- ರಾಘವೇಂದ್ರ ಅಡಿಗ ಎಚ್ಚೆನ್.
ಮಹಿರಾ ಖ್ಯಾತಿಯ ಮಹೇಶ್ ಗೌಡ ಅವರು ನಿರ್ಮಾಣ ಮಾಡಿ, ನಿರ್ದೇಶನದ ಹೊಣೆ ಹೊತ್ತುಕೊಂಡು, ಮುಖ್ಯ ಪಾತ್ರದಲ್ಲಿ ನಟಿಸಿರುವ ಚಿತ್ರ ಬಿಳಿಚುಕ್ಕಿ ಹಳ್ಳಿಹಕ್ಕಿ. ಇದುವರೆಗೂ ಒಂದಷ್ಟು ಬಗೆಯಲ್ಲಿ ಪ್ರೇಕ್ಷಕರನ್ನು ಸೆಳೆದುಕೊಂಡಿರುವ ಈ ಸಿನಿಮಾದ ಎರಡು ಲಿರಿಕಲ್ ವೀಡಿಯೋ ಹಾಡುಗಳು ಒಂದರ ಹಿಂದೊಂದರಂತೆ ಬಿಡುಗಡೆಗೊಂಡಿವೆ. ಈ ಜಮಾನದ ಹುಡುಗರನ್ನು ಗಮನದಲ್ಲಿಟ್ಟುಕೊಂಡು, ಚಿತ್ರದ ಕಥಾ ಹಂದರಕ್ಕೆ ಪೂರಕವಾಗಿ ಸಿದ್ಧಗೊಂಡಂತಿರುವ ಈ ಹಾಡುಗಳು ಕೇಳುಗರ ಮೈಮನಸುಗಳನ್ನು ಆವರಿಸಿಕೊಳ್ಳುತ್ತಾ, ವ್ಯಾಪಕ ಮೆಚ್ಚುಗೆ ಗಳಿಸಿಕೊಳ್ಳುತ್ತಿವೆ.
ಆಗೆ ಹೋಯ್ತು ಮೂವತ್ತು, ಆಸೆ ಬಿಟ್ಟೆ ಬೇಸತ್ತು ಆಕೆ ಬಂದ್ಲು ಈವತ್ತು ಏನೀ ವಿಸ್ಮಯ ಎಂದು ಶುರುವಾಗುವ ಎಂಬ ಹಾಡು ಮೊದಲು ಬಿಡುಗಡೆಗೊಂಡಿತ್ತು. ಅದಕ್ಕೆ ಮಹೇಂದ್ರ ಗೌಡ ಸಾಹಿತ್ಯ ಬರೆದಿದ್ದಾರೆ. ರಿಯೋ ಆಂಟೊನಿ ಸಂಗೀತ ಸಂಯೋಜನೆಯಲ್ಲಿ ಮೂಡಿ ಬಂದಿರೋ ಈ ಗೀತೆಗೆ ಚೇತನ್ ನಾಯಕ್ ಧ್ವನಿಯಾಗಿದ್ದಾರೆ. ಹೊನ್ನುಡಿ ಪ್ರೊಡಕ್ಷನ್ಸ್ ಯೂ ಟ್ಯೂಬ್ ಚಾನೆಲ್ಲಿನಲ್ಲಿ ಸದರಿ ಹಾಡು ಬಿಡುಗಡೆಗೊಂಡಿತ್ತು. ಈ ಹಾಡು ಮೆಲ್ಲಗೆ ಕೇಳುಗರನ್ನು ಆವರಿಸಿಕೊಳ್ಳುತ್ತಲೇ ಮತ್ತೊಂದು ರೊಮ್ಯಾಂಟಿಕ್ ಲಿರಿಕಲ್ ವೀಡಿಯೋ ಹಾಡು ಬಿಡುಗಡೆಗೊಂಡಿತ್ತು.
ಎದೆಯೊಳಗಡೆ ಅರಳುತಲಿದೆ ಬಳಿ ಕರೆಯುವ ಬಯಕೆಯು ಎಂಬ ಈ ವೀಡಿಯೋ ಸಾಂಗ್ ರೋಮಾಂಚಕ ಸಾಲುಗಳೊಂದಿಗೆ ಕೇಳುಗರನ್ನು ಸೆಳೆದುಕೊಂಡಿದೆ. ಪ್ರತಾಪ್ ಭಟ್ ಸಾಹಿತ್ಯವಿರುವ ಈ ಹಾಡನ್ನು ಅಭಿಶೇಕ್ ಎಂ.ಆರ್ ಮತ್ತು ತನುಶಾ ಕೆ.ಎಂ ಹಾಡಿದ್ದಾರೆ.
ಸದರಿ ಹಾಡೂ ಕೂಡಾ ಇದೀಗ ವ್ಯಾಪಕ ಮೆಚ್ಚುಗೆ ಗಳಿಸಿಕೊಂಡಿದೆ. ವಿಟಿಲಿಗೋ ಸಮಸ್ಯೆಯ ಕೇಂದ್ರದಲ್ಲಿ ಪಕ್ಕಾ ಮನೋರಂಜನಾತ್ಮಕ ಧಾಟಿಯಲ್ಲಿ ಈ ಸಿನಿಮಾ ರೂಪುಗೊಂಡಿದೆ. ಖುದ್ದು ಮಹೇಶ್ ಗೌಡ ಅವರು ಹೊನ್ನುಡಿ ಪ್ರೊಡಕ್ಷನ್ಸ್ ಬ್ಯಾನರಿನಡಿಯಲ್ಲಿ ಈ ಸಿನಿಮಾವನ್ನು ನಿರ್ಮಾಣ ಮಾಡಿದ್ದಾರೆ.
ರಂಗಭೂಮಿ ಪ್ರತಿಭೆ ಕಾಜಲ್ ಕುಂದರ್ ಇಲ್ಲಿ ಕವಿತಾ ಎಂಬ ಪಾತ್ರಕ್ಕೆ ಜೀವ ತುಂಬಿದ್ದಾರೆ. ಸ್ವತಃ ವಿಟಿಲಿಗೋ ಸಮಸ್ಯೆ ಹೊಂದಿರುವ ಮಹೇಶ್ ಗೌಡ ಅವರೇ ಈ ಸಿನಿಮಾದ ನಾಯಕನಾಗಿ ನಟಿಸಿರೋದು ವಿಶೇಷ. ಪ್ರಶಸ್ತಿ ವಿಜೇತ ಕಲಾವಿದರಾದ ವೀಣಾ ಸುಂದರ್, ಜಹಾಂಗೀರ್, ರವಿ ಭಟ್ ಮುಂತಾದವರು ಮಹತ್ವದ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಇದೇ ಅಕ್ಟೋಬರ್ ೨೪ರಂದು ಬಿಳಿಚುಕ್ಕಿ ಹಳ್ಳಿಹಕ್ಕಿ ಚಿತ್ರ ರಾಜ್ಯಾದ್ಯಂತ ಬಿಡುಗಡೆಗೊಳ್ಳಲಿದೆ.