– ರಾಘವೇಂದ್ರ ಅಡಿಗ ಎಚ್ಚೆನ್.
ಸ್ಯಾಂಡಲ್ ವುಡ್ ನಲ್ಲಿ ಮತ್ತೊಮ್ಮೆ ಸಮಾಜದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರದ ಕುರಿತಾದಂತಹ ಕಥೆಯನ್ನ ಪ್ರೇಕ್ಷಕರ ಮುಂದೆ ತರುವ ಪ್ರಯತ್ನದ ಫಲವಾಗಿ ನಿರ್ಮಾಣವಾಗುತ್ತಿರುವಂತಹ ಚಿತ್ರ “ಶೇಷ 2016”. ಮಾರಿಗುಡಿ ಎಂಟರ್ ಟೈನ್ಮೆಂಟ್ಸ್ ಮೂಲಕ ಮಹಿಳಾ ನಿರ್ಮಾಪಕಿರಾದ ಮಂಜುವಾಣಿ. ವಿ. ಎಸ್ ಹಾಗೂ ವೀಣಾ. ಎಸ್ ನಿರ್ಮಾಣದ ಈ ಚಿತ್ರವನ್ನು ಪ್ರದೀಪ್ ಅರಸೀಕೆರೆ ನಿರ್ದೇಶನ ಮಾಡುತ್ತಾರೆ. ಕನ್ನಡ ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲದಲ್ಲಿ ಚಿತ್ರೀಕರಣಗೊಂಡಿರುವಂತಹ ಈ ಚಿತ್ರದ ಮಲಯಾಳಂ ಭಾಷೆಯ ಟೀಸರ್ ಈಗಾಗಲೇ ಬಿಡುಗಡೆಗೊಂಡು ಉತ್ತಮ ಪ್ರಶಂಸೆಯನ್ನು ಪಡೆದುಕೊಂಡಿದ್ದು, ಈಗ ಚಿತ್ರತಂಡ ಕನ್ನಡದ ಟೀಸರ್ ಅನ್ನ ಎಂ.ಎಂ. ಬಿ ಲೆಗಸಿಯಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದ್ದು, ವೇದಿಕೆ ಮೇಲೆ ಮಲಯಾಳಂನ ಗೋಟ್ ಲೈಫ್ ಚಿತ್ರದ ಲೈನ್ ಪ್ರೊಡ್ಯೂಸರ್ ಸುಶೀಲ್ ಥಾಮಸ್ , ಆಡ್ ಫಿಲಂ ಮೇಕರ್ ಹಾಗೂ ನಿರ್ಮಾಪಕ ಸ್ಲುಬ ವರ್ಗೀಸ್, ಬಿಬಿಎಂಪಿ ಕಾರ್ಪೊರೇಟರ್ ಪ್ರೇಮ್ ಕುಮಾರ್ ಹಾಗೂ ಮಂಜುನಾಥ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಟೀಸರ್ ಲಾಂಚ್ ಮಾಡುವರ ಜೊತೆಗೆ ಚಿತ್ರತಂಡದ ಶ್ರಮವನ್ನ ಕೊಂಡಾಡಿ ಚಿತ್ರ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ಈ ಚಿತ್ರದ ನಿರ್ದೇಶಕ ಪ್ರದೀಪ್ ಅರಸೀಕೆರೆ ಮಾತನಾಡುತ್ತಾ ಇದು ನನ್ನ ಮೊದಲ ನಿರ್ದೇಶನದ ಚಿತ್ರ. ನನ್ನನ್ನ ನಂಬಿ ನಿರ್ಮಾಣ ಮಾಡಿರುವ ನಿರ್ಮಾಪಕರಿಗೆ ನಾನು ಸದಾ ಋಣಿಯಾಗಿರುತ್ತೇನೆ. ನಾನು ಈ ಹಿಂದೆ ಕೆ.ಇ.ಬಿ ಯಲ್ಲಿ ಕೆಲಸ ಮಾಡುತ್ತಿದ್ದೆ , ಸಿನಿಮಾ ಮೇಲಿನ ಆಸಕ್ತಿಯಿಂದ ಕೆಲಸ ಬಿಟ್ಟು ಈ ಚಿತ್ರವನ್ನು ನಿರ್ದೇಶನ ಮಾಡಿದ್ದೇನೆ. ಒಂದಷ್ಟು ಬೇರೆ ಚಿತ್ರಗಳಲ್ಲಿ ಕೆಲಸ ಮಾಡಿದ ಅನುಭವ ನನಗೆ ಈ ಚಿತ್ರ ಮಾಡಲು ಧೈರ್ಯ ತುಂಬಿತು. ಕನ್ನಡ ಹಾಗೂ ಮಲಯಾಳಂ ಭಾಷೆಯಲ್ಲಿ ಏಕಕಾಲಕ್ಕೆ ಚಿತ್ರೀಕರಣ ಮಾಡಿದ್ದೇನೆ. ಅದಕ್ಕಾಗಿ ನಿರ್ದೇಶನ ವಿಭಾಗದಲ್ಲಿ ಕನ್ನಡ ಹಾಗೂ ಮಲಯಾಳಂ ಭಾಷೆಯ ತಂಡಗಳನ್ನು ಮಾಡಿಕೊಂಡು ಚಿತ್ರೀಕರಣ ಮಾಡಿದ್ದೇವೆ. ಈ ಸಬ್ಜೆಕ್ಟ್ ಬಗ್ಗೆ ಬಹಳಷ್ಟು ಚರ್ಚೆ ಮಾಡಿ ಪೊಲೀಸ್ ಇಲಾಖೆಯಲ್ಲಿ ಕೆಲವು ಅಧಿಕಾರಿಗಳು ನಡೆಸುತ್ತಿರುವ ಭ್ರಷ್ಟ ಚಟುವಟಿಕೆಗಳ ಬಗ್ಗೆ ಈ ಚಿತ್ರ ಮಾಡಿದ್ದೇನೆ. ಸಾಮಾನ್ಯವಾಗಿ ನಾವು ಗಮನಿಸಿದರೆ ಎಲ್ಲದಕ್ಕೂ ಒಂದೊಂದು ಪರ್ಯಾಯ ವ್ಯವಸ್ಥೆ ಇದ್ದೆ ಇರುತ್ತದೆ. ಗೌರ್ನಮೆಂಟ್ ಹಾಸ್ಪಿಟಲ್ ಇಲ್ಲದಿದ್ದರೆ ಪ್ರೈವೇಟ್, ಗೌರ್ಮೆಂಟ್ ಸ್ಕೂಲ್ ಇಲ್ಲದಿದ್ದರೆ ಪ್ರೈವೇಟ್ ಹೀಗೆ ಆದರೆ ಸರ್ಕಾರದ ಪೊಲೀಸ್ ಇಲಾಖೆಯಲ್ಲಿ ಬದಲಿ ವ್ಯವಸ್ಥೆ ಇಲ್ಲ. ಇಂಥ ಇಲಾಖೆಯಲ್ಲಿ ನಡೆಯುವ ಭ್ರಷ್ಟಾಚಾರದಿಂದ ಜನರು ಹೇಗೆ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಏನೆಲ್ಲಾ ಕಷ್ಟ , ಕಾರ್ಪಣ್ಯಗಳು ಎದುರಾಗುತ್ತದೆ. ಅದನ್ನ ಹೇಗೆ ನಿಭಾಯಿಸುತ್ತಾರೆ ಇದಕ್ಕೆ ಪರಿಹಾರ ಇದೆಯೇ.. ಇಲ್ಲವೇ.. ಎಂಬುವ ಒಂದಷ್ಟು ವಿಚಾರಗಳನ್ನು ಈ ಚಿತ್ರದಲ್ಲಿ ಹೇಳುವ ಪ್ರಯತ್ನ ಮಾಡಿದ್ದು, ನೈಟ್ ಎಫೆಕ್ಟ್ ಜೊತೆ ಮಳೆಯಲ್ಲಿ ಹೆಚ್ಚು ಚಿತ್ರೀಕರಣ ನಡೆದಿದೆ. ಹಗಲು ರಾತ್ರಿ ಎನ್ನದೆ ಸುಮಾರು 35 ದಿನ ಶೂಟಿಂಗ್ ಮಾಡಿದ್ದು , ಸಮಾಜದ ವ್ಯವಸ್ಥೆ ಹಾಗೂ ಜನರ ಕಿಚ್ಚಿನ ಬಗ್ಗೆ ಮಾಡಿರುವ ಈ ಚಿತ್ರ ಈಗ ಸೆನ್ಸರ್ ಕೆಲಸವನ್ನು ಮುಗಿಸಿಕೊಂಡು ಬಿಡುಗಡೆ ಹಂತವನ್ನು ತಲುಪಿದೆ. ನನ್ನ ಕಲಾವಿದರು ಹಾಗೂ ತಾಂತ್ರಿಕ ವರ್ಗದವರು ತುಂಬಾ ಸಹಕಾರ ಮಾಡಿದ್ದಾರೆ. ಈ ನಮ್ಮ ಚಿತ್ರವನ್ನು ಜೂನ್ ತಿಂಗಳಲ್ಲಿ ತೆರೆಗೆ ತರುವ ಪ್ಲಾನ್ ಇದೆ. ನಿಮ್ಮೆಲ್ಲರ ಸಹಕಾರ ಇರಲಿ ಎಂದು ಕೇಳಿಕೊಂಡರು.

ಇನ್ನು ಈ ಚಿತ್ರವನ್ನ ಮಹಿಳಾ ನಿರ್ಮಾಪಕಿಯರು ನಿರ್ಮಿಸಿದ್ದು , ಲೆಕ್ಚರರ್ ಆಗಿರುವ ಮಂಜುವಾಣಿ .ವಿ. ಎಸ್. ಮಾತನಾಡುತ್ತ ನಿರ್ದೇಶಕರು ಹೇಳಿದ ಕಥೆ ಇಷ್ಟವಾಯಿತು ಹಾಗಾಗಿ ನಾವು ಈ ಸಿನಿಮಾವನ್ನು ಮಾಡಿದ್ದೇವೆ. ನಮ್ಮ ಫ್ಯಾಮಿಲಿ ಮೆಂಬರ್ಸ್ ನಮಗೆ ತುಂಬಾ ಸಹಕಾರ ಮಾಡಿದ್ದಾರೆ. ಎರಡು ಭಾಷೆಗಳಲ್ಲಿ ನಾವು ಈ ಚಿತ್ರ ಮಾಡಿದ್ದು , ಬಜೆಟ್ ಲೆಕ್ಕ ಹಾಕಿಲ್ಲ , ಚಿತ್ರೀಕರಣಕ್ಕೆ ಏನು ಬೇಕು ಅದನ್ನು ಒದಗಿಸಿದ್ದೇವೆ. ನಮ್ಮ ಚಿತ್ರತಂಡದ ಕಲಾವಿದರು, ಛಾಯಾಗ್ರಹಣ , ಸಂಗೀತ , ಸಂಕಲನ ಸೇರಿದಂತೆ ಸಹಕಾರ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸುತ್ತೇನೆ. ಚಿತ್ರ ಬಿಡುಗಡೆಗೆ ಸಿದ್ಧವಿದೆ. ಇನ್ನು ನೀವೆಲ್ಲರೂ ನಮ್ಮ ಚಿತ್ರವನ್ನು ನೋಡಿ ಪ್ರೋತ್ಸಾಹಿಸಿ ಎಂದು ಮನವಿ ಮಾಡಿದರು. ಮತ್ತೋರ್ವ ನಿರ್ಮಾಪಕಿ ವೀಣಾ .ಎಸ್ ಮಾತನಾಡುತ್ತಾ ಸಮಾಜಕ್ಕೆ ಒಂದು ಉತ್ತಮ ಚಿತ್ರವನ್ನ ಮಾಡಿದ್ದೇವೆ. ನಮಗೆ ಎಲ್ಲರೂ ತುಂಬಾ ಸಹಕಾರ ಮಾಡ್ತಿದ್ದಾರೆ. ನೀವು ಚಿತ್ರವನ್ನ ನೋಡಿ ನಮ್ಮನ್ನು ಹರಸಿ ಎಂದು ಕೇಳಿಕೊಂಡರು. ಸಂಗೀತ ನಿರ್ದೇಶಕ ಪೂರ್ಣ ಚಂದ್ರ ತೇಜಸ್ವಿ ಮಾತನಾಡುತ್ತಾ ಈ ಚಿತ್ರದಲ್ಲಿ ಯಾವುದೇ ಹಾಡಿಲ್ಲ , ಆದರೆ ಹಿನ್ನೆಲೆ ಸಂಗೀತ ಬಹಳ ಪ್ರಾಮುಖ್ಯತೆಯನ್ನು ವಹಿಸುತ್ತಿದೆ.

ನಿರ್ದೇಶಕರ ಮನಸಿನಲ್ಲಿ ಇರುವಂತಹ ಒಂದು ಗಾಢವಾದ ವಿಚಾರವನ್ನು ಪ್ರೇಕ್ಷಕರ ಮುಂದೆ ತರುವ ಪ್ರಯತ್ನವನ್ನು ಮಾಡಿದ್ದು , ಆರಂಭದಲ್ಲಿ ಕನ್ನಡ ಮಾತ್ರ ಅಂದುಕೊಂಡಿದ್ದೆ . ಚಿತ್ರೀಕರಣ ಮಾಡಿಕೊಂಡು ಎರಡು ಭಾಷೆಯಲ್ಲಿ ಮಾಡಿದ್ದೇನೆ ಎಂದಾಗ ಆಶ್ಚರ್ಯವಾಯಿತು.
ಈಗಾಗಲೇ ಮಲಯಾಳಂನಲ್ಲಿ ಟೀಸರ್ ಅನ್ನ ಇಷ್ಟಪಟ್ಟಿದ್ದಾರೆ. ಕನ್ನಡದಲ್ಲೂ ಚೆನ್ನಾಗಿ ಬಂದಿದೆ, ಸಿನಿಮಾ ಉತ್ತಮವಾಗಿದೆ. ನಿಮ್ಮೆಲ್ಲರ ಸಹಕಾರ ಬೇಕು ಎಂದರು. ಅದೇ ರೀತಿ ಛಾಯಾಗ್ರಹಕ ಆರ್. ಎಸ್. ಆನಂದ ಕುಮಾರ್ ಚಿತ್ರೀಕರಣದ ಅನುಭವವನ್ನು ಹಂಚಿಕೊಂಡರು. ಬರಹಗಾರ ರಾಘವೇಂದ್ರ ಮಯ್ಯ ಎರಡು ಭಾಷೆಯಲ್ಲಿ ಶೂಟಿಂಗ್ ಮಾಡುವಾಗ ಅದು ಅನುಭವಗಳ ಬಗ್ಗೆ ಮಾತನಾಡಿದರು. ಕಾರ್ಯಕಾರಿ ನಿರ್ಮಾಪಕ ರಾಣಿ ಮಂಜುನಾಥ್ ಚಿತ್ರೀಕರಣದ ಅನುಭವಗಳನ್ನು ಹಂಚಿಕೊಂಡರು.

ಈ ಚಿತ್ರದ ಪ್ರಮುಖ ಪೊಲೀಸ್ ಅಧಿಕಾರಿಯ ಪಾತ್ರದಲ್ಲಿ ಮಲಯಾಳಂನ ಪ್ರತಿಭೆ ಜಾನ್ ಕೈಪ್ಪಲ್ಲಿ ತನ್ನ ಭಾಷೆಯಲ್ಲಿ ಮಾತನಾಡಲು ಮುಂದಾದಾಗ , ಅದನ್ನು ಕನ್ನಡಕ್ಕೆ ಟ್ರಾನ್ಸ್ಪೆಟ್ ಮಾಡಲಾಯಿತು. ನಾನು ಈಗಾಗಲೇ ಮಲಯಾಳಂನಲ್ಲಿ 15 ಚಿತ್ರದಲ್ಲಿ ಅಭಿನಯಿಸಿದ್ದೇನೆ. ಇದು ನನ್ನ ಮೊದಲ ಕನ್ನಡ ಚಿತ್ರ. ನನಗೆ ಈ ಚಿತ್ರದಲ್ಲಿ ಅವಕಾಶ ನೀಡಿದ ನಿರ್ದೇಶಕ , ನಿರ್ಮಾಪಕರುಗಳಿಗೆ ಧನ್ಯವಾದ ತಿಳಿಸುತ್ತೇನೆ. ನನ್ನ ತಂದೆಯವರು ಕೂಡ ರಾಜಕುಮಾರ್ ರವರ ಅಭಿಮಾನಿ , ಹಾಗೆಯೇ ನಾನು ಕೂಡ ಬಾಲ್ಯದಿಂದ ಕನ್ನಡ ಸಿನಿಮಾಗಳ ಬಗ್ಗೆ ತಿಳಿದುಕೊಂಡಿದ್ದೆ. ನನಗೆ ಪುನೀತ್ ರಾಜಕುಮಾರ್ ಬಗ್ಗೆ ಅಪಾರ ಗೌರವ. ಅವರ ಸ್ಮಾರಕಕ್ಕೆ ಹೋಗಿ ಆಶೀರ್ವಾದ ಪಡೆದುಕೊಂಡು ನಾನು ಬಂದೆ , ಅಪ್ಪು ಅಣ್ಣ ಸರಳ ವ್ಯಕ್ತಿತ್ವ , ಸ್ನೇಹಜೀವಿ ಅವರು ಸದಾ ನಮ್ಮ ಜೊತೆ ಇದ್ದೇ ಇರುತ್ತಾರೆ. ಇದು ನನ್ನ ಕನ್ನಡದ ಮೊದಲ ಚಿತ್ರವಾದರೂ ಎಲ್ಲಿಯೂ ಬೇಸರವಾಗದಂತೆ ಇಡೀ ತಂಡ ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ. ಎರಡು ಭಾಷೆಯ ಚಿತ್ರೀಕರಣ ಸಮಯ ಮರೆಯುವುದಕ್ಕೆ ಕಷ್ಟ , ಸಿನಿಮಾ ಉತ್ತಮವಾಗಿ ಬಂದಿದೆ. ನಮ್ಮ ತಂಡಕ್ಕೆ ನಿಮ್ಮ ಸಪೋರ್ಟ್ ಇರಲಿ ಎಂದು ಕೇಳಿಕೊಂಡರು. ಇನ್ನು ಮತ್ತೊಂದು ಪ್ರಮುಖ ಪೊಲೀಸ್ ಪಾತ್ರದಲ್ಲಿ ಅಭಿನಯಿಸಿರುವ ಪ್ರಮೋದ್ ಶೆಟ್ಟಿ ಕೂಡ ಮಾತನಾಡುತ್ತ ನಿರ್ದೇಶಕರ ಒಂದು ವಿಷನ್ ಈ ಚಿತ್ರದಲ್ಲಿ ಕಾಣುತ್ತೆ. ಮಲಯಾಳಂ ಭಾಷೆ ನನಗೆ ಬರೆದಿದ್ದರೂ, ಎರಡು ಭಾಷೆಯಲ್ಲಿ ಅಭಿನಯಿಸಿದ ಸಂತೋಷ ನನಗೆ ಇದೆ ಎಂದರು ಅದೇ ರೀತಿ ಹಿರಿಯ ನಟ ಸಿದ್ಲಿಂಗು ಶ್ರೀಧರ್ , ನಟಿ ಅರ್ಚನಾ ಕೊಟ್ಟಿಗೆ , ಸಾಯಿ ಭೈರವ ಕೂಡ ತಮ್ಮ ತಮ್ಮ ಅನುಭವಗಳನ್ನು ಹಂಚಿಕೊಂಡರು.

ಇದೊಂದು ಪವರ್ಫುಲ್ ಕಥೆಯಾಗಿದ್ದು , ಈಗಾಗಲೇ ಈ ಚಿತ್ರದ ಟೀಸರ್ ಬಾರಿ ವೈರಲ್ ಆಗಿ ಸದ್ದು ಮಾಡುತ್ತಿದೆ. ವಿಶೇಷ ಎಂದರೆ ಕನ್ನಡದ ಕಂಚಿನ ಕಂಠದ ನಟ ವಸಿಷ್ಟ ಸಿಂಹ ಹಿನ್ನೆಲೆ ಧ್ವನಿ ಇರುವ ಕನ್ನಡದ ಟೀಸರ್ ಬಹಳ ವಿಶೇಷವಾಗಿದೆ. ಎರಡು ಭಾಷೆಯಲ್ಲಿ ನಿರ್ಮಾಣಗೊಂಡಿರುವ ಈ ಚಿತ್ರ ಬಿಡುಗಡೆಗೆ ಸಕಲ ಸಿದ್ಧತೆಗಳನ್ನು ತಂಡ ಮಾಡಿಕೊಳ್ಳುತ್ತಿದ್ದು, ಅತಿ ಶೀಘ್ರದಲ್ಲಿ ಪ್ರೇಕ್ಷಕರ ಮುಂದೆ ಬರಲಿದೆಯಂತೆ. ಭ್ರಷ್ಟ ಅಧಿಕಾರಿಗಳ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ ಬರುತ್ತಿರುವ ಈ ಚಿತ್ರ ಬಹಳಷ್ಟು ನಿರೀಕ್ಷೆಯನ್ನು ಹುಟ್ಟು ಹಾಕಿದೆ.
ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