ಅದು 1987ನೇ ಇಸವಿ ಕನ್ನಡ ಚಲನಚಿತ್ರರಂಗದಲ್ಲಿ ಅಪರೂಪದ ಇತಿಹಾಸ ಬರೆದ ದ್ವಾರಕೀಶ್ ನಿರ್ಮಾಣದ ನಟಿ ಲೀಲಾವತಿ ಅವರ ಪುತ್ರ ವಿನೋದ್ ರಾಜ್ ಅವರ ಚೊಚ್ಚಲ ಅಭಿನಯದ ಡ್ಯಾನ್ಸ್ ರಾಜ ಡ್ಯಾನ್ಸ್ ಸಿನಿಮಾಕ್ಕೆ ಅಧಿಕೃತವಾಗಿ ಸಂಗೀತ ನಿರ್ದೇಶಕರಾಗಿ ವಿಜಯಾನಂದ್ ಅವರಾಗಿದ್ದರೂ ಅವರ ಹಿಂದಿನ ಶಕ್ತಿಯಾಗಿ 20ರ ಹರೆಯದ ತರುಣ ದಿಲೀಪ್ ಇದ್ದದ್ದನ್ನು ಗಮನಿಸಿದ್ದ ದ್ವಾರಕೀಶ್ ಅವರು ತಮ್ಮ ಮುಂದಿನ ಚಿತ್ರದಲ್ಲಿ ಆ ಹುಡುಗನನ್ನು ಸ್ವತಂತ್ರ ಸಂಗೀತ ನಿರ್ದೇಶಕನನ್ನಾಗಿ ಮಾಡುತ್ತೇನೆ ಎಂದು ಹೇಳಿದ್ದರು.

ವಿದ್ವಾನ್ ಸರ್ವತ್ರ ಪೂಜ್ಯತೆ ಎನ್ನುವಂತೆ, 1992ರಲ್ಲಿ ಖ್ಯಾತ ನಿರ್ದೇಶಕ ಮಣಿರತ್ನಂ ಅವರ ರೋಜಾ ತಮಿಳು ಚಲನಚಿತ್ರದ ಮೂಲಕ ಅದೇ ಯುವಕ ದಿಲೀಪ್, ಎ.ಆರ್. ರೆಹಮಾನ್ (ಮುಸಲ್ಮಾನರಾಗಿ ಮತಾಂತರವಾಗಿ) ಎಂಬ ಹೆಸರಿನಲ್ಲಿ ಮೊದಲ ಬಾರಿಗೆ ಸ್ವತಂತ್ರ ಸಂಗೀತ ನಿರ್ದೇಶಕರಾಗಿ ವೃತ್ತಿಜೀವನವನ್ನು ಆರಂಭಿಸಿದ ನಂತರ ಮುಂದಿನ ಮೂರು ದಶಕಗಳ ಕಾಲ ಕೇವಲ ದಕ್ಷಿಣ ಭಾರತವಷ್ಟೆ ಅಲ್ಲದೇ, ಬಾಲಿವುಡ್ ಹಾಲಿವುಡ್ ಎತ್ತರಕ್ಕೇರಿದ್ದಲ್ಲದೇ, 2009 ರಲ್ಲಿ 81 ನೇ ಆಸ್ಕರ್ ಅಕಾಡೆಮಿ ಪ್ರಶಸ್ತಿಗಳಲ್ಲಿ ಸ್ಲಂಡಾಗ್ ಮಿಲಿಯನೇರ್ ಚಿತ್ರದ ಅತ್ಯುತ್ತಮ ಮೂಲ ಸಂಗೀತ ಮತ್ತು ಅತ್ಯುತ್ತಮ ಮೂಲ ಗೀತೆ (ಜೈ ಹೋ) ಪ್ರಶಸ್ತಿಗಳನ್ನು ಪಡೆದರು. ಅವರು ಅತ್ಯುತ್ತಮ ಮೂಲ ಗೀತೆ ಪ್ರಶಸ್ತಿಯನ್ನು ಗೀತರಚನೆಕಾರ ಗುಲ್ಜಾರ್ ಅವರೊಂದಿಗೆ ಹಂಚಿಕೊಳ್ಳುವ ಮೂಲಕ ಭಾರತೀಯ ಚಿತ್ರರಂಗಕ್ಕೆ ಐತಿಹಾಸಿಕ ದಾಖಲೆಯನ್ನು ನಿರ್ಮಿಸಿದ್ದಾರೆ.

