ವ್ಯಾಲೆಂಟೈನ್ಸ್ ಡೇ ಆಚರಿಸಲು ಫೆಬ್ರವರಿ 14ರ ಮುಹೂರ್ತಕ್ಕೇ ಏಕೆ ಕಾಯಬೇಕು? ಇದನ್ನು ನಿಮ್ಮ ಸಂಗಾತಿ ಜೊತೆ ನೀವಿಬ್ಬರೂ ಫ್ರೀ ಆಗಿರುವಾಗ ವರ್ಷದ ಯಾವ ದಿನವಾದರೂ ಆಚರಿಸಬಹುದಲ್ಲಲೇ…..?
`ವ್ಯಾಲೆಂಟೈನ್ಸ್ ಡೇ’ ಆಚರಿಸಬೇಕೋ ಬೇಡವೋ ಎಂಬ ಆತಂಕ ಹಲವರನ್ನು ಕಾಡುವುದುಂಟು. ನೈತಿಕ ಪೊಲೀಸರಾಗಿರುವ ಭಗವಾ ಗ್ಯಾಂಗ್, ಪಾರ್ಕಿನಲ್ಲಿ ಯಾವುದೋ ಗುಂಗಿನಲ್ಲಿ ಕುಳಿತಿರುವ ಇಂಥ ಯುವ ಜೋಡಿಯನ್ನು ದಿಢೀರ್ ಎಂದು ಆಕ್ರಮಿಸಿ, ಎಳೆತಂದು ಮದುವೆ ಮಾಡಿಸಿದ ಪ್ರಕರಣಗಳೂ ಉಂಟು! ವ್ಯಾಲೆಂಟೈನ್ಸ್ ಡೇ ಆಚರಣೆ ಇರುವುದೇ ಸಂಗಾತಿಗಳ ಪರಸ್ಪರ ಪ್ರೇಮ ನಿವೇದನೆಗಾಗಿ. `ಪ್ರೇಮ’ ಎಂದರೆ ಅದು ಹೃದಯಾಂತರಾಳದಿಂದ ಬರುವ ಕೋಮಲ ಭಾವನೆ. ಅದನ್ನು ವ್ಯಕ್ತಪಡಿಸಲು ಅದರ ಪ್ರದರ್ಶನ ಅಥವಾ `ಸ್ಪೆಷಲ್ ಡೇ’ ಅಗತ್ಯವೇ! ನಮ್ಮಲ್ಲಿ ಎಷ್ಟೋ ವಿಧದ ಹಬ್ಬಗಳಿವೆ, ಆದರೆ ಪ್ರೇಮ ನಿವೇದನೆಗಾಗಿ ಅದರಲ್ಲಿ ಒಂದಾದರೂ ಬೇಡವೇ?
ನಮ್ಮ ಸಮಾಜ ಹಬ್ಬಗಳನ್ನು ಹೇಗೆ ರೂಪಿಸಿದೆ ಎಂದರೆ, ಅದರಲ್ಲಿ ಪೂಜೆ ಪುನಸ್ಕಾರಗಳು, ಸಂಪ್ರದಾಯದ ಜಂಜಾಟಗಳೇ ಜಾಸ್ತಿ ಆಗಿವೆ. ಪತಿ ಪತ್ನಿ ಅಥವಾ ಪ್ರೇಮಿಗಳು ಪರಸ್ಪರ ಗಮನಿಸಿಕೊಳ್ಳುವಂಥ ಒಂದಾದರೂ ಹಬ್ಬ ಬೇಡವೇ? ಹೀಗಾಗಿಯೇ ವಿಶ್ವಾದ್ಯಂತ ಮಕ್ಕಳಿಂದ ಮುದುಕರವರೆಗೂ ವ್ಯಾಲೆಂಟೈನ್ಸ್ ಡೇ ಹಬ್ಬವನ್ನು ಪ್ರೇಮ ಪ್ರೀತಿ ವ್ಯಕ್ತಪಡಿಸಲೆಂದೇ ಸಂಭ್ರಮದಿಂದ ಆಚರಿಸುತ್ತಾರೆ.
