ಆಧುನಿಕ ಸೀಲಿಂಗ್‌ನ ಡಿಸೈನ್‌ ಮತ್ತು ಬಣ್ಣಗಳನ್ನು ನೋಡಿ ಯಾರೇ ಆಗಲಿ ಆಶ್ಚರ್ಯಚಕಿತರಾಗುವುದು ಸಹಜ! ಬಹಳಷ್ಟು ಸೀಲಿಂಗ್‌ ಡಿಸೈನ್‌ಗಳನ್ನು ನೋಡಿ ಯಾವುದನ್ನು ಮಾಡಿಸಿದರೆ ಸೂಕ್ತ ಎಂಬ ಗೊಂದಲ ಕೂಡ ಉಂಟಾಗುತ್ತದೆ. ಇದಕ್ಕೆ ಒಂದು ಕಾರಣವೇನೆಂದರೆ, ಮಾಹಿತಿಯ ಕೊರತೆ ಹಾಗೂ ಎಲ್ಲಕ್ಕೂ ಉತ್ತಮ ಸೀಲಿಂಗ್‌ ಪಡೆಯುವ ಅಪೇಕ್ಷೆ ಆಗಿರುತ್ತದೆ.

ಸೀಲಿಂಗ್‌ನ ಡಿಸೈನ್‌ಗಳ ವರ್ಗೀಕರಣವನ್ನು ಯಾರೂ ಮಾಡಲಾಗದು. ಏಕೆಂದರೆ, ಮಾರುಕಟ್ಟೆಯಲ್ಲಿ ದಿನ ಹೊಸ ಹೊಸ ಡಿಸೈನ್‌ಗಳ ಆಗಮನ ನಡೆಯುತ್ತಲೇ ಇರುತ್ತದೆ. ಅವು ಮೊದಲಿಗಿಂತ ಹೆಚ್ಚು ಉತ್ತಮ ಎಂದು ಭಾಸವಾಗುತ್ತವೆ. ಆದರೆ ಸೀಲಿಂಗ್‌ ಎನ್ನುವುದು ಬಹಳಷ್ಟು ಮಟ್ಟಿಗೆ ವೈಯಕ್ತಿಕ ಸಂಗತಿ. ಹೀಗಾಗಿ ಅಲ್ಲಿ ನಿಮ್ಮ ಆಸಕ್ತಿ ಅಭಿರುಚಿ ಎದ್ದು ಕಾಣಬೇಕು.

ಮುಂಚೆ ಅರಮನೆಗಳಲ್ಲಿ, ನಂತರ ಸಿನಿಮಾ ಜಗತ್ತಿನ ಪ್ರತಿಷ್ಠೆ ಎಂದು ಕರೆಸಿಕೊಳ್ಳುತ್ತಿದ್ದ ಫಾಲ್ಸ್ ಸೀಲಿಂಗ್‌ ಈಗ ಪ್ರತಿಯೊಬ್ಬರ ಕೈಗೆಟುಕುವಂತಿದೆ. ಈಗ ಅದು ವಿದ್ಯುದ್ದೀಪಗಳ ಮಾಯಾಲೋಕವಾಗಿದೆ. ಈಗ ಪಿಓಪಿ ಅಂದರೆ ಪ್ಲಾಸ್ಟರ್‌ ಆಫ್‌ ಪ್ಯಾರೀಸ್‌ನ ಯುಗ ಹಿಂದೆ ಸರಿದಿದೆ. ಈಗ ಬಣ್ಣ ಬಣ್ಣದ ವಿದ್ಯುದ್ದೀಪಗಳು ಸೀಲಿಂಗ್‌ನ ಅತ್ಯವಶ್ಯ ಭಾಗಗಳಂತಾಗಿವೆ. ಅದರಿಂದಾಗಿ ಸೀಲಿಂಗ್‌ನ ಸೌಂದರ್ಯಕ್ಕೆ ಹೊಸ ಕಳೆ ಬಂದಿದೆ.

ಸೀಲಿಂಗ್‌ಗೆ ಹೊಸ ಆಕರ್ಷಣೆ ತರಲು ಯೋಚಿಸಿದಾಗ ನೀವು ನಿಮ್ಮ ಮನದ ಮಾತು ಕೇಳಿ. ಬಹಳ ವರ್ಷಗಳಿಂದ ನಿಮ್ಮ ಮನಸ್ಸಿನಲ್ಲಿ ಯಾವ ಒಂದು ಡಿಸೈನ್‌ ಮಾಡಿಸಬೇಕು ಅಂತಾ ಇದೆಯೋ, ಸೀಲಿಂಗ್‌ಗೆ ಅದನ್ನೇ ಮಾಡಿಸಿ. ಇಲ್ಲಿದೆ ಸೀಲಿಂಗ್‌ ಬಗ್ಗೆ ಒಂದಿಷ್ಟು ಮಾಹಿತಿ.

ಟ್ರೆಡಿಷನಲ್ ಡಿಸೈನ್

ಅತ್ಯಂತ ಸರಳ ಡಿಸೈನ್‌ನ್ನು ಯಾರೊಬ್ಬರೂ ಬಯಸುವುದಿಲ್ಲ ಎನ್ನುವುದು ಸತ್ಯ. ಆದರೂ ಕೆಲವರು ಅದನ್ನೇ ಬೇಕು ಎಂದು ಹೇಳುತ್ತಾರೆ. ಬೆಂಗಳೂರಿನ ವ್ಯಾಪಾರಿಯೊಬ್ಬರು ಹೀಗೆ ಹೇಳುತ್ತಾರೆ, “ತಿಳಿ ಹಳದಿ ಹಾಗೂ ಆಫ್‌ ಲೈಟ್‌ ಸೀಲಿಂಗ್‌ನ ಯುಗ ಮತ್ತೆ ಬಂದಿದೆ. ಆದರೆ ವಿದ್ಯುದ್ದೀಪಗಳಲ್ಲಿ ಮಾತ್ರ ಜನರು ವೈವಿಧ್ಯತೆ ತರಲು ಪ್ರಯತ್ನಿಸುತ್ತಿದ್ದಾರೆ. ಈಗ ಎಲೆಕ್ಟ್ರಿಕ್‌ ಐಟಮ್ ಗಳ ವೆರೈಟಿ ಮತ್ತು ರೇಂಜ್‌ ಹೆಚ್ಚಾಗಿದೆ.

”ಡ್ರಾಯಿಂಗ್‌ ರೂಮಿನ ಸೀಲಿಂಗ್‌ ಪ್ಲೇನ್‌ ಹಾಗೂ ಬಿಳಿ ಬಣ್ಣದ್ದಾಗಿದ್ದರೆ, ಅದರಲ್ಲಿ ಬಗೆಬಗೆಯ ವಿದ್ಯುದ್ದೀಪಗಳನ್ನು ಅಳವಡಿಸಬಹುದು. ಸಾಮಾನ್ಯವಾಗಿ ಮಧ್ಯಭಾಗದಲ್ಲಿ ಒಂದು ದೊಡ್ಡ ಲ್ಯಾಂಪ್‌ ಅಥವಾ ಝೂಮರ್‌ ಸೂಕ್ತ ಎನಿಸುತ್ತದೆ. ನಾಲ್ಕೂ ಮೂಲೆಗೆ ಎಲ್ಇಡಿ ಬಲ್ಬ್ ಕೋಣೆಗೆ ಹೊಸ ಲುಕ್‌ ನೀಡುತ್ತದೆ. ಕೋಣೆಯ ಆಕಾರಕ್ಕನುಗುಣವಾಗಿ ಬಲ್ಬುಗಳ ಸಂಖ್ಯೆ ಹೆಚ್ಚಿಸಬಹುದು.

ನ್ಯಾಚುರಲ್ ಡಿಸೈನ್‌ ಫಾಲ್ಸ್ ಸೀಲಿಂಗ್‌ ಚಾಲ್ತಿ ಇಲ್ಲದೇ ಇರುವಾಗ ಕೋಣೆಗಳು ಮತ್ತು ಗೋಡೆಗಳ ಮೇಲೆ ನೈಸರ್ಗಿಕ ದೃಶ್ಯಗಳಿರುವ ಪೋಸ್ಟರ್‌ಗಳನ್ನು ಅಲಂಕರಿಸಲಾಗುತ್ತದೆ. ನೀಲಿ ಆಕಾಶ, ಜಲಪಾತ, ಹೂದೋಟದ ದೃಶ್ಯವನ್ನು ಸಾಕಾರಗೊಳಿಸಬಹುದು.

