- ರಾಘವೇಂದ್ರ ಅಡಿಗ ಎಚ್ಚೆನ್.
ಅಕ್ರಮ ಕಾಂಪೌಂಡ್ ನಿರ್ಮಾಣ ಆರೋಪ ಪ್ರಕರಣದಲ್ಲಿ ನಟ ಯಶ್ ತಾಯಿ ಪುಷ್ಪಾ ಅವರಿಗೆ ಕೋರ್ಟ್‌ನಿಂದ ಭಾರಿ ಶಾಕ್ ಎದುರಾಗಿದೆ. ಬೇರೆಯವರ ಜಾಗದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎನ್ನಲಾದ ಕಾಂಪೌಂಡ್‌ನ್ನು ನ್ಯಾಯಾಲಯದ ಅನುಮತಿಯ ಮೇರೆಗೆ ಸಂಪೂರ್ಣವಾಗಿ ಧ್ವಂಸಗೊಳಿಸಲಾಗಿದೆ.
ಹಾಸನ ನಗರದ ವಿದ್ಯಾನಗರದಲ್ಲಿರುವ ಪುಷ್ಪಾ ಅವರ ನಿವಾಸದ ಬಳಿ ನಿರ್ಮಿಸಲಾಗಿದ್ದ ಕಾಂಪೌಂಡ್‌ನ್ನು ಮೂಲ ಜಾಗದ ಮಾಲೀಕರು ಜೆಸಿಬಿ ಮೂಲಕ ಬೆಳ್ಳಂಬೆಳಗ್ಗೆ ನೆಲಸಮಗೊಳಿಸಿದ್ದಾರೆ. ಸುಮಾರು 1,500 ಚದರ ಅಡಿ ಜಾಗವನ್ನು ಒತ್ತುವರಿ ಮಾಡಲಾಗಿದೆ ಎಂಬ ಆರೋಪ ಈ ಪ್ರಕರಣದ ಕೇಂದ್ರಬಿಂದು.
ಲಕ್ಷ್ಮಮ್ಮ ಎಂಬವರ ಜಾಗದಲ್ಲಿ ಅಕ್ರಮವಾಗಿ ಕಾಂಪೌಂಡ್ ನಿರ್ಮಿಸಲಾಗಿದೆ ಎಂದು ಆರೋಪಿಸಿ ದೇವರಾಜು ಎಂಬವರು ನ್ಯಾಯಾಲಯದ ಮೊರೆ ಹೋಗಿದ್ದರು. ಪ್ರಕರಣ ವಿಚಾರಣೆ ನಡೆಸಿದ ನ್ಯಾಯಾಲಯ, ಕಾಂಪೌಂಡ್ ತೆರವುಗೊಳಿಸಲು ಅನುಮತಿ ನೀಡಿತ್ತು. ಅದರಂತೆ ಜಿಪಿಎ ಹೋಲ್ಡರ್ ಮೂಲಕ ಕಾಂಪೌಂಡ್ ಧ್ವಂಸಗೊಳಿಸಲಾಗಿದೆ.
ಜಾಗದ ಮಾಲೀಕರು, “ಯಾವುದೇ ಅನುಮತಿ ಇಲ್ಲದೆ ಗೋಡೆ ನಿರ್ಮಿಸಲಾಗಿದೆ. ನಮ್ಮ ಜಾಗವನ್ನು ಅಕ್ರಮವಾಗಿ ವಶಪಡಿಸಿಕೊಂಡಿದ್ದಾರೆ” ಎಂದು ಗಂಭೀರ ಆರೋಪ ಮಾಡಿದ್ದಾರೆ. ಆದರೆ ಈ ಆರೋಪಗಳನ್ನು ಯಶ್ ತಾಯಿ ಪುಷ್ಪಾ ಅವರು ಸಂಪೂರ್ಣವಾಗಿ ತಳ್ಳಿಹಾಕಿದ್ದಾರೆ.
