ದೇಹದಲ್ಲಿ ಪಿತ್ತದ ಪ್ರಕೋಪದಿಂದ ಉಂಟಾಗುವ ಕೆಂಪು ಗುರುತುಗಳನ್ನು `ಅರ್ಟಿಕೆರಿಯಾ' ಎಂದು ಕರೆಯುತ್ತಾರೆ. ಶೇ.20ರಷ್ಟು ಜನರು ಜೀವನದ ಯಾವುದಾದರೊಂದು ಹಂತದಲ್ಲಿ ಅರ್ಟಿಕೆರಿಯಾ ಸಮಸ್ಯೆಯಿಂದ ಬಳಲುತ್ತಾರೆ. ಇದು ಹಲವಾರು ಬಗೆಯ ಪದಾರ್ಥಗಳ ಸೇವನೆ ಅಥವಾ ಬದಲಾದ ಸ್ಥಿತಿಯ ಕಾರಣದಿಂದ ಆಗುತ್ತದೆ. ಇದು ಚರ್ಮದ ಒಂದು ಪ್ರತಿಕ್ರಿಯೆಯಾಗಿದೆ. ಅದರಿಂದ ದೇಹದ ಮೇಲೆ ದುಂಡನೆಯ ಕೆಂಪು ಗುರುತುಗಳು ಕಂಡುಬರುತ್ತವೆ. ಅದು ತುರಿಕೆಯನ್ನು ಉಂಟು ಮಾಡುತ್ತದೆ. ಈ ತುರಿಕೆ ಸಾಧಾರಣ ಸ್ಥಿತಿಯಿಂದ ಹಿಡಿದು ಗಂಭೀರ ಸ್ಥಿತಿಯವರೆಗೆ ಇರಬಹುದಾಗಿದೆ. ತೀವ್ರ ಕೆರೆತ, ಮದ್ಯ ಸೇವನೆ, ವ್ಯಾಯಾಮ ಮಾಡುವುದು ಹಾಗೂ ಭಾವನಾತ್ಮಕ ಒತ್ತಡದಿಂದಾಗಿ ತುರಿಕೆಯ ಸಮಸ್ಯೆ ಮತ್ತಷ್ಟು ವಿಕೋಪಗೊಳ್ಳಬಹುದು.
ಅರ್ಟಿಕೆರಿಯಾದ ಪ್ರಕಾರಗಳು
ಅಕ್ಯೂಟ್ ಅರ್ಟಿಕೆರಿಯಾ : ಈ ಬಗೆಯ ಅರ್ಟಿಕೆರಿಯಾದಲ್ಲಿ ಚರ್ಮದಲ್ಲಿ 6 ವಾರಗಳ ತನಕ ಊತ ಮುಂದುವರಿಯಬಹುದಾಗಿದೆ. ಆಹಾರ, ಔಷಧ, ಸೋಂಕು ಇವೇ ಈ ತೆರನಾದ ಅರ್ಟಿಕೆರಿಯಾಗೆ ಕಾರಣವಾಗುತ್ತದೆ. ಕ್ರಿಮಿಕೀಟಗಳ ಕಚ್ಚುವಿಕೆ ಅಥವಾ ಆಂತರಿಕ ರೋಗಗಳ ಕಾರಣದಿಂದಾಗಿಯೂ ಈ ಸ್ಥಿತಿ ಉಂಟಾಗಬಹುದು.
ಕ್ರಾನಿಕ್ ಅರ್ಟಿಕೆರಿಯಾ : ಕ್ರಾನಿಕ್ ಅರ್ಟಿಕೆರಿಯಾದಲ್ಲಿ ಊತ 6 ವಾರಗಳಿಗಿಂತಲೂ ಹೆಚ್ಚು ಸಮಯ ಉಳಿಯಬಹುದಾಗಿದೆ. ಇದರ ಕಾರಣಗಳನ್ನು ಪತ್ತೆ ಹಚ್ಚುವುದು ಕಠಿಣ. ಇದರ ಕಾರಣಗಳು ಅಕ್ಯೂಟ್ ಅರ್ಟಿಕೆರಿಯಾಗೆ ಸಮಾನವಾಗಿರುತ್ತವೆ. ಆದರೆ ಇದರಲ್ಲಿ ಆಟೋ ಇಮ್ಯುನಿಟಿ, ಗಂಭೀರ ಸೋಂಕು ಮತ್ತು ಹಾರ್ಮೋನು ಅಸಮತೋಲನ ಮುಂತಾದವು ಸೇರಿಕೊಂಡಿರಬಹುದಾಗಿದೆ.
