ನಟಿ, ಆ್ಯಂಕರ್, ಲೇಖಕಿ, ನಿರ್ದೇಶಕಿಯಾಗಿ ಬಹುಮುಖ ವ್ಯಕ್ತಿತ್ವ ಹೊಂದಿರುವ ಸುಶೀಲಾ ಜಾಂಗೀರಾ ಬಾಲಿವುಡ್ ನ ಅಪರೂಪದ ಪ್ರತಿಭಾನ್ವಿತರಲ್ಲಿ ಒಬ್ಬರು. `ಖಾಕಿ, ಸ್ಪಶ್: ದಿ ಟಚ್,' ಮುಂತಾದ ಅನೇಕ ಚಿತ್ರಗಳಲ್ಲಿ ಈಕೆಯ ನಟನೆಯ ಅದ್ಭುತ ಪ್ರತಿಭೆ ಪ್ರಶಂಸನೀಯ. ಕಳೆದ ವರ್ಷ ಈಕೆಯ ರಚನೆಯ, ನಿರ್ದೇಶನದ `ಮೇರಿ ರಾಕ್ ಸ್ಟಾರ್ ಲಾಲಿ ಜೀನ್ಸ್' ಚಿತ್ರ ಬಿಡುಗಡೆಯಾದಾಗ ಈಕೆಗೆ `ದಾದಾ ಸಾಹೇಬ್ ಫಾಲ್ಕೆ' ಅವಾರ್ಡ್ ಸಹಿತ ಅನೇಕ ಪ್ರಶಸ್ತಿಗಳು ಅರಸಿಬಂದವು.
ಇತ್ತೀಚೆಗೆ ಇವರ `ಫೀಡ್ ಆರ್ ಬ್ಲೀಡ್ ಇಂಡಿಯಾ' ಬಹು ಚರ್ಚೆಯಲ್ಲಿದೆ. ಇದರಲ್ಲಿ ಮುಖ್ಯವಾಗಿ ಅನಾಥರಾದ ರಸ್ತೆ, ಜೋಪಡಿ, ಸ್ಲಂಗಳಲ್ಲಿ ಹೇಗೋ ಬದುಕುವ ಬಡ, ಭಿಕ್ಷುಕಿಯರ ಮುಟ್ಟಿನ ಸಮಸ್ಯೆಗಳನ್ನು ಕುರಿತಾಗಿ ಈ ಚಿತ್ರದಲ್ಲಿ ಚರ್ಚಿಸುತ್ತಾ, ಇಂಥವರು ಹೊಟ್ಟೆ ತುಂಬಿಸಿಕೊಳ್ಳಲು ನೋಡಬೇಕೋ ಅಥವಾ ಸ್ಯಾನಿಟರಿ ನ್ಯಾಪ್ ಕಿನ್ ಖರೀದಿಸಲು ಚಿಂತಿಸಬೇಕೋ ಎನ್ನುತ್ತಾರೆ. ಕೊರೋನಾ ಕಾಲದಲ್ಲಿ ಈ ಚಿತ್ರವನ್ನು ಸುಮಾರು 15 ರಾಷ್ಟ್ರೀಯ, ಅಂತಾರಾಷ್ಟ್ರೀಯ ಪ್ರಶಸ್ತಿಗಳಿಂದ ಪುರಸ್ಕರಿಸಲಾಯಿತು.
ನಿಮ್ಮ ಹಿಂದಿನ `ಮೇರಿ ರಾಕ್ ಸ್ಟಾರ್ ಲಾಲಿ ಜೀನ್ಸ್' ಚಿತ್ರಕ್ಕೆ ಪ್ರತಿಕ್ರಿಯೆ ಹೇಗಿತ್ತು?
ಇದೊಂದು ಶಾರ್ಟ್ ಫಿಲ್ಮ್, ಉತ್ತಮ ಪ್ರತಿಕ್ರಿಯೆ ದೊರಕಿತು. ಇದನ್ನು ಅನೇಕ ಪ್ಲಾಟ್ ಫಾರ್ಮ್ ಗಳಲ್ಲಿ ಗಮನಿಸಬಹುದಾಗಿದೆ. ಇದಕ್ಕೆ `ದಾದಾ ಸಾಹೇಬ್ ಫಾಲ್ಕೆ' ಅವಾರ್ಡ್ ಸಹ ಬಂತು. ಬೆಂಗಳೂರು, ಪುಣೆ, ನಾಸಿಕ್ ಗಳ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲಿ ಇದನ್ನು ಪುರಸ್ಕರಿಸಲಾಯಿತು. ನಾನು ನನ್ನ ಮೊದಲ ಚಿತ್ರದಿಂದಲೇ ಕಂಟೆಂಟ್ ಪ್ರಧಾನ ಚಿತ್ರಗಳನ್ನು ಮಾಡುತ್ತಾ ಬಂದಿದ್ದೇನೆ. ಹೀಗಾಗಿ ಇಂದಿನ ಜ್ವಲಂತ ಸಮಸ್ಯೆಯಾದ ಮುಟ್ಟಿನ ಕುರಿತಾಗಿ `ಫೀಡ್ ಆರ್ ಬ್ಲೀಡ್ ಇಂಡಿಯಾ' ಚಿತ್ರ ಬಿಡುಗಡೆ ಮಾಡಿದ್ದೇನೆ.
