ಕೃಷ್ಣನನ್ನು ಅಥವಾ ಗೋವುಗಳನ್ನು ಜಾಮ್ದಾನಿನಲ್ಲಿ ನೇಯ್ಗೆ ಮಾಡಿ, ಜೀವಂತವಾಗಿ ಎದ್ದು ಬಂದಿರುವಂತೆ ನೀವು ಊಹಿಸಬಲ್ಲಿರಾ? ಅಥವಾ ಉತ್ತರ ಕರ್ನಾಟಕದ ಪ್ರಸಿದ್ಧ ಕುಪ್ಪಸದ ವಸ್ತ್ರವಾದ ಖಣ, ತನ್ನನ್ನು ಒಂದು ಸೀರೆಯಾಗಿ ಪರಿವರ್ತನೆಗೊಳಿಸಿ ಕೊಂಡಿರುವುದನ್ನು ಊಹಿಸಬಲ್ಲಿರಾ? ಈ ಸಂದರ್ಭದಲ್ಲಿ, ಆಧುನಿಕ ಪುನಃ ಆವಿಷ್ಕಾರಗಳಿಂದಾಗಿ ಇವುಗಳು ಹೇಗೆ ಉಳಿದು ಮುಂದುವರಿಯುತ್ತವೆ ಎಂಬುದರ ಬಗ್ಗೆ ಸ್ವಲ್ಪ ನೋಡೋಣ…….
ಆಗಸ್ಟ್ 7 ರಂದು ಪ್ರತಿ ವರ್ಷ ಬರುವ ರಾಷ್ಟ್ರೀಯ ಕೈ ಮಗ್ಗದ ದಿಸದಂದು, ಪ್ರಾಚೀನ ತಂತ್ರಗಳನ್ನು ನವೀನ ನೇಯ್ಗೆಯ ಪ್ರಯತ್ನಗಳೊಡನೆ ಬೆಳೆದಾಗ, ಅದರಿಂದ ನವ ಜೀವವನ್ನು ತುಂಬಬಲ್ಲೆವು ಎಂದು ನೋಡೋಣ. ಕೈಮಗ್ಗದ ಹೋರಾಟಗಾರರ ಹಾಗೂ ಭಾವೋದ್ದೀಪ್ತ ಸರ್ಕಾರೇತರ ಸಂಸ್ಥೆಗಳ ಪ್ರೋತ್ಸಾಹದಿಂದ ನೇಯ್ಗೆ ಹಾಗೂ ಜವಳಿ ತಜ್ಞರು, ತಲತಲಾಂತರಗಳಿಂದ ಹರಿದು ಬರುತ್ತಿರುವ ನಮ್ಮ ಪ್ರಾಚೀನ ಕೈಮಗ್ಗಗಳಿಗೆ ಹಾಗೂ ಜವಳಿಯ ಗಜಗಳಿಗೆ ನವೀನ ಪ್ರಾಮುಖ್ಯತೆಯನ್ನು ತಂದಿದ್ದಾರೆ.
ಬೆಂಗಳೂರಿನ ಎರಡು ಸೃಜನಶೀಲ ಉದಾಹರಣೆಗಳು ಈ ರೀತಿಯ ನೇಯ್ಗೆಯ ಹಾಗೂ ವಿನ್ಯಾಸದ ಜಗತ್ತಿನ ಯತ್ನಗಳ ಮೇಲೆ ಬೆಳಕನ್ನು ಚೆಲ್ಲುತ್ತವೆ. ಜವಳಿಯ ಪುನರುತ್ಥಾನದ ಬಾಟಿಕ್ ಆದ `ಮಾಧುರ್ಯ ಕ್ರಿಯೇಷನ್ಸ್,’ ಉಪ್ಪಾಡದ ನೇಯ್ಗೆಯ ಮೇಲೆ ಜಾಮ್ದಾನಿಯ ಕೆಲಸವನ್ನು ಬೆಸೆದಿರುವಂತಹ ಒಂದು ಅನುಪಮವಾದ ಸೀರೆಯನ್ನು ಹೊರತಂದಿದ್ದಾರೆ. ಆಂಧ್ರಪ್ರದೇಶದ ನೇಕಾರರಾದ ಲಕ್ಷ್ಮಣರಾವ್ ತಮ್ಮಿ ಸೆಟ್ಟಿಯವರು ನೃತ್ಯದ ಭಂಗಿಯಲ್ಲಿರುವ ಭಗವಾನ್ ಕೃಷ್ಣನೊಡನೆ ಎರಡು ಸುಂದರವಾದ ಹಸುಗಳನ್ನು ಸೀರೆಯ ಸೆರಗಿನಲ್ಲಿ ನೇಯ್ದಿದ್ದಾರೆ.
ಕಣ್ಸೆಳೆಯುವ ಸೀರೆಗಳು `ಕುಪ್ಪಸ’ ಲೇಬಲ್ ನ ಅಡಿಯಲ್ಲಿದ್ದು, ಎರಡು ಶತಮಾನಗಳ ಹಿಂದಿನ ಖಣ ವಸ್ತ್ರದ ಮರುವಿನ್ಯಾಸವಾಗಿದೆ. ಈ ವಸ್ತ್ರವನ್ನು ಸೀರೆಯ ಅಗಲಕ್ಕೆ ನೇಯಲಾಗಿದೆ. ಖಣ ವಸ್ತ್ರ 30ಉ ಅಳತೆಯನ್ನು ಹೊಂದಿದ್ದು, ಉತ್ತರ ಕರ್ನಾಟಕ ಹಾಗೂ ಮಹಾರಾಷ್ಟ್ರದ ಪಾರಂಪರಿಕ ಮಾರುಕಟ್ಟೆಗೆ ಮಾತ್ರ ಸೀಮಿತವಾಗಿತ್ತು ಮತ್ತು ಈ ವಸ್ತ್ರಕ್ಕೆ ವೈವಿಧ್ಯತೆ ಇಲ್ಲದೆ, ಇದನ್ನು ನೇಯುವ ನೇಕಾರರೂ ಇಲ್ಲದೆ, ಈ ವಸ್ತ್ರಕ್ಕೆ ಬೇಡಿಕೆ ಇಲ್ಲದೆ ಹೋಗಿತ್ತು.
ರಾಷ್ಟ್ರೀಯ ಕೈಮಗ್ಗದ ದಿವಸವಾದ ಆಗಸ್ಟ್ 7ನ್ನು ಮತ್ತಷ್ಟು ವಿಶಿಷ್ಟವಾಗಿಸಲು ಏನನ್ನು ಮಾಡಲು ಸಾಧ್ಯ?
