- ರಾಘವೇಂದ್ರ ಅಡಿಗ ಎಚ್ಚೆನ್.
ವಾಮನ', 2025ರ ಬಹುನಿರೀಕ್ಷಿತ ಚಿತ್ರಗಳಲ್ಲಿ ಒಂದು. ಧನ್ವೀರ್ ನಾಯಕ ನಟನಾಗಿ ಅಭಿನಯಿಸಿರುವ ಈ ಚಿತ್ರದ ಟ್ರೇಲರ್ ಅನ್ನು ಇಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನಾವರಣಗೊಳಿಸಿದ್ದಾರೆ. ಈ ಮೂಲಕ ತಮ್ಮ ಆಪ್ತ ಗೆಳೆಯ ಧನ್ವೀರ್ಗೆ ಸಾಥ್ ಕೊಟ್ಟಿದ್ದಾರೆ.
ಸಂಜೆ ಟ್ರೇಲರ್ ರಿಲೀಸ್ ಹಿನ್ನೆಲೆ, ಮಧ್ಯಾಹ್ನದಿಂದಲೇ ಅಭಿಮಾನಿಗಳ ಸಂಭ್ರಮಾಚರಣೆ ಶುರುವಾಗಿತ್ತು. ನಾಯಕ ನಟ ಧನ್ವೀರ್ ಜೊತೆಗೆ ದರ್ಶನ್ ಅವರಿರುವ ಕಟೌಟ್ಗೆ ಹಾಲಿನ ಅಭಿಷೇಕ ಮಾಡಲಾಗಿದೆ. ಡೋಲಿನ ಸದ್ದಿಗೆ ಫ್ಯಾನ್ಸ್ ಕುಣಿದು ಕುಪ್ಪಳಿಸಿದ್ದಾರೆ. ದರ್ಶನ್ ಮೇಲಿರುವ ಅಭಿಮಾನವನ್ನು ಅಭಿಮಾನಿಗಳು ವ್ಯಕ್ತಪಡಿಸಿದ್ದು, ಫೋಟೋ ವಿಡಿಯೋಗಳು ಆನ್ಲೈನ್ನಲ್ಲಿ ವೈರಲ್ ಆಗಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮುಖ್ಯಭೂಮಿಕೆಯ ಕೊನೆ ಸಿನಿಮಾ 'ಕಾಟೇರ'. 2023ರ ಡಿಸೆಂಬರ್ ಕೊನೆಗೆ ಬಿಡುಗಡೆ ಆದ ಸಿನಿಮಾ ಭರ್ಜರಿ ಯಶಸ್ಸು ಕಂಡಿತ್ತು. ಸಿನಿಮಾದ ಸಕ್ಸಸ್ ಪಾರ್ಟಿಯನ್ನೂ ಆಯೋಜಿಸಲಾಗಿತ್ತು. ಆ ಬಳಿಕ ನಟ ದರ್ಶನ್, ಯಾವುದೇ ಸಾರ್ವಜನಿಕ ಕಾರ್ಯಕ್ರಮ ಅಥವಾ ಸಿನಿಮಾ ಪ್ರಮೋಶನಲ್ ಈವೆಂಟ್ಗಳಲ್ಲಿ ಕಾಣಿಸಿಕೊಂಡಿಲ್ಲ. ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಿಲುಕಿದ ಹಿನ್ನೆಲೆ, ಕೆಲ ಕಾಲ ಸೆರೆವಾಸ ಅನುಭವಿಸಬೇಕಾಯಿತು. 2024ರ ಜೂನ್ನಲ್ಲಿ ಹತ್ಯೆ ಆರೋಪ ಪ್ರಕರಣದಲ್ಲಿ ಅರೆಸ್ಟ್ ಆಗಿ, ಡಿಸೆಂಬರ್‌ನಲ್ಲಿ ರೆಗ್ಯುಲರ್ ಬೇಲ್ ಪಡೆದಿರುವ ದರ್ಶನ್ ಇಂದು ತಮ್ಮ ಆಪ್ತ ಸ್ನೇಹಿತನ ಟ್ರೇಲರ್ ಅನಾವರಣಗೊಳಿಸಿದ್ದಾರೆ. ಈವೆಂಟ್ಗೆ ಖುದ್ದು ಆಗಮಿಸುತ್ತಾರೆಂದು ಅಭಿಮಾನಿಗಳು ನಿರೀಕ್ಷಿಸಿದ್ದರು. ಆದ್ರೆ ವಿಡಿಯೋ ಸಂದೇಶದ ಮೂಲಕ ಚಿತ್ರತಂಡಕ್ಕೆ ಸಾಥ್ ನೀಡಿದ್ದಾರೆ.