ಈ ಚಿತ್ರದ ವಿಷಯ ನಿಮ್ಮ ಮನಸ್ಸಿಗೆ ಬಂದದ್ದು ಹೇಗೆ?
ಈ ಚಿತ್ರ ಬಡ ಹೆಂಗಸರ ಮುಟ್ಟು, ಅವರ ದೈಹಿಕ ಸುರಕ್ಷೆ, ಸ್ಯಾನಿಟರಿ ಪ್ಯಾಡ್ ಹಾಗೂ 2 ಹೊತ್ತಿನ ಊಟದ ಕುರಿತಾದದ್ದು. ಮುಟ್ಟಿನ ಕುರಿತಾಗಿ ಈಗಾಗೀ ಅನೇಕ ಚಿತ್ರ, ಶಾರ್ಟ್ ಫಿಲ್ಮ್ಸ್, ಡಾಕ್ಯುಮೆಂಟರಿಗಳು ಬಂದಿವೆ ಎಂಬುದೇನೋ ನಿಜ, ವಿದೇಶಗಳಲ್ಲೂ ಈ ಕುರಿತು ಸಾಕಷ್ಟು ಚರ್ಚೆಗಳಾಗಿವೆ. ಆದರೆ ಯಾರೂ ಈ ವಿಷಯದ ಕಡೆ ಗಂಭೀರವಾಗಿ ಗಮನಹರಿಸೋಲ್ಲ. ಯಾವ ಹೆಣ್ಣಿಗೆ 2 ಹೊತ್ತು ಊಟ, ತಲೆಗೊಂದು ಸೂರು ಇಲ್ಲವೇ, ಫುಟ್ ಪಾತ್ ಗಳಲ್ಲಿ ಭಿಕ್ಷೆ ಬಿಡುವಳೋ.... ಅಂಥವರಿಗೆ ತಮ್ಮ ಹೊಟ್ಟೆ ತುಂಬಿಸಿಕೊಳ್ಳುವುದೇ ದೊಡ್ಡ ಚಿಂತೆ ಆಗಿರುತ್ತದೆ. ಇಂಥವರು ಸ್ಯಾನಿಟರಿ ಪ್ಯಾಡ್ ಕುರಿತು ಚಿಂತಿಸಲು ಅವಕಾಶವಾದರೂ ಎಲ್ಲಿ?
ನನ್ನ ಮನದಲ್ಲಿ ಸದಾ ಏಳುತ್ತಿದ್ದ ಒಂದು ಪ್ರಶ್ನೆ ಎಂದರೆ, ಇಂಥವರನ್ನು ನಾವೇಕೆ ನಿರ್ಲಕ್ಷಿಸುತ್ತಿದ್ದೇವೆ? ಮುಟ್ಟಿನ ಕುರಿತಾಗಿ ಎಲ್ಲಾ ಸಾಮಾನ್ಯ ಹೆಂಗಸರಿಗೂ ಇರುವ ಚಿಂತೆ, ಸಮಸ್ಯೆಗಳು ಇವರುಗಳನ್ನೂ ಕಾಡುತ್ತದಲ್ಲವೇ? ಅವರ ಅಗತ್ಯಗಳು ಬೇರೆಯವರ ತರಹವೇ ಅಲ್ಲವೇ? ಆದರೆ ಈ ಸಮಾಜ ಇಂಥವರನ್ನು ಕಡೆಗಣಿಸುವುದೇಕೆ?
ಸಣ್ಣ ದೊಡ್ಡ ಮನೆಗಳಲ್ಲಿ ವಾಸಿಸುವ ಹೆಂಗಸರಂತೆಯೇ ಇವರೂ ಸಮಾಜದಲ್ಲಿ ಮಾನ್ಯರಲ್ಲವೇ? ಬೀದಿ ಬೀದಿ ಸುತ್ತಾಡುವ ಇವರು ಈ ಕುರಿತಾಗಿ ಏನು ತಾನೇ ಕ್ರಮ ಕೈಗೊಂಡಾರು? ಇವರುಗಳು ಅಂಥ ಸಂದರ್ಭದಲ್ಲಿ ಸ್ನಾನ ಮಾಡೋದೂ ಉಂಟೆ? ಮುಟ್ಟಿನ ದಿನಗಳಲ್ಲಿ ಎಂಥ ಸುರಕ್ಷತಾ ಕ್ರಮ ಕೈಗೊಳ್ಳುತ್ತಾರೆ? ಈ ಎಲ್ಲಾ ಪ್ರಶ್ನೆಗಳಿಗೂ ಉತ್ತರ ಹುಡುಕಲಿ. ನನ್ನ ಇಬ್ಬರು ಸಿಬ್ಬಂದಿ ಜೊತೆ ಕ್ಯಾಮೆರಾ ಹಿಡಿದು ಸ್ಲಂ ಕಡೆ ಹೊರಟೆ. ಕಷ್ಟಪಟ್ಟು ಅಂತೂ ಇವರುಗಳ ಜೊತೆ ಮಾತನಾಡಿ ಸಂಗ್ರಹಿಸಿದ ಫೋಟೋ ಸಂಭಾಷಣೆಗಳನ್ನೇ ಆಧರಿಸಿ ಒಂದು ಚಿತ್ರ ಮಾಡಿದ್ದಾಯಿತು, ಅದೇ `ಫೀಡ್ ಆದ ಬ್ಲೀಡ್ ಇಂಡಿಯಾ!'