ನಿದ್ದೆ ಬರುತ್ತಲೇ ಇಲ್ಲ  ಎಂದು ನೀವು ಫ್ರೆಂಡ್ಸ್ ಜೊತೆ ಮೊಬೈಲ್‌ನಲ್ಲಿ ಚ್ಯಾಟಿಂಗ್‌ ಶುರು ಹಚ್ಚಿಕೊಳ್ಳುವಿರಿ, ಅನಗತ್ಯವಾಗಿ ಫೇಸ್‌ಬುಕ್‌ ಅಥವಾ ಯೂ ಟ್ಯೂಬ್‌ ನೋಡುತ್ತೀರಿ. ಮಲಗಲು ಯತ್ನಿಸುವ ಬದಲು ನೀವು ಹೀಗೆ ಸೋಶಿಯಲ್ ಮೀಡಿಯಾಗೆ ಅಂಟಿಕೊಳ್ಳುವಿರಿ. ನಿದ್ದೆ ಬರದೆ ಇರುವ ಈ ಸ್ಥಿತಿಯೇ `ಅನಿದ್ರೆ’ ಎನಿಸುತ್ತದೆ. ಜೀವನಶೈಲಿಗೆ ಸಂಬಂಧಿಸಿದ ಈ ರೋಗ ನಗರವಾಸಿಗಳನ್ನೇ ಹೆಚ್ಚು ಕಾಡುತ್ತದೆ. ಇದರಿಂದಾಗಿ ಹೈ ಬಿಪಿ, ಟೆನ್ಶನ್‌, ಡಿಪ್ರೆಶನ್‌, ಇರಿಟೇಶನ್‌ ಎಲ್ಲ ಕೂಡುತ್ತವೆ.

ನಿದ್ದೆ ಬರದಿರುವ ಸಮಸ್ಯೆ

ಅಸಲಿಗೆ, ಅಗತ್ಯಕ್ಕಿಂತಲೂ ಅತಿ ಹೆಚ್ಚು ಕೆಲಸ ಮಾಡುವ ಕಾರಣ ಬುದ್ಧಿ ಮತ್ತು ದೇಹ ಎರಡೂ ಸೋತುಹೋಗುತ್ತದೆ. ವರ್ಕೋಹಾಲಿಕ್ಸ್ ಎನಿಸುವ ಇವರಿಗೆ ಅನಿದ್ರೆಯ ಭೂತ ಕಾಡುತ್ತದೆ. ಹಾಗೆಯೇ ಕೆಲಸವೇ ಇಲ್ಲದೆ ಸದಾ ಟೈಂಪಾಸಿಗೆ ಅಂಟಿಕೊಳ್ಳುವ ಮಂದಿಗೂ ಈ ಕಾಟ ತಪ್ಪಿದ್ದಲ್ಲ. ಬೇಗ ಬೇಗ ಆಹಾರ ಸೇವಿಸುವುದು, ಜಂಕ್‌ ಫುಡ್‌ಗೆ ಹೆಚ್ಚಿನ ಪ್ರಾಶಸ್ತ್ಯ ಕೊಡುವುದು ಇತ್ಯಾದಿಗಳಿಂದ ಜೀವನಶೈಲಿ ಬಿಗಡಾಯಿಸಿ ಹೀಗಾಗುತ್ತದೆ. ಅನಿದ್ರೆ ಹಲವು ಕಾರಣಗಳಿಂದ ಮನುಷ್ಯನ ಮೇಲೆ ಪ್ರಭಾವ ಬೀರುತ್ತದೆ. ಇದು ಅವನ ದೈಹಿಕ, ಮಾನಸಿಕ ಆರೋಗ್ಯಗಳೆರಡನ್ನೂ ಹಾಳು ಮಾಡುತ್ತದೆ.

ಒಂದು ಅಧ್ಯಯನದ ಪ್ರಕಾರ ಅಮೆರಿಕಾದಲ್ಲಿ 30-40% ಜನರು ನಿದ್ರಾಹೀನತೆಯ ರೋಗಕ್ಕೆ ಬಲಿಯಾಗಿದ್ದಾರೆ. ಅದೇ ತರಹ 10-15% ಮಂದಿಗೆ ಇದು ಆನುವಂಶಿಕ ರೋಗವಾಗಿ ಬಂದಿರುತ್ತದೆ. ಭಾರತದಲ್ಲಂತೂ 1 ಕೋಟಿಗೂ ಹೆಚ್ಚು ಮಂದಿ ನಿದ್ರಾಹೀನತೆಯ ಸಮಸ್ಯೆಗೆ ಬಲಿಯಾಗಿದ್ದಾರೆ.

