ಇತ್ತೀಚೆಗೆ ಸಿನಿಮಾದ ಟ್ರೈಲರ್ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗುತ್ತಿರುವುದು ಹೊಸದೇನಲ್ಲ. ಥೀಯೇಟರ್ ನ ದೊಡ್ಡ ಪರದೆಯಲ್ಲಿ ಅಭಿಮಾನಿಗಳ ಜೊತೆ ಕೂತು ಈಗಾಗಲೇ ಸಾಕಷ್ಟು ಸ್ಟಾರ್ ನಟರು ಚಿತ್ರಗಳ ಟ್ರೈಲರ್ ಬಿಡುಗಡೆ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ . 'ರುದ್ರ ಗರುಡ ಪುರಾಣ' ಚಿತ್ರದ ಟ್ರೈಲರ್ ಕೂಡ ಇತ್ತೀಚಿಗೆ ಬೆಂಗಳೂರಿನ ವೀರೇಶ್ ಚಿತ್ರಮಂದಿರದಲ್ಲಿ ಬಿಡುಗಡೆಯಾಗಿದೆ.
' ಕವಲುದಾರಿ', 'ಆಪರೇಷನ್ ಅಲಮೇಲಮ್ಮ' ಚಿತ್ರಗಳ ಮೂಲಕ ವಿಭಿನ್ನ ಪಾತ್ರಗಳನ್ನು ಮಾಡಿ ಪ್ರೇಕ್ಷಕರಿಗೆ ಹತ್ತಿರವಾಗಿರುವ ರಿಷಿ ನಟನೆಯ 'ರುದ್ರ ಗರುಡ ಪುರಾಣ' ಚಿತ್ರದ ಟ್ರೈಲರ್ ಅನ್ನು ನಟ ರಾಕ್ಷಸ ಡಾಲಿ ಧನಂಜಯ್ ಬಿಡುಗಡೆ ಮಾಡಿದ್ದಾರೆ.
ಮುಂದಿನ ತಿಂಗಳು ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಧನಂಜಯ್ ಮದುವೆ ತಯಾರಿ ಮತ್ತು ಆಮಂತ್ರಣ ಪತ್ರಿಕೆ ನೀಡುವಲ್ಲಿ ಬಿಜಿಯಾಗಿದ್ದರೂ ಕೂಡ, ಗೆಳೆಯನ ಸಿನಿಮಾ ಕ್ಕೆ ಸಾಥ್ ನೀಡಲು ಚಿತ್ರಮಂದಿರದಲ್ಲಿ ಸರಿಯಾದ ಸಮಯಕ್ಕೆ ಹಾಜರಿದ್ದು ಟ್ರೈಲರ್ ಲಾಂಚ್ ಮಾಡಿ ಕೊಟ್ಟಿದ್ದಾರೆ.
ಪೊಲೀಸ್ ಅಧಿಕಾರಿಯಾಗಿ ರಗಡ್ ಲುಕ್ ನಲ್ಲಿ ಟ್ರೈಲರ್ ನಲ್ಲಿ ಕಾಣಿಸಿಕೊಂಡಿರುವ ರಿಷಿ ಬಗ್ಗೆ ಧನಂಜಯ್ ಮೆಚ್ಚುಗೆ ವ್ಯಕ್ತಪಡಿಸಿ ಸಿನಿಮಾ ಕ್ಕೆ ಒಳ್ಳೆಯದಾಗಲಿ ಎಂದು ಶುಭ ಹಾರೈಸಿದ್ದಾರೆ .
ಹಿರಿಯ ನಿರ್ಮಾಪಕ ಕೆ. ಮಂಜು ಮಾತನಾಡಿ ರಿಷಿಯನ್ನು ನೋಡಿದರೆ ಬಾಲಿವುಡ್ ನಟ ಗೋವಿಂದ ನೆನಪಾಗುತ್ತಾರೆ,ಈ ಪ್ರತಿಭಾನ್ವಿತ ನಟ ಕಾಮಿಡಿಗೂ ಸೈ, ಆಕ್ಷನ್ ಗೂ ಸೈ ಎಂದು ಬೆನ್ನು ತಟ್ಟಿದ್ದಾರೆ.
ಚಿತ್ರದ ನಾಯಕಿಯಾಗಿ ಮೈಸೂರಿನ ಚೆಲುವೆ ಪ್ರಿಯಾಂಕಾ ಕುಮಾರ್ ನಟಿಸುತ್ತಿದ್ದೂ, ಈಕೆ ಈಗಾಗಲೇ ಅಭಿಷೇಕ್ ಅಂಬರೀಷ್ ಜೊತೆ 'ಬ್ಯಾಡ್ ಮ್ಯಾನರ್ಸ್ ' ಚಿತ್ರದಲ್ಲಿ ನಟಿಸಿದ್ದು, ಕನ್ನಡ ಮತ್ತು ತಮಿಳು ಧಾರವಾಹಿಗಳಲ್ಲಿ ಅಭಿನಯಿಸಿದ ಅನುಭವ ಕೂಡ ಇದೆ.ತಾನು ನಟಿಯಾಗಲು ತಮ್ಮ ತಂದೆಯ ಪ್ರೋತ್ಸಾಹವೇ ಕಾರಣ. ಇವತ್ತು ಬಹುಷಃ ತಾಯಿ ಇದ್ದಿದ್ದರೆ ತುಂಬಾ ಖುಷಿ ಪಡುತ್ತಿದ್ದರು ಎಂದು ಭಾವಪರವಶರಾಗಿ ಮಾತಾಡಿ ಪ್ರೇಕ್ಷಕರ ಆಶೀರ್ವಾದ ತಮ್ಮ ಮೇಲಿರಲಿ ಕೇಳಿ ಕೊಂಡಿದ್ದಾರೆ .
ಚಿತ್ರದ ನಾಯಕ ರಿಷಿ ಮಾತನಾಡಿ ಧನಂಜಯ್ ಕಾಲೇಜು ನಲ್ಲಿ ನನ್ನ ಸೀನಿಯರ್ ಆಗಿದ್ದು , ಡೊಳ್ಳು ಕುಣಿತ ಸ್ಪರ್ಧೆಯಲ್ಲಿ ನಾವು ಒಟ್ಟಿಗೆ ಭಾಗವಹಿಸಿ ಬಹುಮಾನ ಗೆದ್ದಿರುವ ಬಗ್ಗೆ ಮೆಲುಕು ಹಾಕಿದ ರಿಷಿ,ಟ್ರೈಲರ್ ಲಾಂಚ್ ಮಾಡಿದ ಸ್ನೇಹಿತನಿಗೆ ಧನ್ಯವಾದ ತಿಳಿಸಿದ್ದಾರೆ.
ಅಶ್ವಿನಿ ಆರ್ಟ್ಸ್ ಬ್ಯಾನರ್ನಡಿಯಲ್ಲಿ ಅಶ್ವಿನಿ ಲೋಹಿತ್ ನಿರ್ಮಾಣದ, ಕೆ. ಎಸ್.ನಂದೀಶ್ ಆಕ್ಷನ್ ಕಟ್ ಹೇಳಿರುವ 'ರುದ್ರ ಗರುಡ ಪುರಾಣ' ಇದೇ ತಿಂಗಳ 24 ರಂದು ಚಿತ್ರಮಂದಿರದಲ್ಲಿ ಬಿಡುಗಡೆಯಾಗಲಿದೆ.
-ಶರತ್ ಚಂದ್ರ