ಕೈಮಗ್ಗದ ಹೋರಾಟಗಾರರ ಹಾಗೂ ಭಾವೋದ್ದೀಪ್ತ ಸರ್ಕಾರೇತರ ಸಂಸ್ಥೆಗಳ ಸಹಾಯದಿಂದ ನೇಯ್ಗೆಯ ಹಾಗೂ ಜವಳಿ ತಜ್ಞರು, ನಮ್ಮ ಪಾರಂಪರಿಕ ಕೈಮಗ್ಗ ಹಾಗೂ ಜವಳಿಯ ಗಜಗಳಿಗೆ ಆಧುನಿಕತೆಯನ್ನು ಬೆಸೆದು, ತಲತಲಾಂತರಗಳಿಂದ ಹರಿದು ಬರುತ್ತಿರುವ ಅಸಂಖ್ಯಾತ ನೇಯ್ಗೆ, ಬಣ್ಣಗಳ ಬೆಸೆಯುವಿಕೆ ಮತ್ತು ಹ್ಯಾಂಡ್ ಬ್ಲಾಕ್ ಮುದ್ರಣಕ್ಕೆ ಒಂದು ನವೀನ ಬೆರಗನ್ನು ತಂದಿದ್ದಾರೆ. ಆದರೆ ಈ ವರದಿಗಾರರನ್ನು ಸೆಳೆದದ್ದು, ಜವಳಿ ಪುನರುತ್ಥಾನದ ಬೊಟಿಕ್ ಆದ ಮಾಧುರ್ಯ ಕ್ರಿಯೇಷನ್ಸ್ ರವರ ಅನುಪಮವಾದ ಉಪ್ಪಾಡದ ನೇಯ್ಗೆಯ ಮೇಲೆ ಅಲಂಕೃತವಾದ ಜಾಮ್ದಾನಿಯ ನೇಯ್ಗೆ. ಒಂದು ಸೀರೆಯ ಮೇಲೆ ಪ್ರಸಿದ್ಧವಾದ ರಾಜಾಸ್ಥಾನದ ನವಥ ದ್ವಾರದ ಶ್ರೀನಾಥ್ ಜಿ. ಇಲ್ಲಿ ಭಗವಾನ್ ಕೃಷ್ಣನು ಒಂದು ಪುಟ್ಟ ಬಾಲಕನಾಗಿದ್ದು, ಗೋವರ್ಧನ ಪರ್ವತವನ್ನು ಒಂದು ಕೈಯಿಂದ ಎತ್ತಿ ಹಿಡಿದಿದ್ದಾನೆ!
ಸೀರೆಯ ಸೆರಗಿನಲ್ಲಿ ಕಣ್ಸೆಳೆಯು ಈ ಕೆಲಸನ್ನು ಉಪ್ಪಾಡದ ಸೀರೆಯ ಮೇಲೆ ಆಂಧ್ರಪ್ರದೇಶದ ನೇಕಾರರು ನೇಯ್ದಿದ್ದಾರೆ. ಹಿರಿಯ ನೇಕಾರರಾದ, ಕೈಮಗ್ಗದ ಪ್ರಶಸ್ತಿ ವಿಜೇತರಾದ, ಸುಮೇರು ಕೈಮಗ್ಗದ ಲಕ್ಷ್ಮಣರಾವ್ ತಮ್ಮಿಸೆಟ್ಟಿಯವರ ಅನುಭವಸ್ಥ ಕಣ್ಣಿನ ಮಾರ್ಗದರ್ಶನದಲ್ಲಿ ಇದನ್ನು ನೇಯಲಾಗಿದೆ. ಕಳೆದ ನಾಲ್ಕು ದಶಕಗಳಿಂದ ತಮ್ಮಿಸೆಟ್ಟಿಯವರು ಪವರ್ ಲೂಮ್ ಗಳ ದಾಳಿಯನ್ನು ಎದುರಿಸಿ, ಈ ರಾಜ್ಯದ ಅತಿ ಸುಂದರವಾದ ಕೈಮಗ್ಗದ ನೇಯ್ಗೆಯನ್ನು ನೇಯ್ದಿದ್ದಾರೆ.
ನೇಯ್ಗೆಯ ಅಮೂಲ್ಯ ಪ್ರತಿಭೆ
ಎಪ್ಪತ್ತು ವರ್ಷಗಳ ತಮ್ಮಿಸೆಟ್ಟಿ ಮತ್ತು ಅವರ ಮಗನಾದ ಶ್ರೀರಾಮ್ ತಮ್ಮಿಸೆಟ್ಟಿಯವರು ಜಾಮ್ದಾನಿಯ ಪಿಛ್ವಾಯಿ ಶೈಲಿಯನ್ನು ಉಪ್ಪಾಡದ ಸೀರೆಯ ಮೇಲೆ ಪ್ರದರ್ಶಿಸಿರುವುದನ್ನು ಸಂತೋಷದ ಸಂಗತಿಯಾಗಿ ಭಾವಿಸುತ್ತಾರೆ. ಭಗವಂತನನ್ನು ಪ್ರದರ್ಶಿಸಲು ಅತಿ ಸೂಕ್ಷ್ಮವಾಗಿ ನೇಯ್ಗೆಯ ಮೂಲಕ ಹೊರತರುವುದು ಸೂಕ್ತವೆಂದು ಭಾವಿಸಿದರು. ಉದಯಪುರದ ಈಶಾನ್ಯ ಭಾಗದಲ್ಲಿ ಪ್ರಸಿದ್ಧ ಯಾತ್ರಾ ಸ್ಥಳದಲ್ಲಿರುವಂತೆಯೇ ಅನೇಕ ರೀತಿಯ ಗಿಡಗಳನ್ನು ಹೊಂದಿರುವ ವರ್ಣಮಯವಾದ ಅರಾಳಿ ಪರ್ವತಗಳ ನಡುವೆ ಶ್ರೀನಾಥ್ ಜಿಯನ್ನು ತೋರಿಸಲು ಈ ನವೀನ ಬೆಸೆಯುವಿಕೆ ಸಹಾಯವಾಯಿತು. ವಿಡಿಯೋ ಸಂದರ್ಶನದಲ್ಲಿ ತಮ್ಮ ನೇಯ್ಗೆಯಲ್ಲಿ ಸೆರಗನ್ನು ತೋರಿಸುತ್ತಾ, `ಈ ನೇಯ್ಗೆಯ ಹಿಂಭಾಗ ಮತ್ತು ಮುಂಭಾಗ ಯಾವುದು ಎಂದು ಕಂಡುಹಿಡಿಯಲು ಸಾಧ್ಯವೇ?’ ಎಂದು ತಂದೆ ಮತ್ತು ಮಗ ಕೇಳಿದರು. `ಪ್ರಾಚೀನವಾದ ಜಾಮ್ದಾನಿ ಕೆಲಸದಲ್ಲಿ ಅನೇಕ ವಿಶೇಷವಾದ ಅಂಶಗಳಿವೆ. ಉಪ್ಪಾಡದ ಸೀರೆಯಲ್ಲಿ ನಾವು ಜಾಮ್ದಾನಿಯನ್ನು ನೇಯ್ದಿರುವುದು, ಈ ಸೂಕ್ಷ್ಮವಾದ ಅಂಶಗಳು ಈ ಕಲೆಯಲ್ಲಿದೆ ಎಂದು ಎತ್ತಿಹಿಡಿದು, ಇದನ್ನು ವಿರಳವಾದ ಮೇರುಕೃತಿಯಾಗಿ ಮಾಡಲು ನಿರ್ಧರಿಸಿದೆ. ನೇಕಾರರಿಗೆ ಈ ಸೂಕ್ಷ್ಮವಾದ ವಿಷಯಗಳನ್ನು ಹೊರತರಲು ಅಪಾರವಾದ ಏಕಾಗ್ರತೆ, ಗಮನ ಮತ್ತು ಕುಶಲತೆಯು ದೊಡ್ಡ ಪ್ರಮಾಣದಲ್ಲಿ ಬೇಕು. ಪೂರ್ವ ಆದೇಶಗಳು ದೊರೆತಾಗ ಮಾತ್ರ ಇಂತಹ ವಿರಳವಾದ ನೇಯ್ಗೆಯ ಕಾರ್ಯಗಳನ್ನು ಕೈಗೊಳ್ಳುತ್ತೇವೆ, ಏಕೆಂದರೆ ಇದನ್ನು ನೇಯುವುದು ಬಲು ದುಬಾರಿಯಲ್ಲದೆ, ಅನೇಕ ತಿಂಗಳ ಕಷ್ಟಕರವಾದ ನೇಯ್ಗೆಯನ್ನೂ ಮಾಡಬೇಕಾಗುತ್ತದೆ,’ ಎನ್ನುತ್ತಾರೆ ಲಕ್ಷ್ಮಣ ರಾವ್.
