4 ದಿನಗಳ ಹೈದರಾಬಾದ್‌ ಟ್ರೇನಿಂಗ್‌ಗೆ ಹೋಗಬೇಕಾದ ಆರ್ಡರ್‌ ನೋಡಿ ಮಾಲಿನಿಗೆ ಒಂಥರಾ ದಿಗಿಲಾಯಿತು. ಅವಳ ಪತಿ ಸತೀಶ್‌ ಆಗಲೇ 6 ತಿಂಗಳು ಅಮೆರಿಕಾ ಟ್ರೇನಿಂಗ್‌ಗೆ ಹೋಗಿದ್ದರು. ಈಗ ತಾನು ಕೂಡ ಅಫಿಶಿಯಲ್ ಟೂರ್‌ಗೆ ಹೋಗಬೇಕಾಗಿ ಬಂದಿದ್ದು ಅವಳಿಗೆ ಸ್ವಲ್ಪ ಆತಂಕವನ್ನುಂಟು ಮಾಡಿತ್ತು.

ವೃದ್ಧ ಅತ್ತೆ, ಮಾವನನ್ನು ಬಿಟ್ಟು ಹೇಗೆ ಹೋಗುವುದು ಎಂದು ಅವಳ ಮನಸ್ಸು ಯೋಚಿಸುತ್ತಿತ್ತು. 4 ದಿನಗಳ ಕಾಲ ಅತ್ತೆಮಾವ ಹೇಗಿರುತ್ತಾರೆ, ಅವರ ಊಟತಿಂಡಿ ವ್ಯವಸ್ಥೆ ಹೇಗೆಂದು ಅವಳ ಮನಸ್ಸು ಚಿಂತಿಸುತ್ತಿತ್ತು. ಈಗ ಅವಳಿಗೆ ಕೆಲಸದಲ್ಲಿಯೂ ಗಮನವಿರಲಿಲ್ಲ.

ಸಂಜೆ ಅವಳು ಅಪಾರ್ಟ್‌ಮೆಂಟ್‌ನ ಪಾರ್ಕ್‌ನಲ್ಲಿ ಸುತ್ತಾಡುತ್ತಿರುವಾಗ ಎದುರಿನ ಫ್ಲ್ಯಾಟ್‌ನಲ್ಲಿ ವಾಸಿಸುವ ಶಶಿಕಲಾ ಭೇಟಿಯಾದರು. ಮುಖದಲ್ಲಿ ಚಿಂತೆ ತುಂಬಿಕೊಂಡಿದ್ದ ಮಾಲಿನಿಯನ್ನು ನೋಡಿ “ಏನಾಯ್ತು ಮಾಲಿನಿ?” ಎಂದು ಕೇಳಿದರು. ಆದರೆ ಮಾಲಿನಿಗೆ ಹೇಳಲು ಸಂಕೋಚ ಮತ್ತೆ ಮತ್ತೆ ಒತ್ತಾಯಿಸಿದಾಗ ಹೇಳಬೇಕಾಯಿತು. ಟ್ರೇನಿಂಗ್‌ ಹೋಗಬೇಕಾಗಿ ಬಂದದ್ದು ಹಾಗೂ ಅತ್ತೆಮಾವರನ್ನು ಯಾರು ನೋಡಿಕೊಳ್ಳುತ್ತಾರೆ ಎಂಬುದರ ಬಗ್ಗೆ ಅವಳು ಎಲ್ಲ ವಿಷಯನ್ನು ಶಶಿಕಲಾ ಮುಂದೆ ಹೇಳಿಕೊಂಡಳು.

ಶಶಿಕಲಾ ಆ ಮಾತಿಗೆ ನಗುತ್ತಲೇ, “ಮಾಲಿನಿ, ನೀನು ನಿನ್ನ ಅತ್ತೆಮಾವನ ಚಿಂತೆ ಬಿಟ್ಟುಬಿಡು. ಅವರ ಬಗ್ಗೆ ನಾನು ಕಾಳಜಿ ವಹಿಸುತ್ತೇನೆ. ಹಾಗೊಮ್ಮೆ ಏನಾದರೂ ಸಮಸ್ಯೆಯಾದರೆ ನನ್ನನ್ನು ತಕ್ಷಣಕ್ಕೆ ಸಂಪರ್ಕಿಸಲು ಹೇಳು. ಅವರಿಗೆ ನನ್ನ ನಂಬರ್‌ ಕೊಡು,” ಹೇಳಿದಳು.

