- ರಾಘವೇಂದ್ರ ಅಡಿಗ ಎಚ್ಚೆನ್.

ಇಷ್ಟು ವರ್ಷಗಳ ಕಾಲ ನಾಪತ್ತೆಯಾಗಿದ್ದ ದರ್ಶನ್ ಅವರ ಮಾಜಿ ಮ್ಯಾನೇಜರ್ ಮಲ್ಲಿಕಾರ್ಜುನ ಇದೀಗ ಅಚ್ಚರಿ ರೀತಿಯಲ್ಲಿ ಹೊರಬಂದು ತಮ್ಮ ಜೀವನದ ಕಹಿ ಸತ್ಯಗಳನ್ನು ಬಹಿರಂಗಪಡಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಲ್ಲಿಕಾರ್ಜುನ, “ನನ್ನಿಂದ ಹಲವರಿಗೆ ನೋವಾಗಿದೆ, ಎಲ್ಲರಿಗೂ ಕ್ಷಮೆ ಕೇಳುತ್ತೇನೆ” ಎಂದು ಭಾವುಕರಾಗಿ ಮಾತು ಆರಂಭಿಸಿದರು. ಇಂಜಿನಿಯರಿಂಗ್ ಮುಗಿಸಿದ ಬಳಿಕ ಸಹಾಯಕ ನಿರ್ದೇಶಕರಾಗಿ ಕೆಲಸ ಆರಂಭಿಸಿ, ಬಳಿಕ ದರ್ಶನ್ ಅವರ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದಾಗಿ ಅವರು ವಿವರಿಸಿದರು.
ಚಿತ್ರ ನಿರ್ಮಾಣ, ಡಿಸ್ಟ್ರಿಬ್ಯೂಷನ್ ಹಾಗೂ ಹೋಟೆಲ್ ಉದ್ಯಮ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಪ್ರಯತ್ನಿಸಿದರೂ ಯಾವುದೂ ಕೈ ಹಿಡಿಯಲಿಲ್ಲ ಎಂದು ಅವರು ಹೇಳಿದ್ದಾರೆ. ಈ ನಡುವೆ ಭಾರೀ ಸಾಲದ ಹೊರೆ ತಲೆಮೇಲೆ ಬಿದ್ದಿದ್ದು, ಜೀವನದಲ್ಲಿ ನಿರಾಶೆಗೊಂಡು ಆತ್ಮಹತ್ಯೆಯ ಯೋಚನೆಗೂ ಬಂದಿದ್ದಾಗಿ ಒಪ್ಪಿಕೊಂಡಿದ್ದಾರೆ. ಆದರೆ ಕೊನೆಯ ಕ್ಷಣದಲ್ಲಿ ಆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
ಕುಂದಾಪುರದಿಂದ ಹೊರಟು ಸವದತ್ತಿ, ಕೊಲ್ಲಾಪುರ, ಸೊಲ್ಲಾಪುರ ಸೇರಿದಂತೆ ಉತ್ತರ ಭಾರತದ ಅನೇಕ ಪ್ರದೇಶಗಳಲ್ಲಿ ತಿರುಗಾಡಿ, ಹೋಟೆಲ್ ಹಾಗೂ ರೆಸಾರ್ಟ್‌ಗಳಲ್ಲಿ ಸಣ್ಣಪುಟ್ಟ ಕೆಲಸಗಳನ್ನು ಮಾಡಿಕೊಂಡು ಬದುಕು ಸಾಗಿಸಿದ್ದಾಗಿ ತಿಳಿಸಿದ್ದಾರೆ. ಕೆಲಕಾಲ ನೇಪಾಳದಲ್ಲೂ ಸ್ನೇಹಿತನ ಹೋಟೆಲ್‌ನಲ್ಲಿ ಕೆಲಸ ಮಾಡಿದ ಅನುಭವವನ್ನು ಹಂಚಿಕೊಂಡಿದ್ದಾರೆ.