ಮಾಧುರ್ಯದ ಕ್ರಿಯೇಟಿವಿಟಿ
ಮಾಧುರ್ಯ ಕ್ರಿಯೇಷನ್ಸ್, ಸೀರೆಯ ಮೇಲೆ ಪಿಛ್ವಾಯಿ ಶೈಲಿಯ ಶ್ರೀನಾಥ್ ಜಿಯನ್ನು ನೇಯಲು ಏಕೆ ನಿರ್ಧರಿಸಿತು?
ಭಾರತಿ ಹರೀಶ್ ರವರು, `ಹೌದು, ಈ ವರ್ಷದ ರಾಷ್ಟ್ರೀಯ ಕೈಮಗ್ಗದ ದಿವಸದಂದು ಅದ್ಭುತವಾದ ಒಂದು ಸೀರೆಯನ್ನು ಬಿಡುಗಡೆ ಮಾಡಬೇಕೆಂದು ನಿರ್ಧರಿಸಿದೆ. ಸಾಂಪ್ರದಾಯಿಕ ನೇಕಾರರು ತಮ್ಮ ಕುಶಲವಾದ ಕೈಗಳೊಡನೆ ಮಗ್ಗಗಳನ್ನು ಇಟ್ಟುಕೊಂಡು ತೀವ್ರ ಸಂಕಷ್ಟದಲ್ಲಿದ್ದಾರೆ. ಅವರೆಲ್ಲರನ್ನೂ ಗುರುತಿಸಿ ಅವರಿಗೆ ಗೌರವವನ್ನು ನೀಡಬೇಕೆಂಬ ಸಲುವಾಗಿ ಹೀಗೆ ನಿರ್ಧರಿಸಿದೆ,’ ಎನ್ನುತ್ತಾರೆ. ಭಾರತಿ ಹರೀಶ್ ರವರು ದಕ್ಷಿಣ ಬೆಂಗಳೂರಿನ ಮಾರ್ಧಯ ಕ್ರಿಯೇಷನ್ಸ್ ನ ಮುಖ್ಯಸ್ಥರು. `ಈ ವರ್ಷ ಅವರೆಲ್ಲರಿಗೂ ಅತೀ ಕಷ್ಟಕರವಾದ ವರ್ಷವಾಗಿದ್ದು, ಕೊರೋನಾ ಕಾರಣ 16 ತಿಂಗಳಿನಿಂದ ಅವರಿಗೆ ಯಾವ ದೊಡ್ಡ ಕೆಲಸ ಬಂದಿಲ್ಲ. ನನ್ನ ರಾಜಸ್ಥಾನಿ ಹಾಗೂ ಗುಜರಾತಿ ಸ್ನೇಹಿತೆಯರೊಡನೆ ಕೈಮಗ್ಗದ ದಿವಸದ ಆಯ್ಕೆಗಳ ಬಗ್ಗೆ ಚರ್ಚಿಸುತ್ತಿದ್ದಾಗ, ನನ್ನ ಹೃದಯಕ್ಕೆ ಬಹಳ ಹತ್ತಿರವಾದ ಶ್ರೀನಾಥ್ ಜಿಯನ್ನು ಪಿಛ್ವಾಯಿಯಲ್ಲಿ ಕಲ್ಪಿಸಿಕೊಂಡೆ,’ ಎನ್ನುತ್ತಾರೆ ಭಾರತಿ. ಈ ಚಿತ್ರವನ್ನು ಲಕ್ಷ್ಮಣ್ ರಾವ್ ತಮ್ಮಿಸೆಟ್ಟಿಯವರಿಗೆ ಕಳುಹಿಸಿದಾಗ, ಅದೇ ರೀತಿಯಾಗಿ ನೇಯ್ದು ಕೊಡಲು ಅವರು ಒಪ್ಪಿಕೊಂಡಿದ್ದು ನಮಗೆ ಆಶ್ಚರ್ಯವನ್ನು ತಂದಿತು.
ಇದು ಶುದ್ಧ ಜರಿ, ಶ್ರೇಷ್ಠ ಹತ್ತಿಯ ಉಪ್ಪಾಡ ಸೀರೆಯಾಗಿದ್ದು, ಇದರ ಅನುಪಮವಾದ ನೇಯ್ಗೆಯು ಶ್ರೇಷ್ಠ ಗುಣಮಟ್ಟದ್ದಾಗಿದ್ದು, ಸೂಕ್ಷ್ಮವಾದ ಬಣ್ಣಗಳಲ್ಲಿ ಕೃಷ್ಣನನ್ನು ಜೀವಂತವಾಗಿ ತರಲಾಗಿದೆ. ಅದ್ಭುತವಾದ ಪಿಛ್ವಾಯಿ ಶೈಲಿಯ ಶ್ರೀನಾಥ್ ಜಿ ಕೈಮಗ್ಗದ ದಿವಸಕ್ಕಾಗಿ ಅಲ್ಲದೆ, ಮುಂಬರುತ್ತಿರುವ ಜನ್ಮಾಷ್ಟಮಿಯ ಸಂದರ್ಭಕ್ಕೂ ಸೂಕ್ತವಾಗಿದೆ. `ಪಾರಂಪರಿಕ ಶ್ರೀನಾಥ್ ಜಿಯೊಡನೆ ವಿವಿಧ ಬಣ್ಣಗಳು, ವಿವಿಧ ಸರಿಗೆಗಳ ಸರಣಿ ಸೀರೆಗಳನ್ನೂ ಬಿಡುಗಡೆ ಮಾಡಿದ್ದೇವೆ. ಅನೇಕ ವರ್ಣಗಳ ಗಿಡಗಳೊಡನೆ ಭಗವಾನ್ ಕೃಷ್ಣನು ದೊಡ್ಡ ಹಸುಗಳೊಡನಿರುವ ಸರಿಗೆಗಳೂ ಇವೆ. ಕಲೆಯ ಹಾಗೂ ನೇಯ್ಗೆಯ ಆರಾಧಕರು ಅಕ್ಟೋಬರ್ 4 ರಂದು ಬರುವ ವಿಶ್ವ ಪ್ರಾಣಿಗಳ ದಿವಸದ ಸಂದರ್ಭದಲ್ಲೂ ಈ ವಿಶೇಷ ಸೀರೆಗಳನ್ನು ಕೊಂಡುಕೊಳ್ಳಬಹುದು. ಸುಂದರ ಕಮಲಗಳು, ಹಂಸಗಳು ಮತ್ತು ಹಸಿರಿನೊಡನೆ ಅದ್ಭುತವಾದ ಕಲಾರೂಪಗಳು ಒಂದಾಗಿ ಸೇರಿ ಮೂಡಿ ಬಂದಿವೆ,’ ಎನ್ನುತ್ತಾ ಭಾರತಿ, ನೀರಿನ ಹನಿಗಳ ಬುಟ್ಟಿಗಳು ಸೆರಗಿನ ಮೇಲೆ ಸೂಕ್ಷ್ಮವಾಗಿ ಮೂಡಿ ಬಂದಿವೆ ಎಂದು ವಿವರಿಸುತ್ತಾರೆ.