ಈ ರೀತಿ ಪ್ರೇಮ ಪ್ರದರ್ಶನಕ್ಕೂ ಇಬ್ಬರಿಗೂ ಸಮಯ ಬೇಕಲ್ಲವೇ? ಇಂದಿನ ಯಾಂತ್ರಿಕ ಓಡುಯುಗದಲ್ಲಿ ಯಾರ ಬಳಿಯಲ್ಲಾದರೂ ಯಾವುದಕ್ಕಾದರೂ ಪುರಸತ್ತು ಇದ್ದರೆ ತಾನೇ? ಹೀಗಾಗಿಯೇ ಪರಸ್ಪರರಿಗಾಗಿ ಸಮಯ ಕೊಟ್ಟುಕೊಂಡು, ಇಡೀ ದಿನ ಪ್ರೀತಿ ಪ್ರೇಮದಲ್ಲಿ ಮುಳುಗಿ ಹೋಗಲೆಂದೇ ವ್ಯಾಲೆಂಟೈನ್ಸ್ ಡೇ ಆಚರಣೆ ಸಮರ್ಪಿತವಾಗಿದೆ. ಆ ಕಾರಣಕ್ಕಾಗಿಯೇ ಈ ದಿನ ಎಲ್ಲರಿಗೂ ಅತಿ ವಿಶಿಷ್ಟ, ಡೆಡಿಕೇಟೆಡ್ ಟು ಪಾರ್ಟ್ ನರ್ ಎಂದಾಗಿದೆ!
ನಾವು ಸಾವಿರಾರು ವಿಷಯಗಳಲ್ಲಿ ಪಾಶ್ಚಿಮಾತ್ಯರನ್ನು ಅನುಕರಿಸುತ್ತೇವೆ, ಹಾಗಿರುವಾಗ ಸಂಗಾತಿಗಾಗಿ ಸಮಯ ನೀಡುವ, ಸಮರ್ಪಣಾ ಮನೋಭಾವದ ಈ ಹಬ್ಬ ಏಕೆ ಬೇಡ? ಹೊಸ ಪೀಳಿಗೆಯವರು ಇದಕ್ಕಾಗಿ ವಿಶೇಷವಾಗಿ ಈ ದಿನ ಆಚರಿಸಿಕೊಂಡು, ತಮ್ಮ ಎಂದಿನ ವ್ಯವಹಾರ ಮರೆತು, ಒಬ್ಬರಿಗಾಗಿ ಒಬ್ಬರು ಎಂದು ಕೈ ಕೈ ಹಿಡಿದು ಓಡಾಡುವುದು ಹೇಗೆ ತಪ್ಪಾದೀತು?
ಪ್ರೇಮ ನಿವೇದನೆ
ಇಲ್ಲಿನ ಒಂದು ಸ್ವಾರಸ್ಯಕರ ಘಟನೆ ಗಮನಿಸೋಣ. ಹೊಸ ಪೀಳಿಗೆಯ ಹಠಕ್ಕೆ ಮಣಿದು ಹಳೆಯ ಪೀಳಿಗೆ ಸಹ ಹೇಗೆ ವ್ಯಾಲೆಂಟೈನ್ಸ್ ಡೇ ಆಚರಣೆಗೆ ಸಿದ್ಧವಾಯಿತು ಎಂದು ತಿಳಿಯೋಣ. ಇದು ವಿದೇಶೀ ಮೂಲದ ಹಬ್ಬ ಎಂಬ ಒಂದೇ ಕಾರಣಕ್ಕೆ ಮೂಗು ಮುರಿಯದೆ, ಪ್ರೇಮ ನಿವೇದನೆಯ ಈ ದಿನವನ್ನು ಯಾವ ವಯಸ್ಸಿನವರಾದರೂ ಸರಿ, ಎಲ್ಲರೂ ಎಂಜಾಯ್ ಮಾಡಬೇಕು.