ಇದೆಲ್ಲದಕ್ಕೂ ಪ್ರಮುಖ ಕಾರಣ ಎಂದರೆ, ಪ್ರತಿಯೊಬ್ಬರಿಗೂ ಹೆಚ್ಚು ಹಣ ಗಳಿಸುವ ಅತಿಯಾದ ಮಹತ್ವಾಕಾಂಕ್ಷೆ. ಹೀಗಾಗಿ ತಮ್ಮ ಕೆಲಸ ಕಾರ್ಯ, ಬಿಸ್‌ನೆಸ್‌ನ ವೇಳೆ ವಿಸ್ತರಿಸುತ್ತಾ ಮಧ್ಯ ರಾತ್ರಿ ಮನೆ ಸೇರುತ್ತಾರೆ. ಮಧ್ಯೆ ಮಧ್ಯೆ ಪಾರ್ಟಿಗಳ ಕಾಟ. ಕೆಲಸದ ನಂತರ ಪಾರ್ಟಿ ಮುಗಿಸಿಯೇ ಮನೆಗೆ ಹೊರಡುತ್ತಾರೆ. ಇಂದು ಅವರ ಬಳಿ ಎಲ್ಲಾ ಸುಖಸೌಲಭ್ಯಗಳೂ ಇವೆ, ಇಲ್ಲದೇ ಇರುವುದೊಂದೇ… ನೆಮ್ಮದಿಯ ನಿದ್ದೆ!

ಜೀವನದ ಮೇಲೆ ಗಾಢಪ್ರಭಾವ

ಬಹು ಜನರಿಗೆ ಗೊತ್ತಿಲ್ಲದ ಸಂಗತಿ ಎಂದರೆ, ನಮ್ಮ ಮೆದುಳಿನಲ್ಲಿ ನಿದ್ರಿಸಲು ಹಾಗೂ ಜಾಗೃತವಾಗಿರಲು 2 ಸೈಕಲ್ಸ್ ಇರುತ್ತವೆ. ಸ್ಲೀಪ್‌ ಸೈಕಲ್ ವರ್ಕಿಂಗ್‌ ಮೋಡ್‌ಗೆ ಬಂದರೆ, ವೇಕಪ್‌ ಸೈಕಲ್ ಆಫ್‌ ಆಗಿರುತ್ತದೆ. ಏಕೆಂದರೆ ಇದು ಸ್ಲೀಪ್‌ ಸೈಕಲ್ ಕೆಲಸ ಮಾಡುವುದನ್ನು ನಿಲ್ಲಿಸಿದಾಗ ಮಾತ್ರ ಪ್ರಭಾವಶಾಲಿ ಆಗಬಲ್ಲದು. ಹೀಗಾಗಿ ಯಾರಾದರೂ ಅನಿದ್ರೆಯಿಂದ ಬಳಲುತ್ತಿದ್ದರೆ, ಅವರ ಬಯಲಾಜಿಕಲ್ ಸಿಸ್ಟಂನಲ್ಲಿ ಎರಡೂ ಸೈಕಲ್ಸ್ ಒಂದೇ ಬದಿಗೆ ಕೆಲಸ ಮಾಡುತ್ತಿವೆ ಎಂದರ್ಥ. ಆರೋಗ್ಯ ಹದಗೆಡಿಸುವ ಈ ನಿದ್ರಾಹೀನತೆಯ ಸಮಸ್ಯೆ, ನಮ್ಮ ಜೀವನದ ಮೇಲೆ ದಟ್ಟ ಪ್ರಭಾವ ಬೀರಬಲ್ಲದು. ಇದರಿಂದಾಗಿ ಯಾವುದೇ ವ್ಯಕ್ತಿಗಾಗಲಿ ನಿದ್ರಿಸಲಾಗದೆ ಚಡಪಡಿಸುವಂತಾಗುತ್ತದೆ. ಇದರಿಂದಾಗಿ ಅವರ ಎನರ್ಜಿ ಲೆವೆಲ್‌ ಸಹಜವಾಗಿ ಡಲ್ ಆಗುತ್ತದೆ. ಯಾವುದರಲ್ಲೂ ಅವರಿಗೆ ಆಸಕ್ತಿಯೇ ಇರುವುದಿಲ್ಲ. ಇವರುಗಳ ಮೂಡ್‌ ಅಂತೂ ಸದಾ ಬದಲಾಗುತ್ತಲೇ ಇರುತ್ತದೆ. ಇದರ ಜೊತೆಗೆ ಇವರ ಪರ್ಫಾರ್ಮೆನ್ಸ್ ಸಹ ವೀಕ್‌ ಆಗುತ್ತದೆ.