“ನಾನು ಬದುಕಿದ್ದೀನಿ ಅಂತ ಹೆಂಡತಿಗೂ, ತಾಯಿಗೂ ಪತ್ರ ಬರೆದಿದ್ದೆ. ಆದರೆ ತಂದೆ-ತಾಯಿ ನಿಧನವಾದಾಗ ಬರುವಂತಾಗಲಿಲ್ಲ. ಒಂದು ಹಿಡಿ ಮಣ್ಣು ಹಾಕಲೂ ಆಗಿಲ್ಲ ಎಂಬ ನೋವು ಇಂದಿಗೂ ಕಾಡುತ್ತಿದೆ” ಎಂದು ಮಲ್ಲಿಕಾರ್ಜುನ ಕಣ್ಣೀರಿಟ್ಟರು.
ಕಳೆದ ವರ್ಷ ದರ್ಶನ್ ಸಹೋದರ ದಿನಕರ್ ಅವರನ್ನು ಭೇಟಿ ಮಾಡಿದಾಗ ಮತ್ತೆ ದರ್ಶನ್ ಅವರನ್ನು ಭೇಟಿಯಾಗಬೇಕೆಂದು ಯೋಚಿಸಿದ್ದರೂ, ಅಚಾನಕ್ ಪಾರ್ಶ್ವವಾಯು ಬಂದು ಏಳು ತಿಂಗಳು ಬೆಡ್‌ರೆಸ್ಟ್ ಆಗಬೇಕಾಯಿತು ಎಂದು ಹೇಳಿದ್ದಾರೆ. ಚೇತರಿಸಿಕೊಂಡ ಬಳಿಕ ಕೆಲವು ತಿಂಗಳ ಹಿಂದೆ ಮರಳಿ ಬಂದು, ತಾನು ಸಾಲ ಪಡೆದವರನ್ನು ಭೇಟಿಯಾಗಿ “ಸೋತಿದ್ದೇನೆ, ಸತ್ತಿಲ್ಲ” ಎಂದು ಹೇಳಿದ್ದಾಗಿ ತಿಳಿಸಿದ್ದಾರೆ.
ದರ್ಶನ್ ಬಳಿ ಸುಮಾರು 1 ಕೋಟಿ ರೂಪಾಯಿ ಸಹಾಯ ಪಡೆದಿದ್ದಾಗಿ ಒಪ್ಪಿಕೊಂಡ ಮಲ್ಲಿಕಾರ್ಜುನ, “ನಾನು ಅವರಿಗೆ ಮೋಸ ಮಾಡಿಲ್ಲ. ಕಷ್ಟದಲ್ಲಿ ಹಣ ಕೇಳಿದ್ದೇ ಹೊರತು ಮತ್ತೆ ಹಣ ಕೇಳಲು ಮನಸ್ಸು ಬರಲಿಲ್ಲ. ಅವರ ಮೇಲಿನ ಗೌರವವೇ ನನ್ನನ್ನು ದೂರವಿಟ್ಟಿತು” ಎಂದು ಹೇಳಿದ್ದಾರೆ.
ಈಗ ತನ್ನ ಜೀವನವನ್ನು ಮತ್ತೆ ಸರಿಪಡಿಸಿಕೊಳ್ಳಲು ಮುಂದಾಗಿರುವ ಮಲ್ಲಿಕಾರ್ಜುನ, ಹಳೆಯ ತಪ್ಪುಗಳನ್ನು ಒಪ್ಪಿಕೊಂಡು ಹೊಸ ಆರಂಭದತ್ತ ಹೆಜ್ಜೆ ಇಡಲು ಸಿದ್ಧನಾಗಿದ್ದಾನೆ.

आगे की कहानी पढ़ने के लिए सब्सक्राइब करें

ಡಿಜಿಟಲ್

(1 साल)
USD10
 
ಸಬ್ ಸ್ಕ್ರೈಬ್ ಮಾಡಿ

ಡಿಜಿಟಲ್ + 12 ಪ್ರಿಂಟ್ ಮ್ಯಾಗಜೀನ್

(1 साल)
USD79
 
ಸಬ್ ಸ್ಕ್ರೈಬ್ ಮಾಡಿ
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