ಶಶಿಕಲಾ ಹೇಳಿದ್ದನ್ನು ಕೇಳಿ ಮಾಲಿನಿಗೆ ಅಷ್ಟಿಷ್ಟು ನಿರಾಳ ಎನಿಸಿತು. “ನೀನು ನನ್ನ ಸಮಸ್ಯೆಯನ್ನು ಕೆಲವೇ ನಿಮಿಷಗಳಲ್ಲಿ ಬಗೆಹರಿಸಿಬಿಟ್ಟೆ. ಕಳೆದ ಬಾರಿ ನಾನು ಅನಾರೋಗ್ಯದಿಂದಾಗಿ ಟ್ರೇನಿಂಗ್‌ಗೆ ಹೋಗಲು ಆಗಿರಲಿಲ್ಲ. ಆದರೆ ಈ ಸಲ ತಪ್ಪಿಸಿಕೊಳ್ಳುವ ಹಾಗಿರಲಿಲ್ಲ,” ಎಂದು ಅವಳು ಖುಷಿಯಿಂದ ಹೇಳಿದಳು.

ಮರುದಿನವೇ ಮಾಲಿನಿ ತನ್ನ ಅತ್ತೆಮಾವನಿಗೆ ಕೈ ಬೀಸುತ್ತ ಟ್ರೇನಿಂಗ್‌ಗೆ ಹೊರಟುಬಿಟ್ಟಳು. 4 ದಿನಗಳ ಟ್ರೇನಿಂಗ್‌ ಮುಗಿಸಿಕೊಂಡು ಮಾಲಿನಿ ಬಂದಾಗ ಅತ್ತೆಮಾವ ಎದುರು ಮನೆಯ ಶಶಿಕಲಾರನ್ನು ಹೊಗಳಿದ್ದೇ ಹೊಗಳಿದ್ದು. ಅವರ ಮಾತು ಕೇಳಿ ಮಾಲಿನಿಗೂ ಖುಷಿಯಾಯಿತು. 2 ವರ್ಷದ ಹಿಂದೆ ಪತಿ ಸತೀಶ್‌ ಮನೆ ಖರೀದಿಸುವುದೆಂದಾಗ, ಅವಳು ಸ್ವತಂತ್ರ ಮನೆಯೇ ಉತ್ತಮ ಎಂದು ಪ್ರತಿಪಾದಿಸಿದ್ದಳು. ಆದರೆ ಸತೀಶ್‌ಗೆ ಮಾತ್ರ ಅಪಾರ್ಟ್‌ಮೆಂಟ್‌ನಲ್ಲಿ ಫ್ಲ್ಯಾಟ್‌ ಖರೀದಿಸುವುದು ಸೂಕ್ತ ಎನಿಸಿತ್ತು. ಸಂಕಷ್ಟದಲ್ಲಿ ಅಕ್ಕಪಕ್ಕದವರು ನೆರವಿಗೆ ಬರುತ್ತಾರೆ ಎನ್ನುವುದು ಸತೀಶನ ವಾದವಾಗಿತ್ತು. ಸ್ವತಂತ್ರ ಮನೆಗಳಲ್ಲಿ ಅಕ್ಕಪಕ್ಕದವರ ಭೇಟಿ ತಿಂಗಳಿಗೊಮ್ಮೆ ಕೂಡ ಕಷ್ಟ ಎನ್ನುವುದು ಕೂಡ ಅವನ ಅಭಿಪ್ರಾಯವಾಗಿತ್ತು.