ನಿದ್ದೆ ಎಷ್ಟು ಅಗತ್ಯ?

ನಿದ್ರಾಹೀನತೆಗೆ ತುತ್ತಾದ ಬಹುತೇಕ ಮಂದಿ ತಮ್ಮ ದೈನಂದಿನ ಕೆಲಸಗಳಲ್ಲಿ ಹಲವಾರು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಿದ್ರಾಹೀನತೆಯ ಕಾರಣ ಜನ ಬೇಗ ಟೆನ್ಶನ್‌, ಉದ್ವಿಗ್ನತೆ, ಚಡಪಡಿಕೆಗಳಿಗೆ ತುತ್ತಾಗುತ್ತಾರೆ. ಮುಂದೆ ಇದೇ ಹೆಚ್ಚಾದಾಗ ಮಾನಸಿಕ ನೆಮ್ಮದಿ ಕಳೆದಕೊಳ್ಳುತ್ತಾರೆ. ಅಂಥವರಿಗೆ ಬಲು ಬೇಗ ಕೋಪ ಬರುತ್ತದೆ. ಅವರ ಬುದ್ಧಿ ಚುರುಕಾಗಿ ಕೆಲಸ ಮಾಡದು. ಕೆಲವರಂತೂ ಬೆಳಗ್ಗೆ 7ಕ್ಕೆ ಆಫೀಸ್‌, ಬಿಸ್‌ನೆಸ್‌ ಎಂದು ಹೊರಟರೆ ರಾತ್ರಿ 12 ದಾಟಿದರೂ ಮನೆಗೆ ಮರಳಿರುವುದಿಲ್ಲ. ಒಂದೇ ಕುರ್ಚಿಯ ಮೇಲೆ ಕಂಪ್ಯೂಟರ್‌ ಎದುರು ಕುಳಿತು ಏನೋ ಒಂದು ಕೆಲಸ ಮಾಡುತ್ತಲೇ ಇರುತ್ತಾರೆ. ಇದರಿಂದಾಗಿ ಅವರಿಗೆ ಬೆನ್ನು ಮೂಳೆ ಅಧಿಕ ನೋವು ಕೊಡುತ್ತದೆ. ಜೊತೆಗೆ ಸೊಂಟದ ನೋವಿನಿಂದಲೂ ಬಳಲುತ್ತಾರೆ.

ನಿದ್ರಾಹೀನತೆಯ ಸಮಯ 1 ತಿಂಗಳ ಅವಧಿ ಮೀರಿದರೆ, ಅಂಥವರು ಕೂಡಲೇ ವೈದ್ಯರನ್ನು ಸಂಪರ್ಕಿಸಿ ಚಿಕಿತ್ಸೆ ಪಡೆಯಬೇಕು. ಕೆಲವರಂತೂ ಇದೂ ಒಂದು ಸಮಸ್ಯೆಯೇ? ಇದಕ್ಕೆ ಚಿಕಿತ್ಸೆ ಬೇರೆ ಬೇಕೇ ಎಂದು ಅಲ್ಲಗಳೆಯುತ್ತಾರೆ. ಈ ಚಿಕಿತ್ಸೆಗೆ ಔಷಧಿ ಸೇವಿಸುವುದರಿಂದ ಇನ್ನೇನೇನು ಸೈಡ್‌ ಎಫೆಕ್ಟ್ಸ್ ಎದುರಿಸಬೇಕಾಗುತ್ತದೋ ಎಂಬ ಭಯ ಇದ್ದೇ ಇರುತ್ತದೆ. ಆದರೆ ಈ ರೋಗವನ್ನು ನೈಸರ್ಗಿಕ ವಿಧಾನದಿಂದಲೂ ನಿವಾರಿಸಬಹುದಾಗಿದೆ. ನಮ್ಮೆಲ್ಲರಿಗೂ 8 ಘಂಟೆಗಳ ಭರ್ತಿ ನಿದ್ದೆ ಬೇಕೇಬೇಕು. ನಿದ್ದೆ ಎಂಬುದು ನಮ್ಮ ಆರೋಗ್ಯಕ್ಕೆ ಬಲು ಪೂರಕ.