ಹೀಗೆ ಸುಮಾರು ಮೂರು ದಶಕಗಳ ಕಾಲ ಭಾರತೀಯ ಚಲನಚಿತ್ರರಂಗದ ಸಂಗೀತ ಕ್ಷೇತ್ರದಲ್ಲಿ ಅನಭಿಶಕ್ತ ದೊರೆಯಾಗಿ ಮೆರೆದ ಸಂಗೀತ ಮಾಂತ್ರಿಕ ಎ ಆರ್ ರೆಹಮಾನ್ ಇತ್ತೀಚಿಗೆ ಏಷ್ಯನ್ ನೆಟ್‌ವರ್ಕ್‌ಗೆ ನೀಡಿದ ಸಂದರ್ಶನವೊಂದರಲ್ಲಿ ಹಿಂದಿ ಚಿತ್ರರಂಗದ ಬಾಲಿವುಡ್ ಆಂತರಿಕ ರಾಜಕಿಯ ಮತ್ತು ಬದಲಾಗಿರುವ ಕಾರ್ಯ ವೈಖರಿಯ ಬಗ್ಗೆ ನೀಡಿರುವ ಹೇಳಿಕೆ ರಾಷ್ಟ್ರಮಟ್ಟದಲ್ಲಿ ಭಾರಿ ಚರ್ಚೆಗೆ ಕಾರಣವಾಗಿದೆ. ಕಳೆದ ಎಂಟು ವರ್ಷಗಳಿಂದ ಬಾಲಿವುಡ್ ನಲ್ಲಿ ಸೃಜನ ಶೀಲತೆ ಇಲ್ಲದವರ ಕೈಗೆ ಅಧಿಕಾರ ಸಿಕ್ಕಿದಂತಾಗಿದ್ದು, ತಾವು ಮುಸ್ಲಿಂ ಎಂಬ ಕಾರಣಕ್ಕಾಗಿ ತಮಗೆ ಕೆಲಸ ಸಿಗುತ್ತಿಲ್ಲಾ ಎಂಬ ವಿಷಯ ತನಗೆ ನೇರವಾಗಿ ಅನುಭವಕ್ಕೆ ಬಾರದಿದ್ದರೂ, ಪರೋಕ್ಷವಾಗಿ ಅರಿವಿಗೆ ಬರುತ್ತಿದೆ ಎಂಬ ಆಘಾತಕಾರಿ ಹೇಳಿಕೆ ಪ್ರಪಂಚಾದ್ಯಂತ ಸಂಚಲನ ಮೂಡಿಸಿದೆ.
