ಕೆಲವು ತಿಂಗಳುಗಳ ಹಿಂದೆ ಏರ್ ಇಂಡಿಯಾದ ಮಹಿಳಾ ಪೈಲಟ್ ಮತ್ತು ಕ್ರೂದಲ್ಲಿರುವ ಒಬ್ಬ ಸಿಬ್ಬಂದಿಯನ್ನು 'ಪ್ರೀಫ್ಲೈಟ್‌ಆಲ್ಕೋಹಾಲ್ ಟೆಸ್ಟ್ 'ನಲ್ಲಿ ಫೇಲ್ ಆದ ಕಾರಣದಿಂದ ಶಿಕ್ಷೆ ಎಂಬಂತೆ ಅವರನ್ನು 3 ತಿಂಗಳ ಮಟ್ಟಿಗೆ ಗ್ರೌಂಡ್ ಡ್ಯೂಟಿಗೆ ಕಳಿಸಲಾಯಿತು. ಈ ಪ್ರಕರಣ ಡೈರೆಕ್ಟರ್ ಜನರಲ್ ಆಫ್ ಸಿವಿಲ್ ಏವಿಯೇಶನ್ ತನಕ ತಲುಪಿತು. ಏಕೆಂದರೆ ವಿಮಾನಯಾನ ನಿಯಮಗಳ ಪ್ರಕಾರ ಕ್ರೂ ಸದಸ್ಯರು ವಿಮಾನ ಹಾರುವ 12 ಗಂಟೆಗಳ ತನಕ ಯಾವುದೇ ಮದ್ಯಪಾನ ಮಾಡಿರಬಾರದು ಎಂಬ ನಿಯಮವಿದೆ.
ಅದೇ ರೀತಿಯ ಘಟನೆಯೊಂದು ದೆಹಲಿಯ ರೋಹಿಣಿ ಪ್ರದೇಶದಲ್ಲಿ ಘಟಿಸಿತು. ಪ್ರೀತಿ ಎಂಬ 36 ವರ್ಷದ ಮಹಿಳೆ ಮದ್ಯದ ನಶೆಯಲ್ಲಿ ಗಾಡಿ ಓಡಿಸಿ ಐವರು ಕಾರ್ಮಿಕರನ್ನು ಸಾಯಿಸಿದಳು. ಈ ಘಟನೆ ನಡೆದದ್ದು ರಾತ್ರಿ 11.30ಕ್ಕೆ. ಕಾರಿನಲ್ಲಿ ಏಕಾಂಗಿಯಾಗಿದ್ದ ಆಕೆ ಮನಬಂದಂತೆ ಗಾಡಿ ಓಡಿಸಿ ಹರಿಯಾಣ ಹೆದ್ದಾರಿಯಲ್ಲಿ ಕೆಲಸ ಮಾಡುತ್ತಿದ್ದ 5 ಕಾರ್ಮಿಕರಿಗೆ ಯಮಸ್ವರೂಪಿ ಆದಳು.
ಇಂತಹ ಅದೆಷ್ಟೋ ಘಟನೆಗಳು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿವೆ. ನಶೆಯಲ್ಲಿರುವ ಮಹಿಳೆಯರು ಕೇವಲ ತಮ್ಮ ಪ್ರತಿಷ್ಠೆ ಹಾಳು ಮಾಡಿಕೊಳ್ಳುವುದಷ್ಟೇ ಅಲ್ಲ, ಇತರರ ಜೀವಕ್ಕೂ ಕುತ್ತು ತರುತ್ತಿದ್ದಾರೆ. ಕೆಲವೊಮ್ಮೆ ತಮ್ಮ ಬಳಿ ಇರುವುದೆಲ್ಲವನ್ನು ಕಳೆದುಕೊಳ್ಳಬೇಕಾದ ಸ್ಥಿತಿ ಕೂಡ ಬರುತ್ತಿದೆ. ಮದ್ಯ ಸೇವನೆಯ ಬಗ್ಗೆ ಹೇಳಬೇಕೆಂದರೆ, ಭಾರತ ಸಹಿತ ಇಡೀ ವಿಶ್ವದಲ್ಲಿ ಮಹಿಳೆಯರು ಮದ್ಯ ಸೇವನೆಯ ಆರೋಪವನ್ನು ಪುರುಷರ ಮೇಲೆಯೇ ಹೊರಿಸುತ್ತಾರೆ. ಆದರೆ ಮಹಿಳೆಯರು ಕೂಡ ಭಾರಿ ಪ್ರಮಾಣದಲ್ಲಿ ಮದ್ಯದ ನಶೆಗೆ ತುತ್ತಾಗುತ್ತಿದ್ದಾರೆ.