ಫಿಝಿಕಲ್ ಅರ್ಟಿಕೆರಿಯಾ : ಇದು ಶೀತ, ಉಷ್ಣ, ಬೆವರು ಮುಂತಾದ ಕಾರಣಗಳಿಂದಾಗಿ ಉಂಟಾಗಬಹುದಾಗಿದೆ. ಸಾಮಾನ್ಯವಾಗಿ ಇದು ಆ ಪ್ರಚೋದಕಗಳ ಸಂಪರ್ಕಕ್ಕೆ ಬರುವ ಚರ್ಮದ ಮೇಲೆ ಕಂಡುಬರುತ್ತದೆ.
ಲಕ್ಷಣಗಳು
ಅರ್ಟಿಕೆರಿಯಾದ ಕಾರಣಗಳು ಕೆಳಕಂಡ ಲಕ್ಷಣಗಳಿಂದ ಗೋಚರಿಸಬಹುದು.
ಕೆಂಪು ವರ್ಣದ ತುರಿಕೆಯನ್ನು ಉಂಟು ಮಾಡುವ ಅಂಡಾಕಾರ ಅಥವಾ ಕೀಟದ ಆಕಾರದ ಗುರುತುಗಳು, ಅದರ ಆಕಾರ ಕೆಲವು ಮಿಲಿ ಮೀಟರ್‌ನಿಂದ ಹಿಡಿದು ಹಲವು ಇಂಚುಗಳ ತನಕ ಇರಬಹುದಾಗಿದೆ.
ಕೆಂಪು ಗೋಲಾಕಾರದ ಗುರುತನ್ನು ಒಂದು ಬದಿಯಿಂದ ಒತ್ತಿದಾಗ ಅದು ಬಿಳಿ ಅಥವಾ ಹಳದಿ ವರ್ಣ ತಾಳಬಹುದು.
ಅರ್ಟಿಕೆರಿಯಾದ ಗುರುತುಗಳು ದೇಹದ ಯಾವುದೇ ಭಾಗದಲ್ಲಾದರೂ ಕಾಣಿಸಿಕೊಳ್ಳಬಹುದು. ಅವು ತಮ್ಮ ಆಕಾರವನ್ನು ಬದಲಿಸಿಕೊಳ್ಳಬಹುದು. ಬೇರೆ ಜಾಗಕ್ಕೆ ಹರಡಬಹುದು. ಅವು ಒಮ್ಮೆಲೇ ಮಂದವಾಗಬಹುದು, ಹಾಗೆಯೇ ಯಾವಾಗ ಬೇಕೆಂದಾಗ ಪ್ರತ್ಯಕ್ಷವಾಗಬಹುದು.
ಹೆಚ್ಚಿನ ಅರ್ಟಿಕೆರಿಯಾದ ಲಕ್ಷಣಗಳು 24 ಗಂಟೆಗಳಲ್ಲಿಯೇ ಪತ್ತೆಯಾಗುತ್ತವೆ. ಆದರೆ ಕ್ರಾನಿಕ್ ಅರ್ಟಿಕೆರಿಯಾದ ಲಕ್ಷಣಗಳು ತಿಂಗಳುಗಳೇನು..... ಕೆಲವೊಮ್ಮೆ ವರ್ಷದನತಕ ಹಾಗೆಯೇ ಇರಬಹುದಾಗಿದೆ.
ಕಾರಣಗಳು
ಅರ್ಟಿಕೆರಿಯಾದ ಹಲವು ಕಾರಣಗಳನ್ನು ಸಂಶೋಧನೆಗಳಲ್ಲಿ ಗುರುತಿಸಲಾಗಿದೆ. ಆದರೆ ಎಲ್ಲ ಕಾರಣಗಳ ಬಗ್ಗೆ ಗೊತ್ತಾಗುವುದಿಲ್ಲ. ಅರ್ಟಿಕೆರಿಯಾದ ಸಾಮಾನ್ಯ ಕಾರಣಗಳು ಕೆಳಕಂಡಂತಿವೆ :
ಆಹಾರ : ಹಲವು ಜನರಲ್ಲಿ ಅವರು ಸೇವಿಸುವ ಕೆಲವು ಬಗೆಯ ಆಹಾರಗಳೇ ಅರ್ಟಿಕೆರಿಯಾದ ಪ್ರಚೋದನೆಗೆ ಕಾರಣವಾಗಬಹುದು. ಮೀನು, ಶೇಂಗಾಕಾಳು, ಮೊಟ್ಟೆ, ಹಾಲು ಮುಂತಾದವು.
ಔಷಧಿ : ಹಲವು ಬಗೆಯ ಔಷಧಿಗಳು ಕೂಡ ಈ ಸಮಸ್ಯೆಯನ್ನು ಹೆಚ್ಚಿಸಬಹುದು. ಆ್ಯಸ್ಪ್ರಿನ್, ಪೆನ್ಸಿಲಿನ್ ಹಾಗೂ ರಕ್ತದೊತ್ತಡದ ಔಷಧಿಗಳು ಸಮಸ್ಯೆಯನ್ನು ಹೆಚ್ಚಿಸುತ್ತವೆ.