ಇಂದು ನಮ್ಮ ಬದುಕಿನಲ್ಲಿ ಆಹಾರದಿಂದ ಹಿಡಿದು ಜೀವನಶೈಲಿಯವರೆಗೆ ಬಹಳಷ್ಟು ಬದಲಾವಣೆಗಳು ಆಗಿವೆ. ನಮಗೆ ಬೇಕೋ ಬೇಡವೋ ಅವುಗಳಿಗೆ ನಾವು ಹೊಂದಿಕೊಂಡುಬಿಟ್ಟಿದ್ದೇವೆ. ಅದರ ಪರಿಣಾಮವಾಗಿ ಸಕ್ಕರೆ ಕಾಯಿಲೆ, ಹೃದ್ರೋಗ, ಅಧಿಕ ರಕ್ತದೊತ್ತಡ, ಕ್ಯಾನ್ಸರ್ ಮುಂತಾದ ಕಾಯಿಲೆಗಳಿಂದ ನರಳುವವರ ಸಂಖ್ಯೆ ಹೆಚ್ಚಾಗುತ್ತಿದೆ. ಯುವ ವಯಸ್ಸಿನಲ್ಲಿಯೇ ಕಾಯಿಲೆಗಳು ಆಕ್ರಮಿಸಿ. ಜೀವನವಿಡಿ ಪಥ್ಯ ಮಾಡಲೇಬೇಕಾಗಿರುವುದಲ್ಲದೆ ಇಂಜೆಕ್ಷನ್ ಚುಚ್ಚುವಿಕೆ, ಮಾತ್ರೆ ಸಹ ಸೇವಿಸಬೇಕಾದ ಅನಿವಾರ್ಯತೆ ಎದುರಾಗಿದೆ.
ಅನಾರೋಗ್ಯಕ್ಕೆ ಕಾರಣ
ಇದಕ್ಕೆ ಮುಖ್ಯ ಕಾರಣ, ನಾವು ಆಹಾರ ಸ್ವೀಕರಿಸುವ ರೀತಿಯೇ ನಮ್ಮ ವ್ಯಕ್ತಿತ್ವ, ಆರೋಗ್ಯ, ಮನಸ್ಥಿತಿಯನ್ನು ನಿರ್ಧರಿಸುತ್ತದೆ. ಕೈಗೆ ಸಿಕ್ಕಿದ್ದನ್ನೆಲ್ಲ ತಿನ್ನುವುದು, ಒಂದಿಷ್ಟು ಗಂಟಲಿಗೆ ತುರುಕುವುದು, ಗಬಗಬನೇ ತಿನ್ನುವುದು, ಅವಸರದಲ್ಲಿ ಆಹಾರ ನುಂಗುವುದು, ಕುಕ್ಕರಗಾಲಲ್ಲಿ ಕುಳಿತು ಉಣ್ಣುವುದು, ನಿಂತುಕೊಂಡು ಊಟ ಮಾಡುವುದು..... ಇವೆಲ್ಲ ನಮ್ಮ ಆರೋಗ್ಯಕ್ಕೆ ಮಾರಕವಾಗಿದೆ.