ಅಕ್ಕಪಕ್ಕದ ಸಭ್ಯ ನಾಗರಿಕರು

ರಂಜಿತಾಳಿಗೆ ಅವಳ ಫ್ಲ್ಯಾಟ್‌ ಒಂದು ರೀತಿಯಲ್ಲಿ ವರದಾನ ಎಂಬಂತೆ ಸಾಬೀತಾಯಿತು. ಅವಳು ಹಾಗೂ ಅವಳ ಪತಿ ರಮಣ್‌ ಇಬ್ಬರೂ ಸೇರಿ ತಮ್ಮ ಉಳಿತಾಯದ ಹಣದಿಂದ ಒಂದು ಅಪಾರ್ಟ್‌ಮಂಟ್‌ನಲ್ಲಿ ಫ್ಲ್ಯಾಟ್‌ ಖರೀದಿಸಿದ್ದರು. ಅತ್ತೆಯ ನಿಧನಾನಂತರ ಮಾವ ಕೂಡ ಅವರ  ಜೊತೆಗೆ ವಾಸಿಸುತ್ತಿದ್ದರು. ಬೆಳಗ್ಗೆ 10 ಗಂಟೆಯ ಹೊತ್ತಿಗೆ ಗಂಡಹೆಂಡತಿ ಇಬ್ಬರೂ ಕೆಲಸಕ್ಕೆ ಹೊರಟರೆ ಮಾವ ಒಬ್ಬರೇ ಇರುತ್ತಿದ್ದರು. ತಿಂಡಿ ಊಟ ಮುಗಿಸಿ ಅವರು ಅಪಾರ್ಟ್‌ಮೆಂಟ್‌ನ ಪಾರ್ಕ್‌ನಲ್ಲಿ ಸುತ್ತಾಡುತ್ತಿದ್ದರು. ಅಲ್ಲಿ ಅವರಿಗೆ ಹೇಗೆ ಸಮಯ ಕಳೆಯುತ್ತಿತ್ತೋ ಗೊತ್ತಾಗುತ್ತಲೇ ಇರಲಿಲ್ಲ. ಒಂದು ವರ್ಷ ಆಗುವಷ್ಟರಲ್ಲಿ ರಂಜಿತಾಳಿಗೆ ಮೈಸೂರಿನಿಂದ ಬೆಂಗಳೂರಿಗೆ ವರ್ಗವಾಯಿತು. ಇನ್ನು ಹೇಗಪ್ಪಾ ಮಾವನವರ ಸ್ಥಿತಿ ಎಂದು ಅವಳಿಗೆ ಚಿಂತೆ ಆಗುತ್ತಿತ್ತು. ರಂಜಿತಾಳಿಗೆ ಇಷ್ಟು ಒಳ್ಳೆಯ ನೌಕರಿ ಬಿಟ್ಟುಬಿಡುವುದು ಸರಿ ಎನಿಸುತ್ತಿರಲಿಲ್ಲ. ಅವಳು ಹೇಗೊ ಮಾಡಿ ನೌಕರಿ ಹಾಗೂ ಕುಟಂಬ ನಿರ್ವಹಣೆ ಮಾಡುವುದಾಗಿ ನಿರ್ಧರಿಸಿಬಿಟ್ಟಿದ್ದಳು. ವಾರಾಂತ್ಯದಲ್ಲಿ ಅವಳು ಮೈಸೂರಿಗೆ ಬಂದಾಗ ಆಶ್ಚರ್ಯವಾಯಿತು. ಸೊಸೆ ಬೆಂಗಳೂರಿಗೆ ಹೊರಟು ಹೋಗುತ್ತಾಳೆ ಎಂದು ಗೊತ್ತಾದಾಗ ಮಾವನವರ ಸ್ನೇಹಿತರು ಸೇರಿಕೊಂಡು ಅವರಿಗೆ ತಿಂಡಿ ಊಟಕ್ಕೆ ಯಾವುದೇ ತೊಂದರೆ ಆಗದಂತೆ ನೋಡಿಕೊಂಡರು. ರಂಜಿತಾ ಕೆಲವೇ ತಿಂಗಳಲ್ಲಿ ಪುನಃ ಮೈಸೂರಿಗೆ ವರ್ಗ ಮಾಡಿಸಿಕೊಂಡಳು. ರಂಜಿತಾ ಈ ಕುರಿತಂತೆ ಹೀಗೆ ಹೇಳುತ್ತಾರೆ, “ನಾನು ವೀಕೆಂಡ್‌ನಲ್ಲಿ ಮಾತ್ರ ಮನೆಗೆ ಬರುತ್ತಿದ್ದೆ. ಅಕ್ಕಪಕ್ಕದ ಮನೆಯವರು ನಮ್ಮ ಮಾವನವರನ್ನು ಬಹಳ ಚೆನ್ನಾಗಿ ಗಮನಿಸಿಕೊಳ್ಳುತ್ತಿದ್ದರು.”