ಉಪ್ಪಾಡದ ಜಾಮ್ದಾನಿ ಜಾಕ್ವಾರ್ಡ್ ಕಲೆ
ಈವರೆಗೆ ಅಂಧ್ರಪ್ರದೇಶದಲ್ಲಿ ಉಪ್ಪಾಡ ಜಾಮ್ದಾನಿ ಮತ್ತು ಜಾಕ್ವಾರ್ಡ್ ಕಲೆಗೆ ಪ್ರಸಿದ್ಧವಾಗಿದೆ. ಇದಕ್ಕೂ ಮೊದಲು ಇದು ವೆಂಕಟಗಿರಿ ಆಗಿತ್ತು. ನಂತರ ನೇಕಾರರು ಕ್ರಮೇಣವಾಗಿ ಉಪ್ಪಾಡಕ್ಕೆ ತಿರುಗಿ, ಅದು ಸುಂದರವಾಗಿ ಮೂಡಿ ಬರುವುದರಿಂದ ಅದನ್ನು ಹೆಚ್ಚು ಪ್ರಸಿದ್ಧವಾಗಿ ಮಾಡಿದರು. `ಹೌದು, ನೀವು ಗಮನಿಸಿದರೆ, ಶ್ರೀನಾಥ್ ಜಿ ಪಡೆದುಕೊಳ್ಳುವ ಮೆರುಗಿನಿಂದ, ಅದೊಂದು ಚಿತ್ರವಾಗಿ ಕಾಣುತ್ತದೆ!’ ಎನ್ನುತ್ತಾ ಲಕ್ಷ್ಮಣ್ ರಾವ್ ತಮ್ಮಿಸೆಟ್ಟಿಯವರು, ಸೆರಗಿನ ಒಂದು ಕಡೆಯ ಚಿತ್ರ, ಅದರ ವಿರುದ್ಧ ಕಡೆಯಲ್ಲೂ ಅದರ ಥೇಟ್ ಪ್ರತಿರೂಪವಾಗಿ, ಮೂಡಿ ಬರುವಂತೆ ಮಾಡುವ ನಿಖರ ಕುಶಲತೆಯು ನೇಕಾರರಲ್ಲಿ ಇರಬೇಕು ಎನ್ನುತ್ತಾರೆ. ಜಾಮ್ದಾನಿ ಕೆಲಸದಲ್ಲಿ ಅನೇಕ ಬಣ್ಣಗಳಿರುತ್ತವೆ, ನೇಯ್ಗೆಯಲ್ಲಿ ಅನುಸರಿಸಬೇಕಾದ ಅನೇಕ ಹೂಗಳ ಅಂಕುಡೊಂಕುಗಳಿರುತ್ತವೆ.
`ನೇಕಾರರಿಗೆ ಕೊಡಲ್ಪಟ್ಟ ಚಿತ್ರಗಳಲ್ಲಿರುವ ಬಣ್ಣಗಳನ್ನು ಅನುಸರಿಸುತ್ತಾ ದಾರಗಳನ್ನು ಬದಲಿಸುವ ನೇಕಾರರ ಕುಶಲತೆಯ ಮೇಲೆ ಇದು ಅವಲಂಬಿಸಿದೆ,’ ಎನ್ನುತ್ತಾರೆ. 2012ರಲ್ಲಿ ಚಂದ್ರಬಾಬು ನಾಯ್ಡುರವರಿಂದ ಆಂಧ್ರಪ್ರದೇಶದ ಕ್ರಾಫ್ಟ್ಸ್ ಕೌನ್ಸಿಲ್ ನಿಂದ ಮಂಗಳಗಿರಿಯ ಅತ್ಯುತ್ತಮ ಸೀರೆ ನೇಯ್ದದಕ್ಕಾಗಿ ಪ್ರಶಸ್ತಿಯನ್ನು ಮತ್ತು ನೇಕಾರರ ದಿನದಂದು ವಿಶೇಷ ಪ್ರಶಸ್ತಿಯನ್ನು ಪಡೆದವರು ತಮ್ಮಿಸೆಟ್ಟಿ.
ಈ ವಿಶೇಷವಾದ ಸೀರೆಯಲ್ಲಿ ಬಳಸಲಾದ ಜರಿಯ ವೈಶಿಷ್ಟ್ಯವೇನು?
ಅದು ಶುದ್ಧ ಬೆಳ್ಳಿ ಮತ್ತು ಶುದ್ಧ ಬಂಗಾರದ ದಾರಗಳನ್ನು (ಕಂಚಿಯ ಸೀರೆಗಳಲ್ಲಿ ಇದನ್ನು ಬಂಚಿ ಎನ್ನುತ್ತಾರೆ) ಸಹಜವಾದ ಬಣ್ಣಗಳೊಡನೆ ಬೆರೆಸಲಾಗಿರುತ್ತದೆ. ನೀರಿನ ಹನಿಯಾಕಾರದ ಬುಟ್ಟಿಗಳು ಸೀರೆಯ ಇಡೀ ದೇಹದ ಮೇಲಿದೆ. ಬಳಸಲಾಗಿರುವ ನೇಯ್ಗೆಯ ರೀತಿಯ ಒಂದು ಮೇಲ್ಬದರದ ಕೆಲಸವಲ್ಲ. ಜಾಮ್ದಾನಿಯ ಕಸೂತಿ ಕೋಶ ಕಲೆಯಂತೆ, ಬೇಕಾದ್ದೆಲ್ಲಾ ಅಡ್ಡ ಎಳೆಯ ನೇಯ್ಗೆಗಳು ಮಾದರಿಗಳನ್ನು ಉಂಟು ಮಾಡುತ್ತವೆ. ಮರದ ಅಥವಾ ಬಂಬುವಿನ ಸೂಜಿಯನ್ನು ಡೊಂಕಾದ ಹಗ್ಗದೊಳಗೆ ಎಳೆದು ತಂದು, ಒಂದಾಗಿ ಬೆರೆಸಿ, ಮೂಲಭೂತ ಬಟ್ಟೆಯಲ್ಲಿ ತೇಲುವಂತೆ ಮಾಡಲಾಗುತ್ತದೆ. `ಇದು ಅತಿ ಕಷ್ಟಕರವಾದ ಕೆಲಸ. ಇಬ್ಬರು ನೇಕಾರರು ಎರಡು ತಿಂಗಳವರೆಗೆ ಕೇವಲ ಸೆರಗನ್ನು ನೇಯ್ದರು ಮತ್ತು ಇಡೀ ಸೀರೆ ಸಿದ್ಧಾಗಲು ಆರು ತಿಂಗಳ ಕಾಲ ಹಿಡಿಯಿತು. ನೇಯ್ಗೆಯಲ್ಲಿ ಇಂತಹ ಸುಂದರವಾದ ವಿಷಯವನ್ನು ಹೊರತರುವುದು ಒಂದು ಅವಿಸ್ಮರಣೀಯವಾದ ಅನುಭವವಾಗಿತ್ತು,’ ಎನ್ನುತ್ತಾರೆ ತಮ್ಮಿಸೆಟ್ಟಿ.