ಮತ್ತೊಂದು ಅನಾರೋಗ್ಯಕ್ಕೆ ಕಾರಣ ನಾವೇ. ದುಃಖ, ಬೇಸರ ಒತ್ತಡದ ಮನಸ್ಥಿತಿಯಲ್ಲಿ ಆಹಾರ ಸೇವಿಸಿದರೆ, ಉತ್ತಮ ಆಹಾರ ಕೂಡ ಸರಿಯಾಗಿ ಪಚನಗೊಳ್ಳದೆ ದೇಹಕ್ಕೆ ಬಾಧೆ ಉಂಟಾಗಬಹುದು. ದೇಹ ಮತ್ತು ಮನಸ್ಸು ಒಂದೇ ನಾಣ್ಯದ ಎರಡು ಮುಖಗಳು. ಒಂದಕ್ಕೆ ರೋಗ ಬಂದರೆ, ಇನ್ನೊಂದಕ್ಕೆ ರೋಗ ಲಕ್ಷಣ ಕಾಣಿಸಿಕೊಳ್ಳುತ್ತದೆ. ಹಾಗಾಗಿ ಒತ್ತಡದ ಮನಸ್ಥಿತಿಯಲ್ಲಿ ತಿಂದ ಆಹಾರ ಚೆನ್ನಾಗಿ ಜೀರ್ಣವಾಗುವುದಿಲ್ಲ ಎನ್ನುವುದನ್ನು ವೈದ್ಯ ವಿಜ್ಞಾನ ಸಹ ಒಪ್ಪುತ್ತದೆ. ಇಂದಿನ ದಿನಗಳಲ್ಲಿ ಹೆಚ್ಚು ಬಾಧಿಸುವ ಆಮ್ಲಪಿತ್ತ, ಅಸಿಡಿಟಿ, ಮೈಗ್ರೇನ್ ತಲೆನೋವು, ಕುತ್ತಿಗೆಯ ಸ್ನಾಯುಗಳಲ್ಲಿ ಬಿಗಿತ, ಬೆನ್ನುನೋವು, ಮಲಬದ್ಧತೆ ಮುಂತಾದ ರೋಗಗಳಿಗೆ ಇದೇ ಕಾರಣ.
ಆರೋಗ್ಯವೇ ಭಾಗ್ಯ
ಆರೋಗ್ಯವೇ ಭಾಗ್ಯವಲ್ಲವೇ, ಸಕಲ ಸಂಪತ್ತಿಗಿಂತಲೂ ಶರೀರ ಸಂಪತ್ತೆ ಅಧಿಕ. ತಲೆಮಾರುಗಳ ತನಕ ಕುಳಿತು ತಿಂದರೂ ಸವೆಯದಷ್ಟು ಆಸ್ತಿ ಇದ್ದಾಗ್ಯೂ ಆರೋಗ್ಯ ಇಲ್ಲದಿದ್ದರೆ ಏನು ಪ್ರಯೋಜನ? ಇಂದು ಕಾಯಿಲೆಗಳು ಕಾಣಿಸಿಕೊಂಡ ಕೂಡಲೇ ವೈದ್ಯರ ಬಳಿ ದೌಡಾಯಿಸುವುದು, ಹೆಚ್ಚು ಹಣ ಖರ್ಚು ಮಾಡಿ ಗುಣವಾಗದ ಕಾಯಿಲೆಗಳು ನಿರಂತರವಾಗಿ ಕಂಡು ಬರುತ್ತಿರುವ ದೃಶ್ಯ. ಕೆಲವೊಂದು ಮನೆಯಲ್ಲಿರುವ ಪದಾರ್ಥಗಳಿಂದ ರೋಗ ನಿವಾರಣೆಯನ್ನು ಮಾಡಿಕೊಳ್ಳಬಹುದು. ಅದಕ್ಕೆ ಬೇಕಾಗಿರುವುದು ಆಸಕ್ತಿ, ಉತ್ಸಾಹ, ತಾಳ್ಮೆ. ರೋಗಕ್ಕೆ ಸಂಬಂಧಪಟ್ಟ ವಿಷಯಗಳನ್ನು ಗಮನದಲ್ಲಿ ಇಟ್ಟುಕೊಂಡು ನಡೆದರೆ ರೋಗ ಮುಕ್ತ ಜೀವನ ನಡೆಸಲು ಸಾಧ್ಯ.