ಅಗತ್ಯ ಬಿದ್ದಾಗ ನೆರವು

ಬ್ಯಾಂಕ್‌ ಉದ್ಯೋಗಿ ಅನಿತಾರಿಗೆ ಅಪಾರ್ಟ್‌ಮೆಂಟ್‌ನ ಅನುಭವ ಸ್ವಲ್ಪ ವಿಭಿನ್ನವಾಗಿಯೇ ಇದೆ. ಅವರ ಜೊತೆ ಅತ್ತೆ ಕೂಡ ವಾಸಿಸುತ್ತಾರೆ. ಗಂಡನಿಗೆ ಬೇರೆ ಊರಿಗೆ ವರ್ಗವಾಗಿದೆ. ಅವರ ಏಕೈಕ ಮಗಳು ಬೇರೊಂದು ನಗರದಲ್ಲಿ ಓದುತ್ತಿದ್ದಾಳೆ.

ಒಂದು ದಿನ ಮನೆಗೆಲಸದವಳಿಂದ ಕೆಲಸ ಮಾಡಿಸುತ್ತಿದ್ದಾಗ ಅತ್ತೆ ಕಾಲು ಜಾರಿ ಬಿದ್ದು ಪ್ರಜ್ಞೆ ತಪ್ಪುತ್ತಾರೆ. ಎದುರು ಫ್ಲ್ಯಾಟ್‌ನ ತನುಜಾರಿಗೆ ಈ ವಿಷಯ ಗೊತ್ತಾದಾಗ ಅವರು ಅತ್ತೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದರು. ಅನಿತಾ ಆಸ್ಪತ್ರೆಗೆ ತಲುಪುವ ಹೊತ್ತಿಗೆ ಅತ್ತೆಯ ಚಿಕಿತ್ಸೆ ಶುರುವಾಗಿ ಹೋಗಿತ್ತು. ಈ ಘಟನೆ ಘಟಿಸಿ 2 ವರ್ಷಗಳಾದವು. ಆದರೆ ಈಗಲೂ ತಮ್ಮ ಅತ್ತೆ ಆರಾಮವಾಗಿರುವುದಕ್ಕೆ ಅನಿತಾ ಅಪಾರ್ಟ್‌ಮೆಂಟ್‌ನ ನಿವಾಸಿಗಳಿಗೆ ಧನ್ಯವಾದ ಹೇಳಲು ಮರೆಯುವುದಿಲ್ಲ.

ಸ್ಮಿತಾಳ ಪತಿಗೆ ಒಂದು ದಿನ ಬೆಳಗಿನ ಹೊತ್ತು ಅಸಹಜತೆಯ ಅನುಭವ ಆಗತೊಡಗಿತು. ಸ್ವಲ್ಪ ಹೊತ್ತಿನಲ್ಲಿಯೇ ಅವರಿಗೆ ತಲೆ ಸುತ್ತತೊಡಗಿತು. ಗಾಬರಿಗೊಳಗಾದ ಸ್ಮಿತಾ ತಮ್ಮ ಪಕ್ಕದಮನೆಯ ರಾಜೇಂದ್ರರ ಸಹಾಯದಿಂದ ತಕ್ಷಣವೇ ಆಸ್ಪತ್ರೆಗೆ ಸೇರಿಸಿದರು. ತಕ್ಷಣವೇ ಚಿಕಿತ್ಸೆ ದೊರೆತದ್ದರಿಂದಾಗಿ ಅವರ ಪ್ರಾಣ ಉಳಿಯಿತು. ಈ ಕುರಿತಂತೆ ಸ್ಮಿತಾ ಹೀಗೆ ಹೇಳುತ್ತಾರೆ, “ನಾನು ಗಂಡನ ಜೊತೆ 7 ದಿನಗಳ ಕಾಲ ಆಸ್ಪತ್ರೆಯಲ್ಲಿ ಉಳಿಯಬೇಕಾಯಿತು. ಮನೆಯಲ್ಲಿ ವಯಸ್ಸಾದ ಅತ್ತೆ ಹಾಗೂ 12 ವರ್ಷದ ಮಗಳಿದ್ದಳು. ಅಕ್ಕಪಕ್ಕದವರೇ ಅವರ ಜವಾಬ್ದಾರಿ ನಿಭಾಯಿಸಿದರು. ಫ್ಲ್ಯಾಟ್‌ನಲ್ಲಿ ಅಕ್ಕಪಕ್ಕದಲ್ಲಿ ನಮ್ಮನ್ನು ವಿಚಾರಿಸಿಕೊಳ್ಳುವ ಒಬ್ಬರಾದರೂ ಇದ್ದೇ ಇರುತ್ತಾರೆ.”