ಏನು ಮಾಡಬೇಕು?

ನೀವು ನಿದ್ರಾಹೀನತೆಗೆ ತುತ್ತಾಗಿದ್ದೀರಾ? ಆಗ ನೀವು ಮನೆಯಲ್ಲೇ ಈ ಉಪಾಯ ಅನುಸರಿಸಿ. ಮಲಗುವ ಮೊದಲು ಚೆನ್ನಾಗಿ ಬಿಸಿ ನೀರಲ್ಲಿ ಸ್ನಾನ ಮಾಡಿ. ಇದೊಂದು ತರಹ ವ್ಯಾಯಾಮದ ರೀತಿ ಆಗುತ್ತದೆ. ಸ್ನಾನ ಮುಗಿಸಿ ನೀವು ಮಲಗಿದ ತಕ್ಷಣ ಹಿತಕರ ನಿದ್ದೆ ಆವರಿಸುತ್ತದೆ. ದಿನವಿಡೀ ಪರಿಶ್ರಮದ ಕೆಲಸದ ನಂತರ ನಿಮಗೆ ನಿಮ್ಮ ಮಾಂಸಖಂಡಗಳನ್ನು ತುಸು ಸಡಿಲಿಸಿ, ಅವಕ್ಕೆ ಆರಾಮ ನೀಡಲು ಹಾಗೂ ಉತ್ತಮ ನಿದ್ದೆ ಪಡೆಯುವ ಅಗತ್ಯವಿದೆ. ಇದಕ್ಕಾಗಿ ನಿಮ್ಮ ದೇಹವನ್ನು ಕೂಲ್‌ ಡೌನ್‌ ಮಾಡಿಕೊಳ್ಳಬೇಕು. ಇದಕ್ಕಾಗಿ ನೀವು ಒಂದು ಬಕೆಟ್‌ ಯಾ ಟಬ್‌ನಲ್ಲಿ ತುಸು ಬಿಸಿ ನೀರಿನಲ್ಲಿ ಪಾದಗಳನ್ನು ಮುಳುಗಿಸಿ ಇಡಬೇಕು.

ನಿಮ್ಮ ದೇಹದ ಮಾಂಸಖಂಡ, ಅಂಗಾಂಗಗಳಿಗೆ ಆರಾಮ ನೀಡಲು, ನೀವು 1 ಚಮಚ ಎಪ್ಸಮ್ ಸಾಲ್ಟ್ ಯಾ ಡೆಡ್‌ ಸೀ ಸಾಲ್ಟ್ ನ್ನು ಬಿಸಿ ನೀರಿಗೆ ಹಾಕಬೇಕು. ಇದರಲ್ಲಿ ಕಾಲು ಅದ್ದಿ ಸುಮಾರು ಅರ್ಧ ಗಂಟೆಗೂ ಹೆಚ್ಚು ಕಾಲ ಕುಳಿತಿರಬೇಕು. ಇಂಥ ಫುಟ್‌ ಬಾತ್‌ನಿಂದ ನಿಮ್ಮ ಚರ್ಮಕ್ಕೆ ಬ್ಯಾಕ್ಟೀರಿಯಾದಿಂದ ಮುಕ್ತಿ ಕೊಡಿಸುತ್ತದೆ. ದಿನವಿಡಿಯ ಸುಸ್ತು ಹೋಗಲು, ಕಾಲುಗಳ ನೋವು ನಿವಾರಣೆಗೂ ಇದು ಪೂರಕ. ಈ ಬಿಸಿ ನೀರಿಗೆ ನೀವು ಕೆಲವು ಹನಿ ಎಸೆನ್ಶಿಯಲ್ ಆಯಿಲ್ ಸಹ ಬೆರೆಸಬಹುದು.

