ಗರ್ಭಾಸ್ಥೆಯಲ್ಲಿರಲಿ ಅಥವಾ ಪ್ರಸವದ ನಂತರವೇ ಇರಲಿ, ತಾಯಿ ಯಾವ ಆಹಾರ ಸೇವಿಸುವಳೋ ಅದರ ಪರಿಣಾಮ ಮಗುವಿನ ಆಹಾರದ ಇಷ್ಟಾನಿಷ್ಟಗಳ ಮೇಲೆ ಆಗುತ್ತದೆ. ಇತ್ತೀಚೆಗೆ ನಡೆದ ಸಂಶೋಧನೆಗಳು ಇಂಥ ರೋಚಕ ಸಂಗತಿಯನ್ನು ಕಂಡುಕೊಂಡಿವೆ.
ಅಕಸ್ಮಾತ್ ನಿಮಗೇನಾದರೂ, ಮಗು ತಾಯಿಯ ಹಾಲನ್ನು ಕುಡಿದು ಸದಾ ಒಂದೇ ತರಹದ ರುಚಿಯಿಂದ ಕಂಗೆಟ್ಟಿರಬಹುದು ಎಂದು ಅನಿಸಿದ್ದರೆ, ಖಂಡಿತಾ ನಿಮ್ಮ ವಿಚಾರವನ್ನು ಬದಲಿಸಿಕೊಳ್ಳಿ. ಡೆನ್ಮಾರ್ಕ್ ನ ಕೋಪನ್ ಹೇಗನ್ ವಿಶ್ವವಿದ್ಯಾನಿಲಯ ಈ ನಿಟ್ಟಿನಲ್ಲಿ ಸಂಶೋಧನೆ ನಡೆಸಿ, ತಾಯಿಯ ಆಹಾರ ಹಾಗೂ ಆಕೆಯ ಎದೆಹಾಲಿನ ಸುಗಂಧಕ್ಕಿರುವ ಸಂಬಂಧವನ್ನು ಸ್ಪಷ್ಟಪಡಿಸಿದೆ. ಈ ಸಂಶೋಧನೆಯ ಹೆಡ್ ಆಗಿರುವ ಹೆಲನ್ ಹೊಸ್ ನರ್ ಈ ಕುರಿತು, `ತಾಯಿಯ ಎದೆಹಾಲಿನ ವಿವಿಧ ಸುಗಂಧಗಳನ್ನು ಗುರುತಿಸಿ ಮಗು ತನಗೆ ಬೇಕೆನಿಸುವ ವಿವಿಧ ಆಹಾರ ಪದಾರ್ಥಗಳೆಡೆಗೆ ಆಕರ್ಷಿತವಾಗುತ್ತದೆ,' ಎನ್ನುತ್ತಾರೆ.
ಸ್ತನ್ಯಪಾನ ಮಾಡಿಸುವ ಅವಧಿಯಲ್ಲಿ ಅಂದಹಾಗೆ ಈ ಹಿಂದೆ ಕೈಗೊಂಡ ಸಂಶೋಧನೆಗಳಿಂದ ತಿಳಿದುಬಂದಿದ್ದ ಅಂಶವೆಂದರೆ, ತಾಯಿ ಯಾವ ಆಹಾರ ಪದಾರ್ಥ ಸೇವಿಸುತ್ತಾಳೋ ಅದರ ಪ್ರಭಾವ ಮಗುವಿನ ಇಷ್ಟಾನಿಷ್ಟಗಳ ಮೇಲಾಗುತ್ತದೆ ಎಂಬುದು. ಗರ್ಭಾವಸ್ಥೆಯಲ್ಲಿ ಅಥವಾ ಮಗುವಿಗೆ ಹಾಲೂಡಿಸುವಾಗ, ತಾಯಿ ಕ್ಯಾರೆಟ್ ಜೂಸ್ ನ್ನು ಇಷ್ಟಪಟ್ಟು ಸೇವಿಸಿದರೆ ಮಗುವಿಗೂ ಕ್ಯಾರೆಟ್ ಪದಾರ್ಥ ಇಷ್ಟವಾಗುತ್ತದೆ ಎಂಬುದನ್ನು ಮೊದಲೇ ಗುರುತಿಸಲಾಗಿತ್ತು. ಈ ಸುವಾಸನೆಯ ವಿಷಯ ಸ್ಪಷ್ಟಪಡಿಸಿಕೊಳ್ಳಲು ಹೆಲನ್ ಇನ್ನಷ್ಟು ಪ್ರಯೋಗಗಳನ್ನು ನಡೆಸಿದರು.
