- ರಾಘವೇಂದ್ರ ಅಡಿಗ ಎಚ್ಚೆನ್.
ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ವಿಚಾರಣೆ ಟ್ರಯಲ್ ಕೋರ್ಟ್‌ನಲ್ಲಿ ವೇಗ ಪಡೆದಿರುವ ನಡುವೆಯೇ, ಹೈಕೋರ್ಟ್‌ನಲ್ಲಿ ನಡೆದ ಮಹತ್ವದ ಬೆಳವಣಿಗೆಯೊಂದು ಪ್ರಕರಣದ ಮೇಲೆ ಮತ್ತಷ್ಟು ಕುತೂಹಲ ಹುಟ್ಟಿಸಿದೆ. ನಟ ದರ್ಶನ್ ಪರ ವಾದ ಮಂಡಿಸುತ್ತಿದ್ದ ವಕೀಲ ಸುನೀಲ್ ಅವರು ಹೈಕೋರ್ಟ್‌ನಲ್ಲಿ ನಡೆಯುತ್ತಿರುವ ಸಂಬಂಧಿತ ಅರ್ಜಿಯಿಂದ ನಿವೃತ್ತಿ ಬಯಸಿ ಕಾಲಾವಕಾಶ ಕೋರಿದ್ದಾರೆ.
ರೇಣುಕಾಸ್ವಾಮಿ ಅವರ ತಾಯಿಯನ್ನು ವಿಚಾರಣಾ ನ್ಯಾಯಾಲಯದಲ್ಲಿ ಮರು ಪಾಟೀಸವಾಲಿಗೆ ಒಳಪಡಿಸಲು ಅವಕಾಶ ನೀಡಬೇಕು ಎಂದು ಕೋರಿ ಪ್ರಾಸಿಕ್ಯೂಷನ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿತ್ತು. ಈ ಅರ್ಜಿ ವಿಚಾರಣೆಗೆ ಬಂದ ವೇಳೆ ದರ್ಶನ್ ಪರ ವಕೀಲ ಸುನೀಲ್, ತಾವು ಟ್ರಯಲ್ ಕೋರ್ಟ್‌ನಲ್ಲಿ ದರ್ಶನ್ ಪರವಾಗಿ ಹಾಜರಾಗುತ್ತಿದ್ದರೂ, ಹೈಕೋರ್ಟ್‌ನ ಈ ನಿರ್ದಿಷ್ಟ ಪ್ರಕರಣದಲ್ಲಿ ವಾದ ಮಂಡಿಸಲು ಯಾವುದೇ ಅಧಿಕೃತ ಸೂಚನೆ ಲಭಿಸಿಲ್ಲ ಎಂದು ನ್ಯಾಯಪೀಠಕ್ಕೆ ತಿಳಿಸಿದರು.
ಹೀಗಾಗಿ ಈ ಪ್ರಕರಣದಿಂದ ನಿವೃತ್ತಿ ಪಡೆಯಲು ಅವಕಾಶ ನೀಡಬೇಕು ಹಾಗೂ ದರ್ಶನ್ ಪರವಾಗಿ ಹೊಸ ವಕೀಲರನ್ನು ನೇಮಿಸಲು ಕಾಲಾವಕಾಶ ನೀಡಬೇಕು ಎಂದು ಮನವಿ ಮಾಡಿದರು. ವಕೀಲರ ಮನವಿಯನ್ನು ಪರಿಗಣಿಸಿದ ಹೈಕೋರ್ಟ್ ಏಕಸದಸ್ಯ ಪೀಠ, ಪ್ರಕರಣದ ಮುಂದಿನ ವಿಚಾರಣೆಯನ್ನು ಜೂನ್ 23ಕ್ಕೆ ಮುಂದೂಡಿದೆ.
ಈ ನಡುವೆ ಪ್ರಕರಣಕ್ಕೆ ಸಂಬಂಧಿಸಿದ ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ, ಸಿಸಿಟಿವಿ ದೃಶ್ಯಾವಳಿಗಳನ್ನು ಒಳಗೊಂಡಿರುವ ಪೆನ್‌ಡ್ರೈವ್‌ನ್ನು ನಗರದ 59ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸೆಷನ್ಸ್ ನ್ಯಾಯಾಲಯ ಸಾಕ್ಷ್ಯಾಧಾರವಾಗಿ ಪರಿಗಣಿಸಿದೆ.
ವಿಶೇಷ ಸರ್ಕಾರಿ ಅಭಿಯೋಜಕ ಪ್ರಸನ್ನ ಕುಮಾರ್ ಅವರು, ಪೆನ್‌ಡ್ರೈವ್‌ನಲ್ಲಿರುವ ದೃಶ್ಯಾವಳಿಗಳಿಗೆ ಸಂಬಂಧಿಸಿದಂತೆ ಅದನ್ನು ಒದಗಿಸಿದ ಅಪಾರ್ಟ್‌ಮೆಂಟ್ ನಿವಾಸಿಯ ದೃಢೀಕೃತ ಪ್ರಮಾಣಪತ್ರವನ್ನು ನ್ಯಾಯಾಲಯಕ್ಕೆ ಸಲ್ಲಿಸಿದರು. ಇದರ ಆಧಾರದಲ್ಲಿ ನ್ಯಾಯಾಲಯ ಡಿಜಿಟಲ್ ಸಾಕ್ಷ್ಯವನ್ನು ಅಂಗೀಕರಿಸಿ ಪ್ರಕರಣದ ವಿಚಾರಣೆಯನ್ನು ಜೂನ್ 22ಕ್ಕೆ ಮುಂದೂಡಿದೆ.
ಇದಕ್ಕೂ ಮೊದಲು ದರ್ಶನ್ ಸೇರಿದಂತೆ ಇತರೆ ಆರೋಪಿಗಳು, ಭಾರತೀಯ ಸಾಕ್ಷ್ಯ ಕಾಯ್ದೆಯ ಸೆಕ್ಷನ್ 65ಬಿ ಅನ್ವಯ ಅಗತ್ಯ ಪ್ರಮಾಣಪತ್ರವಿಲ್ಲದೆ ಡಿಜಿಟಲ್ ಸಾಕ್ಷ್ಯವನ್ನು ಪರಿಗಣಿಸಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದ್ದರು. ಇದೀಗ ಪ್ರಮಾಣಪತ್ರ ಸಲ್ಲಿಕೆಯಾಗಿರುವ ಹಿನ್ನೆಲೆಯಲ್ಲಿ ನ್ಯಾಯಾಲಯ ಪೆನ್‌ಡ್ರೈವ್ ಅನ್ನು ಸಾಕ್ಷ್ಯವಾಗಿ ಸ್ವೀಕರಿಸಿದೆ.