ಸೀಲಿಂಗ್‌ಗೆ ಹಲವು ರೀತಿಯಲ್ಲಿ ನೈಸರ್ಗಿಕ ಲುಕ್ಸ್ ನ್ನು ಕೊಡಬಹುದಾಗಿದೆ. ಅದು ನಿಮ್ಮ ಆಸಕ್ತಿ ಅಭಿರುಚಿಯನ್ನು ಅವಲಂಬಿಸಿದೆ. ನೀವು ನಿಮ್ಮ ಸೀಲಿಂಗ್‌ನಲ್ಲಿ ಒಂದು ಹಳ್ಳಿಯ ಚಿತ್ರಣವನ್ನು ಸಾಕಾರಗೊಳಿಸಬಹುದಾಗಿದೆ. ಅಂಚಿನಗುಂಟ ಚಿಕ್ಕ ಚಿಕ್ಕ ಬಲ್ಬುಗಳು ಬಣ್ಣ ಬಣ್ಣದ  ಬೆಳಕು ಬೀರುತ್ತಿರುವುದನ್ನು ನೋಡಿದವರು ಖುಷಿ ಪಡದೆ ಇರಲಾರದು.

ಜಾಮೆಟ್ರಿಕ್‌ ಡಿಸೈನಿಂಗ್‌

ಮೊದಲಿನಿಂದಲೂ ಎಲ್ಲರ ಮೆಚ್ಚಿನ ಡಿಸೈನ್‌ ಆಗಿರುವ ಇವು ಆಕರ್ಷಕ. ಹೆಚ್ಚಿನ ಮನೆಗಳಲ್ಲಿ ಕಂಡುಬರುತ್ತವೆ. ಇವು ತ್ರಿಭುಜ, ಚತುರ್ಭುಜ ಹಾಗೂ ಸಮಾನಾಂತರ ಹೀಗೆ ಏರಿಕೆ ಕ್ರಮದಲ್ಲಿರುತ್ತವೆ. ವೃತ್ತಾಕಾರದಲ್ಲಿಯೂ ಕಂಡುಬರುತ್ತವೆ. ಈ ಆಕೃತಿಗಳಿಗೆ ನೀವು ನಿಮಗಿಷ್ಟವಾಗುವ ರೀತಿಯಲ್ಲಿ ವಿದ್ಯುತ್‌ ಅಲಂಕಾರ ಮಾಬಹುದು. ಬಿಳಿ ಆಕೃತಿಗೆ ನೇರಳೆ ಬಣ್ಣ ಸಹ ಕೊಡಬಹುದು. ಆಗ ಡ್ರಾಯಿಂಗ್‌ ರೂಮ್ ಝಗಮಗಿಸುತ್ತದೆ. ಗಾಢ ಬಣ್ಣಗಳು ಕೆಲವು ದಿನಗಳ ಬಳಿಕ ಕಣ್ಣಿಗೆ ರಾಚುತ್ತವೆ. ಹೀಗಾಗಿ ಜಾಮೆಟ್ರಿಕ್‌ ಡಿಸೈನ್‌ಗಳಲ್ಲಿ ತಿಳಿ ಬಣ್ಣಗಳನ್ನೇ ಉಪಯೋಗಿಸಬೇಕು.

ಕ್ಲಾಸಿಕ್‌ ಡಿಸೈನ್‌ಗಳು

ಸೀಲಿಂಗ್‌ನಲ್ಲಿ ತಬಲಾ, ಶಹನಾಯಿ, ಹಾರ್ಮೋನಿಯಂನಂತಹ ವಾದ್ಯಗಳ ಚಿತ್ರಗಳು ಕಂಡುಬಂದರೆ ಡ್ರಾಯಿಂಗ್‌ರೂಮಿಗೆ ಕಲಾತ್ಮಕ ರೂಪ ಬರುತ್ತದೆ. ಅಂದಹಾಗೆ ಕ್ಲಾಸಿಕ್‌ ಡಿಸೈನುಗಳನ್ನು ಅಳಡಿಸುವವರ ಸಂಖ್ಯೆ ಕಡಿಮೆ. ಕ್ಲಾಸಿಕ್‌ ಡಿಸೈನ್‌ಗಳ ಜೊತೆ ಹೆಚ್ಚು ಲೈಟ್‌ ಬಳಸಬಾರದು.