ರೋಗ ಬರುವುದಕ್ಕೆ ಕಾರಣ ಮುಖ್ಯವಲ್ಲ. ಅದು ಬಂದಾಗ, ಅದರಿಂದ ಸಂಪೂರ್ಣ ಮುಕ್ತರಾಗುವ ಚಿಂತೆ ನಡೆಸಬೇಕು. ಇವುಗಳು ಬರದಂತೆ ತಡೆಗಟ್ಟಲು ನಾವು ನೀವೇ ನಮ್ಮ ಆರೋಗ್ಯ ರಕ್ಷಣೆಗೆ ಮುಂದಾಗಬೇಕು. ಹಾಗಾಗಿ ನಮ್ಮ ಆರೋಗ್ಯ ನಮ್ಮ ಕೈಯಲ್ಲಿದೆ. ನಮ್ಮ ಮಕ್ಕಳು ಆರೋಗ್ಯವಾಗಿರಲು ನಾವೇ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು. ನಾವು ಸಮರ್ಥರಾಗಲು ನೆಮ್ಮದಿಯ ಜೀವನ ಮಾಡಲು ಆರೋಗ್ಯವಾಗಿರಬೇಕು. ಕೆಲವು ನಿಯಮಗಳನ್ನು ನಾವು ಪಾಲಿಸಿದರೆ ಆರೋಗ್ಯವಂತರಾಗಿ ಬಾಳಬಹುದು.
ರುಚಿ ಮತ್ತು ಶುಚಿ ಆಹಾರ
ಮೊದಲನೆಯದಾಗಿ ಆಹಾರದಲ್ಲಿ ಪಿಷ್ಟ ಪದಾರ್ಥ, ಪ್ರೋಟೀನ್, ಸಕ್ಕರೆ, ಕೊಬ್ಬು, ವಿಟಮಿನ್ಸ್, ಲೋಹ, ಖನಿಜ, ಲವಣಾಂಶಗಳು ಸರಿ ಪ್ರಮಾಣದಲ್ಲಿರಬೇಕು. ಹೆಚ್ಚು ಹಣ್ಣು, ಹಸಿ ತರಕಾರಿ, ಬೇಳೆಕಾಳು, ಮೊಳಕೆಕಾಳು, ಹಾಲು, ಮೊಸರು ಮತ್ತು ಮಜ್ಜಿಗೆ ಮುಂತಾದವುಗಳನ್ನು ಹೆಚ್ಚು ಹೆಚ್ಚಾಗಿ ಬಳಸಿ. ಹಾಗೆ ಹಬೆಯಲ್ಲಿ ಬೆಂದ ಪದಾರ್ಥಗಳನ್ನು ಹೆಚ್ಚಾಗಿ ಸೇವಿಸಿ. ಯಾವುದೇ ಆಹಾರ ತೆಗೆದುಕೊಂಡರೂ ಸರಿಯಾದ ವೇಳೆಗೆ ಸೇವಿಸಿ. ಬೆಣ್ಣೆ, ಗಿಣ್ಣು (ಚೀಸ್), ಕರಿದ ಪದಾರ್ಥ, ಮಾಂಸಾಹಾರಗಳನ್ನು ಆದಷ್ಟು ಕಡಿಮೆ ಸೇವಿಸಿ. ಹಾಗೆ ರಸ್ತೆಯ ಪಕ್ಕದಲ್ಲಿನ ಆಹಾರಗಳನ್ನು ಸೇವಿಸಬೇಡಿ. ಕಾರಣ ಅದರ ಮೇಲೆ ಧೂಳು, ನೊಣ, ಸೊಳ್ಳೆ ಕುಳಿತುಕೊಂಡಿರುತ್ತವೆ. ರೆಡಿ ಟು ಈಟ್ ಆಹಾರಗಳನ್ನು ಸಹ ಸೇವಿಸಬೇಡಿ. ನೀವು ಅಡುಗೆಮನೆಯಲ್ಲಿ ಸಿದ್ಧಪಡಿಸಿದ ಆಹಾರಗಳನ್ನು ಮಾತ್ರ ಸೇವಿಸಿ. ಆಹಾರ ಶುಚಿಯಾಗಿ ಮತ್ತು ರುಚಿಯಾಗಿರಬೇಕು. ಆದಷ್ಟೂ ಜಂಕ್‌ಫುಡ್ ಮತ್ತು ಫಾಸ್ಟ್ ಫುಡ್ ಗಳಿಂದ ದೂರವಿರಿ.