ವಿದೇಶದಲ್ಲೂ ಪ್ರಸಿದ್ಧ ಈ ನೇಯ್ಗೆ
1990ರಲ್ಲಿ ಆಂಧ್ರಪ್ರದೇಶದ ಉಪ್ಪಾಡದ ನೇಯ್ಗೆಯನ್ನು ಮೂಲಭೂತವಾಗಿಟ್ಟುಕೊಂಡು ಅದರ ಮೇಲೆ ಜಾಮ್ದಾನಿ ನೇಯ್ಗೆಯನ್ನು ತಂದ ತಮ್ಮಿಸೆಟ್ಟಿಯರು, `ಒಂದು ಆಕಾರವಾಗಿ ಅಥವಾ ಹೂವಾಗಿರಲಿ, ಇದಕ್ಕೂ ಮೊದಲು ಜಾಮ್ದಾನಿ ನೇಯ್ಗೆಯನ್ನು ಧಾಕಾದಲ್ಲಿ ಮಸ್ಲಿನ್ ವಸ್ತ್ರದ ಮೇಲೆ ಮಾತ್ರ ಮಾಡಲಾಗುತ್ತಿತ್ತು. ಇದರ ನಂತರ ಇದು ವಿಕಸನಗೊಂಡು ತಜ್ಞ ನೇಕಾರರ ಮಾರ್ಗದರ್ಶನದಲ್ಲಿ ಇತರ ನೇಯ್ಗೆಗಳೊಡನೆ ಬೆರೆಯಿತು,’ ಎನ್ನುತ್ತಾರೆ. ಬ್ರಿಟಿಷರ ಆಳ್ವಿಕೆಯ ಸಮಯದಲ್ಲಿ ಜಾಮ್ದಾನಿಯು ಯೂರೋಪಿನಲ್ಲೆಲ್ಲಾ ಪ್ರಸಿದ್ಧವಾಯಿತು. `ಆಂಧ್ರಪ್ರದೇಶದ ಕ್ರಾಫ್ಟ್ಸ್ ಕೌನ್ಸಿಲ್ ಸಹ ನನಗೆ ಬೆಂಬಲವಾಗಿ ನಿಂತಿತು. 1995ರ ಹೊತ್ತಿಗೆ ಅನೇಕ ನೇಕಾರರು ಜಾಮ್ದಾನಿಯನ್ನು ಕಲಿಯಲು ಉತ್ಸುಕರಾಗಿದ್ದರು ಮತ್ತು ನಾನು ಅವರಿಗೆ ಸಂತೋಷವಾಗಿ ಹೇಳಿಕೊಟ್ಟೆ,’ ಎನ್ನುತ್ತಾರೆ. ಜಾಮ್ದಾನಿಯನ್ನು ನೇಯಲು ಅನೇಕ ಕುಶಲ ನೇಕಾರರನ್ನೊಳಗೊಂಡ ನೇಯ್ಗೆಯ ಪ್ರಕ್ರಿಯೆಯಾಗಿದ್ದು, ಅತಿ ದುಬಾರಿಯಾದ ವಸ್ತ್ರವಾಗಿರುವುದರಿಂದ ಇದು ರಾಜಮನೆತನದ ಹಾಗೂ ಮೇಲ್ವರ್ಗದವರ ಆಯ್ಕೆಯಾಗಿದೆ. ತಮ್ಮಿಸೆಟ್ಟಿಗೆ ಅಂತರ್ಗತವಾದ ಕಲೆ.
ಮಂಗಳಗಿರಿ ನೇಯ್ಗೆಗೆ ಪ್ರಸಿದ್ಧವಾದ ಆಂಧ್ರಪ್ರದೇಶದ ಸಣ್ಣ ಪಟ್ಟಣವಾದ ಮಂಗಳಗಿರಿಯಲ್ಲಿ ಜನಿಸಿದ ಲಕ್ಷ್ಮಣ್ ರಾವ್‌ತಮ್ಮಿಸೆಟ್ಟಿಯವರಿಗೆ ನೇಯ್ಗೆಯು ಅಂತರ್ಗತವಾಗಿ ಬಂದಿರುವಂತಹ ಕಲೆ ಮತ್ತು ಅವರು ತಮ್ಮ ಕುಟುಂಬದ ಕುಶಲ ನೇಕಾರರ ನಡುವೆ ಬೆಳೆದವರು. `ಎಲ್ಲರೂ ಕೈಮಗ್ಗದ ಕಲೆಯ ಮೌಲ್ಯವನ್ನು ಅರಿತು, ನಮ್ಮ ಪರಂಪರೆಯನ್ನು ತಿಳಿಯುವಂತೆ ಆಗಬೇಕು ಎಂಬುದೇ ನನ್ನ ಕನಸು. ನಾಲ್ಕು ದಶಕಗಳ ಹಿಂದೆ ಕೈಮಗ್ಗಗಳನ್ನು ಸಂರಕ್ಷಿಸುವುದು ಕಷ್ಟವೆಂದು ಯಾರೂ ಕೈಮಗ್ಗಗಳನ್ನು ಕೊಳ್ಳಲು ಸಿದ್ಧರಾಗಿರಲಿಲ್ಲ. ಆದರೆ ನಾನು ಎದೆಗುಂದಲಿಲ್ಲ. ನೂಲಿನ ಬಗ್ಗೆ, ನೇಯ್ಗೆಯ ಬಗ್ಗೆ, ಎಣಿಕೆಯ ಬಗ್ಗೆ ನಾನು ಸಂಶೋಧನೆ ನಡೆಸಿ, ಮಂಗಳಗಿರಿ ಸೀರೆಗಳು ಅನೇಕ ಸಲ ಒಗೆದರೂ ತಮ್ಮ ಗಟ್ಟಿತನವನ್ನು, ಉಳಿಸಿಕೊಳ್ಳುವಂತೆ ಮಾಡಿದೆ. ದೀರ್ಘ ಬಾಳಿಕೆಯೊಡನೆ ಅದರ ಹೊಳಪೂ ಉಳಿಯಿತು ಮತ್ತು ಇದು ನನಗೆ ಗುರುತನ್ನು ತಂದಿತು,’ ಎಂದು ಉಪ್ಪಾಡದ ಮೇಲೆ ಕೆಲಸ ಮಾಡುವ ಮೊದಲು ವೆಂಕಟಗಿರಿಯ ಸೀರೆಗಳ ಮೇಲೆ ಕೆಲಸ ಮಾಡಿದ ತಮ್ಮಿಸೆಟ್ಟಿ ಹೇಳುತ್ತಾರೆ.