ಸ್ಟೈಲಿಶ್‌ ಡಿಸೈನ್‌ಗಳು

ಸೀಲಿಂಗ್‌ನಲ್ಲಿ ಸ್ಟೈಲಿಶ್‌ ಡಿಸೈನ್‌ಗಳಿಗೆ ಯಾವುದೇ ಇತಿಮಿತಿ ಇಲ್ಲ. ಇದರಲ್ಲಿ ಸಾಕಷ್ಟು ಲೈಟು ಹಾಗೂ ಬಣ್ಣಗಳನ್ನು ಬಳಸಲಾಗುತ್ತದೆ. ದೊಡ್ಡ ಗಾತ್ರದ ರೂಮುಗಳಿಗೆ ಇದು ಸೂಕ್ತವಾಗಿರುತ್ತದೆ.

ನಿಮ್ಮ ಡ್ರಾಯಿಂಗ್‌ ರೂಮಿನ ನಟ್ಟ ನಡುವೆ ಒಂದು ದೊಡ್ಡ ಬಲ್ಬು ಮತ್ತು ನಾಲ್ಕೂ ಮೂಲೆಯಲ್ಲಿ ಒಂದೊಂದು ಝೂಮರ್‌  ಹಾಕಿದರೆ ಹೋಟೆಲ್‌ಗಳು ಮತ್ತು ಕಾರ್ಪೋರೇಟ್‌ ಆಫೀಸುಗಳಲ್ಲಿ ಕಂಡುಬರುವಂತಹ ದೃಶ್ಯ ಗೋಚರಿಸುತ್ತದೆ. ಈಚೆಗೆ ಹಲವು ಕಂಪನಿಗಳು ಆನ್‌ಲೈನ್‌ ಸೀಲಿಂಗ್‌ ಡಿಸೈನ್‌ಗಳನ್ನು ಮಾರಾಟ ಮಾಡುತ್ತಿವೆ. ಅವುಗಳಲ್ಲಿ ಹೆಚ್ಚಿನ ಡಿಸೈನ್‌ಗಳು ಸ್ಟೈಲಿಶ್‌ ಆಗಿರುತ್ತವೆ.

ರೊಮ್ಯಾಂಟಿಕ್‌ ಡಿಸೈನ್‌ಗಳು

ಯುವ ಜೋಡಿಗಳ ಮೊದಲ ಆಯ್ಕೆ ರೊಮ್ಯಾಂಟಿಕ್‌ ಡಿಸೈನ್‌ಗಳಾಗಿರುತ್ತವೆ. ಗುಲಾಬಿ ಬಣ್ಣದ ಸೀಲಿಂಗ್‌ನಲ್ಲಿ ಚಿಕ್ಕ ಹಾಗೂ ದೊಡ್ಡ ಗುಲಾಬಿ ಕಂಡುಬಂದರೆ, ಕೋಣೆಗೆ ಬರುತ್ತಿದ್ದಂತೆ ಮೂಡ್‌ ಬದಲಾಗುತ್ತದೆ. ನೀವಿಬ್ಬರೂ ಏಕಾಂಗಿಯಾಗಿ ವಾಸಿಸುವಿರಾದರೆ, ಕೆಲವು ರೊಮ್ಯಾಂಟಿಕ್‌ ಸೀನ್‌ಗಳನ್ನು ಅವಳಡಿಸಿಕೊಳ್ಳಬಹುದು. ಬೇರೆ ಯಾರಾದರೂ ಅಲ್ಲಿ ಬಂದು ಹೋಗುತ್ತಿದ್ದರೆ, ಅಂತಹ ಚಿತ್ರಗಳು ನಿಮ್ಮನ್ನು ಮುಜುಗರಕ್ಕೆ ಎಡೆ ಮಾಡಬಹುದು.

ರೊಮ್ಯಾಂಟಿಕ್‌ ಡಿಸೈನ್‌ ಯಾವುದೇ ಆಗಿರಲಿ, ಅದರ ಮೇಲೆ ಅಳವಡಿಸುವ ಲೈಟ್‌ ಹಾಗೂ ಬಣ್ಣ ಗುಲಾಬಿಯೇ ಆಗಿರುತ್ತದೆ. ತಿಳಿ ಹಸಿರು ಬಣ್ಣ ಕೂಡ ಯುವ ಜೋಡಿಗಳಿಗೆ ಹೆಚ್ಚು ಇಷ್ಟವಾಗುತ್ತದೆ.

– ಭಾನಾ ಶರ್ಮ

ಬೇರೆ ಕಥೆಗಳನ್ನು ಓದಲು ಕ್ಲಿಕ್ ಮಾಡಿ....
ಗೃಹಶೋಭಾ ವತಿಯಿಂದ