ಹಣ್ಣು ಮೆಣಸು : ಇದರಲ್ಲಿ ವಿಟಮಿನ್‌ಧಾರಾಳವಾಗಿವೆ. ಇವು ಆ್ಯಂಟಿ ಆಕ್ಸಿಡೆಂಟ್ಸ್ ನ್ನು ಖಾಯಂ ಆಗಿರಿಸಲು, ಮಸ್ತಿಷ್ಕವನ್ನು ಚುರುಕಾಗಿಸುವುದರ ಜೊತೆ ಅದರ ಚಟುವಟಿಕೆ ಹೆಚ್ಚಿಸುತ್ತದೆ. ಚರ್ಮ, ಕಂಗಳು, ಮಾಂಸಖಂಡಗಳಿಗೆ ಶಕ್ತಿ ತುಂಬಿಸುತ್ತದೆ. ಇದರಲ್ಲಿ ನಾರು, ಪೊಟ್ಯಾಶಿಯಂ, ಮ್ಯಾಂಗನೀಸ್ ಅಡಗಿದ್ದು ವಿಟಮಿನ್ಸ್, ಮಿನರಲ್ಸ್ನ್ನು ದೇಹದ ಎಲ್ಲಾ ಭಾಗಕ್ಕೂ ರವಾನಿಸಲು ಇದು ನೆರವಾಗುತ್ತದೆ. ಇದು ದೇಹ ತೂಕ ತಗ್ಗಿಸಿ, ಕೊಲೆಸ್ಟ್ರಾಲ್ ಮಟ್ಟ ನಿಯಂತ್ರಿಸುತ್ತದೆ.
ಟರ್ನಿಪ್ : ಈ ಕೆಂಪು ಮೂಲಂಗಿ ಕ್ರೂಸೆಫಂರಿ ಕುಲದ ಕ್ಯಾರೆಟ್, ಮೂಲಂಗಿ ಗುಂಪಿಗೆ ಸೇರುತ್ತದೆ. ಇದರಲ್ಲಿ ಧಾರಾಳ ಪೋಷಕಾಂಶಗಳು ಅಡಗಿವೆ. ಪೊಟ್ಯಾಶಿಯಂ, ರಂಜಕ, ಕ್ಯಾಲ್ಶಿಯಂ, ವಿಟಮಿನ್ಸ್ ಗಳಿಂದ ಸಮೃದ್ಧವಾದ ಇದು ಅನೇಕ ರೋಗಗಳನ್ನು ದೂರವಿಡಬಲ್ಲದು. ಇದರಲ್ಲಿನ ಗ್ಲೂಕೋಸೈನೊಲೆಟ್ಸ್ ನಿಂದಾಗಿ ಇದನ್ನು ಹಸಿಯಾಗಿ ತಿಂದಾಗ ತುಸು ಖಾರ ಎನಿಸುತ್ತದೆ. ಇದನ್ನು ದೈನಂದಿನ ಪಲ್ಯ, ಸಾಂಬಾರು, ಉಪ್ಪಿನಕಾಯಿ, ಸಲಾಡ್, ಮುರಬ್ಬಾ ತಯಾರಿಸಲು ಬಳಸುತ್ತಾರೆ.
ಕಲ್ಲಂಗಡಿ : ಈ ಕೆಂಪು ಕೆಂಪಾದ ರಸಭರಿತ ಹಣ್ಣಿನಲ್ಲಿ 80% ನೀರಿನಂಶವಿದೆ. ಇದು ಕಬ್ಬಿಣ, ಗಂಧಕ, ತಾಮ್ರ, ರಂಜಕ, ಕ್ಯಾಲ್ಶಿಯಂ, ಥಯಾಮಿನ್ಸ್, ವಿಟಮಿನ್, ರಿಪೋಫ್ಲೇವಿನ್, ಆ್ಯಸ್ಕಾರ್ಟಿಕ್ ಆಮ್ಲಗಳ ಸ್ರೋತವಾಗಿದೆ. ಇದರ ಕೆಂಪು ಭಾಗ ಹಲವು ವಿಟಮಿನ್ಸ್, ಬೀಟಾ ಕೆರಾಟಿನ್‌ಗಳ ಆಗರ. ಇದು ವಿಟಮಿನ್ನಿನ ಸಾಮರ್ಥ್ಯವನ್ನು 10 ಪಟ್ಟು ಹೆಚ್ಚಿಸಬಲ್ಲದು. ಅದರಿಂದಾಗಿ ಚರ್ಮಕ್ಕೆ ಹಾನಿ ಮಾಡುವ ಫ್ರೀ ರಾಡಿಕಲ್ಸ್ ದೂರಾಗುತ್ತದೆ.
ಬೀಟ್ ರೂಟ್ : ಇದರಲ್ಲಿ ನಾರು, ನೀರಿನಂಶ ಧಾರಾಳವಾಗಿದ್ದು, ನಮ್ಮ ಪಚನ ಕ್ರಿಯೆಗೆ ಪೂರಕವಾಗಿದೆ. ಇದರ ಪೋಷಕಾಂಶಗಳಲ್ಲಿ ಮುಖ್ಯವಾಗಿ ಪ್ರೋಟೀನ್ಸ್, ಕಾರ್ಬೋಹೈಡ್ರೇಟ್, ಕ್ಯಾಲ್ಶಿಯಂ, ರಂಜಕ, ಆರ್ದ್ರತೆ, ಕಬ್ಬಿಣ, ಕೊಬ್ಬು, ವಿಟಮಿನ್ಸ್, ಸೋಡಿಯಂ, ಕ್ಲೋರಿನ್, ಫಾಲಿಕ್ ಆ್ಯಸಿಡ್, ಅಯೋಡಿನ್ ಅಡಗಿವೆ. ವಿಜ್ಞಾನಿಗಳ ಪ್ರಕಾರ ಇದರ ಬೀಟಾಸಿಲೋನಿನ್(ಇದರ ಕಾರಣ ಬೀಟ್ ರೂಟ್ ಕೆಂಪಾಗಿದೆ) ಅಂಶ ದೇಹದಲ್ಲಿ ಬೆಳೆಯುವ ದುರ್ಮಾಂಸ (ಟ್ಯೂಮರ್)ನ್ನು ತೊಲಗಿಸುತ್ತದೆ. ಇದು ನಮ್ಮ ರಕ್ತದ ಪ್ರಮಾಣ ಹೆಚ್ಚಿಸತ್ತದೆ, ಮುಖದ ಕಾಂತಿ ಕಾಪಿಡುತ್ತದೆ. ಎಲ್ಲಾ ಪೋಷಕಾಂಶಗಳ ಗಾಢ ಕೆಂಪು ಬಣ್ಣದ ರಸದ ಪ್ರಾಪ್ತಿಗಾಗಿ ಹಸಿ ಬೀಟ್ ರೂಟ್‌ನ್ನು ಸಲಾಡ್‌ನಲ್ಲಿ ಸೇವಿಸಿ. ಬೇಯಿಸಿ ಬಳಸುವುದಾದರೆ, ತಾಜಾ ಆಗಿರುವ ಇದರ ಸಿಪ್ಪೆ ಸಮೇತ ಬಳಸಿರಿ.
ಟೊಮೇಟೊ : ಮಾಗಿದ ಟೊಮೇಟೊ ಬಣ್ಣ ನಮ್ಮ ರಕ್ತವರ್ಣವನ್ನೇ ಹೋಲುತ್ತದೆ. ಇದು ರಕ್ತದ ಪ್ರಮಾಣ ಹೆಚ್ಚಿಸುವಲ್ಲಿ ಪೂರಕ, ರೋಗ ನಿರೋಧಕ ಶಕ್ತಿಯನ್ನೂ ಸಹ. ಇದರಲ್ಲಿ ಎಲ್ಲಾ ವಿಟಮಿನ್ಸ್ ಧಾರಾಳ ಅಡಗಿವೆ. ಇದರ ಕಾರಣ, ಬೇರೆ ತರಕಾರಿ ಹಣ್ಣುಗಳಲ್ಲಿನ ವಿಟಮಿನ್ಸ್ ಅಂಶ ತುಸು ಶಕ್ತಿಗುಂದಿದಾಗ, ಇದು ಅವನ್ನು ಚುರುಕಾಗಿಸಿ ಕೆಲಸ ತೆಗೆಯಬಲ್ಲದು! ಹಾಲಿಗೆ ಹೋಲಿಸಿದಾಗ ಇದರಲ್ಲಿ 2 ಪಟ್ಟು ಹಾಗೂ ಮೊಟ್ಟೆಗೆ ಹೋಲಿಸಿದಾಗ 5 ಪಟ್ಟು ಹೆಚ್ಚಿನ ಕಬ್ಬಿಣಾಂಶವಿದೆ.
ಸ್ಟ್ರಾಬೆರಿ : ಕೆಂಪು ಕೆಂಪಾದ ಈ ಹಣ್ಣನ್ನು ನೆನೆದರೆ ಬಾಯಿ ನೀರೂರುತ್ತದೆ. ಇದು ಹುಳಿ ಸಿಹಿ ರುಚಿ ಹೊಂದಿದ್ದು, ತನ್ನ ವಿಶಿಷ್ಟ ಗುಣಗಳಿಂದಾಗಿ ನಮ್ಮ ಆರೋಗ್ಯಕ್ಕೆ ಹೆಚ್ಚು ಲಾಭಕಾರಿ. ಸೇಬು, ಪ್ಲಮ್, ಸ್ಟ್ರಾಬೆರಿ ಒಂದೇ ಕುಲದ್ದು. ಇದರಲ್ಲಿ ಮ್ಯಾಂಗನೀಸ್, ಪೊಟ್ಯಾಶಿಯಂ ಅಂಶಗಳಿದ್ದು, ನಾರಲ್ಲಿನ ಪೆಕ್ಟಿನ್ ಹೆಚ್ಚು ಲಾಭಕಾರಿ. ಈ ಹಣ್ಣು ಕೊಲೆಸ್ಟ್ರಾಲ್, ಬಿ.ಪಿ. ಉಳ್ಳವರಿಗೆ ಹೆಚ್ಚು ಉಪಯುಕ್ತ.