ಹಿಂದಿ ಚಿತ್ರರಂಗದಲ್ಲಿ ಆಗುತ್ತಿರುವ ಈ ಬದಲಾವಣೆಯ ಹಿಂದೆ ಕೋಮು ವಿಚಾರಗಳು ಇರಬಹುದು ಎಂಬ ಮಾತುಗಳು ತಮ್ಮ ಕಿವಿಗೆ ಪರೋಕ್ಷವಾಗಿ ಬಿದ್ದಿವೆ. ತಮಗೆ ಬರಬೇಕಿದ್ದ ಅವಕಾಶಗಳನ್ನು ಬೇರೆ ಸಂಗಿತ ನಿರ್ದೇಶಕರಿಗೆ ನೀಡಲಾಗುತ್ತಿದೆ ಎಂಬ ವಿಷಯವು ಚೈನೀಸ್ ವಿಸ್ಪರ್ಸ್ ಮಾದರಿಯಲ್ಲಿ ತನಗೆ ತಲುಪುತ್ತಿದೆ. ಅನೇಕ ಚಿತ್ರ ನಿರ್ಮಾಪಕರು ಮತ್ತು ನಿರ್ದೇಶಕರು ತಮಗೆ ಅವಕಾಶ ನೀಡಲು ಮುಂದಾದರೂ, ಸಂಗೀತ ಕಂಪನಿಗಳು ಅನಗತ್ಯ ಮಧ್ಯ ಪ್ರವೇಶದಿಂದಾಗಿ ತಮಗೆ ಸಿಗಬೇಕಿದ್ದ ಕೆಲಸ ಬೇರೆ ಸಂಗಿತಗಾರರ ಪಾಲಾಗುತ್ತಿದ್ದರೂ, ತಾನು ಕೆಲಸಕ್ಕಾಗಿ ಹಾತೊರೆಯುತ್ತಾ ಯಾರ ಹಿಂದೆ ಹೋಗುವುದಿಲ್ಲ. ತನ್ನ ಕೆಲಸದ ಮೇಲಿನ ಪ್ರಾಮಾಣಿಕತೆ ತನಗೆ ಅವಕಾಶಗಳನ್ನು ತಂದುಕೊಡುತ್ತದೆ ಎಂಬ ನಿಲುವನ್ನು ಹೊಂದಿರುವುದಾಗಿ ಹೇಳಿದ್ದಾರೆ,

ಹಾಗೆ ನೋಡಿದರೆ ಸಂಗೀತ ಹಿನ್ನಲೆಯ ವೆಲ್ಲಲರ್ ಕುಟುಂಬದಿಂದ ಆರ್. ಕೆ. ಶೇಖರ್ ಮತ್ತು ಕಸ್ತೂರಿ ದಂಪತಿಗಳಿಗೆ ಜನವರಿ 6, 1967 ರಂದು ತಮಿಳುನಾಡಿನ ಮದ್ರಾಸ್‌ನಲ್ಲಿ ಜನಿಸಿದ ದಿಲೀಪ್ ಕುಮಾರ್ ರಾಜಗೋಪಾಲ ಬಾಲ್ಯದಲ್ಲೇ ತನ್ನ ಅಸಾಧಾರಣ ಸಂಗೀತ ಪ್ರತಿಭೆಯಿಂದ ಎಲ್ಲರ ಗಮನವನ್ನು ಸೆಳೆದಿದ್ದ. ತನ್ನ ನಾಲ್ಕನೇ ವಯಸ್ಸಿನಲ್ಲಿ ಪಿಯಾನೋ ಕಲಿಯಲು ಪ್ರಾರಂಭಿಸಿದ ದಿಲೀಪ್ ಮಲಯಾಳಂ ಚಲನಚಿತ್ರಗಳಿಗೆ ಸಂಗೀತ ಸಂಯೋಜಕ ಮತ್ತು ಸಂಗೀತ ನಿರ್ದೇಶಕರಾಗಿ ಕೆಲಸ ಮಾಡುತ್ತಿದ್ದ ತನ್ನ ತಂದೆಗೆ ಸ್ಟುಡಿಯೋದಲ್ಲಿ ಕೀಬೋರ್ಡ್ ನುಡಿಸಲು ಸಹಾಯ ಮಾಡುತ್ತಲೇ ಪದ್ಮ ಶೇಷಾದ್ರಿ ಬಾಲ ಭವನದಲ್ಲಿ ಓದುತ್ತಿದ್ದ. ಆತನಿಗೆ 9 ವರ್ಷ ವಯಸ್ಸಿರುವಾಗ ದುರಾದೃಷ್ಟವಷಾತ್ ಅತನ ತಂದೆ ಹಠಾತ್ತಾಗಿ ನಿಧನರಾದಾಗ, ತನ್ನ ತಂದೆಯ ಸಂಗೀತ ಉಪಕರಣಗಳ ಬಾಡಿಗೆಯ ಮೂಲಕ ಕುಟುಂಬದ ಆದಾಯವನ್ನು ನಿಭಾಯಿಸುತ್ತಿದ್ದಲ್ಲದೇ, ಸಣ್ಣ ವಯಸ್ಸಿನಲ್ಲಿಯೇ ಅನಿವಾರ್ಯವಾಗಿ ಕುಟುಂಬದ ಜವಾಬ್ಧಾರಿಯನ್ನು ಹೊರುವ ಸಲುವಾಗಿ ತನ್ನ 11 ನೇ ವಯಸ್ಸಿನಲ್ಲಿ ತಮ್ಮ ತಂದೆಯ ಆಪ್ತ ಸ್ನೇಹಿತ ಮತ್ತು ಮಲಯಾಳಂ ಚಿತ್ರರಂಗದ ಗೀತೆಗಳ ಸಂಯೋಜಕ ಎಂ.ಕೆ. ಅರ್ಜುನನ್ ಅವರ ಆರ್ಕೆಸ್ಟ್ರಾದಲ್ಲಿ ಕೀಬೋರ್ಡ್ ನುಡಿಸುತ್ತಿದ್ದ ಕಾರಣ ಸರಿಯಾಗಿ ಶಾಲೆಗೆ ಹೋಗಲಾರದೇ, ನಂತರದ ದಿನಗಳಲ್ಲಿ ವಿವಿಧ ಶಾಲೆಗಳನ್ನು ಬದಲಿಸುತ್ತಲೇ, ನಂತರ ತನ್ನ ಬಾಲ್ಯ ಸ್ನೇಹಿತರಾದ ತಾಳವಾದ್ಯಗಾರ ಶಿವಮಣಿ , ಸುರೇಶ್ ಪೀಟರ್ಸ್ ಮತ್ತು ಜಾನ್ ಆಂಥೋನಿ, ಜೊಜೊ ಮತ್ತು ರಾಜಾ ಅವರೊಂದಿಗೆ ಪ್ರೌಢಶಾಲಾ ವಿದ್ಯಾರ್ಥಿಯಾಗಿರುವಾಗಲೇ ನೆಮೆಸಿಸ್ ಅವೆನ್ಯೂ ಎಂಬ ಬ್ಯಾಂಡ್ ಅನ್ನು ರಚಿಸಿಕೊಂಡು ಖ್ಯಾತರಾಗುತ್ತಿದ್ದಂತೆಯೇ, ತನ್ನ ತಾಯಿಯೊಂದಿಗೆ ಚರ್ಚಿಸಿ ಶಾಲೆಯನ್ನು ತೊರೆದು ಪೂರ್ಣ ಪ್ರಮಾಣದಲ್ಲಿ ಸಂಗೀತಗಾರರಾಗಿ ವೃತ್ತಿ ಜೀವನವನ್ನು ಮುಂದುವರಿಸಿಸುತ್ತಾ ಕೀಬೋರ್ಡ್, ಪಿಯಾನೋ, ಸಿಂಥಸೈಜರ್, ಹಾರ್ಮೋನಿಯಂ ಮತ್ತು ಗಿಟಾರ್ ಗಳನ್ನು ಕರಗತ ಮಾಡಿಕೊಂಡು ಆಗಿನ ಕಾಲದ ಖ್ಯಾತ ಸಂಗೀತ ನಿರ್ದೇಶಕರಾದ ಎಂ.ಎಸ್ . ವಿಶ್ವನಾಥನ್ , ವಿಜಯ ಭಾಸ್ಕರ್, ಇಳಯರಾಜ, ರಮೇಶ್ ನಾಯ್ಡು, ವಿಜಯ್ ಆನಂದ್, ಹಂಸಲೇಖ, ರಾಜ್–ಕೋಟಿ ಮುಂತಾದವರೊಂದಿಗೆ ಚಿತ್ರ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಾ, ಜಾಕಿರ್ ಹುಸೇನ್ , ಕುನ್ನಕುಡಿ ವೈದ್ಯನಾಥನ್ ಮತ್ತು ಎಲ್. ಶಂಕರ್ ಅವರಂತಹ ಸಂಗೀತ ದಿಗ್ಗಜರೊಂದಿಗೆ ಸಂಗೀತ ಕಾರ್ಯಕ್ರಮಗಳ ಭಾಗವಾಗಿ ವಿಶ್ವಾದ್ಯಂತ ಪ್ರವಾಸಗಳಲ್ಲಿ ತೊಡಗಿಸಿಕೊಂಡಿದ್ದ.