ಆಕೆ ಸ್ತನ್ಯಪಾನ ಮಾಡಿಸುತ್ತಿದ್ದ ಸುಮಾರು 18 ಮಹಿಳೆಯರನ್ನು ಇದಕ್ಕಾಗಿ ಆರಿಸಿಕೊಂಡರು. ಅವರೆಲ್ಲರಿಂದ ಆಕೆ ಹಾಲಿನ ಸ್ಯಾಂಪಲ್ ಪಡೆದುಕೊಂಡರು. ಇದರ ನಂತರ ಅವರಿಗೆ 4 ಬೇರೆ ಬೇರೆ ಸುಗಂಧದ ಪದಾರ್ಥಗಳ ಕ್ಯಾಪ್ಸೂಲ್ ನ್ನು ಸೇವಿಸಲು ಕೊಟ್ಟರು. ಇವಗಳಲ್ಲಿ ಓಮ, ಮೆಂಥಾಲ್, ಬಾಳೆಹಣ್ಣು ಹಾಗೂ ಜ್ಯೇಷ್ಠಮಧುವಿನ ಸುಗಂಧಗಳಿದ್ದವು. ನಂತರ ಪ್ರತಿ 2 ಗಂಟೆಗಳಿಗೊಮ್ಮೆ ಅವರ ಹಾಲನ್ನು ತೆಗೆದುಕೊಂಡು ಪರೀಕ್ಷಿಸಲಾಯಿತು.
ವ್ಯವಾಹಾರಿಕ ಲಾಭ
ಇಂಥ ಬೇರೆ ಬೇರೆ ಸುಗಂಧ ಮೂಲಗಳು ಹಾಲಿನಲ್ಲಿ ವಿಲೀನವಾಗಿ ಹೊರಹೊಮ್ಮಲು ವಿಭಿನ್ನ ಕಾವಾವಧಿ ಬೇಕಾಯಿತು. ಬಾಳೆಹಣ್ಣಿನ ಸುಗಂಧ ಕೇವಲ 1 ತಾಸಿಗೆ ಮೊದಲೇ ಹಾಲಿಗೆ ಬಂದಿದ್ದು, 1 ಗಂಟೆ ಕಾಲದವರೆಗೂ ಮಾತ್ರ ಅದು ಹಾಲಿನಲ್ಲಿ ನಿಲ್ಲಬಲ್ಲದು. ಓಮ ಹಾಗೂ ಜ್ಯೇಷ್ಠಮಧುವಿನ ಸುಗಂಧ ಹಾಲಿನಲ್ಲಿ ವಿಲೀನವಾಗಿ ಹೊರಹೊಮ್ಮಲು 2 ಗಂಟೆ ಬೇಕಾಯಿತು. ಈ ಗಾಢ ಸುವಾಸನೆ ತುಂಬಾ ಹೊತ್ತು ಹಾಗೇ ಇರಬಲ್ಲದು. ಮೆಂಥಾಲ್ ಸುವಾಸನೆ 2 ಗಂಟೆಗೂ ಹೆಚ್ಚು ಕಾಲ ತೆಗೆದುಕೊಂಡರೂ, ಇದು 38 ಗಂಟೆಗಳವರೆಗೂ ಹಾಲಿನಲ್ಲಿ ಸುವಾಸನೆ ಉಳಿಸಿಕೊಳ್ಳಬಲ್ಲದು. 8 ತಾಸುಗಳ ನಂತರ ಯಾವ ಪದಾರ್ಥದ ಸುಗಂಧ ಉಳಿಯುವುದಿಲ್ಲ. ಇದರಿಂದ ಸ್ಪಷ್ಟವಾಗುವ ಅಂಶವೆಂದರೆ ತಾಯಿಯ ಎದೆಹಾಲಿನ ಸುಗಂಧ, ಸಮಯ (ದಿನದ ಲೆಕ್ಕದಲ್ಲಿ) ಕಳೆದಂತೆ ಬದಲಾಗುತ್ತಿರುತ್ತದೆ.
ಈ ಸಂಶೋಧನಾ ತಂಡದರ ಹೇಳಿಕೆ ಎಂದರೆ, ಇವರ ಈ ನೂತನ ಸಂಶೋಧನೆ ಅನೇಕ ವ್ಯಾವಹಾರಿಕ ಲಾಭಗಳನ್ನು ತಂದುಕೊಡುತ್ತದಂತೆ. ತನ್ನ ಚಿಕ್ಕ ಮಗು ಇಂದೇಕೆ ಹಾಲು ಕುಡಿಯಲು ರಚ್ಚೆ ಹಿಡಿಯುತ್ತಿದೆ ಎಂದು ತಾಯಿ ಇದರಿಂದ ಲೆಕ್ಕ ಹಾಕಬಹುದು. ಮಗುವಿಗೆ ತಾಯಿ ಅಂದು ತಿಂದಿದ್ದ ಯಾವುದೋ ಪದಾರ್ಥದ ಸುಗಂಧ ಖಂಡಿತಾ ಇಷ್ಟವಾಗದೆ ಇರಬಹುದು. ಹೀಗಿರುವಾಗ ತಾಯಿ ತನ್ನ ಊಟೋಪಚಾರದತ್ತ ಹೆಚ್ಚಿನ ಲಕ್ಷ್ಯ ವಹಿಸಬೇಕು ಎನ್ನುತ್ತಾರೆ. ಆದ್ದರಿಂದಲೇ ನಮ್ಮಲ್ಲಿ ಹಿರಿಯರು ಬಾಣಂತಿಗೆ ಕಟ್ಟುನಿಟ್ಟಿನ ಪಥ್ಯ ಮಾಡಿ, ಸಾತ್ವಿಕ ಆಹಾರವನ್ನಷ್ಟೇ ಕೊಡಬೇಕು ಎನ್ನುತ್ತಾರೆ.