ಬಹುಭಾಷಾ ತಾರೆ ಪ್ರಿಯಾ ಆನಂದ್ ಮತ್ತೆ ಕನ್ನಡಕ್ಕೆ ಬಂದಿದ್ದಾರೆ. ಈ ಹಿಂದೆ ಪುನೀತ್ ರಾಜಕುಮಾರ್ ನಟಿಸಿರುವ ಸೂಪರ್ ಹಿಟ್ ಚಲನಚಿತ್ರ 'ರಾಜಕುಮಾರ' ಹಾಗೂ ಅಪ್ಪು ನಟಿಸಿದ ಕೊನೆಯ ಚಿತ್ರ 'ಜೇಮ್ಸ್ 'ಚಿತ್ರದಲ್ಲಿ ನಟಿಸಿ ಕನ್ನಡ ಸಿನಿ ಪ್ರೇಕ್ಷಕರ ಹೃದಯ ಗೆದ್ದಿದ್ದ ಪ್ರಿಯಾ ಆನಂದ್ 'ಬಲರಾಮನ ದಿನಗಳು' ಚಿತ್ರದ ಮೂಲಕ ಮತ್ತೆ ಸ್ಯಾಂಡಲ್ ವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
'ರಾಜಕುಮಾರ' ಚಿತ್ರದ ಯಶಸ್ಸಿನ ನಂತರ ಗೋಲ್ಡನ್ ಸ್ಟಾರ್ ಗಣೇಶ್ ಜೊತೆ ನಟಿಸಿರುವ 'ಆರೆಂಜ್' ಚಿತ್ರ ಅಷ್ಟಾಗಿ ಯಶಸ್ಸನ್ನು ಕಂಡಿರಲಿಲ್ಲ.ಕಳೆದ ವರ್ಷ ಯೋಗರಾಜ್ ಭಟ್ ನಿರ್ದೇಶನದ 'ಕರಟಕ ದಮನಕ' ಚಿತ್ರದಲ್ಲಿ ಶಿವಣ್ಣನಿಗೆ ನಾಯಕಿಯಾಗಿ ಅಭಿನಯಿಸಿದ ಪ್ರಿಯಾ ಕನ್ನಡ ಸಿನಿ ರಸಿಕರನ್ನು ರಂಜಿಸಲು ಕನ್ನಡಕ್ಕೆ ಮತ್ತೆ ಬಂದಿದ್ದಾರೆ . ಈಗಾಗಲೇ ತಮಿಳು ,ತೆಲುಗು , ಮಲಯಾಳಂ ಮತ್ತು ಹಿಂದಿ ಚಿತ್ರಗಳಲ್ಲಿ ನಟಿಸಿರುವ ಬಹುಭಾಷಾ ತಾರೆ ಪ್ರಿಯಾ ಹೊಸ ವರ್ಷದಲ್ಲಿ ಕನ್ನಡ ಚಿತ್ರವೊಂದರಲ್ಲಿ ನಟಿಸುತ್ತಿದ್ದಾರೆ.
ಪ್ರಿಯಾ ಕೆಲವು ವರ್ಷಗಳ ಹಿಂದೆ ಶ್ರೀದೇವಿ ಬೋನಿಕಪೂರ್ ನಟಿಸಿದ್ದ ಸೂಪರ್ ಹಿಟ್ ಹಿಂದಿ ಚಲನಚಿತ್ರ 'ಇಂಗ್ಲೀಷ್ ವಿಂಗ್ಲಿಷ್' ನಲ್ಲಿ ಸಣ್ಣ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯಾಗಿ ನಟಿಸಿದ ಹಿಂದಿ ಸಿನಿಮಾ 'ಫುಕ್ರೆ 'ಮತ್ತು ಅದರ ಸೀಕ್ವಲ್ ಫುಕ್ರೆ 2 ಯಶಸ್ವಿಯಾದರೂ ಕೂಡ ಆಕೆಗೆ ಬಾಲಿವುಡ್ ನಲ್ಲಿ ಅಂತಹ ಅವಕಾಶ ಸಿಕ್ಕಿರಲಿಲ್ಲ. 2023 ರಲ್ಲಿ ವಿಜಯ್ ತಲಪತಿ ಜೊತೆ 'ಲಿಯೋ' ತಮಿಳು ಚಿತ್ರದಲ್ಲಿ ಕಾಣಿಸಿಕೊಂಡರೂ ಕೂಡ ಕಾಲಿವುಡ್ ನಲ್ಲಿ ಹೇಳಿಕೊಳ್ಳುವಂತ ಅವಕಾಶಗಳು ಸಿಗುತ್ತಿಲ್ಲ.
ಇತ್ತೀಚೆಗೆ ಬಲರಾಮ ಚಿತ್ರ ತಂಡ ವೆಲ್ಕಮ್ ಆನ್ ಬೋರ್ಡ್,ರಾಜಕುಮಾರಿಗೆ ಸ್ವಾಗತ ಎಂದು ಪೋಸ್ಟ್ ಹಾಕುವ ಮೂಲಕ ಪ್ರಿಯಾ ಆನಂದ್ ರನ್ನು ಸ್ವಾಗತಿಸಿದೆ.'ಆ ದಿನಗಳು' ಖ್ಯಾತಿಯ ಕೆ. ಎಂ.ಚೈತನ್ಯ ನಿರ್ದೇಶನದಲ್ಲಿ ಮೂಡಿಬರುತ್ತಿರುವ 'ಬಲರಾಮನ ದಿನಗಳು' ಚಿತ್ರದಲ್ಲಿ ವಿನೋದ್ ಪ್ರಭಾಕರ್ ಗೆ ನಾಯಕಿಯಾಗಿ ಪ್ರಿಯಾ ಆನಂದ್ ನಟಿಸುತ್ತಿದ್ದಾರೆ.
-ಶರತ್ ಚಂದ್ರ