ಮೋಹನ್‌ ರಾವ್‌ ತಮ್ಮ ಉಳಿತಾಯದ ಹಣವನ್ನೆಲ್ಲ ಒಗ್ಗೂಡಿಸಿ 8 ಕೋಣೆಗಳುಳ್ಳ 2 ಅಂತಸ್ತಿನ ಮನೆಯನ್ನು ನಿರ್ಮಿಸಿದರು. ಅವರ ಇಬ್ಬರು ಮಕ್ಕಳು ಮನೆಯಲ್ಲಿರುವ ತನಕ ಹೋಗಿಬರುವವರ ಸಂಖ್ಯೆ ಜಾಸ್ತಿ ಇತ್ತು. ಆದರೆ ಅವರಿಬ್ಬರು ನೌಕರಿ ನಿಮಿತ್ತ ಬೇರೆ ನಗರಕ್ಕೆ ಹೋದ ಬಳಿಕ ಈಗ ವೃದ್ಧ ಗಂಡಹೆಂಡತಿ ಒಂದೇ ಒಂದು ಕೋಣೆಯನ್ನು ಮಾತ್ರ ಬಳಸುತ್ತಾರೆ. ಇಡೀ ಮನೆಯ ಸ್ವಚ್ಛತೆ ಕೆಲಸ ದಿನ ಆಗುವುದಿಲ್ಲ. ಕೆಲಸದವಳು ವಾರಕ್ಕೊಮ್ಮೆ ಬಂದು ಮನೆ ಗುಡಿಸಿ, ಒರೆಸಿ ಹೋಗುತ್ತಾಳೆ. ಈಗ ಅವರಿಗೆ ಅನಿಸುತ್ತೆ, ಇಷ್ಟೊಂದು ದೊಡ್ಡ ಮನೆಯ ಅಗತ್ಯ ಇತ್ತಾ ಅಂತಾ?

ತನುಜಾ ಹೇಳುತ್ತಾರೆ, “ಇಂದಿನ ಕಾಲಮಾನದ ಪ್ರಕಾರ, ಫ್ಲ್ಯಾಟ್‌ನಲ್ಲಿ ಇರುವುದು ಸುರಕ್ಷಿತ ಎನಿಸುತ್ತದೆ. ವಯಸ್ಸು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಹೋಗುತ್ತದೆ. ವೃದ್ಧಾವಸ್ಥೆಯಲ್ಲಿ ವ್ಯಕ್ತಿ ತನ್ನ ಕೆಲಸಗಳನ್ನು ತಾನೇ ಮಾಡಿಕೊಳ್ಳುವುದು ಕಷ್ಟಕರ. ಇಂತಹದರಲ್ಲಿ ದೊಡ್ಡ ಮನೆಯ ನಿರ್ವಹಣೆ ಹೇಗೆ ತಾನೇ ಮಾಡುತ್ತಾರೆ? ಫ್ಲ್ಯಾಟ್‌ ಚಿಕ್ಕದು, ಅಲ್ಲಿ ಸ್ವಚ್ಛತೆಯ ನಿರ್ವಹಣೆ ಕಷ್ಟಕರ ಆಗದು.”

