ಡಾ. ಶಿವರಾಜ್‌ಕುಮಾರ್ ಕನ್ನಡ ಚಿತ್ರರಂಗದ ದೊಡ್ಡ ಆಸ್ತಿ ಇದ್ದಂತೆ. ಒಂದೇ ಪದದಲ್ಲಿ ಹೇಳಬೇಕು ಅಂದ್ರೆ ಜೆಮ್ ಪರ್ಸನ್. ಸ್ಯಾಂಡಲ್ವುಡ್ನ ಅಪರೂಪದ ಆಕ್ಟರ್ ಆಗಿರೋ ಶಿವಣ್ಣ ಕ್ಲಾಸ್ಗೂ ಸೈ.. ಮಾಸ್ಗೂ ಸೈ. ಅದೆಂಥದ್ದೇ ಪಾತ್ರವಾದರೂ ಸರಿ ಆ ಪಾತ್ರವರನ್ನು ಅಚ್ಚುಕಟ್ಟಾಗಿ ಪರಾಕಾಯ ಪ್ರವೇಶ ಮಾಡೋ ಏಕೈಕ ನಟ ಅಂದ್ರೆ ಅದು ಶಿವಣ್ಣ ಮಾತ್ರ. ಕರುನಾಡಿನ ಮೇರುನಟ ಡಾ. ರಾಜ್ಕುಮಾರ್ ಅವರನ್ನು ಬಿಟ್ಟರೆ ಹೊಸ ಪ್ರಯೋಗಗಳಲ್ಲಿ ಸಕ್ಸಸ್ ಕಂಡು, ಚಿತ್ರರಂಗದ ಅಷ್ಟೂ ಮಂದಿಗೆ ಅನ್ನದಾತರ ರೀತಿ ಒಗ್ಗಟ್ಟಿನ ಪಾಠ ಮಾಡುತ್ತಿರೋರು ಅಂದ್ರೆ ಒನ್ ಌಂಡ್ ಓನ್ಲಿ ಶಿವರಾಜ್‌ಕುಮಾರ್.
ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಅವರಿಗೀಗ 62 ವರ್ಷ. ಆದರೆ, ಹದಿನಾರರ ಹುಮ್ಮಸ್ಸು.. ಸದಾ ಕ್ರಿಯಾಶೀಲತೆಯೊಂದಿಗೆ ನಿತ್ಯ ಸಿನಿಚಟುವಟಿಕೆಗಳಲ್ಲಿ ಪಾಲ್ಗೊಂಡು ಜೊತೆಗಿದ್ದವರನ್ನು ಹುರಿದುಂಬಿಸುತ್ತಾ, ಯಾವುದೇ ವಿವಾದಗಳಿಲ್ಲದೇ ನೊಂದವರಿಗೆ ಆಪತ್ಬಾಂಧವರಾಗಿ, ಸಿನಿರಂಗದ ಸಂಕಷ್ಟಗಳಲ್ಲಿ ಭಾಗಿಯಾಗುವ ಕರುಣಾಮಯಿ ಶಿವರಾಜ್‌ಕುಮಾರ್ ಅವರಿಗೆ ಕೆಲ ದಿನಗಳ ಹಿಂದೆ ದಿಢೀರ್ನ ಕ್ಯಾನ್ಸರ್ ಕಾಣಿಸಿಕೊಂಡಿತ್ತು. ನಟ ಶಿವಣ್ಣಗೆ ಹೀಗೆ ಇದೆ ಅಂತಾ ಗೊತ್ತಾಗ್ತಿದ್ದಂತೇ ಕರ್ನಾಟಕದ ಕೋಟಿ ಕೋಟಿ ಅಭಿಮಾನಿಗಳಿಗೆ ಒಂದು ರೀತಿಯ ಶಾಕ್ ಎನಿಸಿತ್ತು. ಕೆಲವರಂತೂ ಬೆಂಗಳೂರಿನ ನಾಗಾವರದ ಅವರ ನಿವಾಸಕ್ಕೆ ಓಡೋಡಿ ಬಂದು ಕಣ್ಣೀರು ಹಾಕಿದ್ದೂ ಉಂಟು. ಆದ್ರೀಗ ಅರ್ಥಾತ್ 2025ರ ಹೊಸ ವರ್ಷದಲ್ಲಿ ತಮ್ಮ ಅಭಿಮಾನಿಗಳಿಗೆ, ಕನ್ನಡಿಗರಿಗೆ ಗುಡ್ನ್ಯೂಸೊಂದನ್ನ ಕೊಟ್ಟಿದ್ದಾರೆ. ಅದೇನಂದರೆ ಶಿವರಾಜ್‌ಕುಮಾರ್ ಈಗ ಕ್ಯಾನ್ಸರ್ನಿಂದ ಮುಕ್ತರಾಗಿದ್ದಾರೆ. ಅಮೇರಿಕಾದಲ್ಲಿ ಅನಾರೋಗ್ಯದ ನಿಮಿತ್ತ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್ ಶೀಘ್ರವೇ ಗುಣಮುಖರಾಗಲಿ ಎಂದು ಅಭಿಮಾನಿಗಳು ಹಾರೈಸಿದ್ದರು. ಈ ಕೋಟಿ ಕೋಟಿ ಅಭಿಮಾನಿಗಳ ಹರಕೆ ಈಡೇರಿದೆ. ಶಿವಣ್ಣಗಾಗಿ ಮಾಡಿದ ಪೂಜೆಗೆ ಫಲ ಸಿಕ್ಕಿದೆ. ಚಿಕಿತ್ಸೆಗೆಂದು ಅಮೆರಿಕಾಗೆ ಹೊರಡುವಾಗ ಎಲ್ಲರಲ್ಲೂ ಮನೆ ಮಾಡಿದ್ದ ಆತಂಕ ಈಗ ದೂರಾಗಿದೆ.