ವಿಡಿಯೋ ಸಂದೇಶದ ಮೂಲಕ, ಧನ್ವೀರ್ ಸಿನಿಮಾ ಬಗ್ಗೆ ಮಾತನಾಡಿ ಶುಭ ಹಾರೈಸಿದ್ದಾರೆ. ಜೊತೆಗೆ ಬದುಕಿರೋತನಕ ಕನ್ನಡ ಸಿನಿಮಾಗಳನ್ನೇ ಮಾಡೋದು. ಕನ್ನಡಕ್ಕೆ ತಮ್ಮನ್ನು ಸಮರ್ಪಿಸೋದು ಎಂದು ಅಭಿಮಾನಿಗಳಿಗೆ ಭರವಸೆ ನೀಡಿದ್ದಾರೆ.
'ಬಜಾರ್', 'ಬೈ ಟು ಲವ್' ಮತ್ತು 'ಕೈವ' ಸಿನಿಮಾಗಳ ಮೂಲಕ ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡ ನಟ ಧನ್ವೀರ್ ಗೌಡ ಅವರು ಚಾಲೆಂಜಿಂಗ್ ಸ್ಟಾರ್ನ ಬೆಸ್ಟ್ ಫ್ರೆಂಡ್ ಕೂಡಾ ಹೌದು. ದಾಸನ ಕಠಿಣ ಸಂದರ್ಭ ಸಾಥ್ ಕೊಟ್ಟವರು ಇವರೇ. ಇದೀಗ, ಇವರ ಮಂದಿನ ಚಿತ್ರಕ್ಕೆ ದರ್ಶನ್ ಬೆಂಬಲ ಕೊಟ್ಟಿದ್ದಾರೆ. ಪೋಸ್ಟರ್ಸ್, ಟೀಸರ್ ಹಾಗೂ ಹಾಡುಗಳಿಂದಲೇ ಗಮನ ಸೆಳೆದಿದ್ದ ಚಿತ್ರತಂಡ ಇಂದು ತನ್ನ ಟ್ರೇಲರ್ ಅನಾವರಣಗೊಳಿಸಿದೆ. ಏಪ್ರಿಲ್ 10ಕ್ಕೆ ಸಿನಿಮಾ ಬಿಡುಗಡೆ ಆಗಲಿದೆ.
ಬಹುನಿರೀಕ್ಷಿತ ವಾಮನ ಚಿತ್ರಕ್ಕೆ ಶಂಕರ್ ರಾಮನ್ ಆ್ಯಕ್ಷನ್ ಕಟ್ ಹೇಳಿದ್ದಾರೆ. ಡೈರೆಕ್ಷನ್ ಜೊತೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆಯ ಜವಾಬ್ದಾರಿಯನ್ನೂ ಹೊತ್ತಿದ್ದಾರೆ. ಚೇತನ್ ಗೌಡ ನಿರ್ಮಾಣದ ಚೊಚ್ಚಲ ಚಿತ್ರ ಇದು. ಅಜನೀಶ್ ಬಿ.ಲೋಕನಾಥ್ ಅವರ ಸಂಗೀತ, ಮಹೇನ್ ಸಿಂಹ ಅವರ ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ, ಭೂಷಣ್ ನೃತ್ಯ ನಿರ್ದೇಶನ, ಅರ್ಜುನ್ ರಾಜ್, ವಿಕ್ರಂ ಮೋರ್ ಹಾಗೂ ಜಾಲಿ ಬಾಸ್ಟಿನ್ ಸಾಹಸ ನಿರ್ದೇಶನ ಹಾಗೂ ನವೀನ್ ಹಾಡೋನಳ್ಳಿ ಅವರ ಕಲಾ ನಿರ್ದೇಶನ ಈ ಚಿತ್ರಕ್ಕಿದೆ.