ಅಪಾರ್ಟ್‌ಮೆಂಟ್‌ ಫ್ಲ್ಯಾಟ್‌ಗೆ ಆದ್ಯತೆ

ಮೊದಲು ಜನರು ಸ್ವತಂತ್ರ ಮನೆಗಳಿಗೆ ಆದ್ಯತೆ ಕೊಡುತ್ತಿದ್ದರು. ಆಗ ಅವರಿಗೆ ನೆಲ ಹಾಗೂ ಮಹಡಿ ಎರಡರ ಸೌಲಭ್ಯ ಸಿಗುತ್ತಿತ್ತು. ಆದರೆ ಈಗ ಜನರು ಅಪಾರ್ಟ್‌ಮೆಂಟ್‌ಗಳ ಫ್ಲ್ಯಾಟ್‌ಗಳಲ್ಲಿ ವಾಸಿಸಲು ಆದ್ಯತೆ ಕೊಡುತ್ತಿದ್ದಾರೆ. ಅದಕ್ಕೆ ಕಾರಣಗಳು ಕೆಳಕಂಡಂತಿವೆ :

ಇತ್ತೀಚೆಗೆ  ಗಂಡಹೆಂಡತಿ ಇಬ್ಬರೂ ಉದ್ಯೋಗಸ್ಥರಾಗಿರುತ್ತಾರೆ. ಇಂತಹ ಸ್ಥಿತಿಯಲ್ಲಿ ಮನೆಯಲ್ಲಿ ಉಳಿಯುವವರು ವೃದ್ಧರು ಹಾಗೂ ಮಕ್ಕಳು. ಅವರು ಇಡೀ ದಿನ ಏಕಾಂಗಿಯಾಗಿಯೇ ಮನೆಯಲ್ಲಿ ಕಳೆಯಬೇಕಾಗಿ ಬರುತ್ತದೆ. ಬ್ಯಾಂಕ್‌ ಉದ್ಯೋಗಿ ರಾಗಿಣಿ ಮತ್ತು ಪತಿ ಇಬ್ಬರೂ ಸಂಜೆಯೇ ವಾಪಸ್‌ ಬರುತ್ತಾರೆ. ಆದರೆ ಅವರಿಬ್ಬರ ಮಕ್ಕಳು 4 ಗಂಟೆಯತನಕ ಶಾಲೆಯಿಂದ ವಾಪಸ್‌ ಬಂದಿರುತ್ತಾರೆ. ಪಕ್ಕದ ಮನೆಯಲ್ಲಿ ರಾಜೀವ್ ಮತ್ತು ಸರಸ್ವತಿ ಎಂಬ ವೃದ್ಧ ದಂಪತಿಗಳು ವಾಸಿಸುತ್ತಿದ್ದಾರೆ. ಅವರ ಮಕ್ಕಳು ವಿದೇಶದಲ್ಲಿದ್ದಾರೆ. ರಾಗಿಣಿಯ ಇಬ್ಬರು ಮಕ್ಕಳು ಅವರ ಜೊತೆಗೆ ಇರುತ್ತಾರೆ. ಇದರಿಂದಾಗಿ ಅವರಿಗೂ ಸ್ವಲ್ಪ ಹಿತ ಅನಿಸುತ್ತದೆ. ಜೊತೆಗೆ ರಾಗಿಣಿಯ ಸಮಸ್ಯೆಯೂ ನಿವಾರಣೆಯಾಗುತ್ತದೆ.

ಇಲ್ಲಿ ಒಂದೇ ಕಡೆ ಹಲವು ಮನೆಗಳಿರುತ್ತವೆ. ಹೀಗಾಗಿ ಯಾರೊಬ್ಬರ ಜೊತೆಗಾದರೂ ನಿಮಗೆ ನಿಕಟ ಸಂಬಂಧ ಉಂಟಾಗುತ್ತದೆ. ಅವರು ಸಂಕಷ್ಟ ಕಾಲದಲ್ಲಿ ನಿಮಗೆ ನೆರವಾಗುತ್ತಾರೆ.

ಇತ್ತೀಚಿನ ವರ್ಷಗಳಲ್ಲಿ ಅಪಾರ್ಟ್‌ಮೆಂಟ್‌ಗಳು ಅತ್ಯಾಧುನಿಕ ಸೌಲಭ್ಯ ಪಡೆದುಕೊಂಡಿವೆ. ಅಲ್ಲಿ ಜಿಮ್, ಕ್ಲಬ್‌, ಪಾರ್ಟಿಹಾಲ್‌, ಗಾರ್ಡನ್‌, ಲೈಬ್ರೆರಿ, ಕ್ಲಿನಿಕ್‌ಗಳು ಕೂಡ ಇರುತ್ತವೆ.