ಅಂದು ಬೆಳಗ್ಗಿನಿಂದಲೇ ಅನನ್ಯಾ ಕನ್ನಡಿ ಎದುರು ನಿಂತು ಸಂಜೆಗೆ ತಾನು ಯಾವ ಡ್ರೆಸ್ ಧರಿಸಲಿ ಎಂದು ವಾರ್ಡ್ ರೋಬ್ ನಲ್ಲಿದ್ದ ಎಲ್ಲಾ ಡ್ರೆಸ್ ಗಳನ್ನೂ ಎಳೆದೆಳೆದು ಮೈ ಮೇಲೆ ಹಾಕಿಕೊಂಡು ಗಮನಿಸುತ್ತಿದ್ದಳು.
`ಇದು ಬೇಡ…. ಇದು ಸರಿಯಲ್ಲ…. ಇದು ಓಲ್ಡ್ ಡಿಸೈನ್….’ ಎನ್ನುತ್ತಲೇ ಹಲವನ್ನು ಬದಿಗೆ ಸರಿಸಿದಳು. ಏನೇ ಆದರೂ ಯಾವುದೂ ಅವಳಿಗೆ ಹೆಚ್ಚಿನ ತೃಪ್ತಿ ನೀಡಲ್ಲಿಲ.
ಮಗಳ ಈ ಸಂಭ್ರಮವನ್ನು ಗಮನಿಸುತ್ತಿದ್ದ ಸುನಂದಾ, ಇದೆಲ್ಲ ಇವಳು ಸಂಜೆ ಸೌರವ್ ಜೊತೆ ವ್ಯಾಲೆಂಟೈನ್ ಡೇ ಪಾರ್ಟಿಗಾಗಿ ನಡೆಸುತ್ತಿರುವ ಹುಚ್ಚಾಟದ ತಯಾರಿ ಎಂದು ಗುರುತಿಸಿದರು. ಮದುವೆ ಫಿಕ್ಸ್ ಆಗಿದ್ದೇನೋ ಸರಿ, ಅದಕ್ಕಿಂತ ಮಗಳು ಹೀಗೆ ಫಿಯಾನ್ಸಿ ಜೊತೆ ಸದಾ ಸುತ್ತಾಡುವುದು ಇವರಿಗೆ ಬಿಲ್ ಕುಲ್ ಇಷ್ಟ ಆಗುತ್ತಿರಲಿಲ್ಲ.
ಅನನ್ಯಾ ಮೆಚ್ಚಿದ ಹುಡುಗ ಎಂಬ ಒಂದೇ ಕಾರಣಕ್ಕೆ ಈ ಹಿರಿಯ ದಂಪತಿ ಅವನನ್ನು ಅಳಿಯನನ್ನಾಗಿ ಸ್ವೀಕರಿಸಲು ಸಿದ್ಧರಾದರು. ಇದೆಲ್ಲ ಯಾಕೋ ಅತಿ ಆಯಿತೆಂದು ಮಗಳನ್ನು ತಡೆಯುತ್ತಾ, “ನಿನ್ನಿಷ್ಟದಂತೆಯೇ ಮದುವೆ ನಡೆಯುತ್ತಿದೆ. ಹಾಗಿರುವಾಗ ಇದೆಲ್ಲ ಹೀಗೆ ಊರು ಸುತ್ತುವುದು ಏನು ಚೆಂದ?” ಎಂದು ಗೊಣಗಿದರು.
“ನಿಮ್ಮಂಥವರಿಗೆ ಇದೆಲ್ಲ ಅರ್ಥ ಆಗಲ್ಲಮ್ಮ, ಇದು ನಮ್ಮ ಆಧುನಿಕ ಪೀಳಿಗೆಯ ಫಂಡಾ. ಅದು ಸರಿ, ನಿಮ್ಮ ಕಾಲದಲ್ಲಿ ಪರಸ್ಪರ ನೀವು ಯಾರಿಗೆ ಯಾರು ಪ್ರಪೋಸ್ ಮಾಡಿದ್ದಿರಿ?”
