ಸಾಣೇಹಳ್ಳಿ ಶ್ರೀ ಶಿವಕುಮಾರ ಕಲಾ ಸಂಘದ ವತಿಯಿಂದ ನೀಡಲಾಗುವ ‘ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಹಿರಿಯ ನಟಿ ಮತ್ತು ವಿಧಾನ ಪರಿಷತ್ ಸದಸ್ಯೆ ಉಮಾಶ್ರೀ ಅವರನ್ನು ಆಯ್ಕೆ ಮಾಡಲಾಗಿದೆ.
ರಂಗಭೂಮಿ ಮತ್ತು ಚಿತ್ರರಂಗಕ್ಕೆ ಅಮೂಲ್ಯ ಕೊಡುಗೆ ನೀಡಿದ ವ್ಯಕ್ತಿಗಳನ್ನು ಗುರುತಿಸುವ ಉದ್ದೇಶದಿಂದ ಈ ಪ್ರಶಸ್ತಿಯನ್ನು ನೀಡಲಾಗುತ್ತಿದೆ. ಶಿವಕುಮಾರ ಶಿವಾಚಾರ್ಯ ಸ್ವಾಮೀಜಿ ಅವರ ಹೆಸರಲ್ಲಿ ಈ ಪ್ರಶಸ್ತಿ ನೀಡಲಾಗುತ್ತಿದ್ದು, ಇದರಲ್ಲಿ 50,000 ರೂಪಾಯಿ ನಗದು ಬಹುಮಾನ ಮತ್ತು ಸ್ಮರಣಿಕೆ ನೀಡಿ ಗೌರವಿಸಲಾಗುವುದು.
ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಶ್ರೀ ಪಂಡಿತಾರಾಧ್ಯ ಸ್ವಾಮೀಜಿ ಅವರು ಈ ಬಾರಿ ಉಮಾಶ್ರೀ ಅವರನ್ನು ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ ಎಂದು ಘೋಷಿಸಿದ್ದಾರೆ. ನವೆಂಬರ್ 2 ರಿಂದ 7 ರ ವರೆಗೆ ಸಾಣೇಹಳ್ಳಿಯಲ್ಲಿ ನಡೆಯಲಿರುವ ರಾಷ್ಟ್ರೀಯ ನಾಟಕೋತ್ಸವ ಸಮಾರೋಪದಲ್ಲಿ ಈ ಪ್ರಶಸ್ತಿ ಪ್ರದಾನ ಮಾಡಲಾಗುವುದು.
ಶಿವಕುಮಾರ ಕಲಾಸಂಘ ರಂಗಭೂಮಿಗೆ ಸಲ್ಲಿಸಿದ ಜೀವಮಾನದ ಕೊಡುಗೆಯನ್ನು ಮನ್ನಿಸಿ ಪ್ರತಿವರ್ಷ ಕೊಡಮಾಡುವ ಪ್ರತಿಷ್ಠಿತ ‘ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಈ ಬಾರಿ ಬೆಂಗಳೂರಿನ ಕನ್ನಡ ರಂಗಭೂಮಿ ಮತ್ತು ಚಲನಚಿತ್ರರಂಗದ ಪ್ರತಿಭಾನ್ವಿತ ಅಭಿನೇತ್ರಿ, ರಂಗಭೂಮಿಯ ಹಿರಿಯ ಕಲಾವಿದೆ ಉಮಾಶ್ರೀ ಅವರನ್ನು ಆಯ್ಕೆ ಮಾಡಿದೆ ಎಂದು ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಗಳವರು ತಿಳಿಸಿದ್ದಾರೆ.
೨೦೦೪ ರಿಂದ ಶಿವಕುಮಾರ ಶಿವಾಚಾರ್ಯ ಸ್ವಾಮಿಗಳವರ ಹೆಸರಿನಲ್ಲಿ ‘ಶ್ರೀ ಶಿವಕುಮಾರ ಪ್ರಶಸ್ತಿ’ಯನ್ನು ನಮ್ಮ ಕಲಾಸಂಘವು ಕೊಡುತ್ತಾ ಬಂದಿದೆ. ರಂಗಭೂಮಿ ಮತ್ತು ರಂಗಚಟುವಟಿಕೆಗಳಲ್ಲಿ ಮಹತ್ವದ ಸಾಧನೆ ಮಾಡಿದ ಸಾಧಕರಿಗೆ ಲಿಂಗಭೇದವಿಲ್ಲದೆ ಈ ಪ್ರಶಸ್ತಿಯನ್ನು ನೀಡುತ್ತಾ ಬರಲಾಗಿದೆ ಎಂದಿದ್ದಾರೆ.
ಆಯ್ಕೆ ಸಮಿತಿಯ ಮುಂದೆ ಹತ್ತಾರು ಪ್ರತಿಭಾವಂತ ಮತ್ತು ಅರ್ಹ ರಂಗಕರ್ಮಿಗಳ ಹೆಸರುಗಳಿದ್ದವು. ಪ್ರಶಸ್ತಿ ಒಂದೇ ಆಗಿರುವುದರಿಂದ ಅಂತಿಮವಾಗಿ ರಂಗಕ್ಷೇತ್ರ, ಚಲನಚಿತ್ರ ಕ್ಷೇತ್ರ ಮತ್ತು ರಾಜಕೀಯ ಕ್ಷೇತ್ರದಲ್ಲಿ ಕ್ರಿಯಾಶೀಲರಾಗಿ ಈಗಲೂ ತೊಡಗಿಕೊಂಡಿರುವ ಶ್ರೀಮತಿ ಉಮಾಶ್ರೀ ಅವರನ್ನು ಆಯ್ಕೆ ಮಾಡಿದೆ. ಇಂತಹ ಅಪರೂಪದ ರಂಗಕಲಾವಿದೆ ‘ಶ್ರೀ ಶಿವಕುಮಾರ ಪ್ರಶಸ್ತಿ’ಗೆ ಭಾಜನರಾಗಿರುವುದು ನಮಗೆ ತುಂಬಾ ಸಂತೋಷವಾಗಿದೆ ಎಂದು ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿಯವರು ತಿಳಿಸಿದ್ದಾರೆ.