ಜಾಗತೀಕರಣದ ಇಂದಿನ ದಿನಗಳಲ್ಲಿ ಮಕ್ಕಳು ಬೇರೆ ನಗರಗಳಲ್ಲಿ ಅಷ್ಟೇ ಅಲ್ಲ, ವಿದೇಶಕ್ಕೂ ಹೊರಟುಹೋಗುತ್ತಾರೆ. ತಂದೆತಾಯಿಗಳು ಕೂಡ ಅವರ ಜೊತೆಗೆ ಹೊರಟು ಹೋಗುತ್ತಾರೆ. ಸ್ವತಂತ್ರವಾಗಿರುವ ಮನೆಗಳಲ್ಲಿ ಕಳ್ಳತನದ ಅಪಾಯ ಇದ್ದೇ ಇರುತ್ತದೆ. ಆದರೆ ಅಪಾರ್ಟ್‌ಮೆಂಟ್‌ಗಳಲ್ಲಿ ಸೆಕ್ಯುರಿಟಿಯವರು ಇರುವುದರಿಂದ ಮತ್ತು ಜನರು ಹೋಗಿ ಬರುವುದು ನಡೆಯುತ್ತಲೇ ಇರುತ್ತದೆ. ಹೀಗಾಗಿ ಕಳ್ಳತನದ ಘಟನೆಗಳು ನಡೆಯುವುದು ಕಡಿಮೆ.

ಜನರು ಇತ್ತೀಚೆಗೆ ಸ್ವತಂತ್ರ ಮನೆಗಳನ್ನು ಕೊಳ್ಳಲು ಕಟ್ಟಿಸಲು ಆಸಕ್ತಿ ವಹಿಸುತ್ತಿಲ್ಲ. ವಯಸ್ಸಾಗುತ್ತಾ ಹೋದಂತೆ ಅವರು ಮೇಲಿನ  ಮಹಡಿಗಳಿಗೆ ಹೋಗಲು ಆಗುವುದೇ ಇಲ್ಲ. ದೊಡ್ಡ ಮನೆಗಳನ್ನು ನಿರ್ವಹಣೆ ಮಾಡುವುದು ಕಷ್ಟಕರವೇ ಸರಿ. ಅವರು ಈಗ ಎಲ್ಲ ಸೌಲಭ್ಯಗಳು ಆಸುಪಾಸು ಇರುವಂತಹ ಮನೆಯೇ ಉತ್ತಮ ಎನ್ನುತ್ತಾರೆ.

ಅಪಾರ್ಟ್‌ಮೆಂಟ್‌ಗಳು ಪ್ರತಿತಿಂಗಳು ನಿರ್ವಹಣೆಗೆಂದು ನಿರ್ದಿಷ್ಟ ಮೊತ್ತದ ಶುಲ್ಕ ವಸೂಲು ಮಾಡುತ್ತವೆ. ಹೀಗಾಗಿ ಯಾವುದೇ ದುರಸ್ತಿ ಕೆಲಸಗಳು ಸಕಾಲಕ್ಕೆ ಮಾಡಲು ಸಾಧ್ಯವಾಗುತ್ತದೆ. ಅದೇ ಸ್ವತಂತ್ರ ಮನೆಯಲ್ಲಿ ಸಮಸ್ಯೆ ಉಂಟಾದರೆ ದುರಸ್ತಿ ಮಾಡಿಸಲು ಸಾಕಷ್ಟು ಕಷ್ಟ ಪಡಬೇಕಾಗುತ್ತದೆ. ವೃದ್ಧಾವಸ್ಥೆಯಲ್ಲಂತೂ ಅದು ಅಸಾಧ್ಯದ ಮಾತೇ ಸರಿ.

ಇಲ್ಲಿ ವಿಭಿನ್ನ ಸಂಸ್ಕೃತಿಯ ಜನರು ವಾಸಿಸುತ್ತಾರೆ. ಹೀಗಾಗಿ ನಿಮಗೆ ದೇಶದ ವಿಭಿನ್ನ ಸಂಸ್ಕೃತಿಗಳ ಪರಿಚಯವಾಗುತ್ತದೆ. ಇಡೀ ಅಪಾರ್ಟ್‌ಮೆಂಟ್‌ ಜನರು ಸೇರಿ ಖುಷಿಯಿಂದ ಹಬ್ಬ ಆಚರಿಸಬಹುದು.

– ಪ್ರತಿಭಾ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