ಇದರಿಂದಾಗಿ ನಿಮಗೆ ರಿಲ್ಯಾಕ್ಸಿಂಗ್‌ ಫೀಲ್ ಆಗುತ್ತದೆ. ನಿದ್ರಾಹೀನತೆಯ ರೋಗ ನಿವಾರಣೆಗೆ ಹಲವು ಬಗೆಯ ಎಣ್ಣೆಗಳು ಪೂರಕ. ಇದಕ್ಕಾಗಿ ತುಳಸಿ ಎಣ್ಣೆ, ದೇವದಾರು ಎಣ್ಣೆ, ಲ್ಯಾವೆಂಡರ್‌ ಆಯಿಲ್‌, ರೋಸ್‌ಮೆರಿ ಆಯಿಲ್‌, ವಿಂಟರ್‌ ಗ್ರೀನ್‌ ಆಯಿಲ್‌, ನೀಲಗಿರಿ ತೈಲ ಇತ್ಯಾದಿ ಬಳಸಬಹುದು. ಇವುಗಳಲ್ಲಿ ಯಾವುದಾದರೂ ಒಂದರ 2-3 ಹನಿ ಬಕೆಟ್‌ ನೀರಿಗೆ ಹಾಕಿದರೆ ಸಾಕು.

ಮನೆ ಮದ್ದು

ಲ್ಯಾವೆಂಡರ್‌ ಆಯಿಲ್‌ನಿಂದ ಮಸಾಜ್‌ ಮಾಡುವುದರಿಂದ, ಅದು ನೇರ ಜೀವಕೋಶಗಳಿಗೆ ಬೇಗ ತಲುಪಿ, ಅದರ ಶಾಂತ ಗುಣದಿಂದಾಗಿ ಬೇಗ ನಿದ್ದೆ ಆರಿಸುತ್ತದೆ. ಇದರ ಸುಗಂಧ ನೇರ ನಮ್ಮ ಮೆದುಳಿಗೆ ತಲುಪಿ, ತೈಲದ ಬಾಷ್ಪಿಕರಣದ ಕ್ರಿಯೆಯಿಂದಾಗಿ ನಮ್ಮ ಉಸಿರಿನಲ್ಲಿ ಬೆರೆತು ನಿದ್ದೆ ಬರಲು ಅವಕಾಶವಾಗುತ್ತದೆ.

ನೀವು ಮಲಗಲು ಹೋಗಲಿಕ್ಕೆ ಮುನ್ನಾ ಸ್ನಾನ ಮಾಡಲು ಸಮಯಾವಕಾಶ ಇಲ್ಲದಿದ್ದರೆ, ಕನಿಷ್ಠ ಬಿಸಿ ನೀರಿನ ಬಕೆಟ್‌ನಲ್ಲಿ ನಿಮ್ಮ ಪಾದಗಳನ್ನು ಅರ್ಧ ಗಂಟೆ ಅದ್ದಿ ಇಡಿ. ದಿನವಿಡಿಯ ಪರಿಶ್ರಮದ ನಂತರ ರಿಲ್ಯಾಕ್ಸ್ ಆಗಲು ಇದು ಉತ್ತಮ ವಿಧಾನ. ಇದರಿಂದ ಸ್ಕಿನ್‌ ಹೈಡ್ರೇಟ್‌ ಆಗಿ, ಮಾಂಸಖಂಡಗಳು ಸಡಿಲಗೊಳ್ಳುತ್ತವೆ. ಇದರಿಂದಾಗಿ ದೇಹ ರಿಲ್ಯಾಕ್ಸ್ ಆಗಲು ಸಹಾಯವಾಗುತ್ತದೆ. ಇದರಿಂದ ಮಲಗಿದ ತಕ್ಷಣ ನಿದ್ದೆ ಬರುತ್ತದೆ.

– ಡಾ. ನಳಿನಾ ನರೇಶ್‌  

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