಷದ ನೆಪದಲ್ಲಿ ದಿಢೀರ್ ಎಲ್ಲಾದರೂ ಪ್ರವಾಸ ಹೊರಡೋಣ ಎನಿಸಿದರೆ, ತಕ್ಷಣ ನೀವು ಟೂರ್ ಪ್ಯಾಕೇಜ್ ನ ನೆರವು ಪಡೆಯಿರಿ. ಇದರಿಂದ ನೀವು ಹೆಚ್ಚು ಓಡಾಡಬೇಕಾದ ಟೆನ್ಶನ್ ಇರುವುದಿಲ್ಲ, ಆರಾಮವಾಗಿ ಕುಳಿತಲ್ಲಿಯೇ ಬುಕ್ ಮಾಡಿಕೊಳ್ಳಬಹುದು. ಜೊತೆಗೆ ಆ ಟೂರ್ ಪ್ಲಾನರ್ ಎಲ್ಲವನ್ನೂ ನೀಟಾಗಿ ಮ್ಯಾನೇಜ್ ಮಾಡಿಕೊಳ್ಳುತ್ತಾನೆ. ಇಲ್ಲಿ ನೀವು ಲಗೇಜ್ ರೆಡಿ ಮಾಡಿಕೊಂಡು ಹೊರಡುವುದೊಂದೇ ಬಾಕಿ, ಉಳಿದ ಸಮಸ್ತ ಟೂರಿಂಗ್ ವಿಷಯದ ಜವಾಬ್ದಾರಿ ಅವರದ್ದೇ ಆಗಿರುತ್ತದೆ.
ಈ ರೀತಿ ದಿಢೀರ್ ಟೂರ್ ಪ್ಲಾನ್ ಮಾಡಿದರೂ ನಿಮಗೇನೂ ಕಷ್ಟವಾಗದು. ಇಂಥ ಟೂರ್ ಪ್ಲಾನಿಂಗ್ ನಲ್ಲಿ ನಿಮಗೆ ಹೆಚ್ಚಿನ ರಿಸ್ಕ್ ಇರದು, ಕಾಸಿಗೆ ತಕ್ಕ ಕಜ್ಜಾಯ ಎಂಬಂತೆ ನಿಮ್ಮ ಬಜೆಟ್ ಅನುಸಾರ ಪ್ಯಾಕೇಜ್ ತೆಗೆದುಕೊಂಡು ಆರಾಮವಾಗಿ ಹೊರಡುವುದಷ್ಟೇ ನಿಮ್ಮ ಕೆಲಸ. ಪ್ರಿಪೇಮೆಂಟ್ ಮಾಡಬೇಕಾದುದು ಅನಿವಾರ್ಯವಷ್ಟೆ. ನಿಮ್ಮ ಟೂರ್ ಪ್ಲಾನರ್ ಉಳಿದೆಲ್ಲ ಕೆಲಸವನ್ನೂ ಕುಳಿತ ಕಡೆಯಿಂದಲೇ ನಿಭಾಯಿಸುತ್ತಾರೆ.