`ಮೊದಲು ಇದು 15,000 ಕೈಮಗ್ಗಗಳಲ್ಲಿದ್ದದ್ದು ಈಗ ಕೇವಲ 10%ರಷ್ಟು ಮಾತ್ರ ಇರುವುದು ದುರದೃಷ್ಟಕರ. ಅದು ನಮ್ಮ ಹೆಮ್ಮೆ. ನಾವು ಪ್ರಾರ್ಥಿಸುತ್ತೇವೆ ಮತ್ತು ನಾವು ದೇವರೆಂದು ಪರಿಗಣಿಸುವ ನಮ್ಮ ಕೈಮಗ್ಗಗಳ ಮೇಲೆ ಕೆಲಸ ಮಾಡುತ್ತೇವೆ,’ ಎನ್ನುತ್ತಾರೆ ಭಾವುಕರಾದ ತಮ್ಮಿಸೆಟ್ಟಿ. ಸರ್ಕಾರ ಕ್ರಮಗಳನ್ನು ಕೈಗೊಂಡು ನೇಕಾರರಿಗೆ ನೇರವಾದ ಲಾಭ ಉಂಟಾಗುವಂತೆ ಮಾಡಿದರೆ ಒಳಿತು ಎಂದು ತಮ್ಮಿಸೆಟ್ಟಿ ಆಶಿಸುತ್ತಾರೆ.
`ಒಳ್ಳೆಯ ಬೆಲೆಗೆ ಸರ್ಕಾರ ನೇಕಾರರಿಂದಲೇ ನೇರವಾಗಿ ಕೊಳ್ಳುವುದರೊಡನೆ ಅವಶ್ಯಕವಾದ ಸಾಮಗ್ರಿಗಳನ್ನು ಅಗ್ಗದ ಬೆಲೆಗೆ ನೀಡಿದರೆ, ಆಗ ಯುವಕರೂ ಈ ಕ್ಷೇತ್ರಕ್ಕೆ ತಮ್ಮ ವೃತ್ತಿಗೆ ಸುಭದ್ರತೆಯಿದೆ ಎಂಬ ಭರವಸೆಯಿಂದ ಮುಂದೆ ಬರುತ್ತಾರೆ. ಮತ್ತೊಂದು ರಾಷ್ಟ್ರೀಯ ಕೈಮಗ್ಗದ ದಿವಸವನ್ನು ಆಚರಿಸುತ್ತಿರುವ ಈ ಸಂದರ್ಭದಲ್ಲಿ ಇದಕ್ಕಿಂತಲೂ ಉತ್ತಮವಾದ ಮತ್ತೊಂದನ್ನು ಆಶಿಸಲು ಸಾಧ್ಯವಿಲ್ಲ,’ ಎಂದು, ನೇಯ್ಗೆಯ ಜಗತ್ತಿಗೆ ಸಕಾರಾತ್ಮಕ ಬದಲಾವಣೆ ಉಂಟಾಗಲೆಂದು ಆಶಿಸುತ್ತಾ ತಮ್ಮಿಸೆಟ್ಟಿ ನುಡಿದರು.
ಸೀರೆಯ ವಸ್ತ್ರವಾದ ಕುಪ್ಪಸದ ಖಣ
ಉತ್ತರ ಕರ್ನಾಟಕದ ಕುಪ್ಪಸದ ವಸ್ತ್ರವಾದ ಖಣ, ಒಂದು ಸೀರೆಯಾಗಿ ಪರಿವರ್ತನೆಗೊಂಡಿದ್ದು ಹೇಗೆ?
`ಕುಪ್ಪಸ’ ವಿನ್ಯಾಸಕ ಸರಣಿಯ ವಿನ್ಯಾಸಕರಾದ ಗೀತಾ ಪಾಟೀಲ, ಉತ್ತರ ಕರ್ನಾಟಕದ ಬಾಗಲಕೋಟೆ ಜಿಲ್ಲೆಯ ಗುಳೇದ ಗುಡ್ಡ ತಾಲ್ಲೂಕಿನ ಪಾರಂಪರಿಕ ವಸ್ತ್ರವನ್ನು ತೆಗೆದುಕೊಂಡು ಅದನ್ನು ವೈವಿಧ್ಯಮಯವಾಗಿಸುವ ದಿಟ್ಟ ನಿರ್ಧಾರವನ್ನು ಕೈಗೊಂಡರು.
ತಮ್ಮ ಬಾಲ್ಯದಿಂದಲೂ ಜನರು ಖಣ ವಸ್ತ್ರವನ್ನು ನೇಯ್ದು ಧರಿಸುವ ಮತ್ತು ತಜ್ಞ ನೇಕಾರರು ಜರಿ ಮತ್ತು ಹತ್ತಿಯನ್ನು ಒಂದಾಗಿ ನೇಯಲು ಎದುರಿಸುತ್ತಿದ್ದ ಸವಾಲುಗಳನ್ನು ನೆನಪಿನಲ್ಲಿಟ್ಟುಕೊಂಡಿದ್ದು, ಈ ಪ್ರಯೋಗ ಮತ್ತಷ್ಟು ಮುಂದುವರಿಯಬೇಕೆಂದು ನಿರ್ಧರಿಸಿದರು.
`ಇಳಕಲ್ ಸೀರೆಯೊಡನೆ ಸಾಮಾನ್ಯವಾಗಿ ಧರಿಸಲಾಗುವ ಖಣ ಕುಪ್ಪಸಕ್ಕೆ ಮತ್ತಷ್ಟು ಮೆರುಗು ನೀಡಬೇಕೆಂದು ನಿರ್ಧರಿಸಿದೆ. ಈ ಪ್ರದೇಶದ ಗ್ರಾಮೀಣ ಹಾಗೂ ನಗರದ ಯುವ ಮಹಿಳೆಯರು ಈ ಪಾರಂಪರಿಕ ಸೀರೆ ಮತ್ತು ಕುಪ್ಪಸದ ಜೋಡಿಯನ್ನು ಬಿಟ್ಟಿರುವುದಲ್ಲದೆ, ನೇಕಾರರೂ ಈ ವೃತ್ತಿಯನ್ನು ಬಿಟ್ಟು ಬೇರೆ ವೃತ್ತಿಗಳನ್ನು ಅವಲಂಬಿಸಿದ್ದಾರೆ. ಆದ್ದರಿಂದ ಖಣ ವಸ್ತ್ರವನ್ನು ಸೀರೆ ಅಗಲಕ್ಕೆ ಮಾಡಿ, ಸೀರೆಗಳಲ್ಲೂ ಪ್ರಸಿದ್ಧವಾದ ವಸ್ತ್ರ ಇದಾಗಬೇಕೆಂಬ ಆಲೋಚನೆ ನನ್ನಲ್ಲಿ ಮೂಡಿತು,’ ಎನ್ನುತ್ತಾರೆ ಗೀತಾ. ಈ ಯತ್ನಕ್ಕೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರೆತಿದ್ದಕ್ಕಾಗಿ ಗೀತಾ ಬಹಳ ಸಂತಸಪಡುತ್ತಾರೆ.