ಕೆಲವು ತಿಂಗಳುಗಳ ಹಿಂದೆ `ಆರ್ಗನೈಜೇಶನ್ ಫಾರ್ ಎಕನಾಮಿಕ್ ಕಾರ್ಪೋರೇಷನ್ ಅಂಡ್ ಡೆವಲಪ್‌ಮೆಂಟ್' ಮುಖಾಂತರ ಹೊರಡಿಸಲ್ಪಟ್ಟ ಜಾಗತಿಕ ವರದಿಯಲ್ಲಿ ಒಂದು ವಿಷಯವನ್ನು ಪ್ರಸ್ತಾಪಿಸಲಾಗಿದೆ. ಭಾರತದಲ್ಲಿ ಕಳೆದ 20 ವರ್ಷಗಳಲ್ಲಿ ಮದ್ಯಸೇವನೆಯ ಪ್ರಮಾಣ ಶೇ.55ರಷ್ಟು ಹೆಚ್ಚಳ ಕಂಡಿದೆ. ಮದ್ಯಸೇವನೆಯ 40 ದೇಶಗಳ ಪಟ್ಟಿಯಲ್ಲಿ ಭಾರತಕ್ಕೆ ಮೂರನೆಯ ಸ್ಥಾನ ಲಭಿಸಿದೆ. ಮಹಿಳೆಯರಲ್ಲಿ ಇದರ ಬಳಕೆಯ ಪ್ರಮಾಣ ಭಾರಿ ಏರಿಕೆಯಾಗುತ್ತಿದೆ. ಅಂಕಿಅಂಶಗಳ ಪ್ರಕಾರ, ಕಳೆದ 10 ವರ್ಷಗಳಲ್ಲಿ ಮಹಿಳೆಯರ ಮದ್ಯ ಸೇವನೆಯ ಪ್ರಮಾಣ ದ್ವಿಗುಣಗೊಂಡಿದೆ.
ವಿಶ್ವ ಆರೋಗ್ಯ ಸಂಸ್ಥೆಯ ವರದಿಗಳ ಪ್ರಕಾರ, ಭಾರತದಲ್ಲಿ ಶೇ.11ರಷ್ಟು ಮಹಿಳೆಯರು ಮದ್ಯಸೇವನೆ ಮಾಡುತ್ತಿದ್ದಾರೆ. ಇಂದಿನ ವಸ್ತುಸ್ಥಿತಿ ಹೇಗಿದೆಯೆಂದರೆ, ಕೆಲವು ಮಹಿಳೆಯರು ಇದನ್ನು ಪ್ರತಿಷ್ಠೆ ಮತ್ತು ವೈಯಕ್ತಿಕ ಸ್ವಾತಂತ್ರ್ಯದೊಂದಿಗೆ ಹೋಲಿಸಿ ನೋಡುತ್ತಾರೆ. ಮದ್ಯಸೇವನೆ ಒಳ್ಳೆಯದಲ್ಲ, ಅದು ಹಾನಿಕಾರಕ ಎಂದು ಯಾರಾದರೂ ಅವರ ಮುಂದೆ ಹೇಳಿದರೆ, ಅವರು ಅದನ್ನು ಪರಂಪರವಾದಿ ಯೋಚನೆ ಮತ್ತು ಮಹಿಳೆಯರ ಬಗ್ಗೆ ನಡೆಸುತ್ತಿರುವ ಸಂಚು ಎಂದು ಹೇಳಿ ಆ ಕುರಿತಂತೆ ರಂಪ ಎಬ್ಬಿಸುತ್ತಾರೆ. ಮದ್ಯ ಸೇವನೆ ಮಾಡಿ ಅವರು ತಮ್ಮನ್ನು ತಾವು ಸ್ವತಂತ್ರ ಹಾಗೂ ಆಧುನಿಕ ಎಂದು ಭಾವಿಸುತ್ತಾರೆ.
ಮಹಿಳೆಯರಿಗೆ ಮದ್ಯ ಅಪಾಯಕಾರಿ
ಮದ್ಯ ಸೇವನೆ ಪುರುಷರು ಹಾಗೂ ಮಹಿಳೆಯರಿಗೆ ಇಬ್ಬರಿಗೂ ಹಾನಿಕಾರಕ. ಆದರೆ ಮಹಿಳೆಯರ ವಿಭಿನ್ನ ದೈಹಿಕ ರಚನೆಯ ಕಾರಣದಿಂದಾಗಿ ಅದು ಪರುಷರಿಗಿಂತ ಮಹಿಳೆಯರಿಗೇ ಹೆಚ್ಚು ಹಾನಿಯನ್ನುಂಟು ಮಾಡುತ್ತದೆ.