‘ಕೋರ್ಟ್ ಆರ್ಡರ್ ಸುಳ್ಳು, ದುಡ್ಡಿಗೆ ಡಿಮ್ಯಾಂಡ್ ಮಾಡಿದ್ದಾರೆ: ಯಶ್ ತಾಯಿ
ಹಾಸನದ ವಿದ್ಯಾನಗರದಲ್ಲಿರುವ ತಮ್ಮ ನಿವೇಶನದ ಕಾಂಪೌಂಡ್ ಕಾನೂನುಬದ್ಧವಾಗಿಯೇ ನಿರ್ಮಿಸಲಾಗಿತ್ತು. ಆದರೆ ನಾವು ಊರಲ್ಲಿ ಇಲ್ಲದ ಸಮಯ ನೋಡಿ ಉದ್ದೇಶಪೂರ್ವಕವಾಗಿ ಧ್ವಂಸ ಮಾಡಿದ್ದಾರೆ ಎಂದು ಪುಷ್ಪಾ ಆರೋಪಿಸಿದ್ದಾರೆ. “ಖಾಲಿ ಸೈಟ್ ಇದ್ದರೆ ಹುಡುಕಿಕೊಂಡು ಬಂದು ಹೀಗೆ ಮಾಡ್ತಿದ್ದಾರೆ. ನಮಗೆ ದುಡ್ಡು ಬೇಕು ಅಂತಾ ಡಿಮ್ಯಾಂಡ್ ಮಾಡಿದ್ದಾರೆ” ಎಂದು ಗಂಭೀರ ಆರೋಪ ಹೊರಿಸಿದ್ದಾರೆ.
ಕೋರ್ಟ್ ಆರ್ಡರ್ ಇದೆ ಎನ್ನುವ ಮಾತು ಸಂಪೂರ್ಣ ಸುಳ್ಳು ಎಂದು ಸ್ಪಷ್ಟಪಡಿಸಿದ ಅವರು, “ನನಗೆ ಯಾವ ಕೋರ್ಟ್ ಆದೇಶವನ್ನೂ ತೋರಿಸಿಲ್ಲ. ನಾನು ಕೋರ್ಟ್‌ಗೆ ಹಾಜರಾಗಿಲ್ಲ ಅಂತಾ ಹೇಳ್ತಿದ್ದಾರೆ, ಆದರೆ ನಮ್ಮ ಲಾಯರ್ ಹಾಜರಾಗಿದ್ದಾರೆ” ಎಂದಿದ್ದಾರೆ.
ಪಿಡಿಓ ನಟರಾಜ್ ಅವರ ಕುಮ್ಮಕ್ಕಿನಿಂದಲೇ ಈ ಎಲ್ಲ ಬೆಳವಣಿಗೆ ನಡೆದಿದೆ ಎಂದು ನೇರವಾಗಿ ಆರೋಪಿಸಿದ ಪುಷ್ಪಾ ಅರುಣ್ ಕುಮಾರ್, “ನಾವು ಜಾಗಕ್ಕೆ ಟ್ಯಾಕ್ಸ್ ಕಟ್ಟಿದ್ದೀವಿ. ಎಲ್ಲ ದಾಖಲೆಗಳು ನನ್ನ ಬಳಿ ಇವೆ” ಎಂದು ತಿಳಿಸಿದ್ದಾರೆ. ಅಲ್ಲದೇ ಪಕ್ಕದ ಸೈಟ್ ಮಾಲೀಕರು ಪೊಲೀಸರಾದರೂ ಅವರಿಗೆ ಬೆದರಿಕೆ ಹಾಕಲಾಗಿದೆ ಎಂದು ಹೇಳಿದ್ದಾರೆ.
“ಯಶ್ ಹೆಸರು ಹೇಳಿಕೊಂಡು ಮೈಲೇಜ್ ಪಡೆಯಲು ಕೆಲವರು ಹೀರೋ ಆಗಲು ನೋಡ್ತಿದ್ದಾರೆ. ಇದಕ್ಕೆ ನಾನು ಕಾನೂನು ಹೋರಾಟ ಮಾಡ್ತೀನಿ. ಮಾನಹಾನಿ ಮೊಕದ್ದಮೆ ಕೂಡ ಹಾಕ್ತೀನಿ” ಎಂದು ಕಿಡಿಕಾರಿದ್ದಾರೆ.