ಒಮ್ಮೊಮ್ಮೆ ನಿಮ್ಮ ಫ್ರೆಂಡ್ಸ್ ಎಲ್ಲಾ ಸೇರಿ, ಕೇವಲ ಜೋಡಿ ಜೋಡಿಯಾಗಿ ಟೂರ್ ಹೊರಡುವ ಪ್ಲಾನ್ ಮಾಡಿದರೆ ಅದೂ ಚೆನ್ನಾಗಿರುತ್ತದೆ. ಇದಕ್ಕೆ ಬೇಕಾದ ಟೆಂಪೊ ಟ್ರಾವೆಲರ್ ನ್ನು ಮೊದಲೇ ಬುಕ್ ಮಾಡಿಕೊಂಡು ಇಂತಿಷ್ಟು ಜೋಡಿಗಳು ಹೊರಡುವುದು ಎಂದು ನಿರ್ಧರಿಸಿಕೊಳ್ಳಿ. ಅಲ್ಲಿಗೆ ಹೋದ ನಂತರ ಸಂಗಾತಿ ಜೊತೆ ನೀವು ನೀವೇ ಬೇಕಾದಂತೆ ಸುತ್ತಾಡಿ, ಪ್ರೈವೆಸಿ ಕಾಪಾಡಿಕೊಳ್ಳಬಹುದು. ನಂತರ ಹೋಟೆಲ್ ಗೆ ಬಂದು ಎಲ್ಲರೂ ಒಟ್ಟಾಗಿ ಊಟತಿಂಡಿ ಎಂದು ಎಂಜಾಯ್ ಮಾಡಬಹುದು. ನಂತರ ಅವರವರ ಕೋಣೆ ಪ್ರತ್ಯೇಕವಾಗಿ ಇದ್ದೇ ಇರುತ್ತದೆ, ಇದರಿಂದ ಪ್ರೈವೆಸಿಯ ಹನಿಮೂನ್ ಜೊತೆ ಗ್ರೂಪ್ ಗ್ಯಾದರಿಂಗ್ ಸಹ ಆಗುತ್ತದೆ!
ಮಲ್ಟಿಪಲ್ ಡೆಸ್ಟಿನೇಶನ್ಸ್ ಟೂರ್
ನೀವು ಒಟ್ಟೊಟ್ಟಿಗೆ 3-4 ಸ್ಥಳಗಳನ್ನು ನೋಡಬಯಸಿ, ಒಂದೊಂದೇ ಊರಿಗಾಗಿ ಬುಕ್ಕಿಂಗ್ ಮಾಡಿದರೆ ಅದು ದುಬಾರಿ ಆದೀತು. ಜೊತೆಗೆ ಮ್ಯಾನೇಜ್ ಮಾಡುವುದೂ ಕಷ್ಟವಾದೀತು. ಹೀಗಾಗಿ ಈ ಎಲ್ಲಾ ಊರುಗಳ ಒಂದೇ ಪ್ಯಾಕೇಜ್ ತೆಗೆದುಕೊಂಡರೆ, ಆಗ ಮ್ಯಾನೇಜ್ ಮಾಡುವುದೂ ಸುಲಭ, ಜೊತೆಗೆ ತುಸು ಅಗ್ಗವಾಗಿ ಮಲ್ಟಿಪಲ್ ಡೆಸ್ಟಿನೇಶನ್ಸ್ ನೋಡಬಹುದು.
ಇಂಥ ಟೂರ್ ಪ್ಯಾಕೇಜಿಂಗ್ ನಲ್ಲಿ ಇಂತಿಷ್ಟು ಊರುಗಳನ್ನು ಸುತ್ತಾಡುವ ಪ್ರೋಗ್ರಾಂ ಇರುವುದರಿಂದ, ಸಾಕಷ್ಟು ಅಗ್ಗದ ದರದಲ್ಲಿ ಇದರ ಲಾಭ ಪಡೆಯಬಹುದು. ಇದರ ಬದಲಿಗೆ ನೀವು ಬೇರೆ ಬೇರೆಯಾಗಿ ಈ ಊರುಗಳನ್ನು ಸುತ್ತಾಡಬಯಸಿದರೆ, ಸಾಕಷ್ಟು ಹೆಕ್ಟಿಕ್ ಆಗುವುದರ ಜೊತೆ, ಬಲು ದುಬಾರಿಯೂ ಆದೀತು.