ಗುಳೇದಗುಡ್ಡ ಖಣದ ನೇಯ್ಗೆ
ಗುಳೇದಗುಡ್ಡ ಖಣದ ನೇಯ್ಗೆಯ ಸಂಸ್ಕೃತಿಯು, ಜಿಐ ಗುರುತನ್ನು ಪಡೆದ್ದಿದರೂ ಸಹ ಮತ್ತು ಸಮೃದ್ಧವಾದ ನೇಯ್ಗೆಯ ಕೇಂದ್ರವಾಗಿದ್ದರೂ ಸಹ ಗುರುತಿಲ್ಲದಂತಹ ಸ್ಥಳವಾಗಿದ್ದೇಕೆ?
ಗುಳೇದಗುಡ್ಡ ಖಣವನ್ನು ಚಾಲುಕ್ಯರು ಪೋಷಿಸಿದರು ಮತ್ತು ಆ ಪ್ರದೇಶದ ಪ್ರಸಿದ್ಧ ಜವಳಿ ವ್ಯಾಪಾರದ ಕೇಂದ್ರವಾಗಿತ್ತು. ಪ್ರತಿಯೊಂದು ಮನೆಯಲ್ಲೂ ನಾಲ್ಕು ಕೈಮಗ್ಗಗಳಿದ್ದವು. ಇಡೀ ಹಳ್ಳಿಯ ಕೈಮಗ್ಗದ ಮಾರುಕಟ್ಟೆಯಲ್ಲಿ ತೊಡಗಿಸಿಕೊಂಡಿತ್ತು. ಕಳೆದ ಕೆಲವು ದಶಕಗಳಿಂದ ಅನೇಕ ಕಾರಣಗಳಿಂದಾಗಿ ಇದು ಕ್ರಮೇಣವಾಗಿ ಕುಗ್ಗುತ್ತಾ ಬರುತ್ತಿದೆ.
`1900 ರಲ್ಲಿ ಪವರ್ ಕೈಮಗ್ಗಗಳು ಬಂದವು. 1960 ರಲ್ಲಿ ಆರ್ಟ್ ಸಿಲ್ಕ್ ಅಥವಾ ರೆಯಾನ್ ಮಾರುಕಟ್ಟೆಗೆ ಬಂದಿತು. ಕೈಯಲ್ಲಿ ನೇಯ್ದ ಖಣ ಜರಿಗೆ ಇದು ತೀವ್ರ ಸ್ಪರ್ಧೆಯನ್ನೊಡ್ಡಿತು. ಗುಳೇದ ಗುಡ್ಡದಲ್ಲಿ ಒಮ್ಮೆ 30,000 ಕೈಮಗ್ಗಗಳಿದ್ದವು. ಈಗ ಕೆಲವು ನೂರು ಕೈಮಗ್ಗಗಳು ಮಾತ್ರ ಉಳಿದಿದ್ದು, ಅವು ತೀವ್ರ ಸಂಕಷ್ಟದಲ್ಲಿವೆ. ಪವರ್ ಲೂಮ್ ನ ಸದ್ದಿನಲ್ಲಿ ಈಗ ಇಡೀ ಹಳ್ಳಿಯು ಮುಳುಗಿಬಿಟ್ಟಿದೆ. ಅನೇಕ ನೇಕಾರರು ತಜ್ಞ ನೇಕಾರರ/ವ್ಯಾಪಾರಿಗಳ ಕೆಳಗೆ, ಅವರಿಂದ ಅಪಾರ ಸಾಲವನ್ನು ಪಡೆದುದರ ಕಾರಣಕ್ಕಾಗಿ, ಆ ಸಾಲವನ್ನು ತೀರಿಸಲಾಗದೆ, ಇಡೀ ಜೀವನ ಅವರ ಕೈ ಕೆಳಗೇ ದುಡಿಯುತ್ತಾರೆ. ತಮ್ಮ ವೈಯಕ್ತಿಕ ಜೀವನಕ್ಕೆ ಬೇಕಾದಷ್ಟು ಗಳಿಸಲು ನೇಕಾರರು ಕಷ್ಟಪಡುತ್ತಲೇ ಇರುವುದರಿಂದ ನೇಕಾರರು ನಗರ ಪ್ರದೇಶಕ್ಕೆ ಗುಳೇ ಹೋಗುತ್ತಿದ್ದಾರೆ ಮತ್ತು ಈ ಸುಂದರವಾದ ಕಲೆಯು ಕೊನೆಗೊಳ್ಳುತ್ತಿದೆ,’ ಎಂದು ಗೀತಾ ವಿವರಿಸುತ್ತಾರೆ. ಅಹಮದಾಬಾದ್ ನ ನ್ಯಾಷನಲ್ ಇನ್ ಸ್ಟಿಟ್ಯೂಟ್ ಆಫ್ ಡಿಸೈನ್ ನಿಂದ ತಮ್ಮ ಸ್ನಾತಕೋತ್ತರ ಪದವಿಯನ್ನು ಜವಳಿ ವಿನ್ಯಾಸದಲ್ಲಿ ಗೀತಾ ಪಡೆದಿದ್ದಾರೆ.
ನೇಯ್ಗೆಯ ವಿವಿಧ ವಿನ್ಯಾಸನಗಳು
ಹಾಗಿದ್ದರೆ ಇಷ್ಟು ವರ್ಷಗಳಾದರೂ ಖಣ ನೇಯ್ಗೆಯಲ್ಲಿ ಯಾವ ರೀತಿಯ ವಿನ್ಯಾಸದ ಬದಲಾವಣೆಯನ್ನೂ ಮಾಡಲಾಗಿಲ್ಲಿ?
`ಇದು ಮಾತ್ರವಲ್ಲದೆ, ಇಳಕಲ್ ಸೀರೆಗಳು, ಕಂಬಳಿ ನೇಯ್ಗೆ, ಜಮಖಾನ, ದರಿಗಳ ನೇಯ್ಗೆ, ಮತ್ತಿನ್ನಿತರ ರೀತಿಗಳು ಕಳೆಗುಂದಿವೆ. ನಾನು ಉತ್ತರ ಕರ್ನಾಟಕದವಳಾದ್ದರಿಂದ ಈ ಪ್ರದೇಶದ ಕೈಮಗ್ಗ, ಸಂಸ್ಕೃತಿ, ಮೂಲಭೂತ ಸೌಲಭ್ಯ ಮತ್ತು ಬೆಳವಣಿಗೆಗಾಗಿ ಯತ್ನಿಸಲು, ಹಣವನ್ನು ಹೂಡಲು ಸರ್ಕಾರಕ್ಕಾಗಲಿ ಅಥವಾ ಸರ್ಕಾರೇತರ ಸಂಸ್ಥೆಗಳಲ್ಲಿ ಆಸಕ್ತಿಯಿಲ್ಲವೆಂದು ನನಗೆ ಅನಿಸುತ್ತದೆ. ಈ ಪ್ರದೇಶ ಸಂಪನ್ಮೂಲಗಳಲ್ಲಿ ಸಮೃದ್ಧವಾಗಿದೆ ಮತ್ತು ಈ ಜನರ ಆರ್ಥಿಕ, ಸಾಮಾಜಿಕ ಸ್ಥಿತಿಯ ಏಳಿಗೆಗಾಗಿ ಶ್ರಮಿಸಬೇಕೆಂದು ಬಯಸುತ್ತೇನೆ,’ ಎನ್ನುತ್ತಾರೆ ಗೀತಾ.