ಅಭಿಮಾನಿಗಳಿಗೆ ಗುಡ್ನ್ಯೂಸ್: ಹೊಸ ವರ್ಷದಂದು ‘ಕರುನಾಡ ಚಕ್ರವರ್ತಿ’ ಶಿವರಾಜ್ ಕುಮಾರ್ ಅವರು ಅಭಿಮಾನಿಗಳಿಗೆ, ಸ್ನೇಹಿತರಿಗೆ, ಆಪ್ತರಿಗೆ, ಕುಟುಂಬಸ್ಥರಿಗೆ ಸಿಹಿ ಸುದ್ದಿ ನೀಡಿದ್ದಾರೆ. ಹೌದು, ಕೆಲ ದಿನಗಳ ಹಿಂದೆ ಅವರು ಕುಟುಂಬಸಮೇತ ಅಮೇರಿಕಾಗೆ ತೆರಳಿದ್ದರು. ಶಿವರಾಜ್‌ಕುಮಾರ್ ಅವರಿಗೆ ಕ್ಯಾನ್ಸರ್ ಇದ್ದಕಾರಣ, ಅವರಿಗೆ ಪ್ಲೋರಿಡಾದ ಮಿಯಾಮಿ ಕ್ಯಾನ್ಸರ್ ಇನ್ಸ್ಟಿಟ್ಯೂಟ್ನಲ್ಲಿ ಶಸ್ತ್ರಚಿಕಿತ್ಸೆ ಮಾಡಿಸಲಾಗಿತ್ತು. ಇದೀಗ ಶಿವಣ್ಣನಿಗೆ ಮಾಡಿದ್ದ ಶಸ್ತ್ರಚಿಕಿತ್ಸೆ ಯಶಸ್ವಿಯಾಗಿದೆ ಎಂದು ವೈದ್ಯರು ಹೇಳಿದ್ದಾರೆ. “ಶಿವಣ್ಣ ಈಗ ಕ್ಯಾನ್ಸರ್ ಫ್ರೀ” ಎಂದು ಗೀತಾ ಶಿವರಾಜ್‌ಕುಮಾರ್ ತಿಳಿಸಿದ್ದಾರೆ. ವಿದೇಶದಲ್ಲಿರುವ ಶಿವರಾಜ್‌ಕುಮಾರ್ ದಂಪತಿ, ವಿಡಿಯೋ ಮೂಲಕ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ. ಶಸ್ತ್ರ ಚಿಕಿತ್ಸೆಯ ನಂತರ ಚೇತರಿಸಿಕೊಳ್ಳುತ್ತಿರುವ ಶಿವಣ್ಣ ಅವರ ಆರೋಗ್ಯದ ಎಲ್ಲ ವರದಿಗಳು ನೆಗೆಟಿವ್ ಬಂದಿವೆ. ಖುದ್ದು ಶಿವಣ್ಣ ಈ ವಿಚಾರವನ್ನು ಹಂಚಿಕೊಂಡಿದ್ದಾರೆ. ಕ್ಯಾನ್ಸರ್‌ದಿಂದ ಮುಕ್ತಿ ಪಡೆದಿರುವುದಾಗಿ ಹೇಳಿದ್ದಾರೆ.