ಮಗಳ ಮಾತು ಅವರಿಗೆ ಸ್ವಲ್ಪ ಸರಿ ಬರಲಿಲ್ಲ. ಅವರು ಅದಕ್ಕೆ ತುಸು ಸಿಡುಕುತ್ತಾ, “ನಿಮ್ಮ ಹಾಗಲ್ಲವೇ ನಮ್ಮ ಕಾಲ….. ಪ್ರಪೋಸ್ ಗಿಪೋಸ್ ಇರಲಿ, ಹುಡುಗ ಹುಡುಗಿ ಮಾತನಾಡುವುದಕ್ಕೂ ಆಗ ಅವಕಾಶ ಇರಲಿಲ್ಲ. ಇವರು ನಮ್ಮ ತಂದೆಗೆ ಸೋದರತ್ತೆಯ ಕಡೆ ದೂರದ ನೆಂಟರು. ನೋಡಿ ಒಪ್ಪಿಗೆ ಆದ ಮೇಲೆ ಹಿರಿಯರು ನಿಶ್ಚಯಿಸಿದಂತೆ ಬೇಗ ಬೇಗ ಲಗ್ನಪತ್ರಿಕೆ, ಮದುವೆ ಮುಹೂರ್ತ ಫಿಕ್ಸ್ ಆಯಿತು.
“ಹಾಗೇಂತ ನಾವೇನೂ ಈಗ ನೆಮ್ಮದಿಯಾಗಿಲ್ಲವೇ? ಮದುವೆಯಾಗಿ 25 ವರ್ಷಕ್ಕೂ ಮೇಲಾಯಿತು. ಪರಸ್ಪರರನ್ನು ಅರಿತಿದ್ದೇವೆ, ಅನ್ಯೋನ್ಯವಾಗಿ ನಡೆದುಕೊಂಡು ಹೋಗುತ್ತಿದ್ದೇವೆ. ಐ ಲವ್ ಯೂ, ಕಾರ್ಡ್ ಕೊಡೋದು, ಹೂ ಕೊಡೋದು…. ಇದೆಲ್ಲ ನಮಗೇಕೆ ಬೇಕು? ಪರಸ್ಪರರ ಭಾವವೆಗಳನ್ನು ಅರ್ಥ ಮಾಡಿಕೊಂಡು ಗೌರವಿಸಿದರೆ ಬೇಕಾದಷ್ಟಾಯಿತು. ಇದುವೇ ನಮ್ಮ ಅರ್ಥದಲ್ಲಿ ನಿಜವಾದ ಪ್ರೀತಿ ಪ್ರೇಮ!”
“ಅಯ್ಯೋ….. ನೀನು ಬಿಡಮ್ಮ, ಎಲ್ಲದಕ್ಕೂ ಒಂದು ಲೆಕ್ಚರ್ ಶುರು ಮಾಡಿಬಿಡ್ತೀಯಾ! ನಾವಿಬ್ಬರೂ ಇಂದು ನೀನು ಅಪ್ಪ ನಮ್ಮ ಜೊತೆ ವ್ಯಾಲೆಂಟೈನ್ಸ್ ಡೇ ಆಚರಿಸಬೇಕೆಂದು ಪ್ಲಾನ್ ಮಾಡಿದ್ದೇವೆ. ಇವತ್ತು ಸೌರವ್ ನನ್ನು ಸಂಜೆಯ ಪಾರ್ಟಿಗೆ ಮನೆಗೂ ಕರೆದಿದ್ದೇನೆ. ಎಲ್ಲರೂ ಸೇರಿ ಮನೆಯಲ್ಲೇ ಪಾರ್ಟಿ ಮಾಡೋಣ!”
ಸಂಬಂಧಗಳು ಸುಲಲಿತಾಗಲು
ಇದಕ್ಕೆ ಸುನಂದಾ ಎಷ್ಟೇ ಬೇಡವೆಂದರೂ, ಮಗಳು ಅವರನ್ನು ಬಲವಂತವಾಗಿ ಒಪ್ಪಿಸಿದಳು. ಈ ನೆಪದಲ್ಲಿ ಮಗಳು ಮನೆಯಲ್ಲೇ ಉಳಿಯುತ್ತಾಳೆ ಎಂದು ಅವರಿಗೆ ಸಮಾಧಾನವಾಯಿತು. ಅಜ್ಜಿ ಸಹ ತಮ್ಮೊಂದಿಗೆ ಪಾರ್ಟಿಯಲ್ಲಿರಲಿ ಎಂದಳು ಅನನ್ಯಾ. ಆದರೆ ಮಾವನವರು ಕೋವಿಡ್ ನಲ್ಲಿ 3-4 ತಿಂಗಳ ಹಿಂದಷ್ಟೇ ತೀರಿಕೊಂಡ್ದಿರು. ಆದರೆ ಅನನ್ಯಾ ಅಜ್ಜಿ ಪಾರ್ಟಿಯಲ್ಲಿ ಭಾಗವಹಿಸುವಂತೆ ಬಲವಂತ ಮಾಡಿ ಒಪ್ಪಿಸಿದಳು. ಅಜ್ಜಿ ಕೊನೆಗೂ ಒಪ್ಪಿದರು.