ಕುಪ್ಪಸದ ಗುರಿ
ಈ ಕಲೆಯನ್ನು ಪುನರುಜ್ಜೀವಿಸಿ, ಈ ಸಮುದಾಯದ ಜೀವನೋಪಾಯವನ್ನು ಸುಧಾರಿಸುವುದೇ `ಕುಪ್ಪಸ’ದ ಗುರಿಯಾಗಿದೆ. `ಸಮುದಾಯವನ್ನು ಆಳವಾಗಿ ಅರ್ಥ ಮಾಡಿಕೊಂಡಾಗ ಮಾತ್ರ ಕೈಮಗ್ಗ ಗ್ರಾಮೀಣ ಆರ್ಥಿಕತೆಯನ್ನು ಪರಿವರ್ತಿಸಲು ಸಾಧ್ಯ. ನಮ್ಮ ಪ್ರಭಾವ ಚಿಕ್ಕದಾದರೂ ಶಕ್ತಿಶಾಲಿಯಾದದ್ದು, ಇದೊಂದು ಸಾಧ್ಯತೆಯೆಂದೇ ಪರಿಗಣಿಸದಂತಹ ಇತರ ವಿನ್ಯಾಸಕರು, ಬ್ರಾಂಡ್ ಗಳು, ಸಂಸ್ಥೆಗಳು ಈಗ ಇದರಲ್ಲಿ ಆಸಕ್ತಿ ವಹಿಸುತ್ತಿರುವುದು ಇದರ ತರಂಗಗಳ ಪರಿಣಾಮವೇ ಸರಿ. ನೇಕಾರರ ಆದಾಯ ದ್ವಿಗುಣವಾಗಿ ಇರುವುದರಿಂದ ಅವರೆಲ್ಲರೂ ಸಂತಸವಾಗಿದ್ದಾರೆ ಮತ್ತು ತಮ್ಮ ಕಲೆಯ ಬಗ್ಗೆ ಹೆಮ್ಮೆಯನ್ನು ಹೊಂದಿದ್ದಾರೆ ಮತ್ತು ಕೆಲಸದಲ್ಲಿ ಅವರ ಆಸಕ್ತಿ ಮತ್ತೆ ಹೆಚ್ಚಿದೆ,’ ಎನ್ನುತ್ತಾರೆ ಗೀತಾ.
ಆದಾಯ ತೃಪ್ತಿಕರವಾಗಿ ಇರುವುದರಿಂದ ಮಾತು ಹರಡಿದೆ ಮತ್ತು ತಜ್ಞ ನೇಕಾರರೊಡನೆ ಕೆಲಸ ಮಾಡುತ್ತಿರುವ ನೇಕಾರರು ಈಗ ಹೆಚ್ಚು ಸಂಬಳವನ್ನು ಕೇಳಲು ಆರಂಭಿಸಿದ್ದಾರೆ.
ಕುಪ್ಪಸ ಇವರಿಗೆ ವರ್ಷವಿಡೀ ಕೆಲಸ ಕೊಡಿಸುವ ಭರವಸೆಯನ್ನು ನೀಡಿದೆ ಮತ್ತು ಅವರಿಗೆ ಆರ್ಥಿಕ ಹಾಗೂ ಸಾಮಾಜಿಕ ಸುರಕ್ಷತೆಯನ್ನು ನೀಡಿದೆ. `ಸಾಮಾಜಿಕ ಅಭಿವೃದ್ಧಿ ಅಂಶಗಳ ಬಗ್ಗೆಯೂ ಹಾಗೂ ಆರೋಗ್ಯದ ವಿಮೆಯ ಬಗ್ಗೆಯೂ ನೋಡುತ್ತಿದ್ದೇವೆ. ಕುಪ್ಪಸದೊಡನೆ ಕೆಲಸ ಮಾಡುತ್ತಿರುವ ಎಲ್ಲಾ ನೇಕಾರರಿಗೂ ಪಿಎಫ್ ನ್ನು ಕೊಡಲಾಗುತ್ತಿದೆ. ನಾವು ಪಡೆಯುವ ಕೃತಜ್ಞತೆ ಮತ್ತು ಪ್ರೇಮ ಅಪಾರವಾದದ್ದು, ಇದರಿಂದ ನಾವು ಎದುರಿಸುವ ಸವಾಲುಗಳೆಲ್ಲ ಗೌಣವಾದವು,’ ಎನ್ನುತ್ತಾರೆ ಗೀತಾ.
`ಕುಪ್ಪಸ’ದ ಖಣ ಸೀರೆಗಳನ್ನು ಪಾರಂಪರಿಕ ಕೈಮಗ್ಗದಲ್ಲಿ ಜರಿಯಿಂದ ಮತ್ತು ಹತ್ತಿಯಿಂದ ನೇಯಲಾಗುತ್ತದೆ. ನೂಲಿನಿಂದ ತಯಾರಾದ ಉತ್ಪನ್ನವಾಗಲು 10-12 ನೇಕಾರರು ಸಹಜವಾದ ಬಣ್ಣಗಳೊಡನೆ ಕೆಲಸ ಮಾಡುತ್ತಾರೆ. `ಚೆಂಡು ಹೂ, ನೀಲಗಿರಿ ಎಲೆಗಳು ಮತ್ತು ದಾಳಿಂಬೆ ಸಿಪ್ಪೆಯಂತಹ ಕಚ್ಚಾ ವಸ್ತುಗಳನ್ನು ಸ್ಥಳೀಯ ರೈತರಿಂದ ಪಡೆಯುತ್ತಾರೆ,’ ಎನ್ನುತ್ತಾರೆ ಗೀತಾ. ಇವರು ಭಾರತದಾದ್ಯಂತ ಅನೇಕ ಸಂಸ್ಥೆಗಳಲ್ಲಿ ನೇಕಾರರ ಗುಂಪುಗಳೊಡನೆ ಕೆಲಸ ಮಾಡಿದ ಅನುಭವವನ್ನು ಪಡೆದಿದ್ದಾರೆ. `ನಾವು ಎರವಲು ಪಡೆದುಕೊಂಡಿರುವ ಈ ಸಮೃದ್ಧ ಕಲೆಯ ಮೂಲಕ ಗ್ರಾಮೀಣ ಭಾರತದ ಏಳಿಗೆ ಮತ್ತು ಅಭಿವೃದ್ಧಿಗಾಗಿ ನನ್ನ ಕಾಣಿಕೆಯನ್ನು ನೀಡಲು ಬಯಸಿದೆ. ಜವಳಿಗಳ ಬಗ್ಗೆ ಕಲಿತು, ನೇಕಾರರ ಗುಂಪುಗಳನ್ನು ಭೇಟಿ ಮಾಡಿದ್ದರಿಂದ ನನಗೆ ಈ ಸ್ಛೂರ್ತಿ ದೊರಕಿತು,’ ಎನ್ನುತ್ತಾರೆ ಗೀತಾ.
– ರಂಜನಿ ಗೋವಿಂದ್