ಎಲ್ಲರಿಗೂ ಹೊಸ ವರ್ಷದ ಶುಭಾಶಯ ಕೋರುತ್ತಾ ಮಾತನಾಡಿದ ಶಿವಣ್ಣ, “ಮಾತನಾಡುವಾಗ ಎಲ್ಲಿ ಭಾವುಕ ಆಗ್ತೀನಿ ಎನ್ನುವ ಭಯ ಆಗುತ್ತೆ. ಯಾಕೆಂದರೆ ಹೊರಡುವಾಗ ಸ್ವಲ್ಪ ಎಮೋಶನಲ್ ಆಗಿದ್ದೆ. ಭಯ ಅನ್ನೋದು ಇದ್ದೇ ಇರುತ್ತೆ ಮನುಷ್ಯನಿಗೆ. ಆದರೆ, ಆ ಭಯವನ್ನು ದೂರ ಮಾಡಲು ಅಂತಾನೇ ಅಭಿಮಾನಿ ದೇವರುಗಳಿರುತ್ತಾರೆ, ಸಹ ಕಲಾವಿದರು ಇರ್ತಾರೆ, ಸ್ನೇಹಿತರು ಇರ್ತಾರೆ, ಸಂಬಂಧಿಕರು ಇರ್ತಾರೆ, ಎಲ್ಲಕ್ಕಿಂತ ಹೆಚ್ಚಾಗಿ ಡಾಕ್ಟರ್‌ಗಳು ಇರ್ತಾರೆ. ಬೆಂಗಳೂರಿನಲ್ಲಿ ಕೀಮೋಥೆರಪಿ ಚಿಕಿತ್ಸೆಯನ್ನು ನೀಡಿದ ಡಾ. ಶಶಿಧರ್, ದಿಲೀಪ್, ಯೋಗಿತಾ, ಬಿಕೆ ಶ್ರೀನಿವಾಸ್ ಹೀಗೆ ಪ್ರತಿಯೊಬ್ಬರು ನನ್ನನ್ನು ನೋಡಿಕೊಂಡ ರೀತಿ ಇರಬಹುದು, ಧೈರ್ಯ ತುಂಬಿದ ರೀತಿ ಇರಬಹುದು, ಅವಾಗ ಸ್ವಲ್ಪ ಆರಾಮಾಗಿರುತ್ತಿದ್ದೆ, ಚಿತ್ರೀಕರಣದಲ್ಲಿ ಭಾಗಿಯಾಗುತ್ತಿದ್ದೆ. ಅದ್ಯಾವ ಜೋಶ್‌ನಲ್ಲಿ ಬಂತೋ ನನಗೂ ಗೊತ್ತಿಲ್ಲ ಎಂದಿದ್ದಾರೆ. ’45’ ಚಿತ್ರದ ಇಡೀ ಚಿತ್ರೀಕರಣ ಮತ್ತು ಕ್ಲೈಮ್ಯಾಕ್ಸ್ನ್ನು ಕೀಮೋಥೆರಪಿ ಚಿಕಿತ್ಸೆಯನ್ನು ಪಡೆಯುತ್ತಾನೇ ಮಾಡಿದ್ದು, ಅದ್ಹೇಗೆ ಮಾಡಿದ್ನೋ ಗೊತ್ತಿಲ್ಲ ಅದರ ಕ್ರೆಡಿಟ್ ರವಿವರ್ಮಾ ಅವರಿಗೆ ಸಲ್ಲಬೇಕು” ಎಂದು ಹೇಳಿದ್ದಾರೆ.
https://www.instagram.com/reel/DERg4tRSyTM/?utm_source=ig_web_copy_link
ಗೀತಾ ಇಲ್ಲದೇ ಶಿವಣ್ಣ ಇಲ್ಲ – ಮಧು ಮಗು ಥರಾ ನೋಡ್ಕೊಂಡ್ರು : “ಚಿಕಿತ್ಸೆಗೆ ಹೊರಡುವ ದಿನ ಹತ್ತಿರ ಬರ್ತಾ ಬರ್ತಾ ಆತಂಕ ಹೆಚ್ಚಾಗಿತ್ತು. ನನ್ನ ಬಾಲ್ಯ ಸ್ನೇಹಿತರು ಶೇಖರ್, ವಿಜಯ್ ಪ್ರಸಾದ್ ಎಲ್ಲರು ನನ್ನ ಜೊತೆ ನಿಂತರು. ಇನ್ನು ಎಲ್ಲರಿಗೆ ಗೊತ್ತಿರುವಂತೆ ಗೀತಾ ಇಲ್ಲದೇ ಶಿವಣ್ಣ ಇಲ್ಲ. ನನ್ನ ಪತ್ನಿ ಗೀತಾ ಮತ್ತು ನನ್ನ ಮಗಳು ನೀವಿಯ ಬೆಂಬಲ ಪ್ರೋತ್ಸಾಹ ನನಗೆ ಸಿಕ್ತಾನೇ ಇದೆ” ಎಂದು ಕೊಂಡಾಡಿದರು. ನಿವೇದಿತಾ ಅವರ ಸ್ನೇಹಿತ ಪ್ರಶಾಂತ್ ಮತ್ತು ಅನು ಅವರ ಸಹಾಯ ಸಹಕಾರವನ್ನು ನೆನೆದಿರುವ ಶಿವಣ್ಣ, “ಮಧು ಬಂಗಾರಪ್ಪ ಮಗುನ ಹೇಗೆ ನೋಡ್ಕೋಬೇಕೋ ಹಾಗೇ ನನ್ನನ್ನು ನೋಡಿಕೊಂಡಿದ್ದಾರೆ” ಎಂದು ಶಿವಣ್ಣ ಸಂಬಂಧಿಯೂ ಆಗಿರೋ ಮಧುಬಂಗಾರಪ್ಪರವರನ್ನು ಹೊಗಳಿದರು.