ಹೀಗಾಗಿ ಮಲ್ಪಿಪಲ್ ಡೆಸ್ಟಿನೇಶನ್ಸ್ ಗಾಗಿ, ಟೂರ್ ಪ್ಯಾಕೇಜ್ ಬುಕ್ ಮಾಡುವುದೇ ಉತ್ತಮ. ಬಜೆಟ್ ನಿಮಗೆ ಹೊರೆಯಲ್ಲ ಎನಿಸಿದರೆ, ನೀವು ಖುದ್ದಾಗಿಯೇ ಟೂರ್ ಬುಕ್ ಮಾಡಿಕೊಳ್ಳಬಹುದು. ನೀವು ಖುದ್ದಾಗಿ ಬುಕ್ ಮಾಡುವುದರ ಲಾಭ ಎಂದರೆ, ನಿಮ್ಮ ಆಯ್ಕೆಯ ಕ್ರಮದಂತೆ ಊರುಗಳನ್ನೂ ಆರಿಸಿಕೊಳ್ಳಬಹುದು. ಆಗ ಎಲ್ಲಿ ತಂಗುವುದು, ಎಲ್ಲೆಲ್ಲಿ ಊಟತಿಂಡಿ ಎಂಬುದೆಲ್ಲ ನಿಮ್ಮ ಕಂಟ್ರೋಲ್ ನಲ್ಲೇ ಇರುತ್ತದೆ.
ಸೇಫ್ಟಿ ಎಂಡ್ ಕಮ್ಯುನಿಕೇಶನ್
ನೀವು ಭಾರತದ ಹೊರಗಿನ ವಿದೇಶ ಪ್ರವಾಸ ಬಯಸಿದರೆ, ನೀವಾಗಿ ಅಂಥ ಟೂರ್ ನ್ನು ಪ್ಲಾನ್ ಮಾಡುವ ರಿಸ್ಕ್ ತೆಗೆದುಕೊಳ್ಳುವ ಬದಲು, ಉತ್ತಮ ಸಂಸ್ಥೆಯಿಂದ ಟೂರ್ ಪ್ಯಾಕೇಜ್ ಬುಕ್ ಮಾಡಿಸಿ. ಇದರಿಂದ ಒಟ್ಟಿಗೆ ಹಲವಾರು ಜನರ ಜೊತೆ ವಿದೇಶಕ್ಕೆ ಹೊರಡುವುದರಿಂದ ಹೆಚ್ಚಿನ ಮಜಾ ಸಿಗುತ್ತದೆ. ಇದು ಸುರಕ್ಷತೆಯ ದೃಷ್ಟಿಯಿಂದಲೂ ಬಲು ಉತ್ತಮ! ಬದಲಿಗೆ ನೀವೇ ಪ್ರತ್ಯೇಕವಾಗಿ ಪ್ಲಾನ್ ಮಾಡಿದರೆ, ಸೇಫ್ಟಿ ದೃಷ್ಟಿಯಿಂದ ಸರಿಹೋಗುವುದಿಲ್ಲ. ಗೈಡ್ ಇಲ್ಲದೆ ಅಂಥ ಕಡೆ ಓಡಾಡುವುದು ಚೆನ್ನಾಗಿರೋಲ್ಲ. ಜೊತೆಗೆ ಅಲ್ಲಿ ಎಂಥ ಜನ ಎದುರಾಗುತ್ತಾರೋ ಏನೋ, ಎಲ್ಲ ನಮಗೆ ಹೈ ರಿಸ್ಕ್ ಆಗುತ್ತದೆ.
ಇದರ ಜೊತೆಗೆ ಇಂಥ ಟೂರ್ ಪ್ಯಾಕೇಜ್ ನಿಂದ ಕಮ್ಯುನಿಕೇಶನ್ ನಲ್ಲೂ ಯಾವುದೇ ತೊಂದರೆ ಎದುರಾಗದು. ಇಲ್ಲದಿದ್ದರೆ ನೀವು ಟೂರ್ ಎಂಜಾಯ್ ಮಾಡುವ ಬದಲು, ಅಲ್ಲಿನ ಭಾಷಾ ಸಮಸ್ಯೆ ಸರಿತೂಗಿಸುವುದೇ ದೊಡ್ಡ ಹೊರೆಯಾದೀತು. ಇದರಿಂದ ಕಿರಿಕಿರಿ ತಪ್ಪಿದ್ದಲ್ಲ. ಹ್ಯಾಪಿ ಹನೀಮೂನ್ ವಿತ್ ಹ್ಯಾಪಿ ನ್ಯೂ ಇಯರ್!
– ಪಾರ್ವತಿ ಭಟ್