ಪ್ರಶ್ನಾರ್ಥಕವಾಗಿ ತಮ್ಮತ್ತ ತಿರುಗಿದ ಸೊಸೆಗೆ ಅವರು, ಹೊಸ ಪೀಳಿಗೆಯವರ ಮಾತನ್ನು ಕೆಲವೊಮ್ಮೆ ಒಪ್ಪಿದರೇನೇ ಜನರೇಶನ್ ಗ್ಯಾಪ್ ಪ್ರಾಬ್ಲಂ ಸರಿ ಹೋಗೋದು ಎಂದು ಸಮಾಧಾನ ಹೇಳಿದರು.
ಸರಿ, ಸಂಜೆ ಎಲ್ಲರೂ ಪಾರ್ಟಿಯಲ್ಲಿ ಭಾಗವಹಿಸಿ, ತಮ್ಮ ಪ್ರತಿಭೆಗನುಸಾರ ಏನಾದರೂ ಮಾಡುವುದು ಎಂದು ತೀರ್ಮಾನಿಸಿದರು. ಸಂಜೆ ಸೌರವ್ ಬಂದ ನಂತರ ಮನೆಯ ಒಪ್ಪಓರಣ, ಹೂಗಳು ಕಲರ್ ಪೇಪರ್ ನಿಂದ ಅಲಂಕಾರ, ಬೆಲೂನ್ ಕಟ್ಟಿದ್ದು, ಪಾನಿಪೂರಿ, ಐಸ್ ಕ್ರೀಂ ಮತ್ತಿತರ ಪಾರ್ಟಿ ಐಟಂ ರೆಡಿ ಮಾಡಿದರು. ಅಂತೂ ಅವರ ಕೆಲಸದಲ್ಲಿ ಅತಿ ಹೆಚ್ಚಿನ ಸಡಗರ, ಸಂತಸ ತುಂಬಿತ್ತು.
ಇವರ ಈ ಸಡಗರ, ಸಂಭ್ರಮ ಗನಿಸಿದ ಸುನಂದಾ, ಇಂಥ ಶ್ರದ್ಧೆ ಆಸಕ್ತಿ ಇವರಿಗೆ ನಮ್ಮ ಹಬ್ಬಗಳ ಆಚರಣೆಯಲ್ಲಿ ಯಾಕಿಲ್ಲ ಅಂದುಕೊಂಡರು.
ಪರಸ್ಪರರಿಗಾಗಿ ಸಮರ್ಪಣೆ
ಮಗಳ ಒತ್ತಾಸೆಯಂತೆ ಸುನಂದಾ ಪತಿಗೆ ಗುಲಾಬಿ ಹೂ ನೀಡಿ, ಹ್ಯಾಪಿ ವ್ಯಾಲೆಂಟೈನ್ಸ್ ಡೇ, ಹೇಳಿದರು. ಅವರೂ ಅಷ್ಟೇ ಸಂತೋಷವಾಗಿ ಅದನ್ನು ಸ್ವೀಕರಿಸಿ, ಮಡದಿಗೊಂದು ಸುಂದರ ಉಡುಗೊರೆ ನೀಡಿದರು. ಆ ದೃಶ್ಯ ನೋಡಲು ಅತಿ ರಮ್ಯವಾಗಿತ್ತು. `ಐ ಲವ್ ಯೂ!’ ಹೇಳುವಂತೆ ಅನನ್ಯಾ ಅಮ್ಮನನ್ನು ಒತ್ತಾಯಿಸಿದಳು, “ಅದನ್ನು ನೀವಿಬ್ಬರೇ ಹೇಳಿಕೊಳ್ಳಿ… ಕೇಳಿ ನಾವು ಸಂತೋಷಿಸುತ್ತೇವೆ,” ಎಂದು ಹಿರಿಯರು ಹೇಳಿದಾಗ, ಅನನ್ಯಾ ಸೌರವ್ ಹಾಗೇ ಮಾಡಿ, ಹಿರಿಯರೆದುರೇ ಅಪ್ಪಿಕೊಂಡು, ತಮ್ಮ ಪ್ರೀತಿ ಹಂಚಿಕೊಂಡರು.
ಹೀಗೆ ಅವರ ಮನೆಯಲ್ಲಿ ಪಾರ್ಟಿ ರಂಗೇರಿತು. “ಈಗ ಅಜ್ಜಿ, ತಾತನ ನೆನಪಲ್ಲಿ ಒಂದು ಭಾವಗೀತೆ ಹಾಡಬೇಕು,” ಎಂದು ಅನನ್ಯಾ ಒತ್ತಾಯಿಸಿದಳು. `ದೀಪವೂ ನಿನ್ನದೇ…. ಗಾಳಿಯೂ ನಿನ್ನದೇ…. ಆರದಿರಲಿ ಬೆಳಕು….’ ಕೆ.ಎಸ್. ನರಸಿಂಹ ಸ್ವಾಮಿಯವರ `ಮೈಸೂರು ಮಲ್ಲಿಗೆ’ಯ ಕವನ ಸಂಕಲನದಿಂದ ಅಜ್ಜಿ ಈ ಹಾಡನ್ನು ಆಯ್ದು ಹಾಡಿದಾಗ, ಅವರ ಶಾರೀರಕ್ಕೆ ಎಲ್ಲರೂ ಬೆರಗಾದರು.
ಅದಾದ ನಂತರ ಸುನಂದಾ ಪತಿ ಜೊತೆಗೂಡಿ, `ಬಹು ಜನ್ಮದ ಪೂಜಾಫಲ…. ಈ ಪ್ರೇಮ ಸಮ್ಮಿಲನ…..’ ಹಾಡಿದಾಗ ಎಲ್ಲರೂ ಸಂತಸದಿಂದ ತಲೆದೂಗಿದರು. ನಂತರ ಅನನ್ಯಾ ಸೌರವ್ ಹಲವಾರು ಹೊಸ ಚಿತ್ರಗೀತೆಗಳನ್ನು ಹಾಡಿ ರಂಜಿಸಿದರು.
ಜೀವನದ ಆಧಾರ ಪ್ರೇಮ `ಆ ದೇವರೇ ನುಡಿದ ಮೊದಲ ನುಡಿ….. ಪ್ರೇಮ…. ಪ್ರೇಮ…. ಪ್ರೇಮ….. ಒಂದೇ ಹೊನ್ನುಡಿ,’
`ಲವ್ ಎಂದರೆ… ಯಾರೂ ಅರಿಯದ ಬಂಧನ…. ಮಧುರ ಗಾನ….’ `ಪ್ರೀತಿಯೇ ನನ್ನುಸಿರು…. ಪ್ರೇಮವೇ ನನ್ನುಸಿರು…. ಚಿನ್ನ ಬೆಳ್ಳಿ ವಜ್ರ ಕೆಂಪು ಮುತ್ತು ಹವಳ…. ಸುಖ ನೀಡುವುದೇ….’ `ಪ್ರೀತಿ ಪ್ರೇಮಾ ನನ್ನುಸಿರು… ನ್ಯಾಯ ನೀತಿ ನನ್ನುಸಿರು….’ `ಗಗನವು ಎಲ್ಲೋ…. ಭೂಮಿಯು ಎಲ್ಲೋ…. ಒಂದೂ ಅರಿಯೇ ನಾ….,’ `ಪ್ರೇಮ ಲೋಕದಿಂದ ಬಂದ ಪ್ರೇಮದ ಸಂದೇಶ….’ `ಪ್ರೀತಿ ಮಾಡಬಾರದು…. ಮಾಡಿದರೆ ಜಗಕೆ ಹೆದರಬಾರದು….’ ಹೀಗೆ ಹಲವಾರು ಹಾಡುಗಳು ಹಿರಿಕಿರಿಯ ಜೋಡಿಗಳಿಂದ ಪುಂಖಾನುಪುಂಖವಾಗಿ ಹರಿದು ಬರಲು ಎಲ್ಲರೂ ಆನಂದ ಸಾಗರದಲ್ಲಿ ತೇಲಿಹೋದರು. ಹೀಗೆ ವಯಸ್ಸಿನ ಹಂಗಿಲ್ಲದೆ ಸುನಂದಾ ಅನಿಲ್ ಸಹ ಭಾವಾವೇಶದಲ್ಲಿ ಪರಸ್ಪರ ತಮ್ಮ ಪ್ರೀತಿಪ್ರೇಮ ವ್ಯಕ್ತಪಡಿಸುವುದರಲ್ಲಿ ಹಿಂದುಳಿಯಲಿಲ್ಲ. ಕಿರಿಯ ಜೋಡಿಯ ಪ್ರೋತ್ಸಾಹದಿಂದ ಇವೆಲ್ಲ ಸಾಧ್ಯವಾಯಿತು.
ಜೀವನ ಇರುವುದೇ ಖುಷಿಪಡಲು
ಹೀಗೆ ಸಂಗೀತ ಗೋಷ್ಠಿ ಮುಗಿದ ನಂತರ ಅನಿಲ್ ಸಹ ಬಲು ಅನುರಾಗದಿಂದ, ತಾವು ಆಫೀಸಿನಿಂದ ಬರುವಾಗಲೇ ತಂದಿದ್ದ ಮಲ್ಲಿಗೆ ಹಾರವನ್ನು ಮಡದಿಯ ತಲೆಗೆ ಮುಡಿಸಿದರು. ಇದರಿಂದ ಸುನಂದಾ ಈ ಸಮಯದಲ್ಲೂ ಬಹಳ ನಾಚಿಕೊಂಡರು. ಕಿರಿಯ ಜೋಡಿ ಇವರಿಬ್ಬರನ್ನು ಬಹಳ ಕೀಟಲೆ ಮಾಡಿ ಸಂತೋಷಪಟ್ಟರು.
ನಂತರ ಅನನ್ಯಾಳ ಮುಂದೆ ಮಂಡಿಯೂರಿ, ಸಿನಿಮಾಗಳಲ್ಲಿ ತೋರಿಸುವಂತೆ, ಸೌರವ್ ಅವಳಿಗೆ ಕೆಂಪು ಗುಲಾಬಿ ಜೊತೆ, ವಜ್ರದುಂಗುರ ನೀಡುತ್ತಾ, `ಲವ್ ಯೂ…. ವಿಲ್ ಯೂ ಮ್ಯಾರಿ ಮೀ?’ ಎಂದಾಗ, ಅವನ ಹಸ್ತ ಚುಂಬಿಸಿ, ಅವನೊಂದಿಗೆ ನರ್ತನಕ್ಕೆ ಹೆಜ್ಜೆ ಹಾಕಿದಳು ಅನನ್ಯಾ.
ಒಟ್ಟಾರೆ ಅಂದು ವ್ಯಾಲೆಂಟೈನ್ಸ್ ಡೇ ವಿಭಿನ್ನ ರೀತಿಯಲ್ಲಿ ಆಚರಿಸಲ್ಟಟ್ಟಿತು. ನಂತರ ತಾಯಿಮಗಳು ಎಲ್ಲರಿಗೂ ಪ್ಲೇಟ್ ಗಳಲ್ಲಿ ತಿಂಡಿತೀರ್ಥ ಒದಗಿಸಿದರು. ಎಲ್ಲರೂ ಸೊಗಸಾಗಿ ಎಂಜಾಯ್ ಮಾಡುತ್ತಾ, ಒಂದಿಷ್ಟು ಹೆಚ್ಚೇ ಸವಿದರು. ಹ್ಯಾಪಿ ವ್ಯಾಲೆಂಟೈನ್ಸ್ ಡೇ!
– ಜಿ. ಅರ್ಚನಾ