ಕಿಡ್ನಿ ಕಸಿ ಅಲ್ಲ ಬ್ಲಾಡರ್ ಚೇಂಜ್ : “ಇನ್ನು ನನಗೆ ಕಿಡ್ನಿ ಕಸಿ ಮಾಡಲಾಗಿದೆ ಎಂದು ಅನೇಕರು ತಪ್ಪಾಗಿ ತಿಳಿದುಕೊಂಡಿದ್ದಾರೆ. ಆದರೆ, ಅದು ಸುಳ್ಳು. ಸತ್ಯ ಏನೆಂದರೆ ಕ್ಯಾನ್ಸರ್ ತಗುಲಿದ ಮೂತ್ರಪಿಂಡವನ್ನ(ಯೂರಿನರಿ ಬ್ಲಾಡರ್) ತೆಗೆದುಹಾಕಿದ್ದಾರೆ. ಶಸ್ತ್ರಚಿಕಿತ್ಸೆ ನಂತರ ಕೃತಕ ಮೂತ್ರಪಿಂಡವನ್ನ ಅಳವಡಿಸಿದ್ದಾರೆ. ಇಷ್ಟೇ ಆಗಿದ್ದು, ಇದೇ ಸಮಸ್ಯೆ ಎಂದು ಹೇಳಿದ್ದಾರೆ. ಎಲ್ಲವನ್ನು ವಿವರವಾಗಿ ಹೇಳಲು ಹೋದರೆ ಎಲ್ಲರು ಗಾಬರಿಯಾಗ್ತಾರೆ ಎನ್ನುವ ಭಯ ನಮಗೆ ಇತ್ತು. ಹೀಗಾಗಿ ನಿಮ್ಮನ್ನು ಗಾಬರಿಗೊಳಿಸುವುದು ನನಗೆ ಇಷ್ಟ ಇರಲಿಲ್ಲ” ಎಂದು ಶಿವರಾಜ್‌ಕುಮಾರ್ ಅಭಿಮಾನಿಗಳಿಗೆ ತಿಳಿಸಿದ್ದಾರೆ.
ಡಬಲ್ ಪವರ್-ಐ ವಿಲ್ ಬಿ ಬ್ಯಾಕ್ : ಈ ಶಸ್ತ್ರಚಿಕಿತ್ಸೆ ಬಳಿಕ ನಾನು ವೀಕ್ ಆಗಿಲ್ಲ ಎಂದಿರುವ ಶಿವಣ್ಣ, “ಮತ್ತದೇ ಶಿವರಾಜ್‌ಕುಮಾರ್ ವಾಪಸ್ ಬರ್ತಿದ್ದಾರೆ. ನಿಮ್ಮೆಲ್ಲರ ಪ್ರೀತಿ ವಿಶ್ವಾಸದಿಂದ ನನಗೆ ಡಬಲ್ ಪವರ್ ಸಿಕ್ಕಿದೆ. ಅದೇ ಫೈಟ್, ಡ್ಯಾನ್ಸ್, ಌಕ್ಟಿಂಗ್ನ ಮತ್ತೆ ಮುಂದುವರಿಸುತ್ತೇನೆ. ನಿಮ್ಮ ಹರಕೆ ಹಾರೈಕೆಗಳನ್ನು ನಾನು ಯಾವತ್ತು ಮರೆಯಲ್ಲ” ಎಂದಿರುವ ಶಿವಣ್ಣ ಇಡೀ ಕರುನಾಡಿನ ಆತಂಕವನ್ನು ದೂರ ಮಾಡಿದ್ದಾರೆ.
=======================