ಕೊರೋನಾದ ಹಾವಳಿ ಇಡೀ ಜಗತ್ತನ್ನು ಬಾಧಿಸಿದೆ. ಜಗತ್ತಿನ ಬಹುತೇಕ ದೇಶಗಳು ಇದರ ಕಪಿಮುಷ್ಟಿಗೆ ಸಿಲುಕಿವೆ. ಜನರು ತಮ್ಮ ಮನೆಗಳಲ್ಲಿ ಬಂಧಿಯಾಗುವುದು ಅನಿವಾರ್ಯ ಆಗಿತ್ತು. ಕೊರೋನಾದಿಂದ ರಕ್ಷಿಸಿಕೊಳ್ಳಲು ಹಾಗೆ ಮಾಡಲೇಬೇಕಿತ್ತು. ಜನದಟ್ಟಣೆಯ ಪ್ರದೇಶಗಳಿಗೆ ತೆರಳದೆ, ಸ್ವಚ್ಛತೆಯ ಬಗ್ಗೆ ಗಮನ ಕೊಡುವುದರ ಮೂಲಕ ಸೋಂಕಿನಿಂದ ರಕ್ಷಿಸಿಕೊಳ್ಳಬೇಕಿತ್ತು. ಇಂತಹ ಸ್ಥಿತಿಯಲ್ಲಿ ಗಂಡ ಹೆಂಡತಿ ಅಥವಾ ಲಿವ್ ಇನ್ ರಿಲೇಶನ್‌ಶಿಪ್ ಮನೆಯಲ್ಲಿ ಸದಾ ಜೊತೆ ಜೊತೆಗೆ ಇದ್ದು ಇದ್ದೂ ಏನಾಗಬಹುದು? ಹಾಗೆ ನೋಡಿದರೆ ಅದೇನೂ ಹನಿಮೂನ್ ಅವಧಿ ಕೂಡ ಅಲ್ಲ. ಸಂಶೋಧನೆಗಳಿಂದ ತಿಳಿದುಬಂದ ಸಂಗತಿಯೆಂದರೆ, ಹಾಗೆ ನಿರಂತರವಾಗಿ ಜೊತೆ ಜೊತೆಗೆ ಇದ್ದುದರಿಂದ ಹತಾಶೆ, ಕೋಪ, ಒತ್ತಡದಂತಹ ಭಾವನೆಗಳನ್ನು ಎದುರಿಸಬೇಕಾಗಿ ಬಂದಿರಬಹುದು.
ಗಂಡ ಹೆಂಡತಿ ನಡುವಣ ಸಂಬಂಧ ಜೀವನ ಪರ್ಯಂತರದ ಸಂಬಂಧ. ಆದರೂ ಇಬ್ಬರ ನಡುವೆ ಅಷ್ಟಿಷ್ಟು `ಬ್ರೀದಿಂಗ್ ಸ್ಪೇಸ್' ಇರಲೇಬೇಕು. ಹಾಗಾಗಿ ಗಂಡ ಮುಂಜಾನೆ ಆಫೀಸಿಗೆ ಹೋದರೆ, ಹೆಂಡತಿ ಮನೆಯಲ್ಲಿ ತನ್ನದೇ ಆದ ಲೋಕದಲ್ಲಿ ವಿಹರಿಸಬೇಕು. ಸಂಜೆ ಗಂಡ ವಾಪಸ್ಸಾದ ಬಳಿಕ ಅವರ ನಡುವೆ ನಿಕಟತೆ ಉಂಟಾಗುತ್ತದೆ ಎಂದೆಲ್ಲ ಹೇಳಲಾಗುತ್ತದೆ. ಈ ರೀತಿಯ ವಾತಾವರಣದಿಂದ ಅವರ ಸಂಬಂಧದಲ್ಲಿ ತಾಜಾತನ ಇರುತ್ತದೆ. ಕೊರೋನಾದ ಕಾರಣದಿಂದ ತಾಜಾ ಗಾಳಿಯ ಪ್ರವೇಶ ಬಂದ್ ಆಗಿದ್ದಲ್ಲಿ, ಅಷ್ಟಿಷ್ಟು ಉದಾಸೀನತೆ, ನಿರಾಶೆ ಆಗುವುದು ಸಹಜ. ಜೊತೆಗೆ ಮಕ್ಕಳು ಇದ್ದಲ್ಲಿ ಅಂತಹ ಯಾವುದೇ ಸಮಸ್ಯೆಗಳು ಆಗುವುದು ಕಡಿಮೆ. ಕೆಲವು ಸಲಹೆಗಳನ್ನು ಅನುಸರಿಸಿ ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಿ.
