- ರಾಘವೇಂದ್ರ ಅಡಿಗ ಎಚ್ಚೆನ್.
ಯುವ ನಿರ್ದೇಶಕ ಸ್ಮೈಲ್ ಶ್ರೀನು ಕನ್ನಡದಲ್ಲಿ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನಿರ್ದೇಶಿಸಿ ಗುರುತಿಸಿಕೊಂಡವರು. ತೂಫಾನ್, ಬಳ್ಳಾರಿ ದರ್ಬಾರ್, 18 to 25, ಓ ಮೈ ಲವ್ ನಂಥ ಮಾಸ್ ಅಂಡ್ ಕ್ಲಾಸ್ ಚಿತ್ರಗಳನ್ನು ನಿರ್ದೇಶಿಸುವ ಮೂಲಕ ಕನ್ನಡ ಸಿನಿ ಪ್ರೇಕ್ಷಕರ ಮನದಲ್ಲಿ ತನ್ನದೇ ಆದ ಸ್ಥಾನ ಗಳಿಸಿರುವ ಇವರು ಇದೀಗ ನಿರ್ಮಾಪಕ ಕೆ.ಮಂಜು ಅವರ ಜತೆ ಕೈಜೋಡಿಸಿದ್ದಾರೆ. ಸದಾ ಪ್ರತಿಭಾವಂತರ ನ್ನು ಪೋಷಿಸುತ್ತ ಬಂದಿರುವ ಕೆ.ಮಂಜು ಸ್ಮೈಲ್ ಶ್ರೀನು ಅವರಲ್ಲಿರುವ ಪ್ರತಿಭೆಯನ್ನು ಗುರ್ತಿಸಿ ದೊಡ್ಡ ಜವಾಬ್ದಾರಿ ವಹಿಸಿದ್ದಾರೆ.
ರಾಜಾಹುಲಿ, ರಾಮ ಶಾಮ ಭಾಮ, ಜಮೀನ್ದಾರ್ರು, ಮಾತಾಡ್ ಮಾತಾಡ್ ಮಲ್ಲಿಗೆ ಸೇರಿದಂತೆ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನೇ ನಿರ್ಮಿಸಿರುವ ನಿರ್ಮಾಪಕ ಕೆ.ಮಂಜು ಈ ಸಲ ದೊಡ್ಡ ಕ್ಯಾನ್ವಾಸ್ ನೊಂದಿಗೆ ದೊಡ್ಡ ಮಟ್ಟದ ಚಿತ್ರ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಈಗಾಗಲೇ ಕಥೆ, ಚಿತ್ರಕಥೆ ಸಿದ್ದವಾಗಿದ್ದು ಡೈಲಾಗ್ ವರ್ಷನ್ ನಡೆಯುತ್ತಿದೆ.
ಇದೀಗ ಈ ಇಬ್ಬರು ಅನುಭವಿಗಳು ಜೊತೆ ಸೇರಿರುವುದು ಚಿತ್ರಪ್ರೇಮಿಗಳಲ್ಲಿ ಹಾಗೂ ಕನ್ನಡ ಚಿತ್ರರಂಗದಲ್ಲಿ ದೊಡ್ಡಮಟ್ಟದ ನಿರೀಕ್ಷೆಯನ್ನು ಹುಟ್ಟುಹಾಕಿದೆ.
ಕೆ.ಮಂಜು ಸಿನಿಮಾಸ್ ಅಡಿಯಲ್ಲಿ ಚಿತ್ರ ನಿರ್ದೇಶಿಸುತ್ತಿರುವ ಕುರಿತಂತೆ ಮಾತನಾಡಿದ ನಿರ್ದೇಶಕ ಸ್ಮೈಲ್ ಶ್ರೀನು, ನನ್ನ ಸ್ಕ್ರಿಪ್ಟ್ ವರ್ಕ್, ನರೇಶನ್ ಮೇಲೆ ನಂಬಿಕೆಯಿಟ್ಟು ಈ ಜವಾಬ್ದಾರಿ ವಹಿಸಿದ್ದಾರೆ. ಪ್ರೇಕ್ಷಕರಿಗೆ ಹೊಸತನದ ಚಿತ್ರವನ್ನು ನೀಡುವ ಸಿದ್ದತೆಯಂತೂ ನಡೆಯುತ್ತಿದೆ. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಳ್ಖುವಂಥ ಸಿನಿಮಾ ಇದಾಗಲಿದೆ. ಕೆಲವೇ ದಿನಗಳಲ್ಲಿ ಚಿತ್ರದ ಟೈಟಲ್, ಕಲಾವಿದರು, ತಾಂತ್ರಿಕ ವರ್ಗದ ಬಗ್ಗೆ ಮಾಹಿತಿ ನೀಡುತ್ತೇವೆ. ಸದ್ಯದಲ್ಲೇ ದೊಡ್ಡ ಮಟ್ಟದಲ್ಲಿ ಚಿತ್ರವನ್ನು ಲಾಂಚ್ ಮಾಡುತ್ತಿದ್ದೇವೆ ಎಂದು ಹೇಳಿದರು.
ನನ್ನ ದೊಡ್ಡ ಕನಸಿಗೆ ಅನುಭವಿ ನಿರ್ಮಾಪಕರು ಹಾಗೂ ಖ್ಯಾತ ವಿತರಕರೂ ಆದ ಕೆ. ಮಂಜು ಅವರು ಜೊತೆಯಾಗಿರುವುದು ನನಗೆ ಸಿಕ್ಕಂಥ ದೊಡ್ಡ ಸಪೋರ್ಟ್ ಹಾಗೂ ನನ್ನ ಅದೃಷ್ಟವೆಂದೇ ಹೇಳಬಹುದು ಎಂದಿದ್ದಾರೆ.
ಸದ್ಯ ನಿರ್ದೇಶಕರು ಸಂಭಾಷಣೆ ಹೆಣೆಯುವುದರಲ್ಲಿ ತೊಡಗಿಕೊಂಡಿದ್ದು, ಚಿತ್ರದ ಕುರಿತು ಮುಂದಿನ ದಿನಗಳಲ್ಲಿ ಹೆಚ್ಚಿನ ಮಾಹಿತಿ ನೀಡಲಿದ್ದೇವೆ ಎಂದು ಇನ್ನಷ್ಟು ಕುತೂಹಲ ಮೂಡಿಸಿದ್ದಾರೆ ನಿರ್ದೇಶಕ ಸ್ಮೈಲ್ ಶ್ರೀನು. ಇದು ಕೆ.ಮಂಜು ಅವರ ನಿರ್ಮಾಣದ 44ನೇ ಚಿತ್ರವಾಗಿದ್ದು ಸದ್ಯದಲ್ಲೇ ಚಾಲನೆ ಸಿಗಲಿದೆ.