- ರಾಘವೇಂದ್ರ ಅಡಿಗ ಎಚ್ಚೆನ್.
ಕನ್ನಡ ಚಿತ್ರರಂಗಕ್ಕೆ ಮತ್ತೊಂದು ಹೊಸ ಆಲೋಚನೆಯ ಹೊಸಬರ ತಂಡದ ಆಗಮನವಾಗಿದೆ. ಚೇತನ್ ಜೋಡಿದಾರ್ ನಿರ್ದೇಶನದಲ್ಲಿ ಮೂಡಿ ಬಂದಿರುವ ‘ಟೈಮ್ ಪಾಸ್’ (Time Pass) ಚಿತ್ರದ ಮೂಲಕ ಪ್ರತಿಭಾನ್ವಿತ ಕಲಾವಿದರು, ತಂತ್ರಜ್ಞರ ಸಮಾಗಮವಾಗಿದೆ. ಈ ಸಿನಿಮಾದ ಚಿತ್ರೀಕರಣ ಕಂಪ್ಲೀಟ್ ಆಗಿದೆ. ಇದೀಗ ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿರುವ ಈ ಚಿತ್ರದ ಶೀರ್ಷಿಕೆ ಹಾಗೂ ಫಸ್ಟ್ ಲುಕ್ ರಿಲೀಸ್ ಆಗಿದೆ. ಈ ಸಿನಿಮಾ ಕುರಿತಾದ ಒಂದಷ್ಟು ವಿವರಗಳನ್ನು ಚಿತ್ರತಂಡ ಹಂಚಿಕೊಂಡಿದೆ. ಚಿತ್ರರಂಗದ ಪ್ರಸ್ತುತ ಸ್ಥಿತಿಗತಿಗಳ ನೈಜ ಘಟನೆಗಳನ್ನು ಆಧರಿಸಿದ ಕಥಾನಕವೊಂದನ್ನು ದೃಶ್ಯ ರೂಪದಲ್ಲಿ ತೋರಿಸಲಾಗಿದೆ.
time pass 2‘ಟೈಮ್ ಪಾಸ್’ ಚಿತ್ರದ ಮೂಲಕ ಚೇತನ್ ಜೋಡಿದಾರ್ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ಸಾಮಾನ್ಯವಾಗಿ ಹೀಗೆ ನಿರ್ದೇಶಕರಾದವರು ಬೇರೆ ಬೇರೆ ನಿರ್ದೇಶಕರ ಬಳಿ ಕೆಲಸ ಮಾಡಿದ ಅನುಭವ ಹೊಂದಿರುತ್ತಾರೆ. ಆದರೆ, ಚೇತನ್ ಜೋಡಿದಾರ್ ಹಿನ್ನೆಲೆ ಭಿನ್ನವಾಗಿದೆ. ಯಾಕೆಂದರೆ, ಅವರು ಈವರೆಗೂ ಯಾವ ನಿರ್ದೇಶಕರ ಬಳಿಯೂ ಕೆಲಸ ಮಾಡಿಲ್ಲ. ಯಾವ ಸಿನಿಮಾ ಶಾಲೆಗಳಲ್ಲಿಯೂ ಕಲಿಕೆ ಮಾಡಿಲ್ಲ. ಸಿನಿಮಾಗಳನ್ನು ನೋಡುತ್ತಾ, ಯೂಟ್ಯೂಬ್ ಮೂಲಕ ನಿರ್ದೇಶನದ ಪಟ್ಟುಗಳನ್ನು ಅರಿತುಕೊಳ್ಳುತ್ತಲೇ ಅವರು ‘ಟೈಮ್ ಪಾಸ್’ ಚಿತ್ರವನ್ನು ನಿರ್ದೇಶಕನಾಗಿ ಪೂರ್ಣಗೊಳಿಸಿದ್ದಾರೆ. ಒಂದೊಳ್ಳೆಯ ತಂಡದೊಂದಿಗೆ, ಪಕ್ಕಾ ಮನೋರಂಜನಾತ್ಮಕ ಚಿತ್ರವೊಂದನ್ನು ರೂಪಿಸಿರುವ ಭರವಸೆ ಅವರಲ್ಲಿದೆ.
time pass 1ಶ್ರೀ ಚೇತನ ಸರ್ವಿಸಸ್ ಬ್ಯಾನರ್ ಮೂಲಕ ಗುಂಡೂರು ಶೇಖರ್, ಕಿರಣ್ ಕುಮಾರ್ ಶೆಟ್ಟಿ, ಎಂ.ಹೆಚ್ ಕೃಷ್ಣಮೂರ್ತಿ ಮತ್ತು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಇದು ಡಾರ್ಕ್ ಹ್ಯೂಮರ್ ಜಾನರಿಗೆ ಸೇರಿಕೊಳ್ಳುವ ಸಿನಿಮಾ ಇದಾಗಿದೆ. ಇದುವರೆಗೂ ಒಂದಷ್ಟು ಬಾರಿ ಸಿನಿಮಾ ರಂಗಕ್ಕೆ ಕನ್ನಡಿ ಹಿಡಿದಂಥಾ ಕಥನಗಳೇ ಚಿತ್ರಗಳಾಗಿ ಬಂದಿವೆ. ಇಲ್ಲಿಯೂ ಕೂಡ ಭಿನ್ನ ಧಾಟಿಯಲ್ಲಿ ಸಿನಿಮಾ ರಂಗದ ವಾಸ್ತವಕ್ಕೆ ಕನ್ನಡಿ ಹಿಡಿದಂಥಾ ಕಥನವಿದೆಯಂತೆ. ಸಿನಿಮಾ ವ್ಯಾಮೋಹ ಹೊಂದಿರುವ ಏಳು ಪಾತ್ರಗಳು ಒಂದೆಡೆ ಸಂಗಮಿಸಿ, ಆ ಮೂಲಕ ತೆರೆದುಕೊಳ್ಳುವ ರೋಚಕ ಕಥೆಯನ್ನು ಹಾಸ್ಯದ ಧಾಟಿಯಲ್ಲಿ ನಿರೂಪಿಸಲಾಗಿದೆ. ಇಲ್ಲಿ 4 ಹಾಡುಗಳು ಮತ್ತು ಎರಡು ಫೈಟ್ ಸೀನುಗಳಿವೆ. ಹಾಡುಗಳನ್ನು ಲೈವ್ ಮ್ಯೂಸಿಕ್ ಮೂಲಕ ರೂಪಿಸಲಾಗಿದೆ. ಇಳಯರಾಜಾ, ಎ.ಆರ್ ರೆಹಮಾನ್ ಜೊತೆ ಕಾರ್ಯನಿರ್ವಹಿಸಿದವರೇ ಹಾಡುಗಳನ್ನು ರೂಪಿಸಿದ್ದಾರೆ. ತಂತ್ರಜ್ಞರಂತೂ ನುರಿತ ತಂತ್ರಜ್ಞರನ್ನೇ ಸರಿಗಟ್ಟುವಂತೆ ಕಾರ್ಯನಿರ್ವಹಿಸಿದ್ದಾರೆ, ಆ ಕಾರಣದಿಂದಲೇ ಮೇಕಿಂಗ್‌ನಲ್ಲಿಯೂ ಅದ್ಧೂರಿತನ ಕಾಣಿಸುತ್ತದೆಂಬ ನಂಬಿಕೆ ಚಿತ್ರತಂಡದ್ದು.
time pass 1 1ಅಂದಹಾಗೆ, ಸಾಕಷ್ಟು ಸಿನಿಮಾಗಳಿಗೆ ಕೆಲಸ ಮಾಡಿರುವ ಪ್ರಚಾರ ಕಲೆಯ ನಿಪುಣರಾದ ಮಣಿ ಅವರೇ ಈ ಚಿತ್ರದ ಪ್ರಚಾರ ಕಲೆಯ ಜವಾಬ್ದಾರಿ ನಿಭಾಯಿಸಿದ್ದಾರೆ. ಇಮ್ರಾನ್ ಪಾಷಾ, ವೈಸಿರಿ ಕೆ ಗೌಡ, ರತ್ಷಾರಾಮ್, ಕೆ. ಚೇತನ್ ಜೋಡಿದಾರ್, ಓಂ ಶ್ರೀ ಯಕ್ಷಶಿಫ್, ಪ್ರಭಾಕರ್ ರಾವ್, ನವೀನ್ ಕುಮಾರ್, ಸಂಪತ್ ಕುಮಾರ್, ಅಶ್ವಿನಿ ಶ್ರೀನಿವಾಸ್ ಮುಖ್ಯ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಗಿರೀಶ್ ಗೌಡ ಸಾಹಸ ನಿರ್ದೇಶನ, ವೈಷ್ಣವಿ ಸತ್ಯನಾರಾಯಣ್ ನೃತ್ಯ ನಿರ್ದೇಶನ, ರಾಜೀವ್ ಗಣೇಶ್ ಛಾಯಾಗ್ರಹಣ, ಮಣಿ ಪ್ರಚಾರ ಕಲೆ, ಡಿ. ಶಾಮಸುಂದರ್, ಬಿ.ಕೆ ದಯಾನಂದ ನಿರ್ಮಾಣ ನಿರ್ವಹಣೆ, ಹರಿ ಪರಮ್ ಸಂಕಲನ, ಡಿ.ಎಂ ಉದಯ ಕುಮಾರ್ (ಡಿಕೆ) ಸಂಗೀತ ನಿರ್ದೇಶನದಲ್ಲಿ ಈ ಚಿತ್ರ ಮೂಡಿ ಬಂದಿದೆ.