ರೊಟೀನ್ ಲೈಫ್ನಿಂದ ಹೊರಬನ್ನಿ
ಕೊರೋನಾ ಲಾಕ್ ಡೌನ್‌ನಿಂದಾಗಿ ಕುಟುಂಬದವರೊಂದಿಗೆ ಇರುವುದು ಅನಿವಾರ್ಯವಾಗಿತ್ತು. ಹಾಗೆಂದು ಅವನ್ನು ಕಠಿಣ ದಿನಗಳೆಂದು ಭಾವಿಸಬಾರದು. ಅದು ಕಹಿ ಅನುಭವಗಳ ಜೊತೆ ಸಿಹಿ ಅನುಭವಗಳನ್ನು ಕೊಟ್ಟಿದೆ. ಕೆಲವರಿಗೆ ಕುಟುಂಬದೊಂದಿಗೆ ಇರುವ ಸದಾವಕಾಶ ಕೊಟ್ಟಿತ್ತು. ಮತ್ತೆ ಕೆಲವರಿಗೆ ಅದು ಶಿಕ್ಷೆಯೆಂಬಂತೆ ಅನಿಸಿತು. ಅನಾರೋಗ್ಯದ ಸಮಯದಲ್ಲಿ ನಾವು ಹಾಸಿಗೆ ಹಿಡಿದು ಮಲಗಬೇಕಾಗುತ್ತದೆ. ಇದನ್ನು ಕೂಡ ಹಾಗೆಯೇ ಅಂದುಕೊಂಡು ಸಮಾಧಾನ ಪಟ್ಟುಕೊಳ್ಳಬೇಕು. ಅನಾರೋಗ್ಯದಿಂದ ಚೇತರಿಸಿಕೊಳ್ಳುವಂತೆ ನಾವು ಈಗ ಕೊರೋನಾ ಲಾಕ್ ಡೌನ್‌ನಿಂದ ಹೊರಬಂದು ವಾಸ್ತವ ಜಗತ್ತಿಗೆ ಹೊಂದಿಕೊಳ್ಳಬೇಕು. ಮತ್ತೆ ಕೆಲಸ ಕಾರ್ಯಗಳ ನಡುವೆ ನಮ್ಮನ್ನು ತೊಡಗಿಸಿಕೊಂಡು ದಾಂಪತ್ಯ ಜೀವನದ ಮಧುರತೆಯ ಸ್ವಾದವನ್ನು ಮತ್ತೆ ಪಡೆದುಕೊಳ್ಳಬೇಕು.
ಮನೆಗೆಲಸಗಳನ್ನು ಹಂಚಿಕೊಳ್ಳಿ
ಕೊರೋನಾ ದೆಸೆಯಿಂದಾಗಿ ಮನೆಗೆಲಸದವಳು ಹಾಗೂ ಇತರ ಸಹಾಯಕರು ಬರುವಿಕೆ ಸಂಪೂರ್ಣ ನಿಂತುಹೋಗಿದೆ. ಹೀಗಾಗಿ ಮನೆಯ ಸಮಸ್ತ ಕೆಲಸಗಳನ್ನು ಗೃಹಿಣಿಯೊಬ್ಬಳೇ ನಿಭಾಯಿಸುವುದು ಕಷ್ಟವಾಗುತ್ತದೆ. ಹೀಗಾಗಿ ದಂಪತಿಗಳು ಪರಸ್ಪರ ಮಾತನಾಡಿಕೊಂಡು ಮನೆಯ ಎಲ್ಲಾ ಕೆಲಸ ಕಾರ್ಯಗಳನ್ನು ಹಂಚಿಕೊಳ್ಳುವುದು ಅನಿವಾರ್ಯ. ಈ ರೀತಿ ಮಾಡುವುದರಿಂದ ಮನೆ ಶುಭ್ರವಾಗಿ, ಅಡುಗೆ ಸಕಾಲಕ್ಕೆ ತಯಾರಾಗಿ ಜೊತೆಗೆ ಮನರಂಜನೆ ಅವಕಾಶ ಸಿಗುತ್ತದೆ. ಮನಸ್ಸಿದ್ದಲ್ಲಿ ಯಾವ ಕೆಲಸವನ್ನು ನಿಭಾಯಿಸುವುದೂ ಕಷ್ಟವಲ್ಲ.
ಹತ್ತಿರವಿದ್ದೂ ದೂರ ದೂರ
ಕೊರೋನಾ ವೈರಸ್ ನವದಂಪತಿಗೆ ಸೇರಿದಂತೆ ಬಹುತೇಕ ಎಲ್ಲ ಜೋಡಿಗಳಿಗೆ ಹೇಗೆ ಹೆದರಿಸಿಬಿಟ್ಟಿತ್ತೆಂದರೆ, ಮನೆಯಲ್ಲಿ ಹತ್ತಿರವಿದ್ದೂ ದೂರ ಇರುವಂತೆ ಮಾಡಿಬಿಟ್ಟಿತ್ತು. ನವದಂಪತಿಗಳಿಗೆ ಪರಸ್ಪರರ ಆಕರ್ಷಣೆಗಳು ಇದ್ದೇ ಇರುತ್ತದೆ. ತಮ್ಮ ಆಸೆ ಆಕಾಂಕ್ಷೆಗಳಿಗೆ ಕಡಿವಾಣ ಹಾಕುವುದು ಅವರಿಗೆ ಸಾಧ್ಯವಿರುವುದಿಲ್ಲ. ಆದರೂ ವೈರಸ್ ಭೀತಿಯಿಂದಾಗಿ ದೂರ ಇರುವುದು ಅನಿವಾರ್ಯವಾಗಿತ್ತು. ಹೀಗಾಗಿ ಒಂದಷ್ಟು ನಿರಾಶೆ ಆಗಿರುತ್ತದೆ. ಕೊರೋನಾದ ಸೋಂಕಿನ ಹಾವಳಿ ಕಡಿಮೆಯಾದ ಬಳಿಕ ದಂಪತಿಗಳು ತಮ್ಮ ಉಲ್ಲಾಸದ ಜೀವನ ಆರಂಭಿಸಬಹುದು. ಆದರೆ ಒಂದಿಷ್ಟು ಸ್ವಚ್ಛತೆ ಕಾಪಾಡಿಕೊಳ್ಳಬೇಕು. ಹೊರಗಿನಿಂದ ಬಂದ ಬಳಿಕ ಸ್ನಾನ ಮಾಡಿಯೇ ಪರಸ್ಪರ ಭೇಟಿಯಾಗಬೇಕು. ಹೀಗೆ ಮಾಡಿದಲ್ಲಿ ಮೊದಲಿನ ಪ್ರೀತಿ ಮರುಕಳಿಸುತ